ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಎಸ್‌ಎಸ್ ಸಂಸ್ಥಾಪಕರಿಗೆ ಮೇಯರ್ ಪೂಜೆ: ವ್ಯಾಪಕ ಟೀಕೆ

Last Updated 5 ಅಕ್ಟೋಬರ್ 2019, 19:26 IST
ಅಕ್ಷರ ಗಾತ್ರ

ಬೆಂಗಳೂರು: ಮೇಯರ್ ಎಂ.ಗೌತಮ್‌ಕುಮಾರ್ ಅವರು ತಮ್ಮ ಕಚೇರಿಯಲ್ಲಿ ಆರ್‌ಎಸ್‌ಎಸ್ ಸಂಸ್ಥಾಪಕರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ.

‘ಮೇಯರ್ ಕಚೇರಿಯಲ್ಲಿ ಪೂಜೆಗೆ ಒಳಪಡಬೇಕಾಗಿರುವುದು ಬೆಂಗಳೂರು ನಿರ್ಮಾತೃ ಕೆಂಪೇಗೌಡರು, ‌ತ್ಯಾಗಮಯಿ ಲಕ್ಷ್ಮಿದೇವಿ, ಸಮಾನತೆಯ ಹರಿಕಾರ ಬಸವಣ್ಣ, ಶಾಂತಿ ಅಹಿಂಸೆ ಬೋಧಿಸಿದ ಗಾಂಧಿ, ನವಭಾರತದ ನಿರ್ಮಾತೃ ಜವಹರಲಾಲ್ ನೆಹರೂ, ಸಂವಿಧಾನ ಶಿಲ್ಪಿ ಅಂಬೇಡ್ಕರ್, ವಿಶ್ವ ಮಾನವ ಸಂದೇಶ ಸಾರಿದ ಕುವೆಂಪು’ ಎಂದು ನಟರಾಜ್ ಗೌಡ ಎಂಬವರು ಟ್ವೀಟ್ ಮಾಡಿದ್ದಾರೆ.

‘ನೀವು ಮೇಯರ್ ಆಗಿರುವುದು ಬೆಂಗಳೂರಿನ ಅಭಿವೃದ್ಧಿಗೆ, ಆರ್‌ಎಸ್‌ಎಸ್ ಪ್ರಚಾರಕ್ಕೆ ಅಲ್ಲ. ಕೂಡಲೇ ಕ್ಷಮೆ ಯಾಚಿಸಬೇಕು’ ಎಂದು ಹಲವರು ಆಗ್ರಹಿಸಿದ್ದಾರೆ.

ಬಿಬಿಎಂಪಿ ಕಚೇರಿಯ ಮೇಯರ್ ಕುರ್ಚಿಯಲ್ಲಿ ಕೂರುವ ಮೊದಲು ಅಲ್ಲಿದ್ದ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿದರು. ಅದಕ್ಕೆ ಹೊಂದಿಕೊಂಡಂತೆ ಇರುವ ಖಾಸಗಿ ಕೊಠಡಿಯಲ್ಲಿ ಭಾರತಾಂಬೆಯ ಚಿತ್ರದ ಜತೆಗೆ ಆರ್‌ಎಸ್‌ಎಸ್ ಸಂಸ್ಥಾಪಕ ಡಾ. ಕೇಶವ ಬಲಿರಾಂ ಹೆಡ್ಗೆವಾರ್, ಸಂಚಾಲಕ ಗೋಲ್ವಾಲ್ಕರ್ ಭಾವಚಿತ್ರಗಳನ್ನಿಟ್ಟು ಪೂಜಿಸಿದ್ದರು.

ಉಪಮೇಯರ್, ಆಯುಕ್ತರಿಗೆ ಹೊಸ ಕಾರು

ನೂತನವಾಗಿ ಆಯ್ಕೆಯಾದ ಉಪಮೇಯರ್‌ ರಾಮ್‌ ಮೋಹನ್ ರಾಜ್ ಅವರಿಗೆ ಇನ್ನೋವಾ ಕ್ರಿಸ್ಟಾ ಹೊಸ ಕಾರ್‌ನಲ್ಲಿ ಓಡಾಡುವ ಭಾಗ್ಯ ಒಲಿದಿದೆ. ಆಯುಕ್ತರಿಗೆ ಒಂದು ಮತ್ತು ಉಪಮೇಯರ್‌ಗಾಗಿ ₹35 ಲಕ್ಷ ಮೌಲ್ಯದ ಎರಡು ಕಾರುಗಳನ್ನು ಬಿಬಿಎಂಪಿ ಖರೀದಿಸಿದೆ.

ಗುತ್ತಿಗೆದಾರರಿಗೆ ಕೋಟಿಗಟ್ಟಲೆ ಬಿಲ್‌ ಬಾಕಿ ಉಳಿಸಿಕೊಂಡ ಪಾಲಿಕೆಯು ಇಂತಹ ಸಂಕಷ್ಟದ ಸಂದರ್ಭದಲ್ಲಿ ಐಷಾರಾಮಿ ಕಾರು ಖರೀದಿಸುವ ಅಗತ್ಯ ಇತ್ತೇ ಎಂಬ ಟೀಕೆ ವ್ಯಕ್ತವಾಗಿದೆ.

ವಾರ್ಡ್‌ ಸಮಿತಿ ಸಭೆ ಕರೆದ ನೂತನ ಮೇಯರ್‌

ನೂತನ ಮೇಯರ್‌ ಗೌತಮ್‌ ಕುಮಾರ್‌ ಅವರು ಶನಿವಾರ ವಾರ್ಡ್‌ ಸಮಿತಿ ಸಭೆ ನಡೆಸದಿರುವುದು ಟೀಕೆಗೆ ಗುರಿಯಾಗಿದೆ.

‘ತಿಂಗಳ ಮೊದಲ ಶನಿವಾರ ವಾರ್ಡ್‌ ಸಮಿತಿ ಸಭೆ ನಡೆಸಬೇಕು ಎಂದು ಪಾಲಿಕೆಯೇ ನಿರ್ಣಯ ಕೈಗೊಂಡಿದೆ. ಮೇಯರ್‌ ಅವರು ಇದನ್ನು ಚಾಚೂ ತಪ್ಪದೇ ಪಾಲಿಸುವ ಮೂಲಕ ಇತರರಿಗೆ ಮೇಲ್ಪಂಕ್ತಿ ಹಾಕಿಕೊಡಬೇಕು. ಆದರೆ, ಗೌತಮ್‌ ಅವರು ಶನಿವಾರ ವಾರ್ಡ್‌ ಸಮಿತಿ ಸಭೆ ನಡೆಸಿಲ್ಲ’ ಎಂದು ಬೆಂಗಳೂರು ನಾಗರಿಕ ಸಮಿತಿಯ ಪ್ರದೀಪ್‌ ಮೆಂಡೋನ್ಸ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇನ್ನು ಮುಂದಾದರೂ ತಿಂಗಳ ಮೊದಲ ಶನಿವಾರವೇ ವಾರ್ಡ್‌ ಸಮಿತಿ ಸಭೆ ನಡೆಸುವ ಮೂಲಕ ಮೇಯರ್ ಇತರ ಸದಸ್ಯರಿಗೆ ಮಾದರಿಯಾಗಬೇಕು’ ಎಂದರು.

‘ಹೈಕೋರ್ಟ್‌ ಚಾಟಿ ಬೀಸಿದ ಬಳಿಕವೂ ವಾರ್ಡ್‌ ಸಮಿತಿ ಸಭೆಗಳು ಸರಿಯಾಗಿ ನಡೆಯುತ್ತಿಲ್ಲ. ಅನೇಕ ಕಾರ್ಪೊರೇಟರ್‌ಗಳು ವಾರ್ಡ್ ತಿಂಗಳ ಮೊದಲ ಶನಿವಾರ ಬಿಡಿ, ಯಾವತ್ತೂ ಸಮಿತಿ ಸಭೆಗಳನ್ನೇ ನಡೆಸುತ್ತಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT