ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ನಡುವೆಯೂ ಕರ್ತವ್ಯ: ಪೌರ ಕಾರ್ಮಿಕರಿಗೆ ಇಲ್ಲ ಸುರಕ್ಷತೆ

ಶೀಘ್ರವೇ ಮಾರ್ಗಸೂಚಿ ಹೊರಡಿಸುತ್ತೇವೆ: ಮುಖ್ಯ ಆಯುಕ್ತ
Last Updated 29 ಏಪ್ರಿಲ್ 2021, 19:19 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಕೋವಿಡ್‌ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಈ ನಡುವೆ ಸೋಂಕಿತರು ಇರುವ ಮನೆಯವರು ಕಸವನ್ನು ವೈಜ್ಞಾನಿಕವಾಗಿ ವಿಲೇ ಮಾಡುತ್ತಿಲ್ಲ. ಸೋಂಕಿತರು ಇರುವ ಮನೆಯ ಕಸವನ್ನೂ ಇತರ ಕಸದ ರೀತಿಯಲ್ಲೇ ಮನೆ ಮನೆಯಿಂದ ಕಸ ಸಂಗ್ರಹಿಸುವವರಿಗೆ ನೀಡಲಾಗುತ್ತಿದೆ. ಇದರಿಂದ ಪೌರಕಾರ್ಮಿಕರು ಸೊಂಕಿಗೆ ಒಳಗಾಗುವ ಆತಂಕ ಸೃಷ್ಟಿಯಾಗಿದೆ.

ರೋಗದ ಲಕ್ಷಣ ಇಲ್ಲದ ಶೇ 90ರಷ್ಟು ಕೋವಿಡ್‌ ಸೋಂಕಿತರು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂತಹ ಮನೆಗಳ ಕಸ ವಿಲೇವಾರಿಗೆ ಬಿಬಿಎಂಪಿ ಯಾವುದೇ ನಿರ್ದಿಷ್ಟ ಕ್ರಮ ಕೈಗೊಂಡಿಲ್ಲ. ಹಾಗಾಗಿ ಪೌರಕಾರ್ಮಿಕರು ಕೋವಿಡ್‌ ಮೊದಲ ಅಲೆಯ ಸಂದರ್ಭಕ್ಕಿಂತ ಈ ಬಾರಿ ಹೆಚ್ಚಿನ ಅಪಾಯ ಎದುರಿಸುತ್ತಿದ್ದಾರೆ.

‘ಕೋವಿಡ್‌ ಸೋಂಕು ವ್ಯಾಪಕವಾಗಿ ಹರಡಿದ್ದರೂ ನಾವು ನಗರವನ್ನು ಸ್ವಚ್ಛವಾಗಿಡುವ ಕಾಯಕವನ್ನು ಶ್ರದ್ಧೆಯಿಂದ ನಿಭಾಯಿಸುತ್ತಿದ್ದೇವೆ. ಕೆಲವರು ಬಳಸಿದ ಮಾಸ್ಕ್‌ಗಳನ್ನು ಎಲ್ಲೆಂದರಲ್ಲಿ ಬಿಸಾಡುತ್ತಿದ್ದಾರೆ. ಕೋವಿಡ್‌ ಇರುವ ಮನೆಯ ಕಸವನ್ನೂ ಹೊರಗಡೆ ಇಡುತ್ತಿದ್ದಾರೆ. ಈ ಬರಿ ಕಂಟೇನ್‌ಮೆಂಟ್ ಮಾಡುತ್ತಿಲ್ಲ. ಹಾಗಾಗಿ ಯಾವ ಮನೆಯಲ್ಲಿ ಕೋವಿಡ್‌ ಸೋಂಕಿತರು ಇದ್ದಾರೆ ಎಂಬುದೂ ತಿಳಿಯುವುದಿಲ್ಲ. ನಮ್ಮ ಸುರಕ್ಷತೆಯ ಬಗ್ಗೆಯೂ ಜನರು ಕಾಳಜಿ ವಹಿಸಬೇಕು. ಕೋವಿಡ್‌ ಸೋಂಕಿತರು ಇರುವ ಮನೆಯ ಕಸವನ್ನು ಪೌರಕಾರ್ಮಿಕರಿಗೆ ನೀಡಬಾರದು. ಬಿಬಿಎಂಪಿಯವರೂ ಈ ಬಗ್ಗೆ ಸ್ಪಷ್ಟ ಆದೇಶ ಮಾಡಬೇಕು’ ಎಂದು ಪೌರಕಾರ್ಮಿಕೆ ಕಮಲಮ್ಮ ವಿನಂತಿಸಿದರು.

‘ಕೋವಿಡ್‌ ಸೋಂಕಿತರು ಇರುವ ಮನೆಯ ಕಸ ವಿಲೇವಾರಿ ಬಗ್ಗೆ ಈ ಹಿಂದೆಯೇ ಬಿಬಿಎಂಪಿ ಮಾರ್ಗಸೂಚಿಗಳನ್ನು ಹೊರಡಿಸಿದೆ. ಈ ಬಗ್ಗೆ ಇನ್ನೊಮ್ಮೆ ಆದೇಶ ಹೊರಡಿಸುತ್ತೇವೆ. ಪೌರಕಾರ್ಮಿಕರ ಆರೋಗ್ಯದ ಬಗ್ಗೆಯೂ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು. ಅವರು ಕರ್ತವ್ಯ ನಿರ್ವಹಿಸದಿದ್ದರೆ ನಗರವನ್ನು ಸ್ವಚ್ಛವಾಗಿಡುವುದು ತುಂಬಾ ಕಷ್ಟ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತ ‘ಪ್ರಜಾವಾಣಿ’ಗೆ ತಿಳಿಸಿದರು.

ಇನ್ನೊಂದೆಡೆ ಬಿಬಿಎಂಪಿಯು ಎಲ್ಲ ಪೌರಕಾರ್ಮಿಕರಿಗೆ ಕೈಗವಸು, ಮಾಸ್ಕ್‌, ಸ್ಯಾನಿಟೈಸರ್‌ನಂತಹ ಸುರಕ್ಷತಾ ಸಾಮಗ್ರಿಗಳನ್ನು ಒದಗಿಸಿಲ್ಲ ಎಂಬ ದೂರೂ ಕೇಳಿ ಬಂದಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ವಿಶೇಷ ಆಯುಕ್ತ (ಕಸ ನಿರ್ವಹಣೆ) ಡಿ.ರಂದೀಪ್‌, ‘ಪೌರಕಾರ್ಮಿಕರಿಗೆ ಈಗಾಗಲೇ ಸುರಕ್ಷತಾ ಸಾಮಗ್ರಿ ವಿತರಿಸಲು ಕ್ರಮ ಕೈಗೊಂಡಿದ್ದೇವೆ. ಅವರಿಗೆ ಮಾಸ್ಕ್‌, ಸ್ಯಾನಿಟೈಸರ್, ಮುಖ ಕವಚ ವಿತರಿಸುವ ಕಾರ್ಯಕ್ರಮಗಳು ಜಾರಿಯಲ್ಲಿವೆ. ಪ್ರತಿ ವಲಯ ಮಟ್ಟದಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದರು.

‘ಲಾಕ್‌ಡೌನ್‌ ವೇಳೆ ಬಸ್‌ ಸೌಕರ್ಯವಿಲ್ಲ’
ಕೊರೋನ ಮೊದಲ ಅಲೆಯ ನಿಯಂತ್ರಣಕ್ಕೆ ಲಾಕ್‌ಡೌನ್‌ ಜಾರಿ ಮಾಡಿದ್ದಾಗ ಪೌರಕಾರ್ಮಿಕರು ಕೆಲಸದ ಸ್ಥಳವನ್ನು ತಲುಪಲು ಬಿಬಿಎಂಪಿಯ ಅಧಿಕಾರಿಗಳು ಬಿಎಂಟಿಸಿ ಅಧಿಕಾರಿಗಳ ಜೊತೆ ಮಾತನಾಡಿ ಬಸ್‌ ಸೌಕರ್ಯ ಕಲ್ಪಿಸಿದ್ದರು.ಈ ಬಾರಿ ಬಸ್‌ ಸೌಕರ್ಯ ಇಲ್ಲದ ಕಾರಣ ಪೌರಕಾರ್ಮಿಕರರು ಕೆಲಸದ ಸ್ಥಳ ತಲುಪಲು ಸಮಸ್ಯೆ ಎದುರಿಸುತ್ತಿದ್ದಾರೆ.

‘ಈ ಸಮಸ್ಯೆ ಗಮನಕ್ಕೆ ಬಂದಿದೆ. ಪೌರಕಾರ್ಮಿಕರನ್ನು ಕರೆ ತರುವುದಕ್ಕಾಗಿ ಕಳೆದ ವರ್ಷದ ಲಾಕ್ಡೌನ್‌ ಸಂದರ್ಭದಲ್ಲಿ ವ್ಯವಸ್ಥೆ ಮಾಡಿದಂತೆ ಈ ಬಾರಿಗೂ ಸಾರಿಗೆ ಸೌಕರ್ಯ ಕಲ್ಪಿಸಲಿದ್ದೇವೆ. ಇದರ ವೆಚ್ಚವನ್ನು ಬಿಬಿಎಂಪಿ ಭರಿಸಲಿದೆ. ಈ ಬಗ್ಗೆ ಈಗಾಗಲೇ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದೇವೆ. ಶೀಘ್ರವೇ ಸಮಸ್ಯೆ ಬಗೆಹರಿಯಲಿದೆ’ ಎಮದು ಡಿ.ರಂದೀಪ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT