ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ: ಮೇಯರ್‌ ಹುದ್ದೆಗೆ ಬಿಜೆಪಿಯಲ್ಲಿ ಹೆಚ್ಚಿದ ಪೈಪೋಟಿ

ಹೆಚ್ಚುತ್ತಿರುವ ಅನರ್ಹ ಶಾಸಕರ ಪಟ್ಟು
Last Updated 16 ಸೆಪ್ಟೆಂಬರ್ 2019, 19:49 IST
ಅಕ್ಷರ ಗಾತ್ರ

ಬೆಂಗಳೂರು: ಮೇಯರ್‌ ಹುದ್ದೆಗೆ ಬಿಜೆಪಿಯಲ್ಲಿ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಲೇ ಇದ್ದರೆ, ಮತ್ತೊಂದೆಡೆ ಅನರ್ಹ ಶಾಸಕರು ತಮ್ಮ ಮಾತು ಕೇಳದೇ ಹೆಸರು ಅಂತಿಮಗೊಳಿಸಬಾರದು ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.

ಈ ಸಂಬಂಧ ಬೆಂಗಳೂರು ನಗರ ಜಿಲ್ಲೆ ಉಸ್ತುವಾರಿ ಹೊತ್ತಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಬೆಂಗಳೂರು ನಗರದ ಶಾಸಕರು ಮತ್ತು ಸಂಸದರ ಸಭೆಯನ್ನು ಬುಧವಾರ ಕರೆದಿದ್ದು, ಅಲ್ಲಿ ಈ ಕುರಿತು ಚರ್ಚೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಸುಪ್ರೀಂಕೋರ್ಟ್‌ನಲ್ಲಿ ಅನರ್ಹತೆ ಪ್ರಕರಣ ಇನ್ನೂ ಇತ್ಯರ್ಥವಾಗದೇ ಇರುವುದರಿಂದ ತಾವು ಸೂಚಿಸುವ ಒಬ್ಬರನ್ನು ಮೇಯರ್‌ ಮಾಡಬೇಕು. ಆಗ ಬೆಂಗಳೂರಿನಲ್ಲಿ ಜನರ ಮಧ್ಯೆ ಹೋಗಿ ಕೆಲಸ ಮಾಡಲು ಮತ್ತು ಮುಂದೆ ಚುನಾವಣೆ ಎದುರಿಸಲು ಅನುಕೂಲವಾಗುತ್ತದೆ ಎಂಬ ಬೇಡಿಕೆಯನ್ನೂ ಇಟ್ಟಿದ್ದಾರೆ ಮೂಲಗಳು ತಿಳಿಸಿವೆ.

ಚಾಲ್ತಿಯಲ್ಲಿರುವ ಹೆಸರುಗಳು: ಬಿಜೆಪಿ ಯಿಂದ ಪದ್ಮನಾಭ ರೆಡ್ಡಿ, ಉಮೇಶ್‌ ಶೆಟ್ಟಿ, ಮಂಜುನಾಥರಾಜು, ಎಲ್‌.ಶ್ರೀನಿವಾಸ್‌, ಸಂಗಾತಿ ವೆಂಕಟೇಶ್‌ ಮುಂತಾದವರ ಹೆಸರು ಚಾಲ್ತಿಗೆ ಬಂದಿದೆ. ಮುಖ್ಯಮಂತ್ರಿಯವರ ಸಲಹೆಯ ಮೇರೆಗೆ ಮೇಯರ್‌ ಹೆಸರು ಅಂತಿಮ ಆಗಬಹುದು ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿದರು.

‘ನಮಗೆ ಬಿಬಿಎಂಪಿಯಲ್ಲಿ ಬಹುಮತಕ್ಕೆ ಆರು ಸ್ಥಾನಗಳ ಕೊರತೆ ಇದೆ. ಒಟ್ಟು 125 ಸದಸ್ಯರನ್ನು ಹೊಂದಿದ್ದೇವೆ. ಅನರ್ಹರ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ತೀರ್ಮಾನ ಆಗಿಲ್ಲ. ಆ ಸಂದರ್ಭದಲ್ಲಿ ಪಕ್ಷೇತರರ ನೆರವು ಪಡೆದುಕೊಳ್ಳಬೇಕೇ ಅಥವಾ ಜೆಡಿಎಸ್‌ ಬೆಂಬಲ ಪಡೆಯಬೇಕೇ ಎಂಬ ಚರ್ಚೆ ನಡೆದಿದೆ. ನಮ್ಮದೇ ಸರ್ಕಾರ ಇರುವಾಗ ಮೇಯರ್‌ ಆಯ್ಕೆ ಮಾಡಿಕೊಳ್ಳದಿದ್ದರೆ ಹೇಗೆ ಎಂಬ ಚರ್ಚೆಯೂ ನಡೆದಿದೆ’ ಎಂದು ಅವರು ತಿಳಿಸಿದರು.

‘ನಮ್ಮ ಮಾತು ಕೇಳಬೇಕು’
‘ಮೇಯರ್‌ ಆಯ್ಕೆ ಮಾಡುವ ಸಂದರ್ಭದಲ್ಲಿ ನಮ್ಮ ಮಾತು ಕೇಳಬೇಕು ಎಂದು ಬಿಜೆಪಿ ನಾಯಕರಿಗೆ ಹೇಳಿದ್ದೇವೆ’ ಎಂದು ಅನರ್ಹ ಶಾಸಕ ಎಸ್‌.ಟಿ.ಸೋಮಶೇಖರ್‌ ತಿಳಿಸಿದರು.

‘ಮೇಯರ್‌ ಮತ್ತು ಉಪಮೇಯರ್‌ ಎರಡೂ ಸಾಮಾನ್ಯ ವರ್ಗಕ್ಕೆ ಬಂದಿದೆ. ನಾವು ನಾಲ್ಕು ಶಾಸಕರು ಒಟ್ಟು ಕುಳಿತು ಒಮ್ಮತದ ಅಭ್ಯರ್ಥಿ ಬಗ್ಗೆ ಚರ್ಚೆ ಮಾಡಬೇಕು. ಮಂಗಳವಾರ ಸುಪ್ರೀಂಕೋರ್ಟ್‌ನಲ್ಲಿ ನಮ್ಮ ಪ್ರಕರಣ ಬರುತ್ತದೆ. ಆ ಬಳಿಕ ಬೈರತಿ ಬಸವರಾಜ್‌, ಎಂ.ಟಿ.ಬಿ.ನಾಗರಾಜ್‌, ಮುನಿರತ್ನ ಸೇರಿ ಸಮಾಲೋಚನೆ ಮಾಡುತ್ತೇವೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT