ಭಿತ್ತಿಪತ್ರ ಕಿತ್ತೆಸೆದರು, ಗೋಡೆಗೆ ಬಣ್ಣ ಬಳಿದರು

7

ಭಿತ್ತಿಪತ್ರ ಕಿತ್ತೆಸೆದರು, ಗೋಡೆಗೆ ಬಣ್ಣ ಬಳಿದರು

Published:
Updated:
Deccan Herald

ಬೆಂಗಳೂರು: ತಿಂಗಳ ಎರಡನೇ ಶನಿವಾರ ಸರ್ಕಾರಿ ಕಚೇರಿಗಳಿಗೆ ರಜೆ. ಆದರೂ, ಬಿಬಿಎಂಪಿ ಅಧಿಕಾರಿಗಳು ಹಾಗೂ ಪೌರ ಕಾರ್ಮಿಕರಿಗೆ ದಿನವಿಡೀ ಬಿಡುವಿಲ್ಲದಷ್ಟು ಕೆಲಸ. ಭಿತ್ತಿಪತ್ರಗಳನ್ನು (ಪೋಸ್ಟರ್‌) ಕಿತ್ತೆಸೆಯುವ ಹಾಗೂ ಜಾಹೀರಾತು ಬರಹಗಳಿದ್ದ ಗೋಡೆಗಳಿಗೆ ಸುಣ್ಣ–ಬಣ್ಣ ಬಳಿಯುವ ಕಾಯಕದಲ್ಲಿ ಅವರು ತಲ್ಲೀನರಾಗಿದ್ದರು.

ನಗರದಲ್ಲಿನ ಅನಧಿಕೃತ ಫ್ಲೆಕ್ಸ್‌ ತೆರವುಗೊಳಿಸುವಂತೆ ಬಿಬಿಎಂಪಿಗೆ ಇತ್ತೀಚೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಹೈಕೋರ್ಟ್, ಅದರ ಬೆನ್ನಲ್ಲೇ ನಗರದ ಅಂದಗೆಡಿಸುತ್ತಿರುವ ಪೋಸ್ಟರ್ ಹಾಗೂ ಗೋಡೆಬರಹಗಳನ್ನು ಭಾನುವಾರ ಸಂಜೆಯೊಳಗೆ ತೆರವುಗೊಳಿಸುವಂತೆ ತಾಕೀತು ಮಾಡಿತ್ತು. ಇವುಗಳ ತೆರವಿಗೆ ಬಿಬಿಎಂಪಿ ಶನಿವಾರ ಹಾಗೂ ಭಾನುವಾರ ವಿಶೇಷ ಅಭಿಯಾನ ಹಮ್ಮಿಕೊಂಡಿದೆ.

ಮೇಯರ್ ಸಂಪತ್ ರಾಜ್, ಪಾಲಿಕೆಯ ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್ ಹಾಗೂ  ಸದಸ್ಯೆ ಲತಾ ಕುವರ್‌ ರಾಥೋಡ್‌ ಅವರು ಗಾಂಧಿನಗರದ ವೈ.ರಾಮಚಂದ್ರ ರಸ್ತೆ ಯಲ್ಲಿ ಭಿತ್ತಿ ಪತ್ರ ತೆರವುಗೊಳಿಸುವ ಮೂಲಕ ಈ ಅಭಿಯಾನಕ್ಕೆ ಚಾಲನೆ ನೀಡಿದರು.
'ಇನ್ನು ಸಾರ್ವಜನಿಕ ಸ್ಥಳಗಳಲ್ಲಿ ಯಾರಾದರೂ ಪೋಸ್ಟರ್ ಅಂಟಿಸಿದರೆ ಪೌರಾಡಳಿತ ಕಾಯ್ದೆ ಪ್ರಕಾರ ದಂಡ ವಿಧಿಸುತ್ತೇವೆ' ಎಂದು ಮೇಯರ್ ತಿಳಿಸಿದರು.

‘ಪಾಲಿಕೆಯ ಅಧಿಕಾರಿಗಳು ಹಾಗೂ 20 ಸಾವಿರ ಪೌರಕಾರ್ಮಿಕರು ‍ಪೋಸ್ಟರ್‌ ತೆರವು ಕಾರ್ಯದಲ್ಲಿ ಭಾಗವಹಿಸಿದ್ದಾರೆ. ನಗರದ ಬಹುತೇಕ ಕಡೆ ಸ್ವಚ್ಛತಾ ಕಾರ್ಯ ನಡೆದಿದೆ. ತೀರಾ ಅಂದಗೆಟ್ಟಿದ್ದ ಗೋಡೆಗಳಿಗೆ ಬಣ್ಣವನ್ನೂ ಬಳಿದಿದ್ದೇವೆ. ಇದಕ್ಕೆ ತಗಲುವ ಖರ್ಚನ್ನು ಪೋಸ್ಟರ್‌ ಅಂಟಿಸಿದವರಿಂದ ಹಾಗೂ ಗೋಡೆಗಳಲ್ಲಿ ಜಾಹೀರಾತುಗಳನ್ನು ಬರೆಸಿದವರಿಂದಲೇ ವಸೂಲಿ ಮಾಡುತ್ತೇವೆ’ ಎಂದು ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲಿ  ಪೋಸ್ಟರ್‌ಗಳು ಕಾಣೆಯಾಗಿದ್ದವು. ಆದರೆ, ಒಳರಸ್ತೆಗಳ ಬಳಿಯ ಪೋಸ್ಟರ್‌ಗಳು ಹಾಗೆಯೇ ಇದ್ದವು. 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !