ಶುಕ್ರವಾರ, ಸೆಪ್ಟೆಂಬರ್ 17, 2021
22 °C
ಕೋವಿಡ್ ಲಸಿಕೆ: ಬೃಹತ್ ಮೇಳ ನಾಳೆ

ಇದೇ 17 ರಂದು 5 ಲಕ್ಷ ಮಂದಿಗೆ ಲಸಿಕೆ ಹಾಕುವ ಗುರಿ: ಬಿಬಿಎಂಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್ ಲಸಿಕೆ ವಿತರಣೆಗೆ ಇದೇ 17 ರಂದು ಬಿಬಿಎಂಪಿಯು ಬೃಹತ್‌ ಮೇಳವನ್ನು ಹಮ್ಮಿಕೊಂಡಿದೆ. ಪಾಲಿಕೆ ಹಾಗೂ ಖಾಸಗಿ ಆಸ್ಪತ್ರೆಗಳು ಸೇರಿದಂತೆ 5 ಲಕ್ಷ ಮಂದಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ.

ನಗರದ ಕೊಳೆಗೇರಿ ಪ್ರದೇಶಗಳು, ಲಸಿಕೆ ಪಡೆದವರ ಸಂಖ್ಯೆ ಕಡಿಮೆ ಇರುವ ಪ್ರದೇಶಗಳು ಸೇರಿದಂತೆ ವಿವಿಧ ಸ್ಥಳಗಳಲ್ಲಿ‌ ಲಸಿಕೆ ವಿತರಣೆಗೆ ವಿಶೇಷ ಶಿಬಿರಗಳನ್ನು ವ್ಯವಸ್ಥೆ ಮಾಡಲಾಗಿದೆ. ಬೀದಿ ಬದಿ ವ್ಯಾಪಾರಿಗಳು, ಕಾರ್ಖಾನೆಗಳು, ಕಟ್ಟಡ ನಿರ್ಮಾಣ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿರುವ ಕಡೆಗಳಲ್ಲೂ ವಿಶೇಷ ಶಿಬಿರಗಳನ್ನು ಏರ್ಪಡಿಸಲಾಗುತ್ತಿದೆ. ವಾರ್ಡ್‌ಗಳಲ್ಲಿ ಎಲ್ಲೆಲ್ಲಿ ಲಸಿಕೆ ನೀಡಬೇಕು ಎಂಬುದರ ಬಗ್ಗೆ ಆರೋಗ್ಯ ವೈದ್ಯಾಧಿಕಾರಿಗಳು ಹಾಗೂ ವೈದ್ಯಕೀಯ ಅಧಿಕಾರಿಗಳು ತಳಮಟ್ಟದ ಯೋಜನೆ ಸಿದ್ಧಪಡಿಸಿಕೊಂಡಿದ್ದಾರೆ.

ಪ್ರತಿ ವಾರ್ಡ್‌ನಲ್ಲೂ ಕನಿಷ್ಠ 10 ರಿಂದ 12 ಲಸಿಕಾ ಸೆಷನ್‌ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಪ್ರತಿ ವಾರ್ಡ್‌ನಲ್ಲಿ ಒಂದು ಅಥವಾ ಎರಡು ಕಡೆ ಸ್ಥಿರ ತಾಣಗಳಲ್ಲಿ ಲಸಿಕೆ ನೀಡಲಾಗುತ್ತದೆ. ದೂರದ ಸ್ಥಳಗಳಿಗೆ ಅಥವಾ ಹಿರಿಯ ನಾಗರಿಕರು ಅಥವಾ ವಿಶೇಷ ಸಾಮರ್ಥ್ಯದವವರ ಮನೆಗಳಿಗೆ ಆಂಬುಲೆನ್ಸ್‌ನಲ್ಲಿ ಭೇಟಿ ನೀಡಿ ಲಸಿಕೆ ಹಾಕಲಾಗುವುದು.

ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಬೆಳಗ್ಗೆ 8ರಿಂದ ರಾತ್ರಿ 8 ಗಂಟೆಯವರೆಗೆ ಹಾಗೂ ವಿಸ್ತರಿತ ಸೆಷನ್‌ಗಳಲ್ಲಿ ಬೆಳಗ್ಗೆ 8ರಿಂದ ಸಂಜೆ 5 ಗಂಟೆಯವರೆಗೆ ಲಸಿಕೆ ನೀಡಲಾಗುತ್ತದೆ. ಖಾಸಗಿ ಆಸ್ಪತ್ರೆಗಳ ತಂಡಗಳು, ವೈದ್ಯಕೀಯ ಅಥವಾ ನರ್ಸಿಂಗ್ ಕಾಲೇಜುಗಳ ತಂಡಗಳು, ಅಜೀಂ ಪ್ರೇಮ್‌ಜಿ ಫೌಂಡೇಷನ್ ಮತ್ತು ಇತರ ಸರ್ಕಾರೇತರ ಸಂಘಟನೆಗಳ ವ್ಯಾಕ್ಸಿನೇಟರ್ ತಂಡಗಳೂ ಈ ಅಭಿಯಾನದಲ್ಲಿ ಕೈಜೋಡಿಸಲಿವೆ.

ಅಂಕಿ ಅಂಶ

760: ಕೊಳೆಗೇರಿಗಳಲ್ಲಿ ಲಸಿಕೆ ನೀಡಲು ಬಿಬಿಎಂಪಿ ಸಿದ್ಧತೆ ಮಾಡಿಕೊಂಡಿದೆ

2,178: ತಾಣಗಳ‌ಲ್ಲಿ ಲಸಿಕಾ ಕೇಂದ್ರಗಳನ್ನು ಸ್ಥಾಪಿಸಲು ವ್ಯವಸ್ಥೆ ಕಲ್ಪಿಸಲಾಗಿದೆ

225 ಡೋಸ್‌: ಪ್ರತಿ ತಾಣದಲ್ಲಿ ನೀಡುವ ಲಸಿಕೆ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು