ಸೋಮವಾರ, 2 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಇಂದಿನಿಂದ ಬೀದಿನಾಯಿಗಳ ಸಮೀಕ್ಷೆ

14 ದಿನ, 100 ಸಿಬ್ಬಂದಿಯಿಂದ ಕಾರ್ಯಾಚರಣೆ, ಆ್ಯಪ್‌ನಲ್ಲಿ ಮಾಹಿತಿ ದಾಖಲು
Published 10 ಜುಲೈ 2023, 15:57 IST
Last Updated 10 ಜುಲೈ 2023, 15:57 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಪಶುಪಾಲನಾ ವಿಭಾಗದಿಂದ ಜುಲೈ 11ರಿಂದ ಬೀದಿ ನಾಯಿಗಳ ಸಮೀಕ್ಷೆ ಆರಂಭವಾಗುತ್ತಿದೆ.

2019ನೇ ಸಾಲಿನಲ್ಲಿ ಬೀದಿ ನಾಯಿಗಳ ಸಮೀಕ್ಷೆ ಮಾಡಲಾಗಿತ್ತು. ಆಗ, 3.10 ಲಕ್ಷ ಬೀದಿ ನಾಯಿಗಳಿದ್ದವು. ಎಂಟೂ ವಲಯಗಳಲ್ಲಿ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆ ಮತ್ತು ಆಂಟಿರೇಬಿಸ್‌ ಲಸಿಕಾ ಕಾರ್ಯಕ್ರಮವನ್ನು ನಿರಂತರವಾಗಿ ನಡೆಯುತ್ತಿದ್ದು, ಈ ಕಾರ್ಯಕ್ರಮದ ಯಶಸ್ವಿ ಅನುಷ್ಠಾನದ ಬಗ್ಗೆ ತಿಳಿಯಲು ಸಮೀಕ್ಷೆಯ ಕಾರ್ಯ ಪ್ರಾರಂಭಿಸಲಾಗುತ್ತಿದೆ ಎಂದು ಪಶುಪಾಲನಾ ವಿಭಾಗ ಜಂಟಿ ನಿರ್ದೇಶಕ ಡಾ. ರವಿಕುಮಾರ್ ತಿಳಿಸಿದ್ದಾರೆ.

ಡಾ. ಕೆ.ಪಿ.ಸುರೇಶ್, ಪ್ರಧಾನ ವಿಜ್ಞಾನಿ, ಐಸಿಎಆರ್‌–ನಿವೇದಿ, ಡಾ. ಹೇಮಾದ್ರಿ ದಿವಾಕರ್, ಪ್ರಧಾನ ವಿಜ್ಞಾನಿ, ಐಸಿಎಆರ್‌–ನಿವೇದಿ, ಡಾ. ಶ್ರೀಕೃಷ್ಣ ಇಸ್ಲೂರು, ಪ್ರಾಧ್ಯಾಪಕ, ಸೂಕ್ಷ್ಮಾಣುಜೀವಿ ಶಾಸ್ತ್ರ ವಿಭಾಗ, ಪಶುವೈದ್ಯ ಕಾಲೇಜು, ಡಾ. ಬಾಲಾಜಿ ಚಂದ್ರಶೇಖರ್, ವ್ಯವಸ್ಥಾಪಕ– ಕಾರ್ಯಾಚರಣೆ, ಡಬ್ಲ್ಯೂವಿಎಸ್‌ ಸಂಸ್ಥೆ ಮತ್ತು  ಪಶುಪಾಲನಾ ಹಾಗೂ ಪಶುವೈದ್ಯ ಸೇವಾ ಇಲಾಖೆ, ಬೆಂಗಳೂರು ನಗರ ಜಿಲ್ಲೆಯ ಅರೆತಾಂತ್ರಿಕ ಸಿಬ್ಬಂದಿಯ ಸಹಯೋಗದೊಂದಿಗೆ ಸಮೀಕ್ಷೆ ನಡೆಯಲಿದೆ.

840 ಚದರ ಕಿ.ಮೀ ವ್ಯಾಪ್ತಿಯುಳ್ಳ ಬಿಬಿಎಂಪಿಯನ್ನು ವಸತಿ ಪ್ರದೇಶ, ಕೊಳಚೆ ಪ್ರದೇಶ, ವಾಣಿಜ್ಯ ಪ್ರದೇಶ ಹಾಗೂ ಕೆರೆಗಳ ಪ್ರದೇಶವಾಗಿ 0.5 ಚದರ ಕಿ.ಮೀ ವ್ಯಾಪ್ತಿಯ 6,850 ಮೈಕ್ರೋ ಜೋನ್‌ಗಳನ್ನಾಗಿ ವಿಂಗಡಿಸಲಾಗಿದೆ. ಅದರಲ್ಲಿ ಶೇ 20ರಷ್ಟು ರ‍್ಯಾಂಡಂ ಸ್ಯಾಂಪಲ್‌ಗಳನ್ನು , 1,360 ಮೈಕ್ರೋ ಜೋನ್‌ಗಳಲ್ಲಿ ಸಮೀಕ್ಷೆ ಮಾಡಲು ಆಯ್ಕೆ ಮಾಡಲಾಗಿದೆ. ಅದರಂತೆ, 70 ಅರೆತಾಂತ್ರಿಕ ಸಿಬ್ಬಂದಿ ಹಾಗೂ ಪಾಲಿಕೆಯ ಪಶುಪಾಲನಾ ವಿಭಾಗದ 30 ಸಿಬ್ಬಂದಿ ಸೇರಿದಂತೆ 100 ಮಂದಿ ಮೂಲಕ ಸಮೀಕ್ಷೆ ಮಾಡಲಾಗುತ್ತಿದೆ. ವಾರ್ಡ್‌ವಾರು ಸಮೀಕ್ಷೆಗೆ 50 ತಂಡಗಳನ್ನು ರಚಿಸಲಾಗಿದ್ದು, 15 ಮೇಲ್ವಿಚಾರಕರನ್ನು ನೇಮಿಸಲಾಗಿದೆ ಎಂದು ರವಿಕುಮಾರ್‌ ಮಾಹಿತಿ ನೀಡಿದರು.

ಬೀದಿ ನಾಯಿಗಳ ಸಮೀಕ್ಷೆ 14 ದಿನ ನಡೆಯಲಿದ್ದು, ಪ್ರತಿ ದಿನ ಬೆಳಿಗ್ಗೆ 6ರಿಂದ 8.30ರವರೆಗೆ ನಡೆಯಲಿದೆ. ಮೈಕ್ರೋಜೋನ್‌ನಲ್ಲಿ ಕಂಡು ಬರುವ ಬೀದಿನಾಯಿಗಳ ಭಾವಚಿತ್ರದೊಂದಿಗೆ ಪ್ರತಿನಾಯಿಯ ಮಾಹಿತಿಯನ್ನು ಡಬ್ಲ್ಯೂವಿಎಸ್‌ ಡೇಟಾ ಕಲೆಕ್ಷನ್ ಆ್ಯಪ್‌ನಲ್ಲಿ ನಮೂದಿಸಲಾಗುತ್ತದೆ. ಸಮೀಕ್ಷೆಯ ನಂತರ ಡಾ. ಕೆ.ಪಿ.ಸುರೇಶ್‌ ಮಾಹಿತಿಯನ್ನು ಕ್ರೋಡೀಕರಿಸಿ ಪಾಲಿಕೆಗೆ ವರದಿ ನೀಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT