ಗುರುವಾರ , ನವೆಂಬರ್ 26, 2020
19 °C
ಬಿಬಿಎಂಪಿ ಆಡಳಿತಾಧಿಕಾರಿ ಅಸಮಾಧಾನ

ಬೀದಿ ದೀಪಗಳ ಕಳಪೆ ನಿರ್ವಹಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬಿಬಿಎಂಪಿಯ ಯಾವುದೇ ವಾರ್ಡ್‌ಗಳಲ್ಲೂ ಬೀದಿ ದೀಪಗಳ  ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಆಡಳಿತಾಧಿಕಾರಿ ಗೌರವ ಗುಪ್ತ ಅಸಮಾಧಾನ ವ್ಯಕ್ತಪಡಿಸಿದರು.

ಬೀದಿ ದೀಪ ನಿರ್ವಹಣೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳ ಕುರಿತು  ಅವರು ಅಧಿಕಾರಿಗಳ ಜೊತೆ ಮಂಗಳವಾರ ಪರಿಶೀಲನಾ ಸಭೆ ನಡೆಸಿದರು.

‘ವಾರ್ಡ್‌ ಮಟ್ಟದಲ್ಲಿ ಮೂರು ನಾಲ್ಕು ವರ್ಷಗಳಿಂದ ಒಬ್ಬರೇ ಗುತ್ತಿಗೆದಾರರನ್ನು ಮುಂದುವರೆಸಿಕೊಂಡು ಬಂದಿರುವುದರಿಂದ ಬೀದಿ ದೀಪ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ. ವಲಯ ಮಟ್ಟದ ಅಧಿಕಾರಿಗಳು ಈ ಬಗ್ಗೆ ಸರಿಯಾಗಿ ಮೇಲ್ವಿಚಾರಣೆ ನಡೆಸದೆಯೇ ಪ್ರತಿ ತಿಂಗಳು ಬಿಲ್ ಪಾವತಿಸುತ್ತಿದ್ದಾರೆ. ಬೀದಿ ದೀಪ ನಿರ್ವಹಣೆ ಕಳಪೆಯಾಗಿರುವ ಕಡೆ ಗುತ್ತಿಗೆದಾರರಿಗೆ ದಂಡ ವಿಧಿಸಬೇಕು’ ಎಂದು ಸೂಚನೆ ನೀಡಿದರು.

ವಿದ್ಯುತ್ ಉಳಿತಾಯಕ್ಕಾಗಿ ‘ಸ್ಮಾರ್ಟ್‌ ಲೈಟಿಂಗ್‌’ ಯೋಜನೆಯಡಿ ಕೈಗೊಂಡಿರುವ ಕ್ರಮಗಳ ಕುರಿತು ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಮಾಹಿತಿ ನೀಡಿದರು.

‘ಈ ಯೋಜನೆಯಡಿ 4.85 ಲಕ್ಷಗಳ ಬೀದಿ ದೀಪಗಳನ್ನು ಬದಲಾಯಿಸಲು ಉದ್ದೇಶಿಸಲಾಗಿದೆ. 30 ತಿಂಗಳಲ್ಲಿ 5 ಹಂತಗಳಲ್ಲಿ ಈ ಯೋಜನೆ ಪೂರ್ಣಗೊಳ್ಳಲಿದೆ. ಮೊದಲ ಹಂತದಲ್ಲಿ 1 ಲಕ್ಷ ಬೀದಿ ದೀಪಗಳನ್ನು ಅಳವಡಿಸಲು ಸರ್ವೇ ನಡೆಯುತ್ತಿದ್ದು, 2021ರ ಏಪ್ರಿಲ್ ಒಳಗೆ  ಪೂರ್ಣಗೊಳ್ಳಲಿದೆ’ ಎಂದು ಆಯುಕ್ತರು ತಿಳಿಸಿದರು.

ವಿದ್ಯುತ್ ವಿಭಾಗದಲ್ಲಿ ಸಿಬ್ಬಂದಿ ಕೊರತೆ ಇದೆ. ವಾರ್ಡ್‌ಗಳಲ್ಲಿ ಬೀದಿದೀಪಗಳ ಮೇಲ್ವಿಚಾರಣೆಗೆ ವಾರ್ಡ್ ಮಟ್ಟದ ಸಹಾಯಕ ಎಂಜಿನಿಯರ್‌ಗಳ ತಂಡವನ್ನು ರಚಿಸುವುದಾಗಿ ಆಯುಕ್ತರು ತಿಳಿಸಿದರು.

‘ಮುಖ್ಯ ರಸ್ತೆಗಳಲ್ಲೂ ಬೀದಿ ದೀಪಗಳ ನಿರ್ವಹಣೆ ಕಳಪೆಯಾಗಿದೆ. ಟೆಂಡರ್ ಶ್ಯೂರ್ ಮತ್ತು ವೈಟ್ ಟಾಪಿಂಗ್ ಯೋಜನೆಯಡಿ ಅಭಿವೃದ್ಧಿಪಡಿಸುತ್ತಿರುವ ರಸ್ತೆಗಳಲ್ಲೂ ಬೀದಿ ದೀಪಗಳನ್ನು ಅಳವಡಿಸಲಾಗುತ್ತಿದೆ. ಈ ಕಾಮಗಾರಿಯಲ್ಲಿ ದೋಷ ಸರಿಪಡಿಸುವ ಅವಧಿ ಮುಕ್ತಾಯಗೊಂಡ ಬಳಿಕ ವಿದ್ಯುತ್ ವಿಭಾಗವೇ ಅವುಗಳಲ್ಲಿನ ಬೀದಿ ದೀಪಗಳ ನಿರ್ವಹಣೆ ಮಾಡಬೇಕು’ ಎಂದು ಆಡಳಿತಾಧಿಕಾರಿ ಸೂಚಿಸಿದರು.

ಸ್ಮಾರ್ಟ್‌ ಲೈಟಿಂಗ್‌ ಯೋಜನೆಯ ಜಾಗತಿಕ ಟೆಂಡರ್ ಅನುಷ್ಠಾನದವರೆಗೆ ಬೀದಿದೀಪಗಳ ನಿರ್ವಹಣೆಗೆ ಕ್ರಮವಹಿಸುವಂತೆ ಸೂಚನೆ ನೀಡಿದರು.

ರಸ್ತೆ ಗುಂಡಿ, ಕಸ ತೆಗೆಯದಿರುವುದು, ಬೀದಿ ದೀಪ ಉರಿಯದಿರುವುದು ಮುಂತಾದುವುಗಳ ಬಗ್ಗೆ ಮಾಹಿತಿ ಪಡೆದು ತಕ್ಷಣವೇ ಸಮಸ್ಯೆ ಬಗೆಹರಿಸಲು ಬೂತ್ ಹಂತದಲ್ಲಿ ಸ್ವಯಂಸೇವಕರನ್ನು ನೇಮಿಸುವಂತೆ ಸಲಹೆ ನೀಡಿದರು.

‘ಗ್ರಾಮ ಪಂಚಾಯಿತಿಗಳಿಗೆ ಬಿಬಿಎಂಪಿ ಬೀದಿ ದೀಪ’

‘ಸ್ಮಾರ್ಟ್‌ ಲೈಟಿಂಗ್‌ ಯೋಜನೆಯ ಹೊಸ ಜಾಗತಿಕ ಟೆಂಡರ್ ಪ್ರಕಾರ ಗುತ್ತಿಗೆದಾರರೇ ಹಂತ-ಹಂತವಾಗಿ ಬೀದಿದೀಪಗಳನ್ನು ಅಳವಡಿಸಲಿದ್ದಾರೆ. ಹಾಗಾಗಿ ಪಾಲಿಕೆ ಈಗಾಗಲೇ ಅಳವಡಿಸಿರುವ ಬೀದಿ ದೀಪಗಳನ್ನು ನಗರದ ಹೊರ ಪ್ರದೇಶದ ಗ್ರಾಮ ಪಂಚಾಯಿತಿಗಳಲ್ಲಿ ಬಳಸಲು ಕ್ರಮವಹಿಸುತ್ತೇವೆ’ ಎಂದು ಬಿಬಿಎಂಪಿ ಆಯುಕ್ತರು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು