ಬುಧವಾರ, ಜೂನ್ 23, 2021
21 °C
ಪಾಲಿಕೆ ಸೂಚಿಸಿದ ರೋಗಿಗಳಿಂದಲೂ ಶುಲ್ಕ ಪಡೆಯುತ್ತಿದ್ದ ಆಸ್ಪತ್ರೆ

ಮಹಾವೀರ್ ಜೈನ್ ಆಸ್ಪತ್ರೆಯ ಒಪಿಡಿ ಮುಚ್ಚಿಸಿದ ಬಿಬಿಎಂಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಆಸ್ಪತ್ರೆಯ ಶೇ 50ರಷ್ಟು ಹಾಸಿಗೆಗಳನ್ನು ಬಿಬಿಎಂಪಿ ಸೂಚಿಸಿದ ಕೋವಿಡ್‌ ರೋಗಿಗಳ ಚಿಕಿತ್ಸೆಗೆ ಕಾಯ್ದಿರಿಸದ ಹಾಗೂ ಬಿಬಿಎಂಪಿ ಸೂಚಿಸಿದ ರೋಗಿಗಳಿಂದಲೂ ಚಿಕಿತ್ಸೆಗೆ ಮುಂಗಡ ಶುಲ್ಕ ಪಡೆಯುತ್ತಿದ್ದ ಆರೋಪ ಎದುರಿಸುತ್ತಿರುವ ಮಹಾವೀರ್ ಜೈನ್ ಆಸ್ಪತ್ರೆಯ ಹೊರ ರೋಗಿಗಳ ವಿಭಾಗವನ್ನು (ಒಪಿಡಿ) ಪಾಲಿಕೆ ಅಧಿಕಾರಿಗಳು ಮಂಗಳವಾರ ಮುಚ್ಚಿಸಿದ್ದಾರೆ.

ಪೂರ್ವ ವಲಯದ ವಸಂತ ನಗರ ವಾರ್ಡ್‌ನ ಮಿಲ್ಲರ್ಸ್ ರಸ್ತೆಯಲ್ಲಿರುವ ಭಗವಾನ್ ಮಹಾವೀರ್ ಜೈನ್ ಆಸ್ಪತ್ರೆಯವರು ಪಾಲಿಕೆಯಿಂದ ಕಳುಹಿಸಿಕೊಟ್ಟ ಕೊರೊನ ಸೋಂಕಿತರನ್ನು ದಾಖಲಿಸಿಕೊಳ್ಳಲು ನಾಲ್ಕೈದು ಗಂಟೆ ಕಾಯಿಸುತ್ತಿರುವ ಬಗ್ಗೆಯೂ ಬಿಬಿಎಂಪಿಗೆ ದೂರು ಬಂದಿತ್ತು.

ಪಾಲಿಕೆ ವತಿಯಿಂದ ಬಿ.ಯು ಸಂಖ್ಯೆ ನೀಡಿ ಕಳುಹಿಸುವ ಕೊರೊನಾ ಸೋಂಕಿತರಿಂದಲೂ ಆಸ್ಪತ್ರೆಯವರು ಹಣ ಪಡೆಯುತ್ತಿದ್ದ ದೂರಿನ ಬಗ್ಗೆ ಖಾಸಗಿ ಆಸ್ಪತ್ರೆಗಳ ಉಸ್ತುವಾರಿಯಾಗಿರುವ ಐ.ಎ.ಎಸ್ ಅಧಿಕಾರಿ ಮೊಹಮದ್ ಮೊಹಿಸಿನ್ ಹಾಗೂ ಬಿಬಿಎಂಪಿ  ಪೂರ್ವ ವಲಯd ಸಂಯೋಜಕರಾದ ಐ.ಎ.ಎಸ್ ಅಧಿಕಾರಿ ಮನೋಜ್ ಕುಮಾರ್ ಮೀನಾ ಅವರು ಸೋಮವಾರ ಆಸ್ಪತ್ರೆ ಮೇಲ್ವಿಚಾರಕರ ಜೊತೆ ಸಭೆ ನಡೆಸಿ ಎಚ್ಚರಿಕೆ ನೀಡಿದ್ದರು. 

‘ಎಚ್ಚರಿಕೆ ನೀಡಿದ ಬಳಿಕವೂ ಆಸ್ಪತ್ರೆಯವರು ತಪ್ಪನ್ನು ಸರಿಪಡಿಸಿಕೊಂಡಿರಲಿಲ್ಲ. ಪೂರ್ವ ವಲಯದ ಜಂಟಿ ಆಯುಕ್ತರಾದ ಪಲ್ಲವಿ ನೇತೃತ್ವದ ಅಧಿಕಾರಿಗಳ ತಂಡವು ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿತ್ತು. ಆರೋಪಗಳಲ್ಲಿ ನಿಜಾಂಶವಿದ್ದುದರಿಂದ ಆಸ್ಪತ್ರೆಯ ಹೊರ ರೋಗಿಗಳ ವಿಭಾಗವನ್ನು ಸೀಲ್ ಮಾಡಿತು. ಇದೇ ಪ್ರವೃತ್ತಿ ಮುಂದುವರಿದರೆ ಆಸ್ಪತ್ರೆ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ ಅಡಿ ಎಫ್.ಐ.ಆರ್ ದಾಖಲಿಸುವುದಾಗಿ ಎಚ್ಚರಿಕೆ ನೀಡಲಾಗಿದೆ’ ಎಂದು ಬಿಬಿಎಂಪಿ ಪ್ರಕಟಣೆ ತಿಳಿಸಿದೆ.

‘ಸರ್ಕಾರದ ಆದೇಶದಂತೆ ಖಾಸಗಿ ಆಸ್ಪತ್ರೆಗಳಲ್ಲಿ ಶೇ.50 ರಷ್ಟು ಹಾಸಿಗೆಗಳನ್ನು ಬಿಬಿಎಂಪಿ ಸೂಚಿಸಿರುವ ರೋಗಿಗಳ ಚಿಕಿತ್ಸೆಗೆ ಮೀಸಲಿಡಬೇಕು. ಅದರಂತೆ ಭಗವಾನ್ ಮಹಾವೀರ್ ಜೈನ್ ಆಸ್ಪತ್ರೆಯವರು 75 ಹಾಸಿಗೆಗಳನ್ನು ನೀಡಬೇಕಿತ್ತು. ಆದರೆ ಅವರು ಇದುವರೆಗೆ 15 ಮಂದಿಯನ್ನು ಮಾತ್ರ ದಾಖಲು‌ ಮಾಡಿಕೊಂಡಿದ್ದಾರೆ. ಆದ್ದರಂತೆ ಆಸ್ಪತ್ರೆಯವರಿಗೆ ಎಚ್ಚರಿಕೆಯ ನೋಟಿಸ್ ನೀಡಲಾಗಿದೆ. ಸದ್ಯಕ್ಕೆ ಒಪಿಡಿಯನ್ನು ಮಾತ್ರ ಮುಚ್ಚಿಸಿದ್ದೇವೆ. ಒಳರೋಗಿಗಳ ವಿಭಾಗದ ಕಾರ್ಯನಿರ್ವಹಣೆ ಮುಂದುವರಿಸಲು ಅವಕಾಶ ನೀಡಿದ್ದೇವೆ’ ಎಂದು ಪಲ್ಲವಿ ತಿಳಿಸಿದರು.

‘ಆಸ್ಪತ್ರೆಯವರು ಬಿಬಿಎಂಪಿ ವತಿಯಿಮದ ಕಳುಹಿಸಿದ ರೋಗಿಗಳಿಂದ ತಲಾ ₹ 30ಸಾವಿರ ಮುಂಗಡ ಪಡೆದಿದ್ದರು. ಇದನ್ನು ತಕ್ಷಣವೇ ಮರಳಿಸುವಂತೆ ಸೂಚಿಸಿದರೂ ಅದಕ್ಕೆ ಸೊಪ್ಪು ಹಾಕಿರಲಿಲ್ಲ. ಹಾಗಾಗಿ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿತ್ತು. ಕ್ರಮ ಕೈಗೊಳ್ಳದಂತೆ ಆಸ್ಪತ್ರೆಯವರು ಪ್ರಭಾವ ಬಳಸಿ ಒತ್ತಡ ಹಾಕುವ ಯತ್ನಕ್ಕೂ ಮುಂದಾಗಿದ್ದರು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಒಪಿಡಿ ಮುಚ್ಚಿಸಿದ ಬಗ್ಗೆ ಪ್ರತಿಕ್ರಿಯೆ ನೀಡಲು ಆಸ್ಪತ್ರೆಯವರು ನಿರಾಕರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು