ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳಿಗೆ ಸ್ವೆಟರ್‌ ನೀಡದೇ ವಂಚನೆ: ದಲಿತ ಸಂಘರ್ಷ ಸಮಿತಿ ಆರೋಪ

ಅಕ್ರಮ ನಡೆದಿಲ್ಲ– ಸರ್ಕಾರಿ ಸಂಸ್ಥೆಯಿಂದಲೇ ಸ್ವೆಟರ್‌ ಖರೀದಿ: ಬಿಬಿಎಂಪಿ ಶಿಕ್ಷಣ ವಿಭಾಗ ಸ್ಪಷ್ಟನೆ
Last Updated 25 ಆಗಸ್ಟ್ 2021, 5:05 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಸ್ವೆಟರ್ ನೀಡದೇ ವಂಚನೆ ಮಾಡಲಾಗಿದೆ ಎಂದು ಆರೋಪಿಸಿರುವ ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದೆ.

ಸ್ವೆಟರ್‌ ಖರೀದಿಯನ್ನು ತನಿಖೆಗೆ ಒಪ್ಪಿಸುವಂತೆ ಗಮನ ಸೆಳೆಯಲು ಸಂಘಟನೆಯು ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ಮಂಗಳವಾರ ತಮಟೆ ಚಳುವಳಿ ನಡೆಸಿತು. ಪ್ರತಿಭಟನಕಾರರು ಸ್ವೆಟರ್ ಮಾರಾಟ ಮಾಡಿದರು. ಅದರಿಂದ ಬಂದ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಮರ್ಪಣೆ ಮಾಡುವುದಾಗಿ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಡಾ.ಸಿ.ಎಸ್‌.ರಘು ತಿಳಿಸಿದರು.

‘ಬಿಬಿಎಂಪಿ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳಿಗೆ ಸ್ವೆಟರ್‌ಗಳನ್ನು ಕರ್ನಾಟಕ ಕೈಮಗ್ಗ ನಿಗಮದಿಂದ (ಕೆಎಚ್‌ಡಿಸಿ) ಖರೀದಿಸಲಾಗಿದೆ. ಕೆಟಿಪಿಪಿ ಕಾಯ್ದೆಯ 4ಜಿ ಸೆಕ್ಷನ್‌ ಅಡಿ ವಿನಾಯಿತಿ ಪಡೆದು ಟೆಂಡರ್ ಕರೆಯದೆಯೇ ಸ್ವೆಟರ್ ಖರೀದಿಸುವ ಮೂಲಕ ಅಕ್ರಮ ನಡೆಸಲಾಗಿದೆ.ಕೊರೋನಾ ಕಾರಣದಿಂದ ಬಿಬಿಎಂಪಿ ಶಾಲಾ, ಕಾಲೇಜುಗಳಲ್ಲಿ ತರಗತಿಗಳು ನಡೆದಿರಲಿಲ್ಲ. ಆದರೂ ಸ್ವೆಟರ್‌ಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗಿದೆ ಎಂದು ₹ 1.76 ಕೋಟಿ ಹಣ ಪಾವತಿ ಮಾಡಲಾಗಿದೆ’ ಎಂದು ರಘು ಆರೋಪಿಸಿದರು.

ಅಕ್ರಮ ನಡೆದಿಲ್ಲ: ಸ್ಪಷ್ಟನೆ

‘2020–21ನೇ ಸಾಲಿನಲ್ಲಿ ಬಿಬಿಎಂಪಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಗುಣಮಟ್ಟದ ಸ್ವೆಟರ್‌ಗಳನ್ನು ಸರ್ಕಾರದ ಅಧೀನದ ಕೆಎಚ್‌ಡಿಸಿಯಿಂದಲೇ ಖರೀದಿಸಿ ವಿತರಿಸುವ ಕುರಿತು ಬಿಬಿಎಂಪಿಯ ಶಿಕ್ಷಣ ಸ್ಥಾಯಿ ಸಮಿತಿಯೇ 2020ರ ಮಾ.10ರಂದು ನಿರ್ಣಯ ಕೈಗೊಂಡಿತ್ತು. ಸರ್ಕಾರಿ ಅಧೀನದ ಸಂಸ್ಥೆಯಿಂದಲೇ ಸ್ವೆಟರ್‌ ಖರೀದಿಸಲಾಗಿದ್ದು, ಇದರಲ್ಲಿ ಯಾವುದೇ ಅಕ್ರಮ ನಡೆದಿಲ್ಲ’ ಎಂದು ಬಿಬಿಎಂಪಿ ಶಿಕ್ಷಣ ವಿಭಾಗವು ಮುಖ್ಯ ಆಯುಕ್ತರಿಗೆ ನೀಡಿದ ವರದಿಯಲ್ಲಿ ಸ್ಪಷ್ಟಪಡಿಸಿದೆ.

‘2020ರ ಡಿ.23ರಂದು ಶಿಕ್ಷಣ ಇಲಾಖೆ ಹೊರಡಿಸಿದ ಸುತ್ತೋಲೆಯಂತೆ 6ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ತರಗತಿಗಳು ಹಾಗೂ ಎಸ್ಸೆಸ್ಸೆಲ್ಸಿ ಮತ್ತು ಪಿ.ಯು ಕಾಲೇಜು ವಿದ್ಯಾರ್ಥಿಗಳಿಗೆ 2021ರ ಜನವರಿಯಿಂದ ಏಪ್ರಿಲ್‌ವರೆಗೆ ತರಗತಿಗಳು ನಡೆದಿವೆ. ಆಗ ತರಗತಿಗೆ ಹಾಜರಾದ ವಿದ್ಯಾರ್ಥಿಗಳಿಗೆ ಮಾತ್ರ ಸ್ವೆಟರ್‌ಗಳನ್ನು ವಿತರಿಸಲಾಗಿದೆ. ನಂತರ ಮತ್ತೆ ಲಾಕ್‌ಡೌನ್‌ ಜಾರಿಯಾಗಿತ್ತು. ತರಗತಿಗೆ ಗೈರಾದ ವಿದ್ಯಾರ್ಥಿಗಳಿಗೆ ಲಾಕ್‌ಡೌನ್‌ ಮುಗಿದ ನಂತರ ಸ್ವೆಟರ್‌ ವಿತರಿಸಲಾಗುತ್ತದೆ ಎಂದು ಶಾಲಾ ಕಾಲೇಜುಗಳ ಮುಖ್ಯಸ್ಥರು ತಿಳಿಸಿದ್ದರು’ ಎಂದು ಶಿಕ್ಷಣ ವಿಭಾಗದ ಸಹಾಯಕ ಆಯುಕ್ತರು ವರದಿಯಲ್ಲಿ ತಿಳಿಸಿದ್ದಾರೆ.

‘ತೋಳು ಇರದ (ಸ್ಲೀವ್‌ ಲೆಸ್‌) ಒಂದು ಹಾಗೂ ಪೂರ್ತಿ ತೋಳು ಇರುವ (ವಿತ್‌ ಸ್ಲೀವ್‌) ಒಂದು ಸ್ವೇಟರ್‌ನಂತೆಪ್ರತಿ ವಿದ್ಯಾರ್ಥಿಗೆ ಎರಡು ಸ್ವೆಟರ್‌ ಖರೀದಿಸಲಾಗಿದೆ. ಒಟ್ಟು 16,167 ಸೆಟ್‌ ಸ್ವೆಟರ್‌ಗಳನ್ನು ಶಾಲಾ– ಕಾಲೇಜುಗಳಿಗೆ ವಿದ್ಯಾರ್ಥಿಗಳ ದಾಖಲಾತಿ ಆಧಾರದಲ್ಲಿ ವಿತರಿಸಲಾಗಿತ್ತು. ಅವುಗಳಲ್ಲಿ ಎಷ್ಟು ಸ್ವೆಟರ್‌ಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಗಿದೆ. ವಿತರಣೆ ಎಷ್ಟು ಬಾಕಿ ಇದೆ ಎಂಬ ವಿವರ ಶಾಲಾ–ಕಾಲೇಜುಗಳ ಮುಖ್ಯಸ್ಥರಿಂದ ಇನ್ನಷ್ಟೇ ಬರಬೇಕಿದೆ’ ಎಂದು ವಿವರಿಸಿದ್ದಾರೆ.

‘ಸ್ವೆಟರ್‌ ಖರೀದಿಸುವ ಪ್ರಸ್ತಾವಕ್ಕೆ ಮುಖ್ಯಆಯುಕ್ತರು ಅನುಮೋದನೆ ನೀಡಿದ್ದರು. ಕೆಎಚ್‌ಡಿಸಿಯು ತೋಳು ಇರುವ ಹಾಗೂ ತೋಳುಗಳಿರದ ಎರಡು ಸ್ವೆಟರ್‌ಗಳಿಗೆ ₹ 1090ರಿಂದ ₹ 1280ರವರೆಗೆ ದರ ನಿಗದಿಪಡಿಸಿತ್ತು. ಸ್ವೆಟರ್‌ ಪೂರೈಸಿದ ಕೆಎಚ್‌ಡಿಸಿಗೆ ₹ 1,68,66,741 ಪಾವತಿಸಲಾಗಿದೆ. ಪೂರೈಕೆಯಾದ ಸ್ವೆಟರ್‌ಗಳ ಗುಣಮಟ್ಟವನ್ನು ಕೇಂದ್ರ ಸರ್ಕಾರದ ಜವಳಿ ಸಚಿವಾಲಯದ ಅಧೀನದ ‘ರೀಜನಲ್‌ ಲ್ಯಾಬೋರೇಟರಿ ಟೆಕ್ಸ್‌ಟೈಲ್ಸ್‌ ಕಮಿಟಿ’ಯ ಜವಳಿ ಪರೀಕ್ಷೆ ಸೇವೆಯ ಪ್ರಯೋಗಾಲಯದಿಂದ ಪರಿಶೀಲನೆಗೆ ಒಳಪಡಿಸಲಾಗಿದೆ. ಈ ಕಮಿಟಿಯು ಸ್ವೆಟರ್‌ಗಳ ಬಗ್ಗೆ ತೃಪ್ತಿದಾಯಕ ವರದಿ ನೀಡಿದೆ’ ಎಂದು ಅವರು ವರದಿಯಲ್ಲಿ ತಿಳಿಸಿದ್ದಾರೆ.

ಬಿಬಿಎಂಪಿ ಶಾಲಾ ಕಾಲೇಜು ವಿದ್ಯಾರ್ಥಿಗಳ ವಿವರ (2020–21ನೇ ಸಾಲಿನಲ್ಲಿ)

ಶಿಕ್ಷಣ ಸಂಸ್ಥೆ; ಸಂಖ್ಯೆ; ವಿದ್ಯಾರ್ಥಿಗಳ ಸಂಖ್ಯೆ

ಪ್ರಾಥಮಿಕ ಶಾಲೆ; 16; 2,146

ಪ್ರೌಢ ಶಾಲೆ; 33; 5,807

ಪದವಿ ಪೂರ್ವ; 15; 4,712

ಪದವಿ, ಸ್ನಾತಕೋತ್ತರ ಪದವಿ; 06; 1,232

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT