ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ‘ಪೈಥಾನ್‌’ ಗುತ್ತಿಗೆ ರದ್ದತಿಗೆ ಶಿಫಾರಸು

Last Updated 19 ಅಕ್ಟೋಬರ್ 2022, 21:02 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಅತ್ಯಾಧುನಿಕ ತಂತ್ರಜ್ಞಾನದಿಂದ ರಸ್ತೆಗಳ ಗುಂಡಿಗಳನ್ನು ಕ್ಷಿಪ್ರಗತಿಯಲ್ಲಿ ದುರಸ್ತಿ ಮಾಡುವ ‘ಪೈಥಾನ್‌ ಯಂತ್ರ’ಗಳ ಗುತ್ತಿಗೆಯನ್ನು ತಕ್ಷಣದಿಂದ ರದ್ದುಗೊಳಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಬಿಬಿಎಂಪಿ ಶಿಫಾರಸು ಮಾಡಿದೆ.

ಅಮೆರಿಕನ್‌ ರೋಡ್‌ ಟೆಕ್ನಾಲಜಿ ಆ್ಯಂಡ್‌ ಸಲ್ಯೂಷನ್ಸ್ (ಎಆರ್‌ಟಿಎಸ್‌) ಸಂಸ್ಥೆ 182 ಕಿ.ಮೀ. ರಸ್ತೆಗಳನ್ನು ಗುಂಡಿಮುಕ್ತವನ್ನಾಗಿ ನಿರ್ವಹಣೆ ಮಾಡುವ ಗುತ್ತಿಗೆಯನ್ನು 2017ರಲ್ಲಿ ಐದು ವರ್ಷಕ್ಕೆ ಪಡೆದುಕೊಂಡಿತ್ತು. ‘‍ಪೈಥಾನ್‌’ ಯಂತ್ರಗಳನ್ನು ಬಳಸಿ ಗುಂಡಿಗಳನ್ನು ದುರಸ್ತಿ ಮಾಡಲಾಗುತ್ತಿತ್ತು. ಇದಾದ ನಂತರ, 2022ರಲ್ಲಿ ಮತ್ತೆ ಎರಡು ವರ್ಷಕ್ಕೆ ಈ ಗುತ್ತಿಗೆಯನ್ನು ಎಆರ್‌ಟಿಎಸ್‌ ಪಡೆದುಕೊಂಡಿದೆ. ಆದರೆ, ರಸ್ತೆ ಗುಂಡಿಗಳನ್ನು ದುರಸ್ತಿ ಮಾಡುವ ಕೆಲಸ ಮಾಡುತ್ತಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ದೂರಿದ್ದಾರೆ.

‘142 ಕಿ.ಮೀ. ರಸ್ತೆಯನ್ನು ಗುತ್ತಿಗೆಗೆ ನೀಡಿ, ವರ್ಷಪೂರ್ತಿ ಗುಂಡಿಮುಕ್ತ ರಸ್ತೆಯನ್ನಾಗಿ ನಿರ್ವಹಣೆ ಮಾಡಬೇಕು ಎಂದು ಹೇಳಲಾಗಿದೆ. ಪ್ರತಿ ಕಿ.ಮೀ. ರಸ್ತೆಗೆ ತಿಂಗಳಿಗೆ ₹19 ಸಾವಿರ ನೀಡಲಾಗುತ್ತಿದೆ. ಆದರೆ, 8ರಿಂದ 10 ಕಿ.ಮೀ. ರಸ್ತೆ ಮಾತ್ರ ಗುಂಡಿಮುಕ್ತವಾಗಿದೆ. ಇನ್ನುಳಿದ ರಸ್ತೆ ಗುಂಡಿಮಯವಾಗಿವೆ. ಈ ಬಗ್ಗೆ ಅವರಿಗೆ ಹಲವು ಬಾರಿ ನೋಟಿಸ್‌ ನೀಡಿದ್ದರೂ ಕಾರ್ಯನಿರ್ವಹಣೆ ಮಾಡುತ್ತಿಲ್ಲ. ಹೀಗಾಗಿ, ಸರ್ಕಾರಕ್ಕೆ ಈ ಗುತ್ತಿಗೆಯನ್ನು ರದ್ದು ಮಾಡಬೇಕು ಎಂದು ಶಿಫಾರಸು ಮಾಡಲಾಗಿದೆ’ ಎಂದು ಬಿಬಿಎಂಪಿ ಯೋಜನೆ ವಿಭಾಗದ
ಮುಖ್ಯ ಎಂಜಿನಿಯರ್‌ ಲೋಕೇಶ್‌ ತಿಳಿಸಿದರು.

‘ಮೂರು ಯಂತ್ರಗಳ ಮೂಲಕ ರಸ್ತೆ ಗುಂಡಿಗಳ ದುರಸ್ತಿ ಕಾರ್ಯ ಮಾಡುತ್ತೇವೆ ಎಂದು ಹೇಳಿದ್ದರು. ಆದರೆ ಅವರ ಬಳಿ ಇರುವುದೇ ಒಂದು ಯಂತ್ರ. ಹೀಗಾಗಿ ಗುತ್ತಿಗೆಯಲ್ಲಿ ನಮೂದಿಸಿರುವ ರಸ್ತೆಗಳಲ್ಲಿ ಗುಂಡಿಗಳು ಹಾಗೆಯೇ ಇವೆ. ನಮ್ಮ ವಿಭಾಗದಲ್ಲಿ ಗುಂಡಿ ದುರಸ್ತಿಗೆ ಇದಲ್ಲದೆ ಬೇರೆ ನಿಧಿ ಇಲ್ಲ. ಗುತ್ತಿಗೆದಾರರು ಕಾರ್ಯನಿರ್ವಹಿಸದಿರುವುದರಿಂದ ನಮಗೆ ಕೆಟ್ಟ ಹೆಸರು. ಜನರು, ಸಂಚಾರ ಪೊಲೀಸರೆಲ್ಲ ನಮ್ಮನ್ನೇ ದೂರುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT