ಮಂಗಳವಾರ, ಏಪ್ರಿಲ್ 20, 2021
27 °C
2009ರ ನಂತರ ನಿರ್ಮಾಣವಾದ 277 ಧಾರ್ಮಿಕ ಕಟ್ಟಡಗಳ ನೆಲಸಮ ಅನಿವಾರ್ಯ

2009ಕ್ಕೆ ಮುನ್ನ ನಿರ್ಮಾಣವಾದ 240 ಕಟ್ಟಡ ತೆರವು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ 2009ರ ಸೆ.29ಕ್ಕೆ ಮುನ್ನ ನಿರ್ಮಾಣವಾಗಿರುವ 240 ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸುವಂತೆ ಸರ್ಕಾರಕ್ಕೆ ಬಿಬಿಎಂಪಿ ಶಿಫಾರಸು ಮಾಡಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ಧಾರ್ಮಿಕ ಕಟ್ಟಡಗಳನ್ನು ನಿರ್ಮಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಸುಪ್ರೀಂ ಕೋರ್ಟ್ 2009ರಲ್ಲಿ ವಿಚಾರಣೆ ನಡೆಸಿತ್ತು. ಸಾರ್ವಜನಿಕ ಸ್ಥಳಗಳಲ್ಲಿರುವ ಧಾರ್ಮಿಕ ಕಟ್ಟಡಗಳ ಸಮೀಕ್ಷೆ ನಡೆಸಿ ಅವುಗಳನ್ನು ತೆರವುಗೊಳಿಸುವ ಬಗ್ಗೆ ರಾಜ್ಯ ಸರ್ಕಾರ ನಿರ್ಧಾರ ಕೈಗೊಳ್ಳಬೇಕು ಎಂದು ಆದೇಶ ಮಾಡಿತ್ತು. ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ರೀತಿಯ ಧಾರ್ಮಿಕ ಕಟ್ಟಡಗಳನ್ನು ನಿರ್ಮಿಸಲು ಇನ್ನು ಅವಕಾಶ ನೀಡಬಾರದು ಎಂದೂ ಸೂಚಿಸಿತ್ತು.

‘ಬಿಬಿಎಂಪಿ ವ್ಯಾಪ್ತಿಯಲ್ಲಿ ಸಮೀಕ್ಷೆ ನಡೆಸಿದಾಗ ಸಾರ್ವಜನಿಕ ಸ್ಥಳಗಳಲ್ಲಿ 2009ರ ಸೆ. 29ಕ್ಕೆ ಮುನ್ನ 1,893 ಧಾರ್ಮಿಕ ಕಟ್ಟಡಗಳನ್ನು ನಿರ್ಮಿಸಿರುವುದು ಗಮನಕ್ಕೆ ಬಂದಿದೆ. ಈ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಲು, ಸ್ಥಳಾಂತರಿಸಲು ಅಥವಾ ಸಕ್ರಮಗೊಳಿಸಲು ಅವಕಾಶವಿದೆ’ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದರು.

‘ಬಿಬಿಎಂಪಿ ವ್ಯಾಪ್ತಿಯ 1,893 ಧಾರ್ಮಿಕ ಕಟ್ಟಡಗಳಲ್ಲಿ 1,548 ಧಾರ್ಮಿಕ ಕಟ್ಟಡ ಸಕ್ರಮಗೊಳಿಸಬಹುದು ಎಂದು ಸರ್ಕಾರಕ್ಕೆ ಶಿಫಾರಸು ಮಾಡಿದ್ದೇವೆ. 105 ಧಾರ್ಮಿಕ ಕಟ್ಟಡಗಳನ್ನು ಸ್ಥಳಾಂತರ ಮಾಡಬಹುದು ಹಾಗೂ 240 ಕಟ್ಟಡಗಳನ್ನು ತೆರವುಗೊಳಿಸಬೇಕು’ ಎಂದು ಸರ್ಕಾರಕ್ಕೆ ಶಿಫಾರಸು ಮಾಡಿದ್ದೇವೆ’ ಎಂದರು.

‘2009ರ ಸೆ. 29ರ ನಂತರ ಒಟ್ಟು 277 ಧಾರ್ಮಿಕ ಕಟ್ಟಡಗಳನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿ ನಿರ್ಮಿಸಲಾಗಿದೆ. ಸರ್ಕಾರಿ ಜಾಗ ಒತ್ತುವರಿ ಮಾಡಿ ನಿರ್ಮಿಸಲಾಗಿದೆ ಎಂಬ ಬಗ್ಗೆಯೂ ಅಧಿಕಾರಿಗಳು ದಾಖಲೆ ಸಂಗ್ರಹಿಸಿದ್ದಾರೆ. ಅವುಗಳನ್ನು ತೆರವುಗೊಳಿಸುವುದು ಅನಿವಾರ್ಯ. ಅವುಗಳನ್ನು ನಿರ್ಮಿಸಿದವರೇ ತೆರವುಗೊಳಿಸಲು ಅವಕಾಶ ನೀಡುತ್ತೇವೆ. ಅವರು ತೆರವುಗೊಳಿಸದೇ ಹೋದರೆ ಬಿಬಿಎಂಪಿ ವತಿಯಿಂದಲೇ ತೆರವುಗೊಳಿಸುತ್ತೇವೆ. ಈ ಬಗ್ಗೆ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ಗೆ ಅನುಪಾಲನಾ ವರದಿಯನ್ನೂ ಸಲ್ಲಿಸಬೇಕಿದೆ’ ಎಂದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು