ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒತ್ತುವರಿ ತೆರವು: ಹೈಕೋರ್ಟ್ ತರಾಟೆ– ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಎಚ್ಚರಿಕೆ

Last Updated 1 ಅಕ್ಟೋಬರ್ 2022, 3:56 IST
ಅಕ್ಷರ ಗಾತ್ರ

ಬೆಂಗಳೂರು: ‘ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿನ ರಾಜಕಾಲುವೆ ಒತ್ತುವರಿಗಳನ್ನು ತೆರವುಗೊಳಿಸದೇ ಹೋದಲ್ಲಿ, ಮುಖ್ಯ ಆಯುಕ್ತರ ವಿರುದ್ಧ ಸೂಕ್ತ ಆದೇಶ ಹೊರಡಿಸಬೇಕಾಗುತ್ತದೆ’ ಎಂದು ಹೈಕೋರ್ಟ್‌ ಮೌಖಿಕ ಎಚ್ಚರಿಕೆ ನೀಡಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿನ ರಸ್ತೆಗಳ ಗುಂಡಿ ಮುಚ್ಚುವುದಕ್ಕೆ ಸಂಬಂಧಿಸಿದಂತೆ ಕೋರಮಂಗಲದ ವಿಜಯನ್ ಮೆನನ್ ಸೇರಿ ನಾಲ್ವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ನೇತೃತ್ವದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲರು ನ್ಯಾಯಪೀಠಕ್ಕೆ ವಸ್ತುಸ್ಥಿತಿ ವರದಿ ಸಲ್ಲಿಸಿ, ‘2022ರಸೆಪ್ಟೆಂಬರ್ 19ರಿಂದ ಈವರೆಗೆ 10 ಒತ್ತುವರಿ ತೆರವುಗೊಳಿಸಲಾಗಿದೆ. ಇನ್ನೂ 592 ಅತಿಕ್ರಮಣ ತೆರವುಗೊಳಿಸಬೇಕಾಗಿದೆ’ ಎಂದರು. ಇದೇ ವರದಿಯಲ್ಲಿ, ‘ನಗರದ ಪ್ರಮುಖ ರಸ್ತೆಗಳಲ್ಲಿನ 221 ಗುಂಡಿಗಳನ್ನು ಹಾಟ್ ಮಿಕ್ಸ್ ಬಳಸಿ ತುಂಬಲಾಗಿದೆ. ಮಹದೇವಪುರ ವಲಯದ (324 ಕಿ.ಮೀ.) ರಸ್ತೆಗಳನ್ನು ಮರು ಡಾಂಬರೀಕರಣ ಮಾಡಲಾಗುತ್ತಿದ್ದು, 427 ಕಿ.ಮೀ. ಉದ್ದದ ರಸ್ತೆಗಳ ಮರು ಡಾಂಬರೀಕರಣ ಪ್ರಾರಂಭಿಸಲಾಗಿದೆ’ ಎಂದು ವಿವರಿಸಿದರು.

ದಾಖಲೆ ಪರಿಶೀಲಿಸಿದ ನ್ಯಾಯಪೀಠ, ‘ವರದಿ ತೃಪ್ತಿಕರವಾಗಿ ಕಾಣುತ್ತಿಲ್ಲ.ಈ ವಿಷಯದಲ್ಲಿ ಬಿಬಿಎಂಪಿ ತನ್ನ ಪ್ರಗತಿಯನ್ನು ತೋರಿಸದೇ ಹೋದಲ್ಲಿಎಂಜಿನಿಯರ್‌ಗಳ ವೇತನ ತಡೆ ಹಿಡಿಯಲು ಆದೇಶಿಸಬೇಕಾಗುತ್ತದೆ’ ಎಂದು ಮೌಖಿಕ ಎಚ್ಚರಿಕೆ ನೀಡಿತು. ಅಂತೆಯೇ, ‘ರಸ್ತೆಗುಂಡಿಗಳನ್ನು ತುಂಬುವ ಕಾಮಗಾರಿಯೂ ಸಮರ್ಪಕವಾಗಿಲ್ಲ.ಈ ರಸ್ತೆಗಳು ವಾಹನ ಸವಾರರಿಗೆ ಬಲು ಕಷ್ಟಕರವಾಗಿ ಪರಿಣಮಿಸಿವೆ’ ಎಂದು ಅಸಮಾಧಾನ ವ್ಯಕ್ತಪಡಿಸಿತು. ವಿಚಾರಣೆಯನ್ನು ಅಕ್ಟೋಬರ್ 27ಕ್ಕೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT