ಮಂಗಳವಾರ, ಜೂನ್ 28, 2022
26 °C
ಲಸಿಕೆ ಅಭಿಯಾನ ತೀವ್ರಗೊಳಿಸಲು ಬಿಬಿಎಂಪಿ ನಿರ್ಧಾರ

30 ದಿನಗಳಲ್ಲಿ 30 ಲಕ್ಷ ಮಂದಿಗೆ ಲಸಿಕೆ: ಬಿಬಿಎಂಪಿ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋವಿಡ್‌ ಲಸಿಕೆ ಹಾಕುತ್ತಿರುವುದು–ಸಾಂದರ್ಭಿಕ ಚಿತ್ರ

ಬೆಂಗಳೂರು: ಕೋವಿಡ್‌ ಮೂರನೇ ಅಲೆ ಕಾಣಿಸಿಕೊಳ್ಳುವ ಬಗ್ಗೆ ತಜ್ಞರು ಮುನ್ನೆಚ್ಚರಿಕೆ ನೀಡಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಬಿಬಿಎಂಪಿ, ಇದನ್ನು ಪರಿಣಾಮಕಾರಿಯಾಗಿ ಎದುರಿಸಲು ಲಸಿಕಾ ಅಭಿಯಾನವನ್ನು ಬಲಪಡಿಸಲು ಮುಂದಾಗಿದೆ.

ಈ ಕುರಿತು ಮಾಹಿತಿ ನೀಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ, ‘ಕೋವಿಡ್‌ ಮೂರನೇ ಅಲೆಯನ್ನು ಸಮರ್ಥವಾಗಿ ಎದುರಿಸಬೇಕಾದರೆ ಎಲ್ಲರಿಗೂ ಲಸಿಕೆ ಹಾಕಬೇಕು. ಲಸಿಕೆ ಪಡೆದರೆ ಜನರು ಸುರಕ್ಷಿತವಾಗಿರುತ್ತಾರೆ. ಸೋಂಕು ತಗುಲಿದರೂ ಚಿಕಿತ್ಸೆ ಸುಲಭವಾಗಲಿದೆ. ಹಾಗಾಗಿ ಎಲ್ಲರಿಗೂ ಲಸಿಕೆ ನೀಡಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ’ ಎಂದು ತಿಳಿಸಿದರು.

‘30 ದಿನಗಳಲ್ಲಿ 30 ಲಕ್ಷ ಮಂದಿಗೆ ಲಸಿಕೆ ನೀಡುವ ಗುರಿ ಹೊಂದಿದ್ದೇವೆ. ಖಾಸಗಿ ಆಸ್ಪತ್ರೆಗಳು ಹಾಗೂ ದೇಣಿಗೆ ನೀಡುವ ಸಂಸ್ಥೆಗಳ ನೆರವಿನಿಂದ ದಿನಕ್ಕೆ 1 ಲಕ್ಷಕ್ಕಿಂತ ಜಾಸ್ತಿ ಡೋಸ್‌ ಲಸಿಕೆಗಳನ್ನು ನೀಡಲಿದ್ದೇವೆ. ನಗರದಲ್ಲಿ ಶುಕ್ರವಾರ 1.17 ಲಕ್ಷ ಮಂದಿಗೆ ಹಾಗೂ ಶನಿವಾರ 1.15 ಲಕ್ಷ ಮಂದಿಗೆ ಲಸಿಕೆ ಹಾಕಲಾಗಿದೆ’ ಎಂದರು.

‘ನಗರದಲ್ಲಿ 45 ವರ್ಷ ಮೇಲಿನ 26 ಲಕ್ಷ ಜನರನ್ನು ಗುರುತಿಸಲಾಗಿದೆ. ಇವರಲ್ಲಿ 15.43 ಲಕ್ಷ  ಮಂದಿ ಲಸಿಕೆಯ ಮೊದಲ ಡೋಸ್‌ ಪಡೆದಿದ್ದಾರೆ. ಅಂದರೆ, ಶೇ 59ರಷ್ಟು ಮಂದಿಗೆ ಈಗಾಗಲೇ ಲಸಿಕೆ ಹಾಕಲಾಗಿದ್ದು, ತಿಂಗಳ ಒಳಗ ಶೇ 75ರಷ್ಟು ಮಂದಿಗೆ ಲಸಿಕೆ ನೀಡಲಿದ್ದೇವೆ. ಇದಕ್ಕಾಗಿ ಲಭ್ಯ ಇರುವ ಲಸಿಕೆ ಜೊತೆಗೆ ಇನ್ನೂ 4 ಲಕ್ಷ ಡೋಸ್‌ಗಳ ಅಗತ್ಯವಿದೆ’ ಎಂದು ಮುಖ್ಯ ಆಯುಕ್ತರು ಮಾಹಿತಿ ನೀಡಿದರು.

‘18ರಿಂದ 44 ವರ್ಷದೊಳಗಿನವರಲ್ಲಿ ಆಯ್ದ 20 ವರ್ಗಗಳನ್ನು ಗುರುತಿಸಿ ಉಚಿತವಾಗಿ ಲಸಿಕೆ ನೀಡಲಾಗುತ್ತಿದೆ. ಈ ವಯೋಮಾನದ ಶೇ 75ರಷ್ಟು ಮಂದಿಗೆ ಖಾಸಗಿ ಆಸ್ಪತ್ರೆಗಳ ಮೂಲಕ ಲಸಿಕೆ ನೀಡಲಾಗುತ್ತಿದೆ. ವಿವಿಧ ಕಂಪನಿಗಳ ಕಚೇರಿಗಳು, ಕಾರ್ಖಾನೆಗಳು, ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕಂಪನಿಗಳಗಳು ಪ್ರತ್ಯೇಕವಾಗಿ ಖಾಸಗಿ ಆಸ್ಪತ್ರೆ ಜೊತೆ ಸಮಾಲೋಚಿಸಿ ತಮ್ಮ ಸಿಬ್ಭಂದಿ ಲಸಿಕೆ ಕೊಡಿಸುತ್ತಿವೆ. ಅಪಾರ್ಟ್‌ಮೆಂಟ್‌ ಸಮುಚ್ಚಯಗಳ ಕ್ಷೇಮಾಭಿವೃದ್ಧಿ ಸಂಘಗಳೂ ಖಾಸಗಿ ಆಸ್ಪತ್ರೆಗಳ ನೆರವಿನಿಂದ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿವೆ’ ಎಂದರು.

‘18ರಿಂದ 44 ವರ್ಷಗಳ ಒಳಗಿನ 64 ಲಕ್ಷ ಮಂದಿಯನ್ನು ನಗರದಲ್ಲಿ ಗುರುತಿಸಿದ್ದು, ಈಗಾಗಲೇ 9 ಲಕ್ಷ ಮಂದಿ ಲಸಿಕೆ ಪಡೆದಿದ್ದಾರೆ. ಈ ವಯೋಮಾನದ 32 ಲಕ್ಷ ಮಂದಿಗೆ ಖಾಸಗಿ ವಲಯದ ಸಹಭಾಗಿತ್ವದಲ್ಲಿ ತಿಂಗಳ ಒಳಗೆ ಲಸಿಕೆ ನೀಡಲು ನಿರ್ಧರಿಸಿದ್ದೇವೆ. ಇದಕ್ಕೆ 23 ಲಕ್ಷ ಹೆಚ್ಚುವರಿ ಡೋಸ್‌ಗಳ ಅಗತ್ಯವಿದೆ’ ಎಂದರು.

‘ಬಿಬಿಎಂಪಿಯು ದಾನಿಗಳ ನೆರವಿನಿಂದ ತಳವರ್ಗದ ಜನರಿಗೆ ಹಾಗೂ ವೆಚ್ಚ ಭರಿಸಲು ಸಾಧ್ಯವಿಲ್ಲದವರಿಗೆ ಲಸಿಕೆ ಕಾರ್ಯಕ್ರಮ ಏರ್ಪಡಿಸುತ್ತಿದೆ. ಕೊಳೆಗೇರಿ, ಗಾರ್ಮೆಂಟ್ಸ್‌ ಕಾರ್ಖಾನೆಗಳ ಕಾರ್ಮಿಕರು, ಮಧ್ಯಮ, ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳ ಕಾರ್ಮಿಕರಿಗೆ ಲಸಿಕೆ ಅಭಿಯಾನ ಹಮ್ಮಿಕೊಳ್ಳುತ್ತಿದ್ದು, ಇದಕ್ಕಾಗಿ ವಿಶೇಷ ಕಾರ್ಯಪಡೆ (ಎಸಿಟಿ) ರಚಿಸಲಾಗಿದೆ. ಮೂರು ದಿನಗಳಿಂದ ಕಟ್ಟಡ ಕಾರ್ಮಿಕರಿಗೆ ಲಸಿಕೆ ಕಾರ್ಯಕ್ರಮ ಶುರು ಮಾಡಿದ್ದೇವೆ’ ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣದಲ್ಲಿ ಎಲ್ಲರಿಗೂ ಉಚಿತ ಲಸಿಕೆ ನೀಡುವ ವಾಗ್ದಾನ ಮಾಡಿದ ಬಗ್ಗೆ ಪ್ರತಿಕ್ರಿಯಿಸಿದ ಗೌರವ್‌ ಗುಪ್ತ, ‘ಸದ್ಯಕ್ಕೆ ನಾವು ಹಮ್ಮಿಕೊಂಡಿರುವ ಅಭಿಯಾನ ಮುಂದುವರಿಸಲಿದ್ದೇವೆ. ಕೇಂದ್ರ ಸರ್ಕಾರ ಲಸಿಕೆ ಲಭ್ಯವಾದ ಬಳಿಕ ಅವುಗಳನ್ನು ಉಚಿತವಾಗಿ ನೀಡಲು ಕ್ರಮ ಕೈಗೊಳ್ಳಲಿದ್ದೇವೆ’ ಎಂದರು.

ಹೆಚ್ಚಿನ ಲಸಿಕೆ ಖಾಸಗಿ ಆಸ್ಪತ್ರೆಗಳ ಪಾಲಾಗುತ್ತಿರುವುದೇಕೆ?

ಬಿಬಿಎಂಪಿಗಿಂತ ಖಾಸಗಿ ಆಸ್ಪತ್ರೆಗಳಿಗೆ ಹೆಚ್ಚು ಲಸಿಕೆ ಲಭ್ಯವಾಗುತ್ತಿರುವ ಕುರಿತು ಪ್ರತಿಕ್ರಿಯಿಸಿದ ಮುಖ್ಯ ಆಯುಕ್ತರು, ‘ಲಭ್ಯ ಇರುವ ಲಸಿಕೆಗಳಲ್ಲಿ ಶೇ 50 ರಷ್ಟನ್ನು ಕೇಂದ್ರ ಸರ್ಕಾರ ಪಡೆಯುತ್ತದೆ. 45 ವರ್ಷ ಮೇಲ್ಪಟ್ಟವರಿಗೆ ನೀಡಲು ಈ ಲಸಿಕೆಗಳನ್ನು ಹಂಚಿಕೆ ಮಾಡುತ್ತಿದೆ. ಉಳಿದ ಶೇ 50ರಷ್ಟು ಲಸಿಕೆಗಳಲ್ಲಿ ಶೇ 25ರಷ್ಟನ್ನು ರಾಜ್ಯ ಸರ್ಕಾರಗಳಿಗೆ ಹಾಗೂ ಶೇ 25ರಷ್ಟನ್ನು ಖಾಸಗಿ ಆಸ್ಪತ್ರೆಗಳಿಗೆ ಹಂಚಿಕೆ ಮಾಡಲಾಗಿದೆ. ಲಸಿಕೆ ಖರೀದಿಸುವ ಖಾಸಗಿ ಆಸ್ಪತ್ರೆಗಳು ಬೆಂಗಳೂರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿವೆ. ಹಾಗಾಗಿ ಸಹಜವಾಗಿ ಅವರಿಗೆ ಹೆಚ್ಚು ಲಸಿಕೆ ಸಿಕ್ಕಿದೆ’ ಎಂದು ವಿವರಿಸಿದರು.

‘ಲಸಿಕೆ: ಮನೆ ಮನೆ ಸಮೀಕ್ಷೆ’

‘ಲಸಿಕೆ ಪಡೆಯದವರನ್ನು ಗುರುತಿಸುವ ಬಗ್ಗೆ ವಲಯ ಮಟ್ಟದ ಅಧಿಕಾರಿಗಳು ಹಾಗೂ ಆರೋಗ್ಯ ವಿಭಾಗದ ಅಧಿಕಾರಿಗಳ ಸಭೆಯಲ್ಲಿ ನಿರ್ಣಯಿಸಿದ್ದೇವೆ. ಈ ಸಲುವಾಗಿ ಮನೆ ಮನೆ ಸಮೀಕ್ಷೆ ನಡೆಸಲಾಗುತ್ತದೆ. ಮತದಾರರ ಪಟ್ಟಿ ಆಧಾರದಲ್ಲಿ ಜನರನ್ನು ಗುರುತಿಸಿ ಲಸಿಕೆ ಬಗ್ಗೆ ಮಾಹಿತಿ ನೀಡಬೇಕು. ಲಸಿಕೆಯ ಎರಡನೇ ಡೋಸ್‌ ಪಡೆಯಲು ಬಾಕಿ ಇರುವವರಿಗೆ ಕರೆ ಮಾಡಿ ಮಾಹಿತಿ ನೀಡಲು ನಿರ್ದೇಶನ ನೀಡಿದ್ದೇನೆ’ ಎಂದು ಗೌರವ್ ಗುಪ್ತ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು