ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಂಕಿತರಿದ್ದ ಅಪಾರ್ಟ್‌ಮೆಂಟ್‌ ಸೀಲ್‌ ಡೌನ್

ಸಾಂಸ್ಥಿಕ ಕ್ವಾರಂಟೈನ್‌ಗೆ ಒಪ್ಪದ ನಿವಾಸಿಗಳು
Last Updated 29 ಡಿಸೆಂಬರ್ 2020, 21:22 IST
ಅಕ್ಷರ ಗಾತ್ರ

ಬೆಂಗಳೂರು: ನಗರದ 34 ವರ್ಷದ ಮಹಿಳೆ ಮತ್ತು ಅವರ ಆರು ವರ್ಷದ ಮಗಳಿಗೆ ಬ್ರಿಟನ್‌ ರೂಪಾಂತರ ಸೋಂಕು ತಗುಲಿರುವುದು ದೃಢಪಟ್ಟ ಬೆನ್ನಲ್ಲೇ ಇವರು ನೆಲೆಸಿದ್ದ ವಸಂತನಗರ ವಾರ್ಡ್‌ನ ವಿಠ್ಠಲ ನಗರದ ಅಪಾರ್ಟ್‌ಮೆಂಟ್‌ ಅನ್ನು ಬಿಬಿಎಂಪಿ ಸೀಲ್‌ಡೌನ್ ಮಾಡಿದೆ.

ಈ ಅಪಾರ್ಟ್‌ಮೆಂಟ್‌ನಲ್ಲಿದ್ದ 37 ನಿವಾಸಿಗಳ ಕ್ವಾರಂಟೈನ್‌ ಕೇಂದ್ರಗಳಿಗೆ ಹೋಗಲು ನಿರಾಕರಿಸುತ್ತಿದ್ದಂತೆ ಬಿಬಿಎಂಪಿ ಈ ಕ್ರಮ ಕೈಗೊಂಡಿದೆ. ಎಲ್ಲ ನಿವಾಸಿಗಳ ಗಂಟಲು ದ್ರವದ ಮಾದರಿ ಸಂಗ್ರಹಿಸಲಾಗಿದ್ದು, ಆರ್‌–ಪಿಸಿಆರ್‌ ಪರೀಕ್ಷೆಗೆ ಮಾದರಿ ಕಳುಹಿಸಲಾಗಿದ್ದು, ಎಲ್ಲರ ವರದಿ ನೆಗೆಟಿವ್‌ ಬಂದಿದೆ.

‘ಸೋಂಕಿತರ ಪ್ರಾಥಮಿಕ, ದ್ವಿತೀಯ ಸಂಪರ್ಕಕ್ಕೆ ಬಂದವರನ್ನು ಸಾಂಸ್ಥಿಕ ಕ್ವಾರಂಟೈನ್‌ ಕೇಂದ್ರಗಳಿಗೆ ಅಂದರೆ ಹೋಟೆಲ್‌ಗಳಿಗೆ ಸ್ಥಳಾಂತರಿಸುವಂತೆ ಸರ್ಕಾರ ಸೂಚನೆ ನೀಡಿದೆ. ಇಂಗ್ಲೆಂಡ್‌ನಿಂದ ಬಂದವರ ಪ್ರಾಥಮಿಕ ಸಂಪರ್ಕಕ್ಕೆ ಒಳಪಟ್ಟ 45 ಮಂದಿಯನ್ನು ಗುರುತಿಸಲಾಗಿದೆ. ಇವರೆಲ್ಲರೂ ಮೊದಲು ಹೋಂ ಕ್ವಾರಂಟೈನ್‌ನಲ್ಲಿದ್ದರು’ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ. ಬಿ.ಕೆ. ವಿಜಯೇಂದ್ರ ಹೇಳಿದರು.

ಈ ವಾರ್ಡ್‌ನ ಮಾಜಿ ಸದಸ್ಯೆ ಶೋಭಾ ಗೌಡ ‘ಅಪಾರ್ಟ್‌ಮೆಂಟ್‌ನ ಎಲ್ಲ 37 ನಿವಾಸಿಗಳನ್ನು ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸುವಂತೆ ದೆಹಲಿಯಿಂದ ಆದೇಶ ಬಂದಿದೆ ಎಂದು ಬಿಬಿಎಂಪಿ ಆರೋಗ್ಯಾಧಿಕಾರಿ ಹೇಳುತ್ತಾರೆ. ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಟ್ಟರೆ ಸಮಸ್ಯೆಯಾಗುತ್ತದೆ ಎಂದು ನಿವಾಸಿಗಳು ಹೇಳುತ್ತಾರೆ. ಎಲ್ಲರೂ ಆರೋಗ್ಯದಿಂದಿದ್ದು, ಮನೆಗಳಲ್ಲಿಯೇ ಪ್ರತ್ಯೇಕವಾಗಿ ಇರುವುದಾಗಿ ಹೇಳಿದ್ದಾರೆ’ ಎಂದು ತಿಳಿಸಿದರು.

‘ತಾಯಿ ಮತ್ತು ಮಗು ವಾಸವಿದ್ದ ಮನೆ ಅಪಾರ್ಟ್‌ಮೆಂಟ್‌ನ ನಾಲ್ಕನೇ ಮಹಡಿಯಲ್ಲಿದೆ. ನಾವು ಯಾವತ್ತೂ ಅವರೊಂದಿಗೆ ಮಾತನಾಡಿಲ್ಲ. ಮಾಧ್ಯಮಗಳಲ್ಲಿ ಸುದ್ದಿ ಬಂದ ನಂತರವೇ ನಮಗೆ ಅವರ ಬಗ್ಗೆ ತಿಳಿದಿದೆ. ಎಲ್ಲರ ವರದಿ ನೆಗೆಟಿವ್‌ ಬಂದಿದೆ. ಆದರೂ, ಬಿಬಿಎಂಪಿಯವರು ಬಂದು ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲು ಮುಂದಾಗಿದ್ದು ಅಚ್ಚರಿ ತಂದಿದೆ’ ಎಂದು ನಿವಾಸಿ ಜಯಂತ್‌ ಕುಮಾರ್ ಹೇಳಿದರು.

ಈಗ ಅಪಾರ್ಟ್‌ಮೆಂಟ್‌ ನಿವಾಸಿಗಳಲ್ಲೆಲ್ಲರೂ ಹೋಂ ಕ್ವಾರಂಟೈನ್‌ಗೆ ಒಳಗಾಗಿದ್ದು, ಇಬ್ಬರು ಪೊಲೀಸರನ್ನು ನಿಯೋಜಿಸಲಾಗಿದೆ. ಪ್ರತಿದಿನ ಅಪಾರ್ಟ್‌ಮೆಂಟ್‌ ಆವರಣವನ್ನು ಸ್ಯಾನಿಟೈಸ್‌ ಮಾಡಿಸಲು ಕ್ರಮ ಕೈಗೊಳ್ಳಲಾಗಿದೆ.

‘ಯಾವುದೇ ನಿವಾಸಿಗಳನ್ನು ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸುವುದಿಲ್ಲ. ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚಿ ಹೋಮ್‌ ಕ್ವಾರಂಟೈನ್‌ಗೆ ಒಳಪಡಿಸಲಾಗುವುದು’ ಎಂದು ಬೊಮ್ಮನಹಳ್ಳಿ ವಲಯದ ಜಂಟಿ ಆಯುಕ್ತ ಎಂ. ರಾಮಕೃಷ್ಣ ತಿಳಿಸಿದರು.

ಬೆಂಗಳೂರಿನಲ್ಲಿ ಎಡನೇ ಅಲೆ ಆರಂಭ?
‘ಜ್ವರ ಮತ್ತು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಬಹುತೇಕರಿಗೆ ಚರ್ಮದ ಮೇಲೆ ದದ್ದುಗಳು ಅಥವಾ ಗುಳ್ಳೆಗಳಂತಹ ಲಕ್ಷಣಗಳು ಕಂಡು ಬರುತ್ತಿವೆ. ಕೆಲಸದ ವೇಳೆಯಲ್ಲಿ ಎಲ್ಲ ವೈದ್ಯರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು’ ಎಂದು ಬನ್ನೇರುಘಟ್ಟ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯ ಹಿರಿಯ ವೈದ್ಯರೊಬ್ಬರು ಸಹೋದ್ಯೋಗಿಗಳಿಗೆ ಸಲಹೆ ನೀಡಿದ್ದಾರೆ.

‘ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಎಂಟು ಜನರನ್ನು ಪರೀಕ್ಷಿಸಿದ್ದೇನೆ. ಅವರೆಲ್ಲರ ಚರ್ಮದ ಮೇಲೆ ದದ್ದುಗಳು ಕಂಡು ಬಂದಿವೆ. ಸಿಟಿ ಸ್ಕ್ಯಾನ್‌ಗೆ ಒಳಪಡಿಸಿದಾಗ ಇದು ಗೊತ್ತಾಗಿದೆ ಎಂದು ಕಿರಿಯ ವೈದ್ಯರೊಬ್ಬರು ನನಗೆ ಸಂದೇಶ ಕಳಿಸಿದ್ದರು’ ಎಂದು ಅವರು ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಬರೆದಿದ್ದಾರೆ.

‘ಇದು ಬೆಂಗಳೂರಿನಲ್ಲಿ ಎರಡನೇ ಅಲೆಯ ಪ್ರಾರಂಭದ ಮುನ್ಸೂಚನೆಯಾಗಿದೆ. ವೈದ್ಯರೆಲ್ಲರೂ ಜಾಗರೂಕರಾಗಿರಬೇಕು. ಸರಿಯಾಗಿ ಮಾಸ್ಕ್‌ ಧರಿಸಿ, ಅಂತರ ಕಾಪಾಡಿಕೊಳ್ಳಬೇಕು. ನಿಯಮಿತವಾಗಿ ಕೈ ತೊಳೆಯುತ್ತಿರಬೇಕು. ಅತಿಯಾದ ವಿಶ್ವಾಸದಿಂದ ಯಾವುದನ್ನೂ
ನಿರ್ಲಕ್ಷಿಸಬೇಡಿ’ ಎಂದು ಅವರು ವೈದ್ಯರಲ್ಲಿ ಮನವಿ ಮಾಡಿದ್ದಾರೆ.

ಮಗಳಿಗೆ ಮಾಹಿತಿಯೇ ಇಲ್ಲ: ತಂದೆ ಅಸಮಾಧಾನ
‘ಪ್ರಚಲಿತ ಬೆಳವಣಿಗೆಯ ಕುರಿತು ನನ್ನ ಮಗಳನ್ನು ಕತ್ತಲಲ್ಲಿ ಇಡಲಾಗಿದೆ. ರೂಪಾಂತರ ಸೋಂಕು ತಗುಲಿರುವ ಬಗ್ಗೆ ಸರ್ಕಾರ ಅವಳಿಗೆ ಮಾಹಿತಿಯನ್ನೇ ನೀಡಿಲ್ಲ’ ಎಂದು ರೂಪಾಂತರ ಸೋಂಕಿಗೆ ಒಳಗಾಗಿರುವ ಮಹಿಳೆಯ ತಂದೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಬ್ರಿಟನ್‌ನಿಂದ ಬಂದ ತಾಯಿ ಮತ್ತು ಅವರ 6 ವರ್ಷದ ಮಗಳಿಗೆ ಸೋಂಕು ತಗುಲಿರುವುದು ದೃಢ ಪಟ್ಟಿದೆ ಎಂದು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಮಗಳು ಮತ್ತು ಮೊಮ್ಮಗಳಿಗೆ ಕರೆ ಮಾಡಿದೆ. ನಮಗೆ ಈವರೆಗೂ ಈ ಸುದ್ದಿಯನ್ನು ಯಾರೂ ತಿಳಿಸಿಲ್ಲ ಎಂದು ಮಗಳು ಹೇಳಿದಳು.

ಚಿಕಿತ್ಸೆ ನೀಡುತ್ತಿರುವ ವೈದ್ಯರು ಅಥವಾ ಸರ್ಕಾರವು ಈ ಬಗ್ಗೆ ಮೊದಲು ಸೋಂಕಿತರ ಕುಟುಂಬಕ್ಕೆ ಮಾಹಿತಿ ನೀಡಬೇಕಲ್ಲವೆ’ ಎಂದು ಅವರು ಪ್ರಶ್ನಿಸಿದರು.

‘ಮಾಧ್ಯಮಗಳಿಗೆ ಮೊದಲು ಮಾಹಿತಿ ನೀಡುವ ಈ ನಡೆ ಯಾವ ಸೀಮೆಯ ಶಿಷ್ಟಾಚಾರ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ಸರ್ಕಾರದ ಮಾರ್ಗಸೂಚಿಯಂತೆ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಸಾಂಸ್ಥಿಕ ಕ್ವಾರಂಟೈನ್‌ ನಲ್ಲಿಡಬೇಕು ಎಂದು ಸೂಚನೆ ಬಂದಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳುತ್ತಾರೆ. ನಾನು ಮತ್ತು ನನ್ನ ಪತ್ನಿ ಪ್ರಾಥಮಿಕ ಸಂಪ ರ್ಕಿತರು. ಆದರೆ, ನಾವಿಬ್ಬರೂ ಎರಡು ಬಾರಿ ಆರ್‌ಟಿ ಪಿಸಿಆರ್ ಪರೀಕ್ಷೆ ಮಾಡಿಸಿಕೊಂಡಿದ್ದು, ಎರಡು ಬಾರಿಯೂ ವರದಿ ನೆಗೆಟಿವ್‌ ಬಂದಿದೆ. ನಾವು ಆರೋಗ್ಯವಾಗಿಯೂ ಇದ್ದೇವೆ. ಕೋವಿಡ್‌ನ ಯಾವುದೇ ಲಕ್ಷಣಗಳು ನಮಗೆ ಇಲ್ಲ. ನಾವೇಕೆ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಗಾಗಬೇಕು’ ಎಂದು ಅವರು ಪ್ರಶ್ನಿಸಿದರು.

‘ನಮ್ಮನ್ನು ಎಲ್ಲಿಗೆ ಕರೆದೊಯ್ಯುತ್ತಾರೆ, ಅಲ್ಲಿ ಯಾವ ವ್ಯವಸ್ಥೆ ಇರುತ್ತದೆ ಎಂಬುದು ನಮಗೆ ಗೊತ್ತಿಲ್ಲ. ಇದಕ್ಕಾಗಿ ನಾವು ಪ್ರತಿಭಟಿಸಿದೆವು. ಕಟ್ಟಡವನ್ನು ಸೀಲ್‌ಡೌನ್‌ ಮಾಡಿ. ನಾವು ಕೋವಿಡ್‌ ಮಾರ್ಗ ಸೂಚಿಯಂತೆ ನಿಯಮಗಳನ್ನು ಪಾಲಿಸುತ್ತೇವೆ ಎಂದು ತಿಳಿಸಿದ್ದೇವೆ’ ಎಂದು ಅವರು ಹೇಳಿದರು.

65 ವರ್ಷದ ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರೆ, 59 ವರ್ಷದ ಅವರ ಪತ್ನಿಗೆ ಮಧುಮೇಹವಿದೆ. ‘ನಮ್ಮ ಸಹಾಯಕ್ಕಾಗಿ ಸ್ವಯಂಸೇವಕರೊಬ್ಬರನ್ನು ನಿಯೋಜನೆ ಮಾಡುವುದಾಗಿ ಬಿಬಿಎಂಪಿ ಹೇಳಿದೆ. ಅಗತ್ಯವಿದ್ದರೆ ಅವರನ್ನು ಸಂಪರ್ಕಿಸುತ್ತೇವೆ’ ಎಂದು ಅವರು ತಿಳಿಸಿದರು.

**
ನಂದಿಬೆಟ್ಟ ಪ್ರವೇಶಕ್ಕೆ ನಿರ್ಬಂಧ
ಚಿಕ್ಕಬಳ್ಳಾಪುರ:
ಕೊರೊನಾ ಸೋಂಕು ಮತ್ತು ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ನಡೆಯುವ ಅವಘಡಗಳನ್ನು ತಡೆಯುವ ದೃಷ್ಟಿಯಿಂದ ಜಿಲ್ಲೆಯ ಪ್ರವಾಸಿ ತಾಣವಾದ ನಂದಿಬೆಟ್ಟಕ್ಕೆ ಬುಧವಾರ (ಡಿ.30) ಬೆಳಿಗ್ಗೆ 6ರಿಂದ ಜನವರಿ 2ರ ಬೆಳಿಗ್ಗೆ 6ರ ವರೆಗೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿದೆ.

ನಂದಿಬೆಟ್ಟಕ್ಕೆ ಹೊಸ ವರ್ಷಾಚರಣೆಗೆ ಸಾವಿರಾರೂ ಸಂಖ್ಯೆಯಲ್ಲಿ ಪ್ರವಾಸಿಗರು ಬರುವ ಸಾಧ್ಯತೆಗಳಿದ್ದು, ಇದರಿಂದಾಗಿ ರೂಪಾಂತರ ಕೊರೊನಾ ವೈರಸ್ ಸೋಂಕು ಹರಡುವ ಸಾಧ್ಯತೆ ಇದೆ. ಜತೆಗೆ ಜನರುಮದ್ಯಪಾನ ಮಾಡಿ, ವಾಹನ ಚಾಲನೆ ಮಾಡುವುದರಿಂದ ಅಪಘಾತಗಳಾಗುವ ಸಾಧ್ಯತೆಗಳಿವೆ. ಇದರಿಂದಾಗಿ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಂದಿಬೆಟ್ಟ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಆರ್.ಲತಾ ಆದೇಶ ಹೊರಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT