ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೋಭ ವಸತಿ ಸಮುಚ್ಚಯದ ನಕ್ಷೆ ಮಂಜೂರಾತಿ ರದ್ದು

ನಕ್ಷೆ ಮಂಜೂರಾತಿ ಪಡೆಯಲು ನಕಲಿ ನಿರಾಕ್ಷೇಪಣಾ ಪತ್ರ ಸಲ್ಲಿಕೆ
Last Updated 21 ಜನವರಿ 2023, 20:25 IST
ಅಕ್ಷರ ಗಾತ್ರ

ಬೆಂಗಳೂರು: ಎನ್‌. ನಾಗೇನಹಳ್ಳಿ ಮತ್ತು ಚೊಕ್ಕನಹಳ್ಳಿ ಬಳಿ ಶೋಭ ಲಿಮಿಟೆಡ್‌ ಕಂಪನಿ ನಿರ್ಮಿಸಿರುವ ವಸತಿ ಸಮುಚ್ಚಯಕ್ಕೆ ನೀಡಿದ್ದ ಪರಿಷ್ಕೃತ ನಕ್ಷೆ ಮಂಜೂರಾತಿ ಮತ್ತು ಸ್ವಾಧೀನಾನುಭವ ಪ್ರಮಾಣಪತ್ರವನ್ನು ಬಿಬಿಎಂಪಿ ರದ್ದುಪಡಿಸಿದೆ.

ನಕಲಿ ನಿರಾಕ್ಷೇಪಣಾ ಪತ್ರ ಮತ್ತು ಕ್ಲಿಯರೆನ್ಸ್ ಪತ್ರಗಳನ್ನು ಸಲ್ಲಿಸಿರುವುದರಿಂದ ಮಂಜೂರಾತಿ ರದ್ದುಪಡಿಸಲಾಗಿದೆ ಎಂದು ಬಿಬಿಎಂಪಿ ಜಂಟಿ ನಿರ್ದೇಶಕ (ನಗರ ಯೋಜನೆ– ಉತ್ತರ) ಆದೇಶದಲ್ಲಿ ತಿಳಿಸಿದ್ದಾರೆ.

ಯಲಹಂಕ ವಲಯದ ಎನ್. ನಾಗೇನಹಳ್ಳಿ ಮತ್ತು ಚೊಕ್ಕನಹಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ವಸತಿ ಸಮುಚ್ಚಯಕ್ಕೆ 2013ರಲ್ಲಿ ಪಾಲಿಕೆಯಿಂದ ಪರಿಷ್ಕೃತ ನಕ್ಷೆ ಮಂಜೂರಾತಿ ಮತ್ತು ಕಟ್ಟಡ ನಿರ್ಮಾಣವಾದ ಬಳಿಕ 2016, 2019 ಮತ್ತು 2020ರಲ್ಲಿ ಸ್ವಾಧೀನಾನುಭವ ಪ್ರಮಾಣ ಪತ್ರವನ್ನು ಬಿಬಿಎಂಪಿ ನೀಡಿತ್ತು.

‘ಈ ಪ್ರಮಾಣಪತ್ರಗಳನ್ನು ಪಡೆಯಲು ಅಗ್ನಿಶಾಮಕ ಇಲಾಖೆಯಿಂದ ಪಡೆದಿರುವ 2013 ನಿರಾಕ್ಷೇಪಣಾ ಪತ್ರ, 2016 ಮತ್ತು 2018ರಲ್ಲಿ ಪಡೆದಿರುವ ಕ್ಲಿಯರೆನ್ಸ್ ಪತ್ರಗಳು ನಕಲಿಯಾಗಿದ್ದು, ನಕ್ಷೆ ಮಂಜೂರಾತಿ ಮತ್ತು ಸ್ವಾಧೀನಾನುಭವ ಪ್ರಮಾಣ ಪತ್ರಗಳನ್ನು ಹಿಂಪಡೆಯಬೇಕು’ ಎಂದು ಶ್ರೀನಿವಾಸ್ ರಾವ್ ತಲ್ಲಾ ಎಂಬುವರು ಪಾಲಿಕೆಗೆ ದೂರು ನೀಡಿದ್ದರು.

ಈ ದೂರಿಗೆ ಸಮಜಾಯಿಷಿ ಸಲ್ಲಿಸುವಂತೆ ಶೋಭ ಲಿಮಿಟೆಡ್‌ಗೆ ಪಾಲಿಕೆಯು ನೋಟಿಸ್ ನೀಡಿತ್ತು. ಅಲ್ಲದೇ ಅಗ್ನಿಶಾಮಕ ಇಲಾಖೆಗೂ ಪತ್ರ ಬರೆದು ನಿರಾಕ್ಷೇಪಣಾ ಪತ್ರ ನೀಡಿರುವ ಬಗ್ಗೆ ವಿವರವನ್ನೂ ಕೇಳಿತ್ತು.

‘2011 ಮತ್ತು 2021ರಂದು ನಿರಾಕ್ಷೇಪಣಾ ನೀಡಲಾಗಿದೆ. 2015, 2020 ಮತ್ತು 2021ರಲ್ಲಿ ಸ್ಥಳ ಪರಿವೀಕ್ಷಣೆ ನಡೆಸಿ ಕ್ಲಿಯರೆನ್ಸ್ ಪತ್ರಗಳನ್ನೂ ನೀಡಲಾಗಿದೆ. ಆದರೆ, 2013 ನಿರಾಕ್ಷೇಪಣಾ ಪತ್ರ ಮತ್ತು 2016, 2018ರಲ್ಲಿ ಕ್ಲಿಯರೆನ್ಸ್ ಪತ್ರಗಳನ್ನು ನೀಡಿಲ್ಲ ಎಂದು ಅಗ್ನಿ ಶಾಮಕ ಇಲಾಖೆ ಸ್ಪಷ್ಟನೆ ನೀಡಿದೆ’ ಎಂದು ಬಿಬಿಎಂಪಿ ಆದೇಶದಲ್ಲಿ ವಿವರಿಸಿದ್ದಾರೆ

‘ಬಿಬಿಎಂಪಿ ಷರತ್ತುಗಳನ್ನು ಉಲ್ಲಂಘಿಸಿ ನಕಲಿ ದಾಖಲೆ ನೀಡಿರುವುದರಿಂದ ಅಭಿವೃದ್ಧಿ ಶುಲ್ಕ ಮತ್ತು ದಂಡ ಶುಲ್ಕಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಅಲ್ಲದೇ, ಪರಿಷ್ಕೃತ ನಕ್ಷೆ ಮಂಜೂರಾತಿ ಮತ್ತು ಸ್ವಾಧೀನಾನುಭವ ಪ್ರಮಾಣಪತ್ರಗಳನ್ನು ರದ್ದುಪಡಿಸಲಾಗಿದೆ’ ಎಂದೂ ತಿಳಿಸಿದ್ದಾರೆ.

‘ಉದ್ದೇಶಪೂರ್ವಕ ಕೆಲಸ ಅಲ್ಲ’
‘ಪ್ರಮಾಣಪತ್ರಗಳನ್ನು ಪಡೆಯುವ ಕೆಲಸವನ್ನು ಏಜೆನ್ಸಿಯೊಂದಕ್ಕೆ ನೀಡಲಾಗಿತ್ತು. ಅವರು ನಕಲಿ ದಾಖಲೆ ಸೃಷ್ಟಿಸಿರುವುದು ತಡವಾಗಿ ಗಮನಕ್ಕೆ ಬಂತು. ಬಳಿಕ ಏಜೆನ್ಸಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ನಾವು ಉದ್ದೇಶಪೂರ್ವಕವಾಗಿ ನಕಲಿ ದಾಖಲೆ ಸೃಷ್ಟಿಸಿಲ್ಲ’ ಎಂದು ಶೋಭ ಲಿಮಿಟೆಡ್‌ನ ಸಹಾಯಕ ಪ್ರಧಾನ ವ್ಯವಸ್ಥಾಪಕ ಸಂದೇಶ್ ಎಚ್.ಜಿ. ಸ್ಪ‍ಷ್ಟಪಡಿಸಿದರು.

‘ಶೋಭ ಲಿಮಿಟೆಡ್ ಉದ್ದೇಶಪೂರ್ವಕವಾಗಿ ನಕಲಿ ದಾಖಲೆ ಸೃಷ್ಟಿಸಿಲ್ಲ ಎಂದು ಪೊಲೀಸರೇ ಬಿ ವರದಿ ಸಲ್ಲಿಸಿದ್ದಾರೆ. ಆದರೂ ದಂಡ ಪಾವತಿಸಲಾಗಿದೆ. ಬಳಿಕ ಅಗ್ನಿ ಶಾಮಕ ಇಲಾಖೆಯಿಂದ ದೃಢೀಕೃತ ನಿರಾಕ್ಷೇಪಣಾ ಪತ್ರಗಳನ್ನು ಪಡೆಯಲಾಗಿದೆ. ಈಗ ಬಿಬಿಎಂಪಿ ಸ್ವಾಧೀನಾನುಭವ ಪತ್ರ ರದ್ದು ಮಾಡಿದ್ದು, ಇದನ್ನು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡುತ್ತೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT