ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ ಅಸಮಂಜಸ ತೆರಿಗೆ ನೀತಿ: ಪ್ರತಿಭಟನೆ ‍

Last Updated 4 ಸೆಪ್ಟೆಂಬರ್ 2021, 21:07 IST
ಅಕ್ಷರ ಗಾತ್ರ

ಬೆಂಗಳೂರು:ಆಸ್ತಿ ತೆರಿಗೆ ಪಾವತಿ ವಿಳಂಬಕ್ಕೆ ಭಾರಿ ದಂಡ ವಿಧಿಸುತ್ತಿರುವ ಮತ್ತು ಲಕ್ಷಾಂತರ ಜನರಿಗೆ ನೋಟಿಸ್ ನೀಡುತ್ತಿರುವ ಬಿಬಿಎಂಪಿ ಕ್ರಮ ಖಂಡಿಸಿ ಬೆಂಗಳೂರು ನವನಿರ್ಮಾಣ ಪಾರ್ಟಿ (ಬಿಎನ್‌ಪಿ) ಕಾರ್ಯಕರ್ತರು ಬಿಬಿಎಂಪಿ ಕೇಂದ್ರ ಕಚೇರಿ ಎದುರು ಶನಿವಾರ ಪ್ರತಿಭಟನೆ ಮಾಡಿದರು.

ಸುಮಾರು 50ಕ್ಕೂ ಹೆಚ್ಚು ಜನ ನೇರವಾಗಿ, 500ಕ್ಕೂ ಹೆಚ್ಚು ಮಂದಿ ಆನ್‌ಲೈನ್‌ ಮೂಲಕ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

‘ಅಸಮಂಜಸ ತೆರಿಗೆ ನೀತಿಯನ್ನು ಸರಿಪಡಿಸಬೇಕು. ಭಾರಿ ದಂಡ ವಿಧಿಸಿ ನೀಡಿರುವ ನೋಟಿಸ್‌ಗಳನ್ನು ಹಿಂಪಡೆಯಲು ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ಪಕ್ಷದ ಸಂಸ್ಥಾಪಕ ಶ್ರೀಕಾಂತ್ ನರಸಿಂಹನ್‌, ‘ಸಮಸ್ಯೆಯ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಮನವಿ ಮಾಡಲಾಗಿದೆ. ಆದರೆ, ನಮಗೆ ಭರವಸೆ ಸಿಕ್ಕಿದೆಯೇ ವಿನಾ ಪರಿಹಾರ ದೊರೆತಿಲ್ಲ. ಬಿಬಿಎಂಪಿ ಅಧಿಕಾರಿಗಳು ಸಾರ್ವಜನಿಕರಿಗೆ ಇನ್ನೂ ನೋಟಿಸ್‌ ನೀಡುತ್ತಲೇ ಇದ್ದಾರೆ’ ಎಂದು ದೂರಿದರು.

‘ನೋಟಿಸ್ ಬರುತ್ತಲೇ ಇದ್ದರೆ ಸಾರ್ವಜನಿಕರಲ್ಲಿ ಉದ್ವೇಗ ಹೆಚ್ಚುತ್ತಿದೆ. ವಿನಾಕಾರಣ ನಾಗರಿಕರಿಗೆ ತೊಂದರೆ ನೀಡಲಾಗುತ್ತಿದೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ಕಳೆದ ಐದು ವರ್ಷಗಳಲ್ಲಿ ಆಸ್ತಿ ತೆರಿಗೆ ಪಾವತಿಸದ ಕಟ್ಟಡಗಳ ಮಾಲೀಕರಿಗೆ ಬಿಬಿಎಂಪಿ ನೋಟಿಸ್‌ ನೀಡುತ್ತಿದೆ. ಕೆಲವರಿಗೆ ಲಕ್ಷ ರೂಪಾಯಿಯವರೆಗೆ ದಂಡ ನೀಡುವಂತೆ ಸೂಚಿಸಿ ನೋಟಿಸ್ ನೀಡಲಾಗಿದೆ. 2016ರಲ್ಲಿ ವಲಯಗಳ ಪುನರ್‌ ವಿಂಗಡಣೆಯ ಆಧಾರದ ಮೇಲೆ ಬಿಬಿಎಂಪಿಯು ಈ ನೋಟಿಸ್‌ಗಳನ್ನು ನೀಡುತ್ತಿದ್ದು, ವಲಯಗಳ ಪುನರ್‌ವಿಂಗಡಣೆ ಬಗ್ಗೆ ಎಷ್ಟೋ ಜನರಿಗೆ ಮಾಹಿತಿ ಇಲ್ಲ. ತಮ್ಮ ಕಟ್ಟಡ ಯಾವ ವಲಯದಲ್ಲಿ ಬರುತ್ತದೆ ಎಂಬ ಬಗ್ಗೆಯೂ ಗೊತ್ತಿಲ್ಲ. ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡದೆ ನೋಟಿಸ್ ನೀಡಲಾಗುತ್ತಿದೆ’ ಎಂದು ದೂರಿದರು.

ಈ ಕುರಿತು ಸರ್ಕಾರಕ್ಕೆ ವಿವರವಾದ ವರದಿ ನೀಡಿರುವ ಪಕ್ಷವು, ಅಭಿಯಾನ ಕೈಗೊಂಡು 5 ಸಾವಿರ ಜನರ ಸಹಿಯನ್ನೂ ಸಂಗ್ರಹಿಸಿ ಮನವಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT