ಫ್ಲೆಕ್ಸ್‌ ಆಯಿತು, ಇನ್ನು ಪೋಸ್ಟರ್‌ಗಳ ತೆರವು

7
ಬಿಬಿಎಂಪಿಯಿಂದ ವಿಶೇಷ ಕಾರ್ಯಾಚರಣೆ

ಫ್ಲೆಕ್ಸ್‌ ಆಯಿತು, ಇನ್ನು ಪೋಸ್ಟರ್‌ಗಳ ತೆರವು

Published:
Updated:
Deccan Herald

ಬೆಂಗಳೂರು: ನಗರದಲ್ಲಿನ ಅನಧಿಕೃತ ಫ್ಲೆಕ್ಸ್‌ ತೆರವುಗೊಳಿಸಲು ಹೈಕೋರ್ಟ್ ಚಾಟಿ ಬೀಸಿದ ಬಳಿಕ ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಸಿದ್ದ ಬಿಬಿಎಂಪಿ ಈ ಬಾರಿ ಪೋಸ್ಟರ್‌ಗಳನ್ನು (ಭಿತ್ತಿಪತ್ರ) ತೆಗೆಸಲು ಹಾಗೂ ಗೋಡೆಬರಹಗಳನ್ನು ಅಳಿಸಿ ಹಾಕಲು ಸಜ್ಜಾಗಿದೆ. ಈ ಸಲುವಾಗಿ ಇದೇ ಶನಿವಾರ ಮತ್ತು ಭಾನುವಾರ ವಿಶೇಷ ಕಾರ್ಯಾಚರಣೆ ನಡೆಸಲಿದೆ. 

ಹೈಕೋರ್ಟ್‌ ಮತ್ತೊಮ್ಮೆ ಗುಟುರು ಹಾಕಿದ ಬಳಿಕವಷ್ಟೇ ಬಿಬಿಎಂಪಿಯ ಈ ಕಾರ್ಯಕ್ಕೆ ಮುಂದಾಗಿದೆ. ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಅವರು ಶುಕ್ರವಾರ ಈ ಬಗ್ಗೆ ಸೂಚನೆ ನೀ‌ಡುತ್ತಿದ್ದಂತೆಯೇ ಪಾಲಿಕೆ ಪರ ವಕೀಲರು ಆಯುಕ್ತ ಮಂಜುನಾಥ  ಪ್ರಸಾದ್‌ ಅವರಿಗೆ ಮಾಹಿತಿ ರವಾನಿಸಿದ್ದರು. ತಕ್ಷಣವೇ ಆಯುಕ್ತರು ಎಲ್ಲ ವಲಯಗಳ ಜಂಟಿ ಆಯುಕ್ತರು, ಮುಖ್ಯ ಎಂಜಿನಿಯರ್‌ಗಳು, ಸೂಪರಿಟೆಂಡಿಂಗ್‌ ಎಂಜಿನಿಯರ್‌ಗಳು, ಕಾರ್ಯನಿರ್ವಾಹಕ ಎಂಜಿನಿಯರ್‌ಗಳು ಹಾಗೂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗಳಿಗೆ ಭಾನುವಾರ ಸಂಜೆ ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೂ ಪೋಸ್ಟರ್‌ ಅಥವಾ ಗೋಡೆಬರಹ ಕಾಣಿಸಕೂಡದು ಎಂದು ಕಟ್ಟುನಿಟ್ಟಿನ ಆದೇಶ ಮಾಡಿದರು.  

ಆಯುಕ್ತರು ಆದೇಶ ಹೊರಬೀಳುತ್ತಿದ್ದಂತೆಯೇ ವಲಯ ಮಟ್ಟದ ಅಧಿಕಾರಿಗಳು ಭಿತ್ತಿಪತ್ರಗಳನ್ನು ತೆಗೆಸುವ ಕಾರ್ಯದಲ್ಲಿ ತೊಡಗಿಸಿಕೊಂಡರು. 

‘ನಗರದಲ್ಲಿರುವ ಫ್ಲೆಕ್ಸ್‌ಗಳನ್ನು ತೆರವುಗೊಳಿಸುವ ಬಗ್ಗೆ ಹೈಕೋರ್ಟ್‌ಗೆ ವರದಿ ನೀಡಿದ್ದೇವೆ. ಅದೇ ರೀತಿ, ನಗರದ ಅಂದಗೆಡಿಸುತ್ತಿರುವ ಗೋಡೆಬರಹಗಳನ್ನು ಹಾಗೂ ಪೋಸ್ಟರ್‌ಗಳನ್ನೂ ತೆರವುಗೊಳಿಸಬೇಕು ಎಂದು ಸೂಚನೆ ನೀಡಿದೆ. ಇದಕ್ಕೂ ಬಿಬಿಎಂಪಿಯ ಸಮಗ್ರ ಆಡಳಿತ ಯಂತ್ರವನ್ನು ಬಳಸಿ ಕಾರ್ಯಾಚರಣೆ ನಡೆಸಲಿದ್ದೇವೆ’ ಎಂದು ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಾರ್ವಜನಿಕ ಸ್ಥಳಗಳಲ್ಲಿರುವ ಎಲ್ಲ ಗೋಡೆ ಬರಹ ಮತ್ತು ಪೋಸ್ಟರ್‌ಗಳು ತೆರವುಗೊಂಡ ಬಗ್ಗೆ ಆಯಾ ವಲಯದ ಜಂಟಿ ಆಯುಕ್ತರು ಹಾಗೂ  ಮುಖ್ಯ ಎಂಜಿನಿಯರ್‌ಗಳು ನನಗೆ ಜಂಟಿ ಪ್ರಮಾಣಪತ್ರವನ್ನು ನೀಡಬೇಕು ಎಂದು ಸೂಚನೆ ನೀಡಿದ್ದೇನೆ. ತೆರವುಗೊಳಿಸಲು ಆಗುವ ವೆಚ್ಚವನ್ನು ಪೋಸ್ಟರ್‌ಗಳನ್ನು ಹಾಕಿಸಿದ ಸಂಘಟನೆಗಳಿಂದ ಅಥವಾ ವ್ಯಕ್ತಿಗಳಿಂದಲೇ ವಸೂಲಿ ಮಾಡುವಂತೆಯೂ ಸೂಚಿಸಿದ್ದೇನೆ’ ಎಂದರು.

ಬರಹ ಇಷ್ಟವಾಯಿತೆ?

 • 16

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !