ಶನಿವಾರ, ಜೂನ್ 25, 2022
25 °C
ಹಣಕೊಟ್ಟರೆ ಎಲ್ಲವೂ ಸುಸೂತ್ರ– ಇಲ್ಲದಿದ್ದರೆ ಕಡತಗಳಿಗೆ ಸಿಗದು ಮೋಕ್ಷ

ಕಂದಾಯ ಇಲಾಖೆ ಅಕ್ರಮ: ದಾಖಲೆ ಸರಿ ಇದ್ದರೂ ಖಾತಾ ಸೇವೆಗೆ ಕ್ಯಾತೆ

ಪ್ರವೀಣ್ ಕುಮಾರ್ ಪಿ.ವಿ. Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಹೊಸ ಆಸ್ತಿ ಖರೀದಿಸಿದಾಗ ಅದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳು ಸಮರ್ಪಕವಾಗಿದ್ದರೂ ಖಾತೆ ಬದಲಾವಣೆಗೆ ಅಧಿಕಾರಿಗಳು ಕ್ಯಾತೆ ತೆಗೆಯದೇ ಇರುವುದಿಲ್ಲ. ಸಿಬ್ಬಂದಿಯೋ, ದಲ್ಲಾಳಿಗಳನ್ನು ಬದಿಗೆ ಕರೆದು ‘ಬುಕ್‌’ ಮಾಡಿದರೆ ದಾಖಲೆಗಳ ಗೊಡವೆ ಇಲ್ಲದೆಯೇ ಸುಲಭವಾಗಿ ಖಾತೆ ವರ್ಗಾವಣೆ ಸಾಧ್ಯ!

ಖಾತೆ ವರ್ಗಾವಣೆ ಸೇವೆಯನ್ನು ಸಕಾಲ ಸೇವೆಯಡಿ ತರಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಖಾತಾ ಸೇವೆ ಪಡೆಯಲು ಏಕಗವಾಕ್ಷಿ ವ್ಯವಸ್ಥೆ ರೂಪಿಸಲಾಗಿದೆ. ಈ ಸೇವೆಗೆ ಸಕಾಲ ಆನ್‌ಲೈನ್‌ ಸೇವೆಗಳ (www.sakala.kar.nic.in) ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. 4 ಸಾವಿರ ಚದರ ಅಡಿವರೆಗಿನ ಖಾತಾ ಸೇವೆಗಳಿಗೆ ಕಂದಾಯ ಅಧಿಕಾರಿ ಹಂತದಲ್ಲೇ ಮಂಜೂರಾತಿಗೆ ಅವಕಾಶ ಕಲ್ಪಿಸಲಾಗಿದೆ. ಅದಕ್ಕಿಂತ ಹೆಚ್ಚಿನ ವಿಸ್ತೀರ್ಣದ ಆಸ್ತಿಗಳ ಖಾತೆ ಮಾಡಿಸುವುದು ಅಥವಾ ಖಾತಾ ವರ್ಗಾವಣೆಗೆ ಸಂಬಂಧಿಸಿದ ಕಡತಗಳಿಗೆ ಉಪ ಆಯುಕ್ತರು ಹಾಗೂ ಜಂಟಿ ಆಯುಕ್ತರ ಅನುಮೋದನೆ ಅಗತ್ಯ.

ಸಕಾಲ ಪ್ರಕಾರ ಖಾತಾ ಸೇವೆಯನ್ನು ಒಂದು ವಾರದ ಒಳಗೆ ಪೂರೈಸಬೇಕು. ವಾಸ್ತವದಲ್ಲಿ ಇದಿನ್ನೂ ಜಾರಿಯಾಗಿಲ್ಲ. ಸಕಾಲದಡಿ ಸಲ್ಲಿಕೆಯಾದ ಅರ್ಜಿ ಸಹಾಯಕ ಕಂದಾಯ ಅಧಿಕಾರಿಯನ್ನು (ಎಆರ್‌ಒ) ತಲುಪಿದ ಬಳಿಕ ಅವರು ಕಂದಾಯ ಪರಿವೀಕ್ಷಕರಿಂದ ಸ್ಥಳ ಪರಿಶೀಲನೆ ಮಾಡಿಸಬೇಕು. ದಾಖಲೆಗಳು ಸಮರ್ಪಕವಾಗಿದ್ದರೆ ಅರ್ಜಿಯನ್ನು ಅನುಮೋದಿಸಬೇಕು. ಹೊಸ ನಿವೇಶನಕ್ಕೆ ಖಾತೆ ಮಾಡಿಸಲು ಮಾಲೀಕತ್ವ ಸಾಬೀತುಪಡಿಸುವ ದಾಖಲೆ, ಆ ಸ್ವತ್ತನ್ನು ಕ್ರಯಪತ್ರ, ಉಡುಗೊರೆ ಪತ್ರ ಅಥವಾ ಜಿಪಿಎ ಮೂಲಕ ಖರೀದಿಸಿದ್ದರೆ, ಅದಕ್ಕೆ ಸಂಬಂಧಿಸಿದ ದಾಖಲೆ, ಪಹಣಿ (ಆರ್‌ಟಿಸಿ), ಮ್ಯುಟೇಷನ್‌ಗೆ ಸಂಬಂಧಿಸಿದ ದಾಖಲೆ, ಋಣಭಾರ ರಾಹಿತ್ಯ ಪ್ರಮಾಣಪತ್ರ (ಇ.ಸಿ), ತಹಶೀಲ್ದಾರರ ಸಹಿ ಇರುವ ಸರ್ವೆ ನಕ್ಷೆ, ಸರ್ವೆ ಟಿಪ್ಪಣಿಗಳನ್ನು ಒದಗಿಸಬೇಕು. ಖಾತೆ ವರ್ಗಾವಣೆಗಾದರೆ ಕ್ರಯಪತ್ರ, ಇ.ಸಿ ಹಾಗೂ ಸ್ವತ್ತಿನ ನೋಂದಣಿಗೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಬೇಕು. ದಾಖಲೆಗಳು ಸಮರ್ಪಕವಾಗಿಲ್ಲ ಎಂದು ಅರ್ಜಿಯನ್ನು ತಿರಸ್ಕರಿಸಲು ಎಆರ್‌ಒಗೆ ಅಧಿಕಾರ ಇದೆ. ಇದನ್ನೇ ನೆಪವಾಗಿಟ್ಟು ಎಆರ್‌ಒಗಳು ಕ್ಯಾತೆ ತೆಗೆದು ಖಾತೆ ಮಾಡಿಸಲು ಸತಾಯಿಸುತ್ತಾರೆ. ಅಲೆದಾಟ ತಪ್ಪಬೇಕಾದರೆ ಕೈ ಬಿಸಿ ಮಾಡಲೇಬೇಕು.

‘ಬಿಬಿಎಂಪಿ ವ್ಯಾಪ್ತಿಯಲ್ಲಿ ಖಾತಾ ಸೇವೆಗಳಿಗೆ ಲಕ್ಷಗಳ ಲೆಕ್ಕದಲ್ಲಿ ಲಂಚ ಪಡೆಯಲಾಗುತ್ತದೆ. ಅದೂ ಮಾರುಕಟ್ಟೆ ಮೌಲ್ಯ ಹೆಚ್ಚು ಇರುವ ಪ್ರದೇಶಗಳಲ್ಲಿ ಖಾತಾ ಸೇವೆಗಳಿಗೆ ಕೈ ಬದಲಾಯಿಸುವ ಹಣದ ಮೊತ್ತ ಮತ್ತಷ್ಟು ಹೆಚ್ಚಾಗುತ್ತದೆ. ಎಲ್ಲ ದಾಖಲೆಗಳು ಸಮರ್ಪಕವಾಗಿದ್ದರೂ ಲಂಚ ನೀಡದೇ ಖಾತಾ ಸಿಗದು’ ಎಂದು ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲಿ ತೊಡಗಿರುವ ವ್ಯಕ್ತಿಯೊಬ್ಬರು ‘ಪ್ರಜಾವಾಣಿ’ಗೆ ವಿವರಿಸಿದರು.

‘ಕೈ ಬಿಸಿ ಮಾಡದೇ ಖಾತೆ ಪಡೆಯುವುದು ಕನಸಿನ ಮಾತು. ಆದರೆ, ಪ್ರಭಾವಿಗಳ, ಜನಪ್ರತಿನಿಧಿಗಳ ಶಿಫಾರಸು ಇದ್ದರೆ, ಮೇಲಧಿಕಾರಿಗಳಿಂದ ಒತ್ತಡ ತರಿಸಿದರೆ ಕೈ ಬಿಸಿ ಮಾಡಲು ತಗಲುವ ಮೊತ್ತದಲ್ಲಿ ಸ್ವಲ್ಪ ಕಡಿಮೆ ಆಗಬಹುದು ಅಷ್ಟೇ’ ಎಂದು ಬಿಬಿಎಂಪಿಯ ಕಂದಾಯ ವಿಭಾಗದ ಅಧಿಕಾರಿಯೊಬ್ಬರು ವ್ಯವಸ್ಥೆಯ ಒಳ ಮರ್ಮ ಬಿಚ್ಚಿಟ್ಟರು.

‘ಬಿಬಿಎಂಪಿಯಲ್ಲಿ ಕಂದಾಯ ವಿಭಾಗದ ಉಪ ಆಯುಕ್ತರು (ಡಿ.ಸಿ) ಕಂದಾಯ ಅಧಿಕಾರಿ (ಆರ್‌.ಒ) ಹಾಗೂ ಎಆರ್‌ಒಗಳಿಗೆ ಮೇಲಧಿಕಾರಿ. ಆದರೆ, ಯಾವ ಎಆರ್‌ಒ ಕೂಡಾ ಬಡ್ತಿ ಪಡೆಯಲು ಬಯಸುವುದಿಲ್ಲ. ಏಕೆಂದರೆ ಬಡ್ತಿ ಪಡೆದರೆ ‘ಬಯಸಿದ್ದಷ್ಟು ಗಳಿಕೆ’ ಸಾಧ್ಯವಿಲ್ಲ. ಆಯಕಟ್ಟಿನ ವಾರ್ಡ್‌ಗಳಲ್ಲಿ ನೇಮಕಗೊಳ್ಳಲು ಎಆರ್‌ಒಗಳೂ ಕೂಡಾ ಲಕ್ಷಗಟ್ಟಲೆ ಹಣ ತೆರಲು ಸಿದ್ಧರಿರುತ್ತಾರೆ’ ಎಂದು ಅವರು ವಿವರಿಸಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಭೂಪರಿವರ್ತನೆ ಆಗಿರದ ನಿವೇಶನಗಳು, ಮಂಜೂರಾದ ಕಟ್ಟಡ ನಕ್ಷೆ ಉಲ್ಲಂಘಿಸಿ ನಿರ್ಮಸಿರುವ ಕಟ್ಟಡಗಳಂತೂ ಕಂದಾಯ ವಿಭಾಗದ ಅಧಿಕಾರಿಗಳ ಪಾಲಿನ ಕಾಮಧೇನುಗಳಿದ್ದಂತೆ. ಇಲ್ಲಿ ಅಧಿಕಾರಿಗಳು ಬಯಸಿದಷ್ಟು ಲಂಚ ನೀಡಿದರಷ್ಟೇ ಬಿ–ವಹಿಯಲ್ಲಿ (ಬಿ–ಖಾತಾ) ನೋಂದಣಿ ಮಾಡುತ್ತಾರೆ. ಕೇಳಿದಷ್ಟು ಕಾಸು ಬಿಚ್ಚಲು ಸಿದ್ಧರಿದ್ದರೆ, ಸಮರ್ಪಕ ದಾಖಲೆಗಳಿಲ್ಲದ ನಿವೇಶನಗಳಿಗೂ ಎ–ಖಾತಾ ಮಾಡಿಕೊಡುವಂತಹ ಮಹಾನುಭಾವ ಎಆರ್‌ಒಗಳು ಬಿಬಿಎಂಪಿಯಲ್ಲಿದ್ದಾರೆ.

ರಾಜಧಾನಿಯ ಹೊರವಲಯದಲ್ಲೂ ಲಂಚ ಹೇರಳ!
ಬೆಂಗಳೂರು ಹೊರವಲಯದ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲೂ ಖಾತಾ ಮಾಡಿಕೊಡಲು ಪಿಡಿಒಗಳು ಸಾವಿರಾರು ರೂಪಾಯಿ ಲಂಚ ಪಡೆಯುತ್ತಾರೆ ಎಂಬ ದೂರುಗಳಿವೆ.

‘ಸಂಬಂಧಪಟ್ಟ ಯೊಜನಾ ಪ್ರಾಧಿಕಾರದಿಂದ ಮಂಜೂರಾತಿ ಪಡೆದ ಬಡಾವಣೆಗಳ ನಿವೇಶನಗಳ ನೋಂದಣಿಗೂ ಪಿಡಿಒಗಳು ಕನಿಷ್ಠ ₹20 ಸಾವಿರ ಲಂಚ ಪಡೆಯುತ್ತಾರೆ. ಇನ್ನು ಮಂಜೂರಾತಿ ಪಡೆಯದ ಬಡಾವಣೆಗಳ ನಿವೇಶನಗಳಿಗೆ ಖಾತಾ ಮಾಡಿಸಿಕೊಡಲು ₹ 50 ಸಾವಿರಕ್ಕಿಂತಲೂ ಅಧಿಕ ಲಂಚ ಪಡೆಯುತ್ತಾರೆ. ಇನ್ನು ದಾಖಲೆಗಳು ಸಮರ್ಪಕವಾಗಿಲ್ಲದಿದ್ದರೆ, ಲಂಚದ ಮೊತ್ತ ₹ 1 ಲಕ್ಷಕ್ಕಿಂತಲೂ ಹೆಚ್ಚಾಗುತ್ತದೆ. ಆರೇಳು ವರ್ಷಗಳ ಹಿಂದೆ ಗ್ರಾಮ ಪಂಚಾಯಿತಿಗಳಲ್ಲಿ ಒಂದೆರಡು ಸಾವಿರ ರೂಪಾಯಿಗಿಂತ ಹೆಚ್ಚು ಲಂಚ ನೀಡಬೇಕಾಗುತ್ತಿರಲಿಲ್ಲ’ ಎಂದು ರಿಯಲ್‌ ಎಸ್ಟೇಟ್‌ ಉದ್ಯಮಿ ಆನಂದ ಕುಮಾರ್‌ ವಸ್ತುಸ್ಥಿತಿ ವಿವರಿಸಿದರು. 

ಬಿಬಿಎಂಪಿ ಹೊರತಾಗಿ ರಾಜ್ಯದ ಇತರ ಮಹಾನಗರ ಪಾಲಿಕೆಗಳಲ್ಲಿ ಹಾಗೂ ಇತರ ಸ್ಥಳೀಯ ನಗರ ಸಂಸ್ಥೆಗಳಲ್ಲೂ ಖಾತಾ ಸೇವೆಗಳಿಗೆ ಲಂಚ ನೀಡಲೇಬೇಕು. ಆದರೆ, ರಾಜಧಾನಿಯಂತೆ ಇಲ್ಲಿ ಲಂಚದ ಮೊತ್ತ ಲಕ್ಷಾಂತರ ರೂಪಾಯಿಗಳಲ್ಲಿಲ್ಲ. ಸಾವಿರಾರು ರೂಪಾಯಿಗಳಲ್ಲೇ ಸೇವೆ ಲಭ್ಯ. ಪಟ್ಟಣವಾಗಿ ಪರಿವರ್ತನೆ ಆಗುತ್ತಿರುವ ಗ್ರಾಮ ಪಂಚಾಯಿತಿಗಳಲ್ಲಿ ಖಾತಾ ಸೇವೆಗೆ ಲಂಚ ನೀಡಬೇಕು. ಸಣ್ಣ ಪುಟ್ಟ ಗ್ರಾಮಗಳಲ್ಲಿ ಲಂಚದ ಹಾವಳಿ ತುಸು ಕಡಿಮೆ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು