ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ ಶಾಲೆ: ಶೇ 67.53ರಷ್ಟು ಫಲಿತಾಂಶ

ಸೌಲಭ್ಯ, ಗುಣಮಟ್ಟದ ಶಿಕ್ಷಣದ ಭರವಸೆ: ಶೇ 3.84ರಷ್ಟು ಕುಸಿತ
Published 8 ಮೇ 2023, 21:15 IST
Last Updated 8 ಮೇ 2023, 21:15 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿಯ 33 ಪ್ರೌಢಶಾಲೆಗಳು 2022-23ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 67.53ರಷ್ಟು ಫಲಿತಾಂಶ ಪಡೆದಿವೆ.

33 ಪ್ರೌಢಶಾಲೆಗಳಿಂದ ಒಟ್ಟು 2,270 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ 1,533 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 73 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾರೆ. 2021–22ನೇ ಸಾಲಿನಲ್ಲಿ ಶೇ 71.37 ಫಲಿತಾಂಶ ಬಂದಿತ್ತು.

ಪ್ರಸಕ್ತ ಸಾಲಿನಲ್ಲಿ ಬಸವನಗುಡಿಯ ಶಾಲೆ ಶೇ 100ರಷ್ಟು ಫಲಿತಾಂಶ ಗಳಿಸಿದೆ. ಈ ಶಾಲೆ 12 ವಿದ್ಯಾರ್ಥಿಗಳೂ ಉತ್ತೀರ್ಣರಾಗಿದ್ದಾರೆ. ವಿಜಯನಗರ ಶೇ 96.47, ಮತ್ತಿಕೆರೆ ಶೇ 91.95, ಹೇರೋಹಳ್ಳಿ ಶೇ 88.34, ಶ್ರೀರಾಮಪುರ ಶಾಲೆ ಶೇ 84.06ರಷ್ಟು ಫಲಿತಾಂಶ ಗಳಿಸಿದೆ. ಹೇರೋಹಳ್ಳಿ ಶಾಲೆಯಲ್ಲಿ 15, ಲಗ್ಗೆರೆಯಲ್ಲಿ 14, ಬೈರವೇಶ್ವರನಗರ ಶಾಲೆಯಲ್ಲಿ 13 ವಿದ್ಯಾರ್ಥಿಗಳು ಉನ್ನತ ಶ್ರೇಣಿ ಪಡೆದಿದ್ದಾರೆ. 

ಬೈರವೇಶ್ವರನಗರದ ಶಾಲೆಯಿಂದ ಅತಿಹೆಚ್ಚು ಅಂದರೆ 273 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಹೇರೋಹಳ್ಳಿಯಿಂದ 223, ಕ್ಲೀವ್‌ಲ್ಯಾಂಡ್‌ಟೌನ್‌ ಶಾಲೆಯಿಂದ 219 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಬೈರವೇಶ್ವರ ಶಾಲೆಯಲ್ಲಿ ಅತಿಹೆಚ್ಚು ಅಂದರೆ 220 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕೆ.ಜಿ.ನಗರದ ಶಾಲೆಯಲ್ಲಿ ಆರೂ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಪಾದರಾಯನಪುರ ಶಾಲೆಯ 119 ಹಾಗೂ ಕ್ಲೀವ್‌ಲ್ಯಾಂಡ್‌ಟೌನ್ ಶಾಲೆಯ 86 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ.

ಕುಸಿದ ಫಲಿತಾಂಶ: ಕಳೆದ ಸಾಲಿನಲ್ಲಿ ಶೇ 71.37ರಷ್ಟು ಫಲಿತಾಂಶ ಕಂಡಿದ್ದ ಬಿಬಿಎಂಪಿ ಶಾಲೆಗಳು ಈ ಬಾರಿ ಶೇ 3.84ರಷ್ಟು ಕುಸಿತ ಕಂಡಿವೆ.

ವರ್ಷದಿಂದ ವರ್ಷಕ್ಕೆ ಹೆಚ್ಚಿನ ಸೌಲಭ್ಯ, ಸ್ಮಾರ್ಟ್‌ ಕ್ಲಾಸ್‌ ಹಾಗೂ ಗುಣಮಟ್ಟದ ಶಿಕ್ಷಣ ನೀಡುವ ಭರವಸೆ ನೀಡುತ್ತಿರುವ ಬಿಬಿಎಂಪಿ, ಫಲಿತಾಂಶದಲ್ಲಿ ಮಾತ್ರ ಕುಸಿತ ಕಂಡಿದೆ. ಶಿಕ್ಷಕರ ಕೊರತೆ, ಶಿಕ್ಷಕರಿಗೆ ಬೇರೆ ವಿಭಾಗಗಳಲ್ಲಿ ಕೆಲಸ ನೀಡಿರುವುದರಿಂದ ಬೋಧನೆಯಲ್ಲಿ ಆಸಕ್ತಿ ಕಡಿಮೆಯಾಗಿದೆ. ಹೀಗಾಗಿ ಫಲಿತಾಂಶ ಕುಸಿಯುತ್ತಿದೆ ಎಂದು ಪೋಷಕರು ದೂರುತ್ತಾರೆ. 2018–19ನೇ ಸಾಲಿನಲ್ಲಿ ಶೇ 52.24 ಹಾಗೂ 2019–20ನೇ ಸಾಲಿನಲ್ಲಿ ಶೇ 50.16 ರಷ್ಟು ಫಲಿತಾಂಶ ಕಂಡಿತ್ತು.

ಬೆಂಗಳೂರು ಉತ್ತರ 32, ದಕ್ಷಿಣಕ್ಕೆ 33ನೇ ಸ್ಥಾನ

ಬೆಂಗಳೂರು: 2022–23ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶವು ಸೋಮವಾರ ಪ್ರಕಟವಾಗಿದ್ದು, ಬೆಂಗಳೂರಿನ ಉತ್ತರ ಹಾಗೂ ದಕ್ಷಿಣ ಶೈಕ್ಷಣಿಕ ಜಿಲ್ಲೆಗಳಲ್ಲಿ ಈ ವರ್ಷವೂ ಫಲಿತಾಂಶದಲ್ಲಿ ಸುಧಾರಣೆ ಕಂಡಿಲ್ಲ.

35 ಶೈಕ್ಷಣಿಕ ಜಿಲ್ಲೆಗಳ ಪೈಕಿ ಬೆಂಗಳೂರು ಉತ್ತರ ಜಿಲ್ಲೆಗೆ 32ನೇ ಸ್ಥಾನ (ಶೇ 80.93) ಹಾಗೂ ದಕ್ಷಿಣ ಜಿಲ್ಲೆಗೆ 33ನೇ ಸ್ಥಾನ (ಶೇ 78.95) ಬಂದಿದೆ.

2021–22ರಲ್ಲಿ 34 ಶೈಕ್ಷಣಿಕ ಜಿಲ್ಲೆಗಳಿದ್ದವು. ಆಗ ದಕ್ಷಿಣ ಜಿಲ್ಲೆಯು 33ನೇ (79.44) ಸ್ಥಾನದಲ್ಲಿತ್ತು. ಈ ಬಾರಿ 35 ಶೈಕ್ಷಣಿಕ ಜಿಲ್ಲೆಗಳಿದ್ದು 33ನೇ ಸ್ಥಾನದಲ್ಲೇ ಇದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇಲ್ಲಿ 0.49ರಷ್ಟು ಫಲಿತಾಶ ಕುಸಿತವಾಗಿದೆ.

ದಕ್ಷಿಣ ಜಿಲ್ಲೆಯಲ್ಲಿ 54,336 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಆ ಪೈಕಿ 42,524 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ ಎಂದು ದಕ್ಷಿಣ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪಿ. ಬೈಲಾಂಜಿನಪ್ಪ ತಿಳಿಸಿದ್ದಾರೆ.

ಸರ್ಕಾರಿಯ ಶಾಲೆಯ 7,097 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅದರಲ್ಲಿ 4,564 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. 2,533 ವಿದ್ಯಾರ್ಥಿಗಳು ಅನುತ್ತೀರ್ಣಗೊಂಡಿದ್ದಾರೆ.

ಅನುದಾನಿತ ಶಾಲೆಗಳ 9,805 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ 6,759 ಉತ್ತೀರ್ಣರಾಗಿ, 3,044 ಅನುತ್ತೀರ್ಣಗೊಂಡಿದ್ದಾರೆ. ಅನುದಾನರಹಿತ ಶಾಲೆಗಳಿಂದ 37,434 ವಿದ್ಯಾರ್ಥಿಗಳು ಹಾಜರಾಗಿದ್ದರು. ಅದರಲ್ಲಿ 31,201 ತೇರ್ಗಡೆಗೊಂಡಿದ್ದಾರೆ. ಅದರಲ್ಲಿ 6,226 ಅನುತ್ತೀರ್ಣವಾಗಿದ್ದಾರೆ. ಒಟ್ಟು 11,803 ವಿದ್ಯಾರ್ಥಿಗಳು ಅನುತ್ತೀರ್ಣವಾಗಿದ್ದಾರೆ.

‘ಫಲಿತಾಂಶ ಸುಧಾರಣೆಗೆ ಹಲವು ಕ್ರಮ ಕೈಗೊಳ್ಳಲಾಗುವುದು. ಮುಂದಿನ ವರ್ಷ 15ರ ಒಳಗಿನ ಸ್ಥಾನ ತಲುಪಲು ವಿಶೇಷ ವಿಶೇಷ ತರಗತಿ ನಡೆಸಲಾಗುವುದು’ ಎಂದು ಬೈಲಾಂಜಿನಪ್ಪ ತಿಳಿಸಿದರು.

ಎಸ್‌ಎಸ್‌ಎಂ ಶಾಲೆಗೆ ಶೇ 100 ಫಲಿತಾಂಶ

ಬೆಂಗಳೂರು: ಪಿಇಎಸ್‌ ಶಿಕ್ಷಣ ಸಂಸ್ಥೆಯ ಎಸ್‌ಎಸ್‌ಎಂ ಪಬ್ಲಿಕ್‌ ಶಾಲೆಯ ವಿದ್ಯಾರ್ಥಿ ಅಕ್ಷಯಾ ಎಸ್. ಅರ್ಶಿ (ಶೇ 99.04) ಅಂಕ ಪಡೆದು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 6ನೇ ಸ್ಥಾನ ಪಡೆದಿದ್ದಾರೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶಾಲೆಯ 40 ವಿದ್ಯಾರ್ಥಿಗಳು ಶೇ 85ಕ್ಕೂ ಹೆಚ್ಚು ಅಂಕಗಳನ್ನು ಪಡೆದಿದ್ದು, ಶಾಲೆಯ ಎಲ್ಲ ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಶೇ 100 ರಷ್ಟು ಫಲಿತಾಂಶ ಬಂದಿದೆ. ಪಿಇಎಸ್‌ ವಿಶ್ವವಿದ್ಯಾಲಯದ ಸಂಸ್ಥಾ ಪಕ ಮತ್ತು ಕುಲಾಧಿಪತಿ ಡಾ. ಎಂ.ಆರ್. ದೊರೆಸ್ವಾಮಿ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

ರಾಜ್ಯಕ್ಕೆ ಸ್ಫೂರ್ತಿ ತೃತೀಯ ಸ್ಥಾನ

ಪೀಣ್ಯ ದಾಸರಹಳ್ಳಿ: ಸಮೀಪದ ಹಾವನೂರು ಬಡಾವಣೆಯ ಸೌಂದರ್ಯ ಶಾಲೆಯ ವಿದ್ಯಾರ್ಥಿನಿ ಸ್ಫೂರ್ತಿ ಎಸ್. ಅವರು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 623 (ಶೇ 99.68) ಅಂಕಗಳನ್ನು ಪಡೆದು ರಾಜ್ಯಕ್ಕೆ ಮೂರನೇ ಸ್ಥಾನ ಪಡೆದಿದ್ದಾರೆ.

‘ಶಾಲೆಗೆ ಈ ಬಾರಿ ಶೇ100 ಫಲಿತಾಂಶ ದೊರೆತಿದೆ. 85 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 61 ವಿದ್ಯಾರ್ಥಿಗಳು ಪ್ರಥಮ ದರ್ಜೆ ಯಲ್ಲಿ ತೇರ್ಗಡೆಯಾಗಿದ್ದಾರೆ’ ಎಂದು ಪ್ರಾಂಶುಪಾಲರಾದ ಚಿನ್ನಮ್ಮ ಕಾವೇರಪ್ಪ, ಕಾಲೇಜಿನ ಪ್ರಾಂಶುಪಾಲ ಮಹಾಬಲೇಶ್ವರ ತುಂಗ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT