ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುತ್ತಿಗೆದಾರರು ಬಿಲ್‌ಗೆ ಕಾಯಬೇಕಿಲ್ಲ: ಬಿಬಿಎಂಪಿ ಹೊಸ ಯೋಜನೆ

Last Updated 4 ಸೆಪ್ಟೆಂಬರ್ 2022, 22:21 IST
ಅಕ್ಷರ ಗಾತ್ರ

ಬೆಂಗಳೂರು: ಪೂರ್ಣಗೊಂಡಿರುವ ‌ಕಾಮಗಾರಿಗಳಿಗೆ ಬಿಲ್‌ ಪಾವತಿಸಲು ₹3 ಸಾವಿರ ಕೋಟಿ ಬಾಕಿ ಉಳಿಸಿಕೊಂಡಿರುವ ಬಿಬಿಎಂಪಿ, ಗುತ್ತಿಗೆದಾರರ ಒತ್ತಡ ಕಡಿಮೆ ಮಾಡಲು ಹೊಸ ಯೋಜನೆಯೊಂದನ್ನು ರೂಪಿಸಿದೆ.

ಬಿಬಿಎಂಪಿ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರು ಬಿಲ್ ಪಡೆದುಕೊಳ್ಳಲು ಕನಿಷ್ಠ 2 ವರ್ಷ ಬೇಕಾಗುತ್ತಿದೆ. ರಿಯಾಯಿತಿ ಯೋಜನೆಯಡಿ ರೂಪಿಸಿರುವ ಹೊಸ ಯೋಜನೆ 15 ದಿನಗಳಲ್ಲಿ ಜಾರಿಗೆ ಬರಲಿದ್ದು, ಗುತ್ತಿಗೆದಾರರು ಇನ್ನು ಎರಡು ವರ್ಷ ಕಾಯಬೇಕಿಲ್ಲ.

ಬಿಡುಗಡೆ ಆಗಬೇಕಿರುವ ಮೊತ್ತಕ್ಕೆ ಎರಡು ವರ್ಷದ ಬಡ್ಡಿಯನ್ನು ಬ್ಯಾಂಕ್‌ಗಳಿಗೆ ಪಾವತಿಸಿ ತಕ್ಷಣವೇ ಬ್ಯಾಂಕ್‌ನಿಂದ ಸಾಲದ ರೂಪದಲ್ಲಿ ಹಣ ಪಡೆಯಬಹುದಾಗಿದೆ. ಇದಕ್ಕೆ ಬಿಬಿಎಂಪಿ ಖಾತರಿ ನೀಡಲಿದೆ. ಇದು ಎಲ್ಲಾ ಗುತ್ತಿಗೆದಾರರಿಗೂ ಕಡ್ಡಾಯವಲ್ಲ, ತುರ್ತು ಹಣದ ಅಗತ್ಯ ಇಲ್ಲದವರು ಎರಡು ವರ್ಷ ಕಾಯಬಹುದು. ಈ ಯೋಜನೆ ಗುತ್ತಿಗೆದಾರರಿಗೆ ಅನುಕೂಲ ಆಗಲಿದ್ದು, ಶೇ 70ರಷ್ಟು ಬಾಕಿ ಬಿಲ್ ಸಮಸ್ಯೆ ಪರಿಹಾರವಾಗಲಿದೆ ಎಂದು ಬಿಬಿಎಂಪಿ ನಿರೀಕ್ಷಿಸಿದೆ.

ತನ್ನ ಬಜೆಟ್‌ಗಿಂತ ಹೆಚ್ಚಿನ ಖರ್ಚು ಮಾಡುವುದರಲ್ಲಿ ಎತ್ತಿದ ಕೈ ಎನಿಸಿಕೊಂಡಿರುವ ಬಿಬಿಎಂಪಿ, ಬಿಲ್‌ಗಳನ್ನು ಎರಡು ವರ್ಷ ತಡವಾಗಿ ಪಾವತಿಸುತ್ತಿದೆ. ಕಾಮಗಾರಿ ಪೂರ್ಣಗೊಳಿಸಿದ ಸಮಯದ ಜೇಷ್ಠತೆ ಆಧರಿಸಿ ಬಿಲ್‌ಗಳನ್ನು ಪಡೆದುಕೊಳ್ಳುತ್ತಿದ್ದು, ಸದ್ಯ 2020ರಲ್ಲಿ ನಿರ್ವಹಿಸಿದ ಕಾಮಗಾರಿಯ ಬಿಲ್‌ಗಳು ಪಾವತಿಯಾಗುತ್ತಿವೆ.

ಇದು ಗುತ್ತಿಗೆದಾರರಲ್ಲಿ ಹತಾಶೆಯ ಸ್ಥಿತಿ ನಿರ್ಮಿಸಿದ್ದು, ಕಳಪೆ ಕಾಮಗಾರಿಗೂ ಕಾರಣವಾಗುತ್ತಿದೆ. ಬಿಲ್ ಪಡೆಯುವಷ್ಟರರಲ್ಲಿ ಕಾಮಗಾರಿ ನಿರ್ವಹಿಸಿದ ಕುರುಹೇ ಇಲ್ಲದಾಗುತ್ತಿದ್ದು, ಇದು ತಾಂತ್ರಿಕ ಸಮಸ್ಯೆಯನ್ನೂ ಉಂಟು ಮಾಡುತ್ತಿದೆ. ಕಾಮಗಾರಿ ನಿರ್ವಹಿಸದೆ ಬಿಲ್ ಪಡೆಯುವ ಅವ್ಯವಹಾರಕ್ಕೂ ಇದು ದಾರಿ ಮಾಡಿಕೊಡುತ್ತಿದೆ. ಬಿಲ್ ಪಾವತಿ ಅವಧಿ ಕಡಿಮೆ ಮಾಡಬೇಕು ಎಂಬುದು ಪಾಲಿಕೆ ಗುತ್ತಿಗೆದಾರರು ಆಗಾಗ ಮನವಿ ಸಲ್ಲಿಸುತ್ತಲೇ ಇದ್ದಾರೆ. ಈ ಸಮಸ್ಯೆಗಳಿಗೆ ಹೊಸ ಯೋಜನೆ ಪರಿಹಾರವಾಗಲಿದೆ ಎಂದು ಬಿಬಿಎಂಪಿ ಅಂದಾಜಿಸಿದೆ.

ಈ ಕುರಿತು ಪ್ರತಿಕ್ರಿಯಿಸಿದ ಬಿಬಿಎಂಪಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆ.ಟಿ.ಮಂಜುನಾಥ್, ‘ತಕ್ಷಣಕ್ಕೆ ಹಣದ ಅಗತ್ಯ ಇದ್ದವರಿಗೆ ಈ ಯೋಜನೆ ಸಹಾಯವಾಗುತ್ತದೆ. ಬಿಬಿಎಂಪಿಗೆ ಯಾವುದೇ ನಷ್ಟ ಇಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT