ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆಬಿನಾರ್‌: ಕಸ ಸಂಸ್ಕರಣೆ ವಿಕೇಂದ್ರೀಕರಣ- BBMP ಒಲವು

ಕಸದ ಸಮರ್ಪಕ ವಿಲೇವಾರಿ– ಮಹತ್ವ ಅರಿಯಿರಿ: ಕೋರಿಕೆ
Last Updated 11 ಫೆಬ್ರುವರಿ 2022, 20:44 IST
ಅಕ್ಷರ ಗಾತ್ರ

ಬೆಂಗಳೂರು: ‘ಕಸ ಸಂಸ್ಕರಣೆ ವ್ಯವಸ್ಥೆಯನ್ನು ವಿಕೇಂದ್ರೀಕರಣಗೊಳಿಸಬಹುದು. ವಾರ್ಡ್‌ ಮಟ್ಟದಲ್ಲಿ ಉದ್ಯಾನಗಳಲ್ಲಿ ಕಸ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಬಹುದು. ಆದರೆ, ಇಂತಹ ಪ್ರಸ್ತಾವಗಳನ್ನು ಸ್ಥಳೀಯರೇ ವಿರೋಧಿಸುವುದನ್ನು ನೋಡಿದ್ದೇನೆ. ಜವಾಬ್ದಾರಿ ಅರಿತು, ಎಲ್ಲರೂ ಸೇರಿ ಕೆಲಸ ಮಾಡಿದರೆ ಇದು ಅಸಾಧ್ಯವಲ್ಲ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ಅಭಿಪ್ರಾಯಪಟ್ಟರು.

‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ‘ಸ್ವಚ್ಛ– ಸುಂದರ ಬೆಂಗಳೂರಿನತ್ತ ನಮ್ಮ ನಡೆ’ ವೆಬಿನಾರ್‌ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕಸವನ್ನು ಭೂಭರ್ತಿ ಕೇಂದ್ರ ತಲುಪಲು ಬಿಡುವುದು ಉತ್ತಮ ನಡೆಯಲ್ಲ.ಇದು ನಮ್ಮ ನಗರ. ನಾವೇ ಸೇರಿ ಏನಾದರೂ ಮಾಡಲೇಬೇಕು. ಕಸವನ್ನು ಸಾಧ್ಯವಾದಷ್ಟು ಮನೆಯಲ್ಲೇ ಸಂಸ್ಕರಣೆಗೆ ಒಳಪಡಿಸಬೇಕು. ಮನೆಯಲ್ಲಿ ಇದು ಸಾಧ್ಯವಾಗದಿ
ದ್ದರೆ ಸಮುದಾಯ ಮಟ್ಟದಲ್ಲಿ ಅಥವಾ ವಾರ್ಡ್ ಮಟ್ಟದಲ್ಲಿ ಸಂಸ್ಕರಣೆ ಮಾಡಲು ಪ್ರಯತ್ನಿಸಬೇಕು’ ಎಂದರು.

‘ಕಸ ವಿಲೇವಾರಿ ವ್ಯವಸ್ಥೆಯ ಯಶಸ್ಸಿಗೆ ಜನರ ಸಹಭಾಗಿತ್ವ ಬಲು ಮುಖ್ಯ. ಕಸದ ಸಮರ್ಪಕ ವಿಲೇವಾರಿಯ ಮಹತ್ವವನ್ನು ಪ್ರತಿಯೊಬ್ಬ ನಾಗರಿಕರೂ ಅರಿತುಕೊಳ್ಳಬೇಕು. ಈ ಕುರಿತು ಜವಾಬ್ದಾರಿಗಳೇನು ಎಂಬುದು ಹಲವರಿಗೆ ಗೊತ್ತಿದೆ. ಕೆಲವು ವಲಸಿಗರಿಗೆ ಕಸ ವಿಲೇವಾರಿ ಸಂಬಂಧಿಸಿದ ಹೊಣೆಯ ಅರಿವಿರುವುದಿಲ್ಲ. ಅಂತಹವರಲ್ಲಿ ಜಾಗೃತಿ ಮೂಡಿಸಲು ಸ್ವಯಂಸೇವಾ ಸಂಸ್ಥೆಗಳು, ನೆರೆಹೊರೆ ಸ್ವಯಂಸೇವಕರು ಪ್ರಯತ್ನಿಸಬೇಕು’ ಎಂದರು.

‘ಕಸ ಸಂಸ್ಕರಣೆಯ ಕಿರು ಘಟಕಗಳನ್ನು ಹೇಗೆ ಬಳಸಬೇಕು, ಬೇರೆ ಬೇರೆ ತರಹದ ಕಸಗಳನ್ನು ಯಾವ ರೀತಿ ಸಂಸ್ಕರಿಸಬಹುದು ಎಂಬ ಬಗ್ಗೆ ಜನರಲ್ಲಿ ತಿಳಿವಳಿಕೆ ಮೂಡಿಸುವ ಸಂಪನ್ಮೂಲ ವ್ಯಕ್ತಿಗಳು ಹಾಗೂ ತಜ್ಞರ ಅಗತ್ಯ ಇದೆ. ಈ ಕುರಿತು ತರಬೇತಿ ನೀಡಲು ಬಿಬಿಎಂಪಿಯು ಎಚ್‌ಎಸ್‌ಆರ್‌ ಬಡಾವಣೆಯಲ್ಲಿ ಕಲಿಕಾ ಕೇಂದ್ರವನ್ನು ನಡೆಸುತ್ತಿದೆ. ಕಸದ ವಿಕೇಂದ್ರೀಕೃತ ವಿಲೇವಾರಿಯ ಮಹತ್ವದ ಬಗ್ಗೆಯೂ ಇಲ್ಲಿ ಪ್ರಾತ್ಯಕ್ಷಿಕೆ ನೀಡುತ್ತಿದ್ದೇವೆ’ ಎಂದರು.

ಬಿಬಿಎಂಪಿ ಕಸ ವಿಲೇವಾರಿ ವಿಭಾಗದ ಜಂಟಿ ಆಯುಕ್ತ ಸರ್ಫರಾಜ್‌ ಖಾನ್‌, ‘ಕಸವನ್ನು ಸಾವಯವ ಗೊಬ್ಬರವನ್ನಾಗಿ ಪರಿವರ್ತಿಸುವ 50 ಟನ್‌ ಸಾಮರ್ಥ್ಯದ ಸಾಧನಗಳು ಲಭ್ಯ. ಇವುಗಳನ್ನು ಇನ್ನಷ್ಟು ಸುಧಾರಿಸುವ ಪ್ರಯೋಗಗಳೂ ನಡೆಯುತ್ತಿವೆ. ದುರಂತವೆಂದರೆ ಯಾರೂ ತಮ್ಮ ಮನೆ ಬಳಿ ಕಸದ ತೊಟ್ಟಿ ಇಟ್ಟುಕೊಳ್ಳುವುದನ್ನು ಬಯಸುವುದಿಲ್ಲ. ಇದು ಮನಸ್ಥಿತಿಗೆ ಸಂಬಂಧಿಸಿದ ವಿಚಾರ. ಈ ಪೂರ್ವಗ್ರಹಗಳಿಂದ ಹೊರಬರಬೇಕಿದೆ’ ಎಂದರು.

ಜನಾಗ್ರಹ ಸಂಸ್ಥೆಯ ನಾಗರಿಕ ವಿಭಾಗದ ಮುಖ್ಯಸ್ಥ ಶ್ರೀನಿವಾಸ ಅಲವಿಲ್ಲಿ ಅವರು ಸಂವಾದ ನಡೆಸಿಕೊಟ್ಟರು.

‘ವಸತಿ ಸಮುಚ್ಚಯದಲ್ಲೇ ಕಸ ಸಂಸ್ಕರಣೆ’
‘ಕೆಲವು ಅಪಾರ್ಟ್‌ಮೆಂಟ್‌ ಸಮುಚ್ಚಯಗಳಲ್ಲಿ ಉತ್ಪಾದನೆಯಾಗುವ ಕಸವನ್ನು ಅಲ್ಲೇ ಸಂಸ್ಕರಣೆ ಮಾಡುವುದಕ್ಕೆ ರೂಪರೇಷೆ ಸಿದ್ಧಪಡಿಸಲಾಗುತ್ತಿದೆ. ಇದಕ್ಕೆ ಸೂಕ್ತ ಚೌಕಟ್ಟು ರೂಪಿಸುತ್ತಿದ್ದೇವೆ’ ಎಂದು ಗೌರವ್‌ ಗುಪ್ತ ತಿಳಿಸಿದರು.

‘ಸ್ವಚ್ಛತಾ ಯೋಧರನ್ನು ಆದರಿಸಿ’
‘ಬೆಂಗಳೂರು ಕೋವಿಡ್‌ ಯೋಧರನ್ನು ಗೌರವಿಸಿ ಸಂಭ್ರಮಿಸಿದಂತೆ ಸ್ವಚ್ಛತಾ ಯೋಧರನ್ನೂ ನಿತ್ಯವೂ ಆದರಿಸಬೇಕು. ನಮ್ಮ ಮನೆಯಿಂದ ಕಸ ಒಯ್ಯಲು ಬರುವ ಪೌರಕಾರ್ಮಿಕರ ಪರಿಚಯ ಪ್ರತಿಯೊಬ್ಬರಿಗೂ ಇರಬೇಕು. ನಿತ್ಯ ಅವರಿಗೆ ನಮಸ್ಕರಿಸುವ ಮೂಲಕ ಈ ವೃತ್ತಿಯಲ್ಲಿ ಘನತೆಯನ್ನು ಎತ್ತಿಹಿಡಿಯಬೇಕು’ ಎಂದು ಮುಖ್ಯ ಆಯುಕ್ತರು ಸಲಹೆ ನೀಡಿದರು.

ಗೇಟ್‌ ಮುಟ್ಟಬೇಡ ಎಂದ ಉದಾಹರಣೆಗಳು ಇವೆ
‘ಕೋವಿಡ್‌ ಸಂದರ್ಭದಲ್ಲಿ ಪೌರ ಕಾರ್ಮಿಕರ ಪರಿಸ್ಥಿತಿ ಕರುಣಾಜನಕವಾಗಿತ್ತು. ಕೆಲವು ಮನೆಗಳಲ್ಲಿ ನಮಗೆ ನೀರನ್ನೂ ಕೊಡಲಿಲ್ಲ. ನೀರು ಕೇಳಿದಾಗ ಗೇಟ್‌ ಮುಟ್ಟಬೇಡ ಎಂದ ಉದಾಹರಣೆಗಳು ಇವೆ’ ಎಂದು ಪೌರಕಾರ್ಮಿಕರ ಪ್ರತಿನಿಧಿ ವಿ.ರತ್ನಾ ಬೇಸರ ವ್ಯಕ್ತಪಡಿಸಿದರು. ‘ಕ್ವಾರಂಟೈನ್‌ನಲ್ಲಿವರ ಸಂಬಳ ಕಡಿತಗೊಳಿಸಲಾಯಿತು. ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಕ್ಕೆ ತಲಾ ₹ 30 ಲಕ್ಷ ಪರಿಹಾರ ನೀಡುವ ಭರವಸೆಯನ್ನೂ ಈಡೇರಿಸಿಲ್ಲ’ ಎಂದು ದೂರಿದರು. ‘ಮನೆಯಲ್ಲಿದ್ದ ಚಿಕ್ಕ ಮಕ್ಕಳು, ವಯಸ್ಸಾದ ತಂದೆ ತಾಯಿಗಳನ್ನು ಅಪಾಯಕ್ಕೆ ತಳ್ಳಿ ನಾವು ಕರ್ತವ್ಯ ನಿರ್ವಹಿಸಿದ್ದೆವು. ದಾರಿಯಲ್ಲಿ ಬಿದ್ದ ಮಾಸ್ಕ್‌ ಎತ್ತಿದ್ದೇವೆ. ನಮಗಾಗಲೀ, ಕುಟುಂಬದ ಸದಸ್ಯರಿಗಾಗಲಿ ಕೋವಿಡ್‌ ಲಸಿಕೆಯೊಂದನ್ನು ಬಿಟ್ಟು ಸರ್ಕಾರ ಬೇರೆ ಸೌಲಭ್ಯ ಕೊಟ್ಟಿಲ್ಲ. ನಮ್ಮ ಕುಟುಂಬದ ಆರೋಗ್ಯ ರಕ್ಷಣೆಗೆ ಕ್ರಮಕೈಗೊಂಡಿಲ್ಲ. ಕುಟುಂಬದ ಆರೋಗ್ಯ ತಪಾಸಣೆಯನ್ನಾದರೂ ಮಾಡಿಸಬಹುದಿತ್ತು’ ಎಂದು ಅವರು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಬಿಬಿಎಂಪಿ ಜಂಟಿ ಆಯುಕ್ತ ಸರ್ಫರಾಜ್‌ ಖಾನ್‌, ‘ಪೌರಕಾರ್ಮಿಕರ ಕಲ್ಯಾಣದ ಹೈಕೋರ್ಟ್‌ ಸುಪರ್ದಿಯಲ್ಲೇ ಬಸ್‌ ವ್ಯವಸ್ಥೆ ಮಾಡಿದ್ದೇವೆ. ಪೌರಕಾರ್ಮಿಕರಿಗೆ ಆಹಾರ ನೀಡಲಾಗಿದೆ. ಒಂದು ಕೋವಿಡ್‌ ಆರೈಕೆ ಕೇಂದ್ರವನ್ನು ಪೌರ ಕಾರ್ಮಿಕರಿಗಾಗಿಯೇ ಮೀಸಲಿಡಲಾಗಿತ್ತು. ಅನೇಕ ಏಜೆನ್ಸಿಗಳು ಆಹಾರ ಕಿಟ್‌ಗಳನ್ನು ವಿತರಿಸಿದ್ದವು’ ಎಂದರು. ‘ಕೋವಿಡ್‌ನಿಂದ ಏಳೆಂಟು ಪೌರಕಾರ್ಮಿಕರು ಮೃತಪಟ್ಟಿದ್ದು, ಅವರ ಕುಟುಂಬಗಳಿಗೂ ಪರಿಹಾರ ವಿತರಿಸಲಾಗಿದೆ. ಅವರಿಗೆ ಸುರಕ್ಷತಾ ಕಿಟ್‌ ವಿತರಿಸಲಾಗಿದೆ’ ಎಂದು ಸ್ಪಷ್ಟಪಡಿಸಿದರು.

ಮನ್ನಣೆ ಸಾಲದು

‘ಕಸ ವಿಲೇವಾರಿಗೆ ಜನರ ಸಹಭಾಗಿತ್ವ ಹೆಚ್ಚಿಸಲು ಬೀದಿ, ವಾರ್ಡ್‌, ವಿಭಾಗ ಮಟ್ಟಗಳಲ್ಲಿ ಜಾಲವನ್ನು ರೂಪಿಸಲಾಗಿದೆ. ಎಲ್ಲಿ ಕಸ ವಿಂಗಡಣೆ ಮಾಡಿಲ್ಲ, ಏಕೆ ವಾಹನ ಬಂದಿಲ್ಲ ಎಂಬ ಬಗ್ಗೆಯೂ ಸ್ವಯಂಸೇವಕರು ನಿಗಾ ಇಡುತ್ತಿದ್ದಾರೆ. ಜನರ ಸಹಭಾಗಿತ್ವ ಕಾರ್ಯಕ್ರಮಕ್ಕಾಗಿ ಹೋರಾಟ 2016ರಲ್ಲಿ ಆರಂಭವಾಗಿದೆ. ಇದಕ್ಕೆ ಸಿಕ್ಕ ಮನ್ನಣೆ ಸಾಲದು. ಇದನ್ನು ಇನ್ನಷ್ಟು ಸಮಗ್ರವಾಗಿ ಅನುಷ್ಠಾನಕ್ಕೆ ತರಬೇಕಾಗಿದೆ’
-ಸಂಧ್ಯಾ ನಾರಾಯಣನ್‌, ಎಸ್‌ಡಬ್ಲ್ಯುಎಂಆರ್‌ಟಿ ಸದಸ್ಯೆ

‘ಪಾಲಿಕೆಗೂ ಭೂಭರ್ತಿ ಕೇಂದ್ರ ಬೇಕಿಲ್ಲ’
ಭೂಭರ್ತಿ ಕೇಂದ್ರಗಳ ಪುನರುಜ್ಜೀವನಕ್ಕೆ ಏನು ಮಾಡಲಾಗಿದೆ, ಇನ್ನಷ್ಟು ಭೂಭರ್ತಿ ಕೇಂದ್ರ ಹೊಂದುವ ಪರಿಪಾಠ ನಿಲ್ಲಿಸಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸರ್ಫರಾಜ್‌ ಖಾನ್‌, ‘ಭೂಭರ್ತಿ ಕೇಂದ್ರವನ್ನು ಹೊಂದುವುದು ಬಿಬಿಎಂಪಿಗೂ ಬೇಕಿಲ್ಲ. ಆದರೆ, ಕಸವನ್ನು ಭೂಭರ್ತಿ ಕೇಂದ್ರಕ್ಕೆ ಸಾಗಿಸದಿದ್ದರೆ ಜನ ಅದನ್ನು ಸುಡುತ್ತಾರೆ. ಭೂಭರ್ತಿ ಕೇಂದ್ರಗಳನ್ನು ಸ್ಥಗಿತಗೊಳಿಸುವ ಇರಾದೆ ನಮಗೂ ಇದೆ’ ಎಂದು ತಿಳಿಸಿದರು. ‘ಬೆಳ್ಳಹಳ್ಳಿ, ಮಿಟ್ಟಗಾನಹಳ್ಳಿಯಲ್ಲಿ ಭೂಭರ್ತಿ ಕೇಂದ್ರಗಳನ್ನು ಹೊಂದಿದ್ದೆವು. ಬೆಳ್ಳಹಳ್ಳಿಯ ಕೇಂದ್ರವನ್ನು ಮುಚ್ಚಿದ್ದು, ಅಲ್ಲಿ ಬಯೋಮೀಥನೈಸೇಷನ್‌ ನಡೆಸಲಾಗುತ್ತಿದೆ. ಮಂಡೂರಿನ ಭೂಭರ್ತಿ ಕೇಂದ್ರ ನಿರ್ವಹಣೆಗೆ ಸಂಬಂಧಿಸಿದ ಟೆಂಡರ್‌ ಅಂತಿಮ ಹಂತದಲ್ಲಿದೆ’ ಎಂದರು.

‘ಶೂನ್ಯ ಕಸ– ಜನ ಕೈಜೋಡಿಸಲಿ’
‘ಮನೆಯಲ್ಲಿ ಉತ್ಪಾದನೆಯಾಗುವ ಶೇ 60ರಷ್ಟು ಕಸ ಸಾವಯವ ಮೂಲದ್ದು. ಇದನ್ನು ನಿಸರ್ಗಕ್ಕೆ ಮರಳಿಸಬಹುದು. ಇನ್ನುಳಿದ ಶೇ 30ರಷ್ಟು ಕಸ ಪೇಪರ್‌, ಲೋಹ, ಪ್ಲಾಸ್ಟಿಕ್‌ ನಂತಹ ಮರುಬಳಕೆಯ ವಸ್ತುಗಳಿಂದ ಕೂಡಿದೆ. ಶೇ 10 ಕಸವನ್ನು ಮಾತ್ರ ಭೂಭರ್ತಿ ಕೇಂದ್ರ ಸೇರಬೇಕಾಗಿ ಬರಬಹುದು. ಇದಕ್ಕೆ ನಾಗರಿಕರು, ಕಾರ್ಪೊರೇಟ್‌ ವಲಯ ಹಾಗೂ ನಗರ ಸ್ಥಳೀಯ ಸಂಸ್ಥೆಗಳು ಕೈಜೋಡಿಸಿದರೆ ಶೂನ್ಯ ಕಸ ಉತ್ಪಾದನೆ ಪರಿಕಲ್ಪನೆ ಜಾರಿ ಕಷ್ಟವೇನಲ್ಲ.
-ವಿಲ್ಮಾ ರಾಡ್ರಿಗಸ್‌, ಸಿಇಒ, ಸಾಹಸ್‌ ಜೀರೋ ವೇಸ್ಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT