ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಬ್ಬರಿಗೂ ದಕ್ಕಿಲ್ಲ ಹದಗೆಟ್ಟ ರಸ್ತೆಯಿಂದಾಗಿ ಸಂಭವಿಸುವ ಬಿಬಿಎಂಪಿ ಅಪಘಾತ ಪರಿಹಾರ!

ಸಂತ್ರಸ್ತರಿಗೆ ಬಿಬಿಎಂಪಿಯಿಂದ ನೀಡುವ ಆರ್ಥಿಕ ನೆರವು
Last Updated 27 ಅಕ್ಟೋಬರ್ 2021, 20:24 IST
ಅಕ್ಷರ ಗಾತ್ರ

ಬೆಂಗಳೂರು: ರಸ್ತೆ ಹದಗೆಡುವುದರಿಂದ ಅಥವಾ ರಸ್ತೆ ಗುಂಡಿಗಳಿಂದಾಗಿ ಸಂಭವಿಸುವ ಅಪಘಾತದಲ್ಲಿ ಗಾಯಗೊಂಡವರಿಗೆ ಅಥವಾ ಸಾವಿಗೀಡಾಗುವವರ ಕುಟುಂಬಕ್ಕೆ ಪರಿಹಾರ ನೀಡುವ ಬಗ್ಗೆಬಿಬಿಎಂಪಿ ಆದೇಶ ಹೊರಡಿಸಿ ಹೆಚ್ಚೂ ಕಡಿಮೆ ವರ್ಷವೇಕಳೆದಿದೆ. ಇಂತಹ ಅಪಘಾತ ಪ್ರಕರಣಗಳಿಗೆ ಸಂಬಂಧಿಸಿ ಬಿಬಿಎಂಪಿಯಿಂದ ಇದುವರೆಗೆ ಯಾರೊಬ್ಬರಿಗೂ ಪರಿಹಾರ ವಿತರಣೆಯಾಗಿಲ್ಲ.

ಹದಗೆಟ್ಟ ರಸ್ತೆಯಲ್ಲಿ ಸಂಭವಿಸುವ ಅಪಘಾತದಲ್ಲಿ ಗಾಯಗೊಂಡವರಿಗೆ ಅಥವಾ ಮೃತಪಟ್ಟವರ ಕುಟುಂಬಕ್ಕೆ ಬಿಬಿಎಂಪಿಯೇ ಪರಿಹಾರ ನೀಡಬೇಕು ಎಂದು ಹೈಕೋರ್ಟ್‌ 2020ರಲ್ಲಿ ಆದೇಶ ಮಾಡಿತ್ತು. ಇದಕ್ಕೆ ಒಪ್ಪಿದ್ದ ಬಿಬಿಎಂಪಿಯು ಪರಿಹಾರ ವಿತರಣೆಯ ಹೊಣೆಯನ್ನು ಕಂದಾಯ ವಿಭಾಗದ ವಿಶೇಷ ಆಯುಕ್ತರಿಗೆ ವಹಿಸಿತ್ತು.

ಹದಗೆಟ್ಟ ರಸ್ತೆಯಿಂದಾಗಿ ಅಥವಾ ರಸ್ತೆಗುಂಡಿಗಳಿಂದಾಗಿ ಸಂಭವಿಸುವ ಅಪಘಾತದಲ್ಲಿ ಮೃತರ ಕುಟುಂಬಕ್ಕೆ ₹ 3 ಲಕ್ಷ ಹಾಗೂ ಗಂಭೀರ ಗಾಯಗೊಂಡವರಿಗೆ ಗರಿಷ್ಠ ₹ 15 ಸಾವಿರದವರೆಗೆ ಪರಿಹಾರವನ್ನು ಬಿಬಿಎಂಪಿ ನಿಗದಿಪಡಿಸಿತ್ತು. ಸಣ್ಣ ಪ್ರಮಾಣದ ಗಾಯಕ್ಕೆ ₹ 5,000ಹಾಗೂ ಇತರ ಹೆಚ್ಚುವರಿ ಗಾಯಗಳಿಗೆ ತಲಾ ₹ 500ರಂತೆ ಪರಿಹಾರ ಪಡೆಯಬಹುದು. ವೈದ್ಯಕೀಯ ವೆಚ್ಚದ ರೂಪದಲ್ಲಿ ₹ 10 ಸಾವಿರದವರೆಗೆ ಮಧ್ಯಂತರ ಪರಿಹಾರ ಪಡೆಯಲು ಅವಕಾಶವಿದೆ. ಗಾಯದ ನೋವು ಉಳಿದುಕೊಂಡು ಮೂರು–ನಾಲ್ಕು ದಿನಗಳ ಕಾಲ ಚಿಕಿತ್ಸೆ ಪಡೆದರೆ ₹ 10 ಸಾವಿರದವರೆಗೆ ಪರಿಹಾರ ನೀಡಬಹುದು. ಗಾಯಕ್ಕೆ ಒಮ್ಮೆ ಪರಿಹಾರ ಪಡೆದ ಬಳಿಕ ಚಿಕಿತ್ಸೆಗೆ ಪ್ರತ್ಯೇಕವಾಗಿ ಪರಿಹಾರ ನೀಡಲು ಬರುವುದಿಲ್ಲ. ಎಕ್ಸ್‌–ರೇ ಮತ್ತಿತರ ಪರೀಕ್ಷೆಗಳನ್ನು ನಡೆಸಿದ್ದರೆ ಅದರ ವೆಚ್ಚ ಮರುಪಾವತಿ ಮಾಡಬಹುದು.

ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಕುಟುಂಬದವರು ಅಥವಾ ಗಾಯಾಳುಗಳು ಪರಿಹಾರ ಕೋರಿ ಕಂದಾಯ ವಿಭಾಗದ ವಿಶೇಷ ಆಯುಕ್ತರಿಗೆ ಅರ್ಜಿ ಸಲ್ಲಿಸಬಹುದು ಎಂದು ಆದೇಶದಲ್ಲಿ ಹೇಳಲಾಗಿತ್ತು. ಆದರೆ, ‘ಪರಿಹಾರ ಕೋರಿ ತಮ್ಮ ಮುಂದೆ ಇದುವರೆಗೂ ಯಾವುದೇ ಅರ್ಜಿ ಬಂದಿಲ್ಲ’ ಎನ್ನುತ್ತಾರೆ ಕಂದಾಯ ವಿಭಾಗದ ವಿಶೇಷ ಆಯುಕ್ತ ಎಸ್‌.ಬಸವರಾಜು.

ನಗರದಲ್ಲಿಇತ್ತೀಚೆಗಂತೂ ರಸ್ತೆ ಗುಂಡಿಗಳ ಸಮಸ್ಯೆ ತೀರಾ ಹೆಚ್ಚಳವಾಗಿದೆ. ರಸ್ತೆ ಗುಂಡಿಗಳಿಂದಾಗಿಯೇ ತಿಂಗಳಿನಿಂದ ಈಚೆಗೆ ಇಬ್ಬರು ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಮಳೆಯ ಸಂದರ್ಭದಲ್ಲಿ ರಸ್ತೆಯ ದುಃಸ್ಥಿತಿಯಿಂದಾಗಿ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡ ಘಟನೆಗಳು ಅಲ್ಲಲ್ಲಿ ನಡೆಯುತ್ತಲೇ ಇವೆ. ಆದರೂ ಯಾರೂ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸದಿರುವುದಕ್ಕೆ ತಿಳಿವಳಿಕೆಯ ಕೊರತೆಯೂ ಕಾರಣ ಎಂಬ ದೂರುಗಳಿವೆ.

ಅಪಘಾತದಲ್ಲಿ ಯಾವುದಾದರೂ ಸ್ವತ್ತಿಗೆ ಹಾನಿಯಾಗಿದ್ದರೆ ಅಥವಾ ವ್ಯಕ್ತಿ ಮೃತಪಟ್ಟಿದ್ದರೆ, ಗಾಯಗೊಂಡಿದ್ದರೆ ಮೋಟಾರು ವಾಹನ ಕಾಯ್ದೆ ಪ್ರಕಾರ ಅಥವಾ ಬಿಬಿಎಂಪಿ ಮೂಲಕ, ಎರಡರಲ್ಲಿ ಒಂದರ ಮೂಲಕ ಮಾತ್ರ ಪರಿಹಾರ ಪಡೆಯಬಹುದು. ಗಾಯಾಳುಗಳ ಚಿಕಿತ್ಸೆಗೆ ಎಷ್ಟೇ ವೆಚ್ಚವಾಗಿರಲಿ, ಅವರು ಗರಿಷ್ಠ 15 ಸಾವಿರದವರೆಗೆ ಮಾತ್ರ ಪರಿಹಾರ ಪಡೆಯಲು ಸಾಧ್ಯ. ಈ ಮಿತಿಯನ್ನು ನಿಗದಿಪಡಿಸಿರುವುದು ಕೂಡಾ ಗಾಯಾಳುಗಳು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಲು ಆಸಕ್ತಿ ತೋರಿಸದಿರುವುದಕ್ಕೆ ಕಾರಣ. ಇಷ್ಟು ಕಡಿಮೆ ಮೊತ್ತದ ಪರಿಹಾರ ಪಡೆಯಲು ಬಿಬಿಎಂಪಿಗೆ ಅಲೆದಾಡುವುದಕ್ಕೆ ಜನರು ಇಷ್ಟಪಡುವುದಿಲ್ಲ ಎಂದು ಹೆಸರು ಬಹಿರಂಗಪಡಿಸಲು ಬಯಸದ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟರು.

---

ಆದೇಶವಾದ 15 ದಿನದೊಳಗೆ ನೀಡಬೇಕು ಪರಿಹಾರ

ಅರ್ಜಿ ಹಾಗೂ ಸಲ್ಲಿಸಿದ ದಾಖಲೆಗಳು ಸಮಂಜಸವಾಗಿವೆ ಎಂದು ಮೇಲ್ನೋಟಕ್ಕೆ ಕಂಡುಬಂದರೆ ವಿಶೇಷ ಆಯುಕ್ತರು ಅರ್ಜಿ ಸಲ್ಲಿಕೆಯಾದ ವಾರದೊಳಗೆ ಲಿಖಿತವಾಗಿ ಈ ಬಗ್ಗೆ ಉಲ್ಲೇಖಿಸಬೇಕು. ಅರ್ಜಿಯು ಸಮಂಜಸವಾಗಿದ್ದರೆ, ಅದು ಸಲ್ಲಿಕೆಯಾದ 14 ದಿನಗಳ ಒಳಗೆ ಪರಿಹಾರ ವಿತರಿಸಲು ಕ್ರಮಕೈಗೊಳ್ಳಬೇಕು. ಪರಿಹಾರ ವಿತರಣೆಗೆ ಆದೇಶವಾದ15 ದಿನದೊಳಗೆ ಮೊತ್ತವನ್ನು ಸಂಬಂಧಪಟ್ಟವರಿಗೆ ತಲುಪಿಸಬೇಕು.ಅರ್ಜಿ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಕಂಡುಬಂದರೆ ವಿಶೇಷ ಆಯುಕ್ತರು (ಕಂದಾಯ) ಅದನ್ನುಘಟನೆ ನಡೆದ ಸ್ಥಳದ ಸಂಬಂಧಪಟ್ಟ ಅಧಿಕಾರಿಗೆವರ್ಗಾಯಿಸಬಹುದು.

--

ತಿಂಗಳ ಒಳಗೆ ಸಲ್ಲಿಸಬೇಕು ಅರ್ಜಿ

ಪರಿಹಾರ ಕೋರುವವರು ಅಪಘಾತ ಸಂಭವಿಸಿದ ಒಂದು ತಿಂಗಳ ಒಳಗೆ ಬಿಬಿಎಂಪಿಯ ವಿಶೇಷ ಆಯುಕ್ತರಿಗೆ (ಕಂದಾಯ) ಅರ್ಜಿ ಸಲ್ಲಿಸಬೇಕು. ರಸ್ತೆ ಅಪಘಾತಕ್ಕೆ ಕಾರಣವಾದ ಅಂಶಗಳನ್ನು ಉಲ್ಲೇಖಿಸಿ ಪ್ರಮಾಣಪತ್ರವನ್ನು ಹಾಗೂ ಪೂರಕ ದಾಖಲೆಗಳನ್ನು ಒದಗಿಸಬೇಕು.ಸಕಾರಣಗಳಿದ್ದರೆ ಒಂದು ತಿಂಗಳ ನಂತರ ಸಲ್ಲಿಕೆಯಾಗುವ ಅರ್ಜಿಯನ್ನೂ ಪುರಸ್ಕರಿಸುವ ಅಧಿಕಾರ ಕಂದಾಯ ವಿಭಾಗದ ವಿಶೇಷ ಆಯುಕ್ತರಿಗೆ ಇದೆ. ಅರ್ಜಿಯನ್ನು ತಿರಸ್ಕರಿಸುವುದಾದರೆ, ಅವರು ಅದಕ್ಕೆ ಸ್ಪಷ್ಟ ಕಾರಣವನ್ನೂ ಆದೇಶದಲ್ಲಿ ಉಲ್ಲೇಖಿಸಬೇಕಾಗುತ್ತದೆ.

---

ತಿಂಗಳಲ್ಲಿ ಅರ್ಜಿ ಸಲ್ಲಿಸಿ

ಪರಿಹಾರ ಕೋರುವವರು ಅಪಘಾತ ಸಂಭವಿಸಿದ ಒಂದು ತಿಂಗಳ ಒಳಗೆ ಬಿಬಿಎಂಪಿಯ ವಿಶೇಷ ಆಯುಕ್ತರಿಗೆ (ಕಂದಾಯ) ಅರ್ಜಿ ಸಲ್ಲಿಸಬೇಕು. ರಸ್ತೆ ಅಪಘಾತಕ್ಕೆ ಕಾರಣವಾದ ಅಂಶಗಳನ್ನು ಉಲ್ಲೇಖಿಸಿ ಪ್ರಮಾಣಪತ್ರವನ್ನು ಹಾಗೂ ಪೂರಕ ದಾಖಲೆಗಳನ್ನು ಒದಗಿಸಬೇಕು.ಸಕಾರಣಗಳಿದ್ದರೆ ಒಂದು ತಿಂಗಳ ನಂತರ ಸಲ್ಲಿಕೆಯಾಗುವ ಅರ್ಜಿಯನ್ನೂ ಪುರಸ್ಕರಿಸುವ ಅಧಿಕಾರ ಕಂದಾಯ ವಿಭಾಗದ ವಿಶೇಷ ಆಯುಕ್ತರಿಗೆ ಇದೆ. ಅರ್ಜಿಯನ್ನು ತಿರಸ್ಕರಿಸುವುದಾದರೆ, ಅವರು ಅದಕ್ಕೆ
ಸ್ಪಷ್ಟ ಕಾರಣವನ್ನೂ ಆದೇಶದಲ್ಲಿ ಉಲ್ಲೇಖಿಸ
ಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT