ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಒಪಿ ವಿಗ್ರಹ ಮುಟ್ಟುಗೋಲು

ಮಾಲೀಕರು, ಹಿಂದೂ ಸಂಘಟನೆಯಿಂದ ಪ್ರತಿರೋಧ
Last Updated 21 ಆಗಸ್ಟ್ 2019, 19:27 IST
ಅಕ್ಷರ ಗಾತ್ರ

ಬೆಂಗಳೂರು: ಲಾಲ್‌ಬಾಗ್‌ ಪಶ್ಚಿಮ ದ್ವಾರದ ಹತ್ತಿರ, ಆರ್.ವಿ. ರಸ್ತೆಯ ಮಾವಳ್ಳಿಯಲ್ಲಿ ವಿನಾಯಕ ಆ್ಯಂಡ್‌ ಕಂಪನಿ ಮಳಿಗೆಯಲ್ಲಿ ದಾಸ್ತಾನಿಟ್ಟಿದ್ದ ಪಿಒಪಿಯಿಂದ ತಯಾರಿಸಿದ 16 ಗಣೇಶನ ಮೂರ್ತಿಗಳನ್ನು ಬಿಬಿಎಂಪಿ ಅಧಿಕಾರಿಗಳು ಬುಧವಾರ ಮುಟ್ಟುಗೋಲು ಹಾಕಿಕೊಂಡರು.

ಈ ಕಾರ್ಯಾಚರಣೆ ವೇಳೆ ಮಳಿಗೆಯ ಮಾಲೀಕರು ಹಾಗೂ ಹಿಂದೂ ಸಂಘಟನೆಗಳಿಂದ ಪ್ರತಿರೋಧ ವ್ಯಕ್ತವಾಯಿತು. ಕೇಸರಿ ಬಾವುಟ ಹಿಡಿದು ಸ್ಥಳದಲ್ಲಿ ಜಮಾಯಿಸಿದ್ದ ಕೆಲವರು ಮೂರ್ತಿಗಳ ಸಾಗಣೆಗೆ ಅಡ್ಡಿಪಡಿಸಿದ್ದರಿಂದ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು.

ಮಳಿಗೆಯಲ್ಲಿ ಮಣ್ಣಿನಿಂದ ತಯಾರಿಸಿದ ಮೂರ್ತಿಗಳೂ ಇದ್ದವು. ‘ಪಿಒಪಿ ಮೂರ್ತಿಗಳನ್ನು ತೆರವು ಮಾಡುವಾಗ ಮಣ್ಣಿನ ಮೂರ್ತಿಗಳಿಗೆ ಹಾನಿಯಾದರೆ ನೀವೇ ಹೊಣೆ’ ಎಂದು ಮಾಲೀಕರು ಅಧಿಕಾರಿಗಳಿಗೆ ಬೆದರಿಕೆ ಒಡ್ಡಿದರು. ಇದಕ್ಕೆ ಜಗ್ಗದ ಅಧಿಕಾರಿಗಳು, ‘ಪಿಒಪಿ ಮೂರ್ತಿಗಳಿಂದ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಹಾಗಾಗಿ ಅವುಗಳ ತಯಾರಿ ಮತ್ತು ಮಾರಾಟ ನಿಷೇಧಿಸಲಾಗಿದ್ದು, ಮುಟ್ಟುಗೋಲು ಅನಿವಾರ್ಯ. ವಿರೋಧ ಮಾಡದೇ ಸಹಕರಿಸಿ’ ಎಂದು ಕೋರಿದರು.

‘ಎರಡು ದಿನಗಳ ಕಾಲವಕಾಶ ನೀಡಿದರೆ ನಾವೇ ಬೇರೆಡೆ ಸಾಗಣೆ ಮಾಡಿಕೊಳ್ಳುತ್ತೇವೆ. ಕೇರಳದಲ್ಲಿ ಇದನ್ನು ಮಾರಾಟ ಮಾಡುತ್ತೇವೆ’ ಎಂದು ತಯಾರಕ ಮತ್ತು ಮಾರಾಟಗಾರರು ಪಟ್ಟು ಹಿಡಿದರು.

ಅದಕ್ಕೆ ಅಧಿಕಾರಿಗಳು ಒಪ್ಪಲಿಲ್ಲ. ಬಳಿಕವೂ ಮಳಿಗೆಯವರು ಪ್ರತಿರೋಧ ಒಡ್ಡಿದ್ದರಿಂದ ಭದ್ರತೆ ಸಲುವಾಗಿ ಪೊಲೀಸರನ್ನು ಸ್ಥಳಕ್ಕೆ ಕರೆಸಿ ಮೂರ್ತಿಗಳನ್ನು ಸಾಗಿಸಿದರು. ಸ್ಥಳಕ್ಕೆ ಕ್ರೇನ್‌ ತರಿಸಿ ಮೂರ್ತಿಗಳನ್ನು ಲಾರಿಗೆ ತುಂಬಲಾಯಿತು.

‘ಈ ಮಳಿಗೆಯವರಿಗೆ ಕಳೆದ ವರ್ಷವೇ ಪಿಒಪಿ ಮೂರ್ತಿಗಳನ್ನು ತಯಾರಿಸದಂತೆ ಸೂಚಿಸಿದ್ದೆವು. ಹಳೆಯ ಮೂರ್ತಿಗಳು ಮಾತ್ರ ಇವೆ. ಹೊಸ ಪಿಒಪಿಯಿಂದ ಹೊಸ ಮೂರ್ತಿಗಳನ್ನು ತಯಾರಿಸುವುದಿಲ್ಲ ಎಂದು ಭರವಸೆ ನೀಡಿದ್ದರಿಂದ ಕಳೆದ ವರ್ಷ ಕ್ರಮ ಕೈಗೊಂಡಿರಲಿಲ್ಲ. ಆದರೂ, ಈ ಬಾರಿ ಮತ್ತೆ ಪಿಒಪಿ ಮೂರ್ತಿಗಳನ್ನು ತಯಾರಿಸಿ ಮಾರಾಟಕ್ಕಿಟ್ಟಿದ್ದಾರೆ’ ಎಂದು ದಕ್ಷಿಣ ವಲಯದ ಆರೋಗ್ಯ ಅಧಿಕಾರಿ ಮನೋರಂಜನ್‌ ಹೆಗ್ಡೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಧಿಕಾರಿಗಳು ಟಿಪ್ಪರ್‌ ಹಾಗೂ ಟೆಂಪೊವನ್ನು ಮಾತ್ರ ಸ್ಥಳಕ್ಕೆ ತರಿಸಿಕೊಂಡಿದ್ದರು. ಹಾಗಾಗಿ ಮಳಿಗೆಯಲ್ಲಿದ್ದ ಎಲ್ಲ ಮೂರ್ತಿಗಳನ್ನು ಸಾಗಿಸಲು ಆಗಲಿಲ್ಲ. ಅಲ್ಲಿ 209 ಮೂರ್ತಿಗಳು ಇನ್ನೂ ಇವೆ. ಅವುಗಳನ್ನೂ ವಶಕ್ಕೆ ಪಡೆಯುತ್ತೇವೆ ಎಂದು ದಕ್ಷಿಣ ವಲಯದ ಜಂಟಿ ಆಯುಕ್ತ ವೀರಭದ್ರಸ್ವಾಮಿ ತಿಳಿಸಿದರು.

***

’ಯಾವುದೇ ಕಾರಣಕ್ಕೂ ಪಿಒಪಿ ಮೂರ್ತಿಗಳ ತಯಾರಿ ಹಾಗೂ ಮಾರಾಟಕ್ಕೆ ಅವಕಾಶ ನೀಡುವುದಿಲ್ಲ. ಸಾರ್ವಜನಿಕರು ಪೂಜೆಗೆ ಮಣ್ಣಿನಿಂದ ತಯಾರಿಸಿದ ಮೂರ್ತಿಗಳನ್ನು ಬಳಸುವ ಮೂಲಕ ಸಹಕರಿಸಬೇಕು

–ವೀರಭದ್ರಸ್ವಾಮಿ, ಜಂಟಿ ಆಯುಕ್ತ, ಬಿಬಿಎಂಪಿ ದಕ್ಷಿಣ ವಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT