ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನೂ ಐ ಪ್ಯಾಡ್‌ ಮರಳಿಸದ ಬಿಬಿಎಂಪಿ ಸದಸ್ಯರು

ನೋಟಿಸ್‌ ನೀಡಲು ಪಾಲಿಕೆ ಸಿದ್ಧತೆ
Last Updated 15 ಅಕ್ಟೋಬರ್ 2020, 20:55 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ಸದಸ್ಯರ ಅಧಿಕಾರದ ಅವಧಿ ಮುಗಿದು ತಿಂಗಳು ಕಳೆಯುತ್ತಾ ಬಂದಿದೆ. ಆದರೆ, ಬಿಬಿಎಂಪಿ ವತಿಯಿಂದ ನೀಡಿದ್ದ ಐ–ಪ್ಯಾಡ್‌ಗಳನ್ನು ಸದಸ್ಯರು ಇನ್ನೂ ಮರಳಿಸಿಲ್ಲ.

ಬಿಬಿಎಂಪಿಯ ಮಾಹಿತಿ ತಂತ್ರಜ್ಞಾನ ವಿಭಾಗವು ಪಾಲಿಕೆಯ ಚುನಾಯಿತ ಸದಸ್ಯರಿಗೆ ಹಾಗೂ ನಾಮನಿರ್ದೇಶಿತ ಸದಸ್ಯರಿಗೆ 2018–19ನೇ ಸಾಲಿನಲ್ಲಿ ಆ್ಯಪಲ್‌ ಕಂಪನಿಯ ಐ–ಪ್ಯಾಡ್‌ಗಳನ್ನು ಒದಗಿಸಿತ್ತು. ಇದಕ್ಕಾಗಿ ₹ 99 ಲಕ್ಷ ವೆಚ್ಚವಾಗಿತ್ತು.ಕೌನ್ಸಿಲ್‌ ಸಭೆಗಳ ಸೂಚನಾ ಪತ್ರ, ಕಾರ್ಯಸೂಚಿಗಳು ಹಾಗೂ ಪ್ರಮುಖ ತೀರ್ಮಾನಗಳ ಕುರಿತು ಐ–ಪ್ಯಾಡ್‌ಗಳ ಮೂಲಕವೇ ಸದಸ್ಯರಿಗೆ ಮಾಹಿತಿ ನೀಡಲಾಗುತ್ತಿತ್ತು. ಕೆಲವು ಸದಸ್ಯರು ಐ–ಪ್ಯಾಡ್‌ಗಳನ್ನು ಸ್ವೀಕರಿಸಲು ನಿರಾಕರಿಸಿದ್ದರು.

‘ತಂತ್ರಜ್ಞಾನದ ಬಗ್ಗೆ ತಿಳಿವಳಿಕೆ ಇದ್ದ ಸದಸ್ಯರು ಐ–ಪ್ಯಾಡ್‌ಗಳನ್ನು ಸದುಪಯೋಗಪಡಿಸಿಕೊಂಡಿದ್ದರು. ಅನೇಕ ಮಹಿಳಾ ಸದಸ್ಯರು ಅದರ ತಂತ್ರಾಂಶವನ್ನು ಮೇಲ್ದರ್ಜೆಗೇರಿಸಿಕೊಂಡು ಹೋಗಿದ್ದರು. ಅದರ ಬಳಕೆ ವೇಳೆ ಸಮಸ್ಯೆ ಎದುರಾದಾಗ ನಮ್ಮಿಂದ ಮಾಹಿತಿ ಪಡೆಯುತ್ತಿದ್ದರು’ ಎಂದುಬಿಬಿಎಂಪಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸದಸ್ಯರಿಗೆ ವಿತರಿಸಿದ್ದ ಐ–ಪ್ಯಾಡ್‌ಗಳು ಪಾಲಿಕೆಯ ಸ್ವತ್ತು. ಅಧಿಕಾರಾವಧಿ ಮುಗಿದ ಬಳಿಕ ಸದಸ್ಯರು ಅದನ್ನು ಹಿಂತಿರುಗಿಸಬೇಕು. ಆದರೆ, ಇದುವರೆಗೆ ಯಾರೂ ಹಿಂತಿರುಗಿಸಿಲ್ಲ. ಅನೇಕರಿಗೆ ಅದನ್ನು ಹಿಂತಿರುಗಿಸಬೇಕು ಎಂಬ ಅರಿವಿಲ್ಲ. ಅವರಿಗೆ ಈ ಬಗ್ಗೆ ಶೀಘ್ರವೇ ತಿಳಿವಳಿಕೆ ಪತ್ರ ಕಳುಹಿಸಿ ಅದನ್ನು ಮರಳಿಸುವಂತೆ ಕೇಳುತ್ತೇವೆ’ ಎಂದು ಅವರು ತಿಳಿಸಿದರು.

ಹೆಚ್ಚಿನ ಸದಸ್ಯರು ಐ–ಪ್ಯಾಡ್‌ಗಳನ್ನು ಬಳಸುತ್ತಲೇ ಇರಲಿಲ್ಲ. ಕೆಲವರು ಇದರಿಂದ ತಮಗೇನೂ ಪ್ರಯೋಜನವಾಗಿಲ್ಲ ಎಂದು ಎಂದು ಕೌನ್ಸಿಲ್‌ ಸಭೆಯಲ್ಲೇ ದೂರಿದ್ದರು.

‘ಪಾಲಿಕೆ ಹಣದಲ್ಲಿ ಐ–ಪ್ಯಾಡ್ ವಿತರಿಸುವುದಕ್ಕೆ ನಾನು ವಿರೋಧ ಪಕ್ಷದ ನಾಯಕನಾಗಿದ್ದಾಗಲೇ ವಿರೋಧ ವ್ಯಕ್ತಪಡಿಸಿದ್ದೆ. ನಾನು ಐ–ಪ್ಯಾಡ್‌ ಪಡೆದಿಲ್ಲ. ಹಾಗಾಗಿ ಹಿಂತಿರುಗಿಸುವ ಪ್ರಶ್ನೆಯೇ ಎದುರಾಗದು’ ಎಂದು ಪಾಲಿಕೆಯ ಮಾಜಿ ಸದಸ್ಯ ಪದ್ಮನಾಭ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಾನು ಐ–ಪ್ಯಾಡ್‌ ಬಳಸುತ್ತಿದ್ದೆ. ಆದರೆ, ಅದರಿಂದ ಭಾರಿ ಪ್ರಯೋಜನವೇನೂ ಆಗಿಲ್ಲ. ಪಾಲಿಕೆ ಸಭೆಯ ನೋಟಿಸ್‌ ಹಾಗೂ ಕಾರ್ಯಸೂಚಿಗಳನ್ನು ಅದರಲ್ಲಿ ನೋಡುತ್ತಿದ್ದೆ. ಇನ್ನೂ ಹಿಂತಿರುಗಿಸಿಲ್ಲ. ಬಿಬಿಎಂಪಿ ಕೇಳಿದರೆ ಅದನ್ನು ಮರಳಿಸುತ್ತೇನೆ. ಅದನ್ನು ಇಟ್ಟುಕೊಂಡು ನನಗೇನಾಗಬೇಕಿದೆ’ ಎಂದು ಮಾಜಿ ಸದಸ್ಯ ಚಂದ್ರಪ್ಪ ರೆಡ್ಡಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT