ಮಂಗಳವಾರ, ನವೆಂಬರ್ 12, 2019
27 °C
ಬಿಬಿಎಂಪಿ ಆಯುಕ್ತ ಸೂಚನೆ

ಅನಧಿಕೃತ ಪಟಾಕಿ ಮಳಿಗೆಗೆ ಅವಕಾಶವಿಲ್ಲ

Published:
Updated:

ಬೆಂಗಳೂರು: ‘ಬಿಬಿಎಂಪಿ ನಿಗದಿಪಡಿಸಿದ ಆಟದ ಮೈದಾನಗಳನ್ನು ಬಿಟ್ಟು ಬೇರೆ ಕಡೆಗಳಲ್ಲಿ ಪಟಾಕಿ ಮಳಿಗೆ ನಿರ್ಮಾಣಕ್ಕೆ ಅವಕಾಶ ನೀಡಬಾರದು’ ಎಂದು ಪಾಲಿಕೆ ಆಯುಕ್ತ ಬಿ.ಎಚ್. ಅನಿಲ್‌ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಿಬಿಎಂಪಿ ಕಚೇರಿಯಲ್ಲಿ ಶನಿವಾರ ಅಧಿಕಾರಿಗಳ ಸಭೆ ನಡೆಸಿದ ಅವರು, ‘8 ವಲಯಗಳ ಆಟದ ಮೈದಾನಗಳಲ್ಲಿ ಮಾತ್ರ ಪಟಾಕಿ ಮಳಿಗೆಗಳಿಗೆ ಅನುವು ಮಾಡಿಕೊಡಿ. ಪೊಲೀಸ್ ಇಲಾಖೆ ಪರವಾನಗಿ ನೀಡಿದವರಿಗೆ ಮಾತ್ರ ಮಳಿಗೆ ಸ್ಥಾಪಿಸಲು ಅವಕಾಶ ನೀಡಿ’ ಎಂದು ತಿಳಿಸಿದರು.

‘ಬಿಬಿಎಂಪಿ ಮತ್ತು ಪೊಲೀಸ್ ಅಧಿಕಾರಿಗಳು ಜಂಟಿಯಾಗಿ ಎಂಟು ವಲಯಗಳಲ್ಲಿ ಗಸ್ತು ತಿರುಗಬೇಕು. ಅನಧಿಕೃತ ಪಟಾಕಿ ಮಳಿಗೆಗಳಿದ್ದರೆ ಕೂಡಲೇ ತರವುಗೊಳಿಸಬೇಕು’ ಎಂದರು.

‘ಆಟದ ಮೈದಾನಗಳ ಪ್ರವೇಶ ಹಾಗೂ ನಿರ್ಗಮನ ಸ್ಥಳದಲ್ಲಿ ಪಟಾಕಿ ಮಳಿಗೆಗಳನ್ನು ನಿರ್ಮಿಸಲು ಅವಕಾಶ ನೀಡಬಾರದು. ಅಗ್ನಿಶಾಮಕ ವಾಹನಗಳು ಮೈದಾನದೊಳಗೆ ಹೋಗುವ ವ್ಯವಸ್ಥೆ ಸರಿಯಾಗಿರಬೇಕು. ಅಗ್ನಿ ಅವಘಡ ಸಂಭವಿಸಿದರೆ ಸಾರ್ವಜನಿಕರ ನಿರ್ಗಮನಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಿರಬೇಕು’ ಎಂದು ಸೂಚಿಸಿದರು.

ಪ್ರತಿಕ್ರಿಯಿಸಿ (+)