ಮಂಗಳವಾರ, ಮಾರ್ಚ್ 28, 2023
26 °C

ಬಿಬಿಎಂಪಿ ಪೌರಕಾರ್ಮಿಕರನ್ನು ಕಾಯಂಗೊಳಿಸಿ: ಪೌರಕಾರ್ಮಿಕರ ಸಂಘ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಬಿಎಂಪಿ ಘನತ್ಯಾಜ್ಯ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ವಾಹನ ಚಾಲಕರು, ಸಹಾಯಕರು, ಲೋಡರ್‌ಗಳು, ಕ್ಲೀನರ್‌ಗಳನ್ನು ನೇರ ಪಾವತಿಗೆ ಒಳಪಡಿಸಿ, ಕಾಯಂಗೊಳಿಸಬೇಕು ಎಂದು ಎಐಸಿಸಿಟಿಯು ಬೆಂಬಲಿತ ಬಿಬಿಎಂಪಿ ಪೌರಕಾರ್ಮಿಕರ ಸಂಘ ಆಗ್ರಹಿಸಿದೆ.

‘ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆಯ ಕೆಲಸ ಕಾನೂನು ಪ್ರಕಾರ ಕಡ್ಡಾಯವಾಗಿ ಮಾಡಲೇ ಬೇಕಾಗಿದ್ದು, ಇದು ನಿರಂತರ ಸ್ವರೂಪದ ಕೆಲಸವಾಗಿದೆ. ಈಗಾಗಲೇ ಕಸ ಗುಡಿಸುವ ಪೌರಕಾರ್ಮಿಕರಿಗೆ ನೇರವೇತನ ಪಾವತಿ ಮಾಡಲಾಗಿದೆ. ಆದರೆ, ಮನೆ ಮನೆಗೆ ಹೋಗಿ ಕಸ ಸಂಗ್ರಹಿಸುವ ಮತ್ತು ಕಸ ವಿಲೇವಾರಿ ಮಾಡುವ ಪೌರಕಾರ್ಮಿಕರನ್ನು ಗುತ್ತಿಗೆ ವ್ಯವಸ್ಥೆಯಡಿಯಲ್ಲಿ ನೇಮಕ ಮಾಡಿಕೊಳ್ಳಲಾಗಿದೆ’ ಎಂದು ಸಂಘದ ಅಧ್ಯಕ್ಷೆ ನಿರ್ಮಲಾ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

‘ಗುತ್ತಿಗೆ ಆಧಾರದಲ್ಲಿರುವ ಪೌರಕಾರ್ಮಿಕರನ್ನು ಹಂತ–ಹಂತವಾಗಿ ಕಾಯಂಗೊಳಿಸುವವರೆಗೂ ಸಕಾಲಕ್ಕೆ ಕನಿಷ್ಠ ವೇತನ ಪಾವತಿಸಿ, ವೇತನ ಚೀಟಿ ನೀಡಬೇಕು. 3 ರಿಂದ 8 ತಿಂಗಳವರೆಗೆ ಬಾಕಿ ಇರುವ ವೇತನವನ್ನು ಪಾವತಿಸಿ, ಸಮಾನ ಕೆಲಸಕ್ಕೆ ಸಮಾನ ವೇತನ, ಹೆಚ್ಚುವರಿ ಕೆಲಸಕ್ಕೆ ಅಧಿಕ ವೇತನ ನೀಡುವ ಪದ್ಧತಿ ಜಾರಿಗೊಳಿಸಬೇಕು. ಬಿಬಿಎಂಪಿ ಅಡಿಯಲ್ಲಿರುವ ಬೆಂಗಳೂರು ಸಾಲಿಡ್ ವೇಸ್ಟ್‌ ಮ್ಯಾನೇಜ್‌ಮೆಂಟ್‌ನವರು 2023ರ ಜ. 21ರಂದು ಘನತ್ಯಾಜ್ಯ ನಿರ್ವಹಣೆ ಮಾಡಲು ಕರೆದಿರುವ ಟೆಂಡರ್‌ ಪ್ರಕ್ರಿಯೆಯನ್ನು ಕೂಡಲೇ ರದ್ದುಗೊಳಿಸಬೇಕು’ ಎಂದು ಒತ್ತಾಯಿಸಿದರು.

‘ವಿಶ್ರಾಂತಿ ಕೊಠಡಿ, ಶೌಚಾಲಯ, ಕುಡಿಯುವ ನೀರು ಮತ್ತು ಪೌಷ್ಟಿಕ ಆಹಾರವನ್ನು ಒದಗಿಸಬೇಕು. ಇ.ಎಸ್‌.ಐ ಮತ್ತು ಪಿ.ಎಫ್‌ ಸೌಲಭ್ಯವನ್ನು ಕಲ್ಪಿಸಿ, ಸುರಕ್ಷಾ ಪರಿಕರಗಳನ್ನು ನೀಡಬೇಕು. ಕಸ ಸಂಗ್ರಹಿಸುವ ಆಟೊಗಳ ದುರಸ್ತಿ ವೆಚ್ಚವನ್ನು ಬಿಬಿಎಂಪಿಯೇ ಭರಿಸಬೇಕು. ಸರ್ಕಾರಿ ರಜೆ ಮತ್ತು ರಾಷ್ಟ್ರೀಯ ಹಬ್ಬದ ದಿನಗಳು ಒಳಗೊಂಡಂತೆ ರಜೆ ಸೌಲಭ್ಯವನ್ನು ವಿಸ್ತರಿಸಬೇಕು’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು