ಗುರುವಾರ , ನವೆಂಬರ್ 14, 2019
19 °C
₹ 76 ಕೋಟಿ ವಸೂಲಿಗೆ ಆದೇಶ

ಬ್ರಹ್ಮಾಂಡ ಭ್ರಷ್ಟಾಚಾರ: ಕೊನೆಗೂ ಕ್ರಮಕ್ಕೆ ಮುಂದಾದ ನಗರಾಭಿವೃದ್ಧಿ ಇಲಾಖೆ

Published:
Updated:

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ರಾಜರಾಜೇಶ್ವರಿನಗರ, ಗಾಂಧಿನಗರ ಹಾಗೂ ಮಲ್ಲೇಶ್ವರ ವಿಭಾಗಗಳಲ್ಲಿ ನಡೆದಿದ್ದ ‘ಬ್ರಹ್ಮಾಂಡ ಭ್ರಷ್ಟಾಚಾರ’ದಲ್ಲಿಭಾಗಿಯಾಗಿದ್ದವರ ವಿರುದ್ಧ ಕ್ರಮ ಕೈಗೊಳ್ಳಲು ನಗರಾಭಿವೃದ್ಧಿ ಇಲಾಖೆ ಕೊನೆಗೂ ಮುಂದಾಗಿದೆ. ಸಂಬಂಧಪಟ್ಟ ಗುತ್ತಿಗೆದಾರರಿಂದ ₹76.56 ಕೋಟಿ ವಸೂಲಿ ಮಾಡುವಂತೆ ಬಿಬಿಎಂಪಿಗೆ ನಿರ್ದೇಶನ ನೀಡಿದೆ.

ಈ ಮೂರು ವಲಯಗಳಲ್ಲಿ 2008ರಿಂದ 2012ರ ನಡುವಿನ ಕಾಮಗಾರಿಗಳ ಅಕ್ರಮಗಳ ಸಮಗ್ರ ತನಿಖೆಗೆ ಸರ್ಕಾರ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನ ದಾಸ್‌ ನೇತೃತ್ವದಲ್ಲಿ ಮೂವರು ನಿವೃತ್ತ ಮುಖ್ಯಎಂಜಿನಿಯರ್‌ಗಳನ್ನು ಒಳಗೊಂಡ ಸಮಿತಿಯನ್ನು ರಚಿಸಿತ್ತು. ಸಮಿತಿಯು ಆಗಿನ ಬೆಂಗಳೂರು ಅಭಿವೃದ್ಧಿ ಸಚಿವ ಜಿ.ಪರಮೇಶ್ವರ ಅವರಿಗೆ 2018ರ ಡಿಸೆಂಬರ್‌ನಲ್ಲಿ ಅಂತಿಮ ವರದಿ ಸಲ್ಲಿಸಿತ್ತು. ಆದರೆ, ಇಲಾಖೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈ ವರದಿಯನ್ನು ಆಧರಿಸಿ ‘ಪ್ರಜಾವಾಣಿ’ ಸೆಪ್ಟೆಂಬರ್‌ ತಿಂಗಳಲ್ಲಿ ‘ಬ್ರಹ್ಮಾಂಡ ಭ್ರಷ್ಟಾಚಾರ’ ಶೀರ್ಷಿಕೆಯಲ್ಲಿ 11 ಸರಣಿ ವರದಿಗಳನ್ನು ಪ್ರಕಟಿಸಿ ಅಕ್ರಮದ ಇಂಚಿಂಚನ್ನೂ ವಿವರಿಸಿತ್ತು. ಬಳಿಕ ಎಚ್ಚೆತ್ತಿರುವ ನಗರಾಭಿವೃದ್ಧಿ ಇಲಾಖೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದೆ. ಗುತ್ತಿಗೆದಾರರಿಂದ ಹಣ ವಸೂಲಿ ಮಾಡಿ ಅನುಪಾಲನಾ ವರದಿಯನ್ನು ಸಲ್ಲಿಸುವಂತೆ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಇ.ವಿ.ರಮಣರೆಡ್ಡಿ ಅವರು
ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್ ಅವರಿಗೆ ಇದೇ 19ರಂದು ಪತ್ರ ಬರೆದಿದ್ದಾರೆ.

ಈ ಮೂರು ವಿಭಾಗಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಲ್ಲಿ ಅಕ್ರಮ ನಡೆದಿರುವ ಬಗ್ಗೆ ಸ್ಥಳೀಯರೊಬ್ಬರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಭಾರಿ ಪ್ರಮಾಣದಲ್ಲಿ ಅಕ್ರಮ ನಡೆದಿರುವುದರಿಂದ ತನಿಖೆ ನಡೆಸಲು ಅಗತ್ಯ ಸಂಖ್ಯೆಯಲ್ಲಿ ನುರಿತ ಸಿಬ್ಬಂದಿ ಹಾಗೂ ಸೌಕರ್ಯ
ಇಲ್ಲ ಎಂಬ ಕಾರಣಕ್ಕೆ ಸಮಗ್ರ ತನಿಖೆನಡೆಸಲು ಲೋಕಾಯುಕ್ತ ಸಂಸ್ಥೆ ಒಪ್ಪಿರಲಿಲ್ಲ.

ಸರ್ಕಾರವು 2011ರ ಅಕ್ಟೋಬರ್‌ 28ರಂದು ಈ ಪ್ರಕರಣಗಳ ತನಿಖೆಯನ್ನು ಸಿಐಡಿಗೆ ವಹಿಸಿತ್ತು. ತನಿಖೆ ಸಲುವಾಗಿ ಸಿಐಡಿ ಈ ಮೂರು ವಲಯಗಳ ಎಂಜಿನಿಯರಿಂಗ್‌ ವಿಭಾಗಗಳಿಂದ ಒಟ್ಟು 7,171 ಕಡತಗಳನ್ನು ವಶಕ್ಕೆ ಪಡೆದಿತ್ತು. ನಾಲ್ಕು ವರ್ಷಗಳಲ್ಲಿ ಕೇವಲ 78 ಕಡತಗಳಿಗೆ ಸಂಬಂಧಿಸಿದ ತನಿಖೆಯನ್ನು ಪೂರ್ಣಗೊಳಿಸಿತ್ತು. 213 ಕಡತಗಳ ತನಿಖೆ ಪ್ರಗತಿಯಲ್ಲಿತ್ತು. ಈ ಹಂತದಲ್ಲಿ ಸಿಐಡಿ ಇನ್ನುಳಿದ ಕಡತಗಳ ತನಿಖೆ ಪೂರ್ಣಗೊಳಿಸಲು ಸಾಧ್ಯವಿಲ್ಲ ಎಂದು ಕೈಚೆಲ್ಲಿತ್ತು. ಬಳಿಕ ತನಿಖೆಗೆ ನಾಗಮೋಹನದಾಸ್‌ ನೇತೃತ್ವದ ಸಮಿತಿ ರಚಿಸಲಾಗಿತ್ತು.

ಯಾವ ವಿಭಾಗದಲ್ಲಿ ಎಷ್ಟು ನಷ್ಟ?

ಗಾಂಧಿನಗರ ವಿಭಾಗ; ₹47.63 ಕೋಟಿ

ಮಲ್ಲೇಶ್ವರ ವಿಭಾಗ; 24.01 ಕೋಟಿ

ರಾಜರಾಜೇಶ್ವರಿನಗರ ವಿಭಾಗ; ₹4.91 ಕೋಟಿ

ಅಧಿಕಾರಿಗಳ ವಿರುದ್ಧ ಇಲಾಖೆ ವಿಚಾರಣೆ

* 239 ಎಂಜಿನಿಯರ್‌ಗಳು (ಇಇ, ಎಇಇ ಹಾಗೂ ಎಇ ಸೇರಿ) ಹಾಗೂ ಮೂವರು ಲೆಕ್ಕಪತ್ರ ಅಧೀಕ್ಷಕರು ಕರ್ತವ್ಯಲೋಪ ಎಸಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಸಿಬ್ಬಂದಿ ಮತ್ತು ಆಡಳಿತ
ಸುಧಾರಣಾ ಇಲಾಖೆಯ 2005 ಹಾಗೂ 2011ರ ಮಾರ್ಗಸೂಚಿ ಪರಿಶೀಲಿಸಿ ಈ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಪ್ರಸ್ತಾವ ಸಲ್ಲಿಸುವಂತೆ ನಗರಾಭಿವೃದ್ಧಿ ಇಲಾಖೆ ಸೂಚನೆ

* ನಾಗಮೋಹನದಾಸ್‌ ಸಮಿತಿ ಹಾಗೂ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ನೀಡಿರುವ ವಿಶೇಷ ಲೆಕ್ಕಪರಿಶೋಧನಾ ವರದಿಯಲ್ಲಿ ಇನ್ನಿತರ ಲೋಪ/ವಸೂಲಾತಿ/ ಅವ್ಯವಹಾರವನ್ನು ಪಟ್ಟಿ ಮಾಡಿದ್ದಲ್ಲಿ ಸಂಬಂಧಪಟ್ಟವರಿಂದ ವಸೂಲಿ ಮಾಡಬೇಕು.

* ಈ ಎಲ್ಲ ಕ್ರಮಗಳನ್ನು ಒಂದು ತಿಂಗಳಲ್ಲಿ ಕೈಗೊಂಡು ಅನುಪಾಲನಾ ವರದಿಯನ್ನು ಇಲಾಖೆಗೆ ಸಲ್ಲಿಸಬೇಕು

ಪ್ರತಿಕ್ರಿಯಿಸಿ (+)