ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ: ಸುಗಮ ಆಡಳಿತಕ್ಕೆ ಬೇಕು ಮೇಯೋರಲ್‌ ಸಮಿತಿ

ಮೀಸಲಾತಿಗೆ ಇರಲಿ ಏಕರೂಪ ನೀತಿ l ಹಿಂದುಳಿದ ವರ್ಗ- ಎ, ಬಿಗೆ ಮೀಸಲಾತಿ ಕೈಬಿಟ್ಟಿದ್ದೇಕೆ?
Last Updated 29 ಮಾರ್ಚ್ 2021, 20:01 IST
ಅಕ್ಷರ ಗಾತ್ರ

ಬಿಬಿಎಂಪಿಯ ವಿಕೇಂದ್ರೀಕೃತ ಆಡಳಿತ ವನ್ನು ಸುಗಮಗೊಳಿಸಲು ಬಿಬಿಎಂಪಿ ಕೌನ್ಸಿಲ್‌, ಸ್ಥಾಯಿ ಸಮಿತಿಗಳು ಹಾಗೂ ವಲಯ ಸಮಿತಿಗಳ ನಡುವೆ ಸಮನ್ವಯ ಅಗತ್ಯ. ಇದಕ್ಕಾಗಿ ‘ಮೇಯೋರಲ್‌ ಕಾರ್ಯಕಾರಿ ಸಮಿತಿ ರಚಿಸಿಕೊಂಡು, ಈ ಸಮಿತಿಗೆ ಬಜೆಟ್‌ ನಿರ್ವಹಣೆಯನ್ನು ಹೊರತುಪಡಿಸಿ ಪಾಲಿಕೆಯ ಉಳಿದೆಲ್ಲಾ ಆರ್ಥಿಕ ಮತ್ತು ಆಡಳಿತಾತ್ಮಕ ಅಧಿಕಾರ ವನ್ನು ಚಲಾಯಿಸಲು ಅನುವು ಮಾಡುವುದು ಸೂಕ್ತ.

ಮೇಯೋರಲ್‌ ಕಾರ್ಯಕಾರಿ ಸಮಿತಿ ರಚನೆಯಿಂದ ಪಾಲಿಕೆಯ ವಿಕೇಂದ್ರೀಕೃತ ಆಡಳಿತ ನಿರ್ವಹಣೆಗೆ ಒತ್ತು ಕೊಟ್ಟಂತಾಗುತ್ತದೆ ಮತ್ತು ಪಾಲಿಕೆ ದಿನ ನಿತ್ಯದ ಅಗತ್ಯಗಳಿಗೆ ಬೇಕಾದ ಆಡಳಿತಾತ್ಮಕ ನಿರ್ಣಯಗಳನ್ನು ಪಾರದ ರ್ಶಕವಾದ ರೀತಿಯಲ್ಲಿ ತಕ್ಷಣದಲ್ಲಿ ತೆಗೆದುಕೊಳ್ಳುವುದು ಸಾಧ್ಯವಾಗಲಿದೆ. ಇದು ಪಾಲಿಕೆಯ ಆಡಳಿತವನ್ನು ಸುಗಮ ವಾಗಿಸಲು ಅನುಕೂಲ ಕಲ್ಪಿಸುತ್ತದೆ.

ಈ ನಿಟ್ಟಿನಲ್ಲಿ ಬಿಬಿಎಂಪಿ ಕಾಯ್ದೆಗೆ ತಿದ್ದುಪಡಿ ತಂದು ಈ ಸುಧಾರಣಾ ಕ್ರಮವನ್ನು ತೆಗೆದುಕೊಳ್ಳಬಹುದಾಗಿದೆ. ‘ಮೇಯೋರಲ್‌ ಕಾರ್ಯಕಾರಿ ಸಮಿತಿಗೆ ಮೇಯರ್‌ ಅವರೇ ಅಧ್ಯಕ್ಷರಾಗಿರುತ್ತಾರೆ. ಎಲ್ಲಾ ಸ್ಥಾಯಿ ಸಮಿತಿಗಳ ಮತ್ತು ವಲಯ ಸಮಿತಿಗಳ ಅಧ್ಯಕ್ಷರುಗಳು ಮೇಯೋರಲ್‌ ಸಮಿತಿಯ ಸದಸ್ಯರಾಗಿ ರುತ್ತಾರೆ. ಮುಖ್ಯ ಆಯುಕ್ತರನ್ನು ಈ ಸಮಿತಿಯ ಕಾರ್ಯಕಾರಿ ಸದಸ್ಯರನ್ನಾಗಿ ನೇಮಿಸಬಹುದು. ಶಾಸನಾತ್ಮಕ ಚೌಕಟ್ಟಿನಲ್ಲಿ ಸುಧಾರಣೆ ತರುವ ಸಲುವಾಗಿ ಸರ್ಕಾರವು ಈ ಬಗ್ಗೆ ಚಿಂತಿಸುವುದು ಒಳ್ಳೆಯದು.

ಬಿಬಿಎಂಪಿ ಚುನಾವಣೆ:ಸಂವಿಧಾನದ ಆರ್ಟಿಕಲ್‌ 243-ಯು ಅಡಿಯಲ್ಲಿ ಸಂವಿಧಾನದ ಆದೇಶವನ್ನು ಪೂರೈಸಲು, ಬಿಬಿಎಂಪಿ ಕೌನ್ಸಿಲ್ ಚುನಾವಣೆ ಹಿಂದಿನ ಬಿಬಿಎಂಪಿ ಕೌನ್ಸಿಲ್‌ ಆಡಳಿತ ಅವಧಿ ಮುಗಿಯುವ ಮುನ್ನ ಅಂದರೆ, 2020ರಸೆಪ್ಟೆಂಬರ್‌ 10ಕ್ಕೆ ಮುನ್ನವೇ ನಡೆಯಬೇಕಾಗಿತ್ತು. ಆರ್ಟಿಕಲ್‌ 243-ಯು ಅಡಿಯ ಈ ಸಾಂವಿಧಾನಿಕ ಬದ್ಧತೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರವು ತಾನು ಬಯಸಿದಂತೆ ಬಿಬಿಎಂಪಿಯ ಈಗಿನ ಸರಹದ್ದಿನಲ್ಲಿ ಅಥವಾ ವಿಸ್ತೃತ ಸರಹದ್ದಿ ನಲ್ಲಿ ಕನಿಷ್ಠ 225 ಅಥವಾ ಗರಿಷ್ಠ 243 ವಾರ್ಡುಗಳ ಪುನರ್ವಿಂಗಡನೆ ಮಾಡಬಹುದು. ಇದಕ್ಕಾಗಿ ಎಲ್ಲಾ ಅವಶ್ಯಕ ಆಡಳಿತಾತ್ಮಕ ಕ್ರಮಗಳನ್ನು ತೆಗೆದುಕೊಂಡು ವಾರ್ಡ್‌ ಮರು
ವಿಂಗಡಣೆಗಾಗಿ ಅಂತಿಮ ಅಧಿಸೂಚನೆಯನ್ನು ಮತ್ತು ಇದಕ್ಕೆ ಪೂರಕವಾಗಿ ವಾರ್ಡ್‌ ಮೀಸಲಾತಿ ಅಧಿಸೂಚನೆಯನ್ನು ರಾಜ್ಯಪತ್ರದಲ್ಲಿ ಕೂಡಲೇ ಪ್ರಕಟಿಸಿ, ರಾಜ್ಯ ಚುನಾವಣೆ ಆಯೋಗಕ್ಕೆ ಬಿಬಿಎಂಪಿ ಚುನಾವಣೆಯನ್ನು ನಡೆಸಲು ಅನುವು ಮಾಡಿಕೊಡುವುದು ಒಳ್ಳೆಯದು.
ಬಿಬಿಎಂಪಿ ಕಾಯ್ದೆ ಅನುಸಾರ ಬಿಬಿಎಂಪಿ ಕೌನ್ಸಿಲ್‌ ರಚನೆಗಾಗಿ ವಲಯ ಸಮಿತಿಗಳನ್ನು ಪಾಲಿಕೆಯ ಪ್ರಾಧಿಕಾರ
ಗಳಾಗಿ ಸಂರಚಿಸಬೇಕಾಗುತ್ತದೆ. ಇದಕ್ಕಾಗಿ ವಲಯಗಳ ಸರಹದ್ದನ್ನು ವಾರ್ಡ್‌ ಮರು ವಿಂಗಡಣೆಯ ಅಧಿಸೂಚನೆಯಲ್ಲಿಯೇ ಅಳವಡಿಸಿಕೊಂಡಿರ ಬೇಕಾಗುತ್ತದೆ. ಇಲ್ಲದಿದ್ದಲ್ಲಿ ವಲಯ ಸಮಿತಿಗಳನ್ನು ರಚಿಸಲು ಸಾಧ್ಯವಾಗುವುದಿಲ್ಲ.

ಮೀಸಲಾತಿ ಗೊಂದಲ:ಬಿಬಿಎಂಪಿ ಕಾಯ್ದೆಯ ಸೆಕ್ಷನ್‌ 58ರಲ್ಲಿ ಮೇಯರ್‌ ಮತ್ತು ಉಪ ಮೇಯರ್‌ ಹುದ್ದೆಗಳಿಗೆ ಹಿಂದುಳಿದ ವರ್ಗ- ಎ ಮತ್ತು ಹಿಂದುಳಿದ ವರ್ಗ – ಬಿ ಮೀಸ ಲಾತಿಯನ್ನು ಕೈಬಿಡಲಾಗಿದೆ. ರಾಜ್ಯದ ಎಲ್ಲಾ ಮಹಾ ನಗರ ಪಾಲಿಕೆಗಳಲ್ಲಿ ಮತ್ತು ಪೌರಸಭೆಗಳಲ್ಲಿ ಏಕ ರೂಪದ ಮೀಸಲಾತಿಯ ನೀತಿಯು ಇರು ವುದನ್ನು ಗಮನದಲ್ಲಿಟ್ಟುಕೊಂಡು ಬಿಬಿಎಂಪಿ ಮೇಯರ್‌ ಮತ್ತು ಉಪ ಮೇಯರ್‌ ಹುದ್ದೆಗೂ ಈ ವರ್ಗಗಳಿಗೆ ಮೀಸಲಾತಿಯ ನಿಯಮವನ್ನು ಈ ಹಿಂದೆ ಇದ್ದಂತೆ ವಿಸ್ತರಿಸಿಕೊಳ್ಳಲು ಅನುಮಾಡಿಕೊಡಬೇಕಾದ ಅಗತ್ಯ ಇದೆ. ಈ ಬಗ್ಗೆ ರಾಜ್ಯ ಸರ್ಕಾರವು ಗಮನ ಹರಿಸು ವುದು ಸೂಕ್ತ. ಮೇಯರ್‌ ಮತ್ತು ಉಪ ಮೇಯರ್‌ ಚುನಾವಣೆಯು ಬಿಬಿಎಂಪಿ ಕೌನ್ಸಿಲ್‌ ಸಂರಚನೆಯ ಅವಿಭಾಜ್ಯ ಚಟುವಟಿಕೆಯಾಗಿರುವುದರಿಂದ ಈ ಬಗ್ಗೆ ಮುಂಚಿತವಾಗಿಯೇ ಸರ್ಕಾರವು ಕ್ರಮವಹಿಸುವ ಅಗತ್ಯವಿದೆ.

ಬಿಬಿಎಂಪಿ ಕಾಯ್ದೆಯ ಬದಲಾಗಿ ಬಿಬಿಎಂಪಿಯ ಆಡಳಿತಕ್ಕಾಗಿ ಒಂದು ನೂತನವಾದ ಸಮಗ್ರ ಕಾನೂನನ್ನು ಸಮರೋಪಾದಿಯಾಗಿ ಮರು ರೂಪಿಸಲು ಕ್ರಮವಹಿಸುವುದು ಸರಿ ಯಾದ ಮಾರ್ಗ. ಇಂತಹ ನೂತನ ಕಾನೂನನ್ನು ರೂಪಿಸುವ ಮುನ್ನ ನಾಗರಿ ಕರ ಭಾಗವಹಿಸುವಿಕೆಯೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ತಜ್ಞರ ಅಭಿಪ್ರಾಯಗಳನ್ನು ಪರಿಗಣಿಸಿ ಮುಂದಿನ ಕ್ರಮವಹಿಸಬಹುದು. ಬಿಬಿಎಂಪಿ ಕಾಯ್ದೆಗೆ ಅಲ್ಲೊಂದು ಇಲ್ಲೊಂದು ತಿದ್ದುಪಡಿಯನ್ನು ತಂದರೆ ಯಾವುದೇ ಉದ್ದೇಶ ಈಡೇರಿಸಿದಂತಾ ಗುವುದಿಲ್ಲ ಎಂಬುದು ನಮ್ಮ ಅನಿಸಿಕೆ. ಸಂವಿಧಾನದ ಆಶಯದಂತೆ ಚುನಾ ವಣೆಯ ಮೂಲಕ ಬಿಬಿಎಂಪಿ ಕೌನ್ಸಿಲ್‌ ಪುನರ್ರಚಿಸುವ ನಿಟ್ಟಿನಲ್ಲಿ ಸರ್ಕಾರ ಶ್ರದ್ಧೆಯಿಂದ ಕ್ರಮವಹಿಸಬೇಕಾಗಿದೆ.

( ಪಿ.ಜಿ. ಶೆಣೈ, ಸಿ.ಆರ್. ರವೀಂದ್ರ: ಲೇಖಕರು ಸೆಂಟರ್‌ ಫಾರ್‌ ಅರ್ಬನ್‌ ಗವರ್ನೆನ್ಸ್‌ ಸ್ಟಡೀಸ್‌ ಆ್ಯಂಡ್‌ ಪಾಲಿಸಿ ರಿಸರ್ಚ್ ಸಂಸ್ಥೆಯ ನಿರ್ದೇಶಕರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT