ಬೆಳ್ಳಂದೂರು ಕೆರೆ ಮೀಸಲು ಪ್ರದೇಶದಲ್ಲಿ ಬಿಬಿಎಂಪಿಯಿಂದ 400 ಟೆಂಟ್‌ಗಳು ನೆಲಸಮ

7
ಶಾಲೆಗೆ ಹೋದಾಗ ಇದ್ದ ಮನೆ ಬಂದಾಗ ಇರಲಿಲ್ಲ!

ಬೆಳ್ಳಂದೂರು ಕೆರೆ ಮೀಸಲು ಪ್ರದೇಶದಲ್ಲಿ ಬಿಬಿಎಂಪಿಯಿಂದ 400 ಟೆಂಟ್‌ಗಳು ನೆಲಸಮ

Published:
Updated:

ಬೆಂಗಳೂರು: ಅಮ್ಮ ಕೊಟ್ಟಿದ್ದ ತಿಂಡಿ ತಿಂದು, ಬ್ಯಾಗ್ ‌ಏರಿಸಿಕೊಂಡು ಶಾಲೆಗೆ ತೆರಳಿದ್ದ ಮಕ್ಕಳು, ಮರಳುವಷ್ಟರಲ್ಲಿ ಮನೆಯೇ ಇರಲಿಲ್ಲ!

ನಗುನಗುತ್ತಾ ಓಡಿ ಬಂದ ಮಕ್ಕಳಿಗೆ ಸಿಕ್ಕಿದ್ದು ಕಣ್ಣೀರು. ತಮ್ಮ ಮನೆಗಳು ನೆಲಸಮಗೊಂಡಿದ್ದನ್ನು ಕಂಡ ಅವರು ಕಂಗಾಲಾದರು.

ಉದ್ಯೋಗ ಅರಸಿ ಉತ್ತರ ಭಾರತದಿಂದ ನಗರಕ್ಕೆ ವಲಸೆ ಬಂದಿರುವ 1,500ಕ್ಕೂ ಹೆಚ್ಚು ಮಂದಿ ಕಾರ್ಮಿಕರು ಕೆಲವು ವರ್ಷಗಳಿಂದ ಕರಿಯಮ್ಮನ ಅಗ್ರಹಾರದಲ್ಲಿ 400ಕ್ಕೂ ಹೆಚ್ಚು ತಾತ್ಕಾಲಿಕ ಶೆಡ್‌ಗಳನ್ನು ಕಟ್ಟಿಕೊಂಡಿದ್ದರು. ಈ ಶೆಡ್‌ಗಳನ್ನು ಬಿಬಿ
ಎಂಪಿ ಶನಿವಾರ ನೆಲಸಮಗೊಳಿಸಿದೆ. 

‘ಬೆಳ್ಳಂದೂರಿನ ಕೆರೆ ಮೀಸಲು ಪ್ರದೇಶವನ್ನು ಆಕ್ರಮಿಸಿಕೊಂಡಿರುವ ಕಾರಣ ನೀಡಿ ನಮ್ಮನ್ನು ನಿರಾಶ್ರಿತರನ್ನಾಗಿ ಮಾಡಿದ್ದಾರೆ. ಮನೆಯ ಗಂಡಸರು ಮರದ ಕೆಳಗೆ ಮಲಗಿದ್ದಾರೆ. ಮಕ್ಕಳು ಮತ್ತು ಮಹಿಳೆಯರು ನೆರೆಯವರ ಟೆಂಟ್‌ಗಳಲ್ಲಿ ರಾತ್ರಿ ಕಳೆದಿದ್ದೇವೆ. ಈಗ ನಾವು ಬೀದಿಗೆ ಬಂದಿದ್ದೇವೆ’ ಎಂದು ಕೊಳಗೇರಿ ನಿವಾಸಿಗಳು ಅಳಲು ತೋಡಿಕೊಂಡರು

‘ತಿಂಗಳ ಕೂಲಿಯಲ್ಲಿ (₹ 10 ಸಾವಿರ) ₹2 ಸಾವಿರವರನ್ನು ಭೂಮಾಲೀಕರಿಗೆ ನೀಡುತ್ತಿದ್ದೆವು. ನಿನ್ನೆ ನಾವು ಎಂದಿನಂತೆ ಬೆಳಿಗ್ಗೆ ಕೆಲಸಕ್ಕೆ ಹೋಗಿದ್ದೆವು. ಅಧಿಕಾರಿಗಳು ನೋಟಿಸ್‌ ನೀಡದೆ ನಮ್ಮ ಗುಡಿಸಲು ನೆಲಸಮಗೊಳಿಸಿದ್ದಾರೆ. ಈಗ ನೆಲೆ ಇಲ್ಲದಂತಾಗಿದೆ. ಎಲ್ಲಿಗೆ ಹೋಗಬೇಕೆಂದು ತಿಳಿಯದಂತಾಗಿದೆ’ ಎಂದು ನಿವಾಸಿ ಫಕೀರ್‌ ಅಳಲು ತೋಡಿಕೊಂಡರು.

ವಕೀಲ ವಿನಯ್‌ ಶ್ರೀನಿವಾಸ್‌, ‘ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಆದೇಶದಂತೆ ಕೆರೆಯ ಮೀಸಲು ಪ್ರದೇಶದಲ್ಲಿ ಶೆಡ್‌ಗಳನ್ನು ನಿರ್ಮಿಸಬಾರದು. ಆದರೆ, ಇಲ್ಲಿನ ಶೆಡ್‌ಗಳು ರಾಜಕಾಲುವೆಯಿಂದ 103 ಮೀಟರ್‌ ದೂರದಲ್ಲಿದ್ದವು. ಕೆರೆಯಿಂದ 1.3 ಕಿ.ಮೀ ದೂರದಲ್ಲಿದ್ದವು. ಆದ್ದರಿಂದ ಇದು ಮೀಸಲು ಪ್ರದೇಶದ ಉಲ್ಲಂಘನೆ ಆಗುವುದಿಲ್ಲ’ ಎಂದರು.

‘ಅಲ್ಲಿ ವಾಸವಿದ್ದ ಹೆಚ್ಚಿನ ಕಾರ್ಮಿಕರು ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶದವರು. ಈ ಭೂಮಿಯನ್ನು ಇತ್ತೀಚೆಗೆ ಆಕ್ರಮಿಸಿಕೊಂಡಿದ್ದರು. ಅವರು ಕೆರೆ ಮೀಸಲು ಪ್ರದೇಶ ಆಕ್ರಮಿಸಿಕೊಂಡು ನಿರ್ಮಿಸಿದ್ದ ಶೆಡ್‌ಗಳನ್ನು ಮಾತ್ರ ನಾವು ಕೆಡವಿದ್ದೇವೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಬಿಬಿಎಂಪಿ ಅಧಿಕಾರಿಯೊಬ್ಬರು
ತಿಳಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಮೇಯರ್‌ ಸಂಪತ್‌ರಾಜ್‌, ‘ಈ ಬಗ್ಗೆ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ.  ವರದಿ ಸಲ್ಲಿಸುವಂತೆ ಸೂಚಿಸಿದ್ದೇನೆ. ಕೆರೆಯ ಮೀಸಲು ಪ್ರದೇಶದ ಜಮೀನಿನಲ್ಲಿ ಅಕ್ರಮವಾಗಿ ಗುಡಿಸಲು ಕಟ್ಟಿದ್ದರೆ ಅದು ನಿಯಮಗಳ ಉಲ್ಲಂಘನೆ ಆಗಲಿದೆ’ ಎಂದರು.

ನೋಟಿಸ್‌ ನೀಡಲ್ಲ ಎಂಬ ನಿವಾಸಿಗಳ ವಾದವನ್ನು ಅಲ್ಲಗಳೆದ ಮೇಯರ್‌, ‘ತೆರವುಗೊಳಿಸುವ ಮುನ್ನ ಸಾಕಷ್ಟು ಬಾರಿ ಅವರಿಗೆ ಸೂಚನೆ ನೀಡಿದ್ದೇವೆ. ಒತ್ತುವರಿ ಮಾಡಿಕೊಂಡವರು ಇಂತಹ ನೆಪ ಹೇಳುವುದು ಮಾಮೂಲಿ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 13

  Happy
 • 0

  Amused
 • 0

  Sad
 • 1

  Frustrated
 • 2

  Angry

Comments:

0 comments

Write the first review for this !