ಸೋಮವಾರ, ಏಪ್ರಿಲ್ 6, 2020
19 °C
ಗುತ್ತಿಗೆದಾರನ ಹೆಸರಿನಲ್ಲಿ ನಕಲಿ ಖಾತೆ ತೆರೆದು ಬಿಬಿಎಂಪಿಗೆ ವಂಚನೆ * ₹ 3.86 ಕೋಟಿ ಸುಳಿವು ಪತ್ತೆ *₹ 29 ಲಕ್ಷದ ಸುಳಿವಿಲ್ಲ

ನಕಲಿ ಖಾತೆ ತೆರೆದ ಆರೋಪಿ ಸೇರಿ ಇಬ್ಬರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಗುತ್ತಿಗೆದಾರನ ಹೆಸರಿನಲ್ಲಿ ಬೇರೆ ಬ್ಯಾಂಕ್‌ನಲ್ಲಿ ನಕಲಿ ಖಾತೆ ತೆರೆದು, ಅಕ್ರಮವಾಗಿ ₹ 4.15 ಕೋಟಿ ಹಣ ವರ್ಗಾವಣೆ ಮಾಡುವ ಮೂಲಕ ಬಿಬಿಎಂಪಿಗೆ ವಂಚನೆ ನಡೆಸಿದ ಪ್ರಕರಣ ಸಂಬಂಧ ಬೆಂಗಳೂರು ಮಹಾನಗರ ಕಾರ್ಯಪಡೆ (ಬಿಎಂಟಿಎಫ್‌) ಪೊಲೀಸರು ಇನ್ನಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಜನತಾ ಸೇವಾ ಕೋ–ಆಪರೇಟಿವ್‌ ಬ್ಯಾಂಕ್‌ನಲ್ಲಿ ಗುತ್ತಿಗೆದಾರ ಸಿ.ಜಿ.ಚಂದ್ರಪ್ಪ ಹೆಸರಿನಲ್ಲಿ ನಕಲಿ ಖಾತೆ ತೆರೆದ ಚಂದ್ರಾ ಲೇಔಟ್‌ ನಿವಾಸಿ ಗಂಗಾಧರ (38) ಹಾಗೂ ಇನ್ನೊಂದು ಬ್ಯಾಂಕ್‌ನಲ್ಲಿ ಖಾತೆಗೆ ತೆಗೆದು ಹಣ ವರ್ಗವಣೆ ಸಹಕರಿಸಿದ್ದ ಗಿಡದ ಕೋನೇನಹಳ್ಳಿಯ ನಾಗೇಶ್‌ (36) ಬಂಧಿತರು. ಗಂಗಾಧರ್‌ ಈಗಾಗಲೇ ಬಂಧನದಲ್ಲಿರುವ ಪಾಲಿಕೆ ಕೇಂದ್ರ ಕಚೇರಿಯ ಲೆಕ್ಕ ಅಧೀಕ್ಷಕರಾದ ಅನಿತಾ ಹಾಗೂ ರಾಮಮೂರ್ತಿಗೆ ಪರಿಚಿತರು. ಈ ನಾಲ್ವರು ಸೇರಿಕೊಂಡು ಹಣವನ್ನು ಅಕ್ರಮವಾಗಿ ವರ್ಗಾಯಿಸಿದ್ದಾರೆ ಎಂದು ಬಿಎಂಟಿಎಫ್‌ನ ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

‘ಗಂಗಾಧರ ಅವರು ತಾನು ಚಂದ್ರಪ್ಪ ಎಂದು ಬಿಂಬಿಸಿಕೊಂಡು ನಕಲಿ ಖಾತೆ ತೆರೆದಿದ್ದರು. ಅನಿತಾ ಹಾಗೂ ರಾಮಮೂರ್ತಿ ಆ ಖಾತೆಗೆ ಹಣ ವರ್ಗಾಯಿಸಿದ್ದರು. ಖಾತೆಗೆ ಬಂದ ಹಣದಲ್ಲಿ ₹ 2.01 ಕೋಟಿಯನ್ನು ಗಂಗಾಧರ್‌ ಡ್ರಾ ಮಾಡಿ ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿದ್ದರು. ಒಟ್ಟು ನಾಲ್ಕು ಡಿಮಾಂಡ್‌ ಡ್ರಾಫ್ಟ್‌ (ಡಿಡಿ) ಪಡೆದುಕೊಂಡಿದ್ದರು. ಡಿ.ಡಿಯ ಮೊತ್ತವೇ ₹ 1.75 ಕೋಟಿ’ ಎಂದು ಬಿಎಂಟಿಎಫ್‌ನ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಗಂಗಾಧರ್‌ ಡ್ರಾ ಮಾಡಿದ್ದ ₹ 2.01 ಕೋಟಿ ನಗದನ್ನು ಚಂದ್ರಾ ಲೇಔಟ್‌ನಲ್ಲಿರುವ ಅವರ ಮನೆಯಲ್ಲಿ ವಶಕ್ಕೆ ಪಡೆದಿದ್ದೇವೆ. ಸ್ವಲ್ಪ ಮೊತ್ತವನ್ನು ಬೇರೆ ಬೇರೆ ಬ್ಯಾಂಕ್‌ನ ಖಾತೆಗಳಿಗೆ ಹಾಕಿಸಿ ಈ ಹಣ ಡ್ರಾ ಮಾಡಿದ್ದ. ಆತನ ಒಂದು ಖಾತೆಯಲ್ಲಿ ₹ 8 ಲಕ್ಷ ಹಾಗೂ ಇನ್ನೊಂದು ಬ್ಯಾಂಕ್‌ನ ಖಾತೆಯಲ್ಲಿ ₹ 2 ಲಕ್ಷ ಉಳಿದಿತ್ತು. ಆ ಖಾತೆಗಳನ್ನು ಸ್ಥಗಿತಗೊಳಿಸಿದ್ದೇವೆ. ನಾಗೇಶ್‌ ಇತ್ತೀಚೆಗೆ ಬ್ಯಾಂಕ್‌ ಒಂದರಲ್ಲಿ ಖಾತೆ ತೆರೆದಿದ್ದ. ಆ ಖಾತೆಗೂ ಹಣ ವರ್ಗಾಯಿಸಲಾಗಿದೆ’ ಎಂದು ವಿವರಿಸಿದರು.

‘ನಕಲಿ ಖಾತೆಗೆ ವರ್ಗಾಯಿಸಲಾಗಿದ್ದ ₹ 4.15 ಕೋಟಿ ಹಣದಲ್ಲಿ ಒಟ್ಟು ₹ 3.76 ಕೋಟಿ ಮರಳಿ ಸಿಕ್ಕಿದೆ. ಇನ್ನುಳಿದ 29 ಲಕ್ಷ ಮೊತ್ತವನ್ನು ಆರೋಪಿ ಗಂಗಾಧರ್‌ ಖರ್ಚು ಮಾಡಿದ್ದಾನೆ. ಅದನ್ನು ನಾಲ್ವರು ಆರೋಪಿಗಳೂ ಹಂಚಿಕೊಂಡಿರಲೂ ಸಾಕು. ಈ ಹಗರಣದಲ್ಲಿ ಇನ್ನಷ್ಟು ಜನ ಭಾಗಿಯಾಗಿರುವ ಶಂಕೆ ಇದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ’ ಎಂದರು.

ಸಿಜಿಸಿ ಇನ್‌ಫ್ರಾ ಪ್ರಾಜೆಕ್ಟ್ಸ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯು ಹೊರಮಾವು ವಾರ್ಡ್‌ನಲ್ಲಿ ಒಳಚರಂಡಿ ಕೊಳವೆ ಅಳವಡಿಸಲು ಅಗೆದಿದ್ದ ರಸ್ತೆಗಳ ದುರಸ್ತಿಯ ಕಾಮಗಾರಿ ನಡೆಸಿತ್ತು. ಈ ಸಂಬಂಧ ಕಂಪನಿಯ ನಿರ್ದೇಶಕ ಸಿ.ಜಿ.ಚಂದ್ರಪ್ಪ ಹೆಣ್ಣೂರು ಮುಖ್ಯರಸ್ತೆಯ ಯೂನಿಯನ್‌ ಬ್ಯಾಂಕ್‌ನ ಶಾಖೆಯಲ್ಲಿ ಹೊಂದಿದ್ದ ಖಾತೆಗೆ ಬಿಬಿಎಂ‍ಪಿ ₹ 4.15 ಕೋಟಿ ಪಾವತಿಸಬೇಕಿತ್ತು. ಆದರೆ, ‘ಸಿ.ಜಿ.ಚಂದ್ರಪ್ಪ’ ಹೆಸರಿನಲ್ಲಿ ಆರೋಪಿ ಗಂಗಾಧರ್‌ ಹಂಪಿನಗರದ ಜನತಾ ಸೇವಾ ಕೋ–ಆಪರೇಟಿವ್‌ ಬ್ಯಾಂಕ್‌ನ ಶಾಖೆಯಲ್ಲಿ ತೆರೆದಿದ್ದ ನಕಲಿ ಖಾತೆಗೆ ಪಾಲಿಕೆ ಖಾತೆಯಿಂದ ಫೆ. 4ರಂದು ಪಾಲಿಕೆ ₹ 4.15 ಕೋಟಿ ವರ್ಗಾಯಿಸಲಾಗಿತ್ತು.

ಇನ್ನೊಬ್ಬ ಆರೋಪಿ ನಾಪತ್ತೆ
ಪ್ರಕರಣದ ಇನ್ನೊಬ್ಬ ಆರೋಪಿಯಾಗಿರುವ ದ್ವಿತೀಯ ದರ್ಜೆ ಸಹಾಯಕ ರಾಘವೇಂದ್ರ ತಲೆಮರೆಸಿಕೊಂಡಿದ್ದಾನೆ.  ಹಣದ ಅಕ್ರಮ ವರ್ಗಾವಣೆಗೆ ಸಹಕರಿಸಿದ ಆರೋಪ ಆತನ ಮೇಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು