ಮಂಗಳವಾರ, ಮಾರ್ಚ್ 28, 2023
23 °C
₹76 ಕೋಟಿ ಕಾಮಗಾರಿಗೆ ನಕಲಿ ಕಾರ್ಯಾನುಭವ ಪತ್ರ ನೀಡಿದ್ದ ಗುತ್ತಿಗೆದಾರ

PV Web Exclusive | ಟೆಂಡರ್‌ ಅಕ್ರಮ: ಕ್ರಮಕ್ಕೆ ಬಿಬಿಎಂಪಿ ಹಿಂದೇಟು

ಮಂಜುನಾಥ ಹೆಬ್ಬಾರ್‌ Updated:

ಅಕ್ಷರ ಗಾತ್ರ : | |

ಬಿಬಿಎಂಪಿ

ಬೆಂಗಳೂರು: ಬಿಬಿಎಂಪಿಯ ₹76 ಕೋಟಿ ಕಾಮಗಾರಿಗೆ ಗುತ್ತಿಗೆದಾರರೊಬ್ಬರು ನಕಲಿ ಕಾರ್ಯಾನುಭವ ಪತ್ರ ನೀಡಿದ ಪ್ರಕರಣದ ತನಿಖೆ ನಡೆಸುವಂತೆ ನಗರಾಭಿವೃದ್ಧಿ ಇಲಾಖೆ ನಿರ್ದೇಶನ ನೀಡಿ 40 ದಿನಗಳು ಕಳೆದರೂ ಪಾಲಿಕೆ ಆಯುಕ್ತರು ಯಾವುದೇ ಕ್ರಮ ಕೈಗೊಂಡಿಲ್ಲ. ಪಾಲಿಕೆ ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿದು ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಟೀಕೆ ವ್ಯಕ್ತವಾಗಿದೆ.

ಗೋವಿಂದರಾಜನಗರ ವಿಭಾಗದಲ್ಲಿ ಮೂರು ಪ್ಯಾಕೇಜ್‌ಗಳಲ್ಲಿ ರಾಜಕಾಲುವೆಗಳು, ಚರಂಡಿಗಳು ಹಾಗೂ ಪಾದಚಾರಿ ಮಾರ್ಗಗಳ ಸಮಗ್ರ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲು ಬಿಬಿಎಂಪಿ ತೀರ್ಮಾನಿಸಿದೆ. ‘ಈ ಪ್ಯಾಕೇಜ್‌ಗಳಿಗೆ ಗುತ್ತಿಗೆದಾರರನ್ನು ಅಂತಿಮಗೊಳಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಗುತ್ತಿಗೆದಾರ ಅಜಯ್‌ ಆರ್‌.ಎಂಬುವರು ’ಎಲ್‌–1 ಆಗಿದ್ದಾರೆ. ಅವರು ಯಶವಂತಪುರ ಕ್ಷೇತ್ರದಲ್ಲಿ ಕಾಮಗಾರಿ ನಡೆಸಿದ ಅನುಭವ ಇದೆ ಎಂದು ಕಾರ್ಯಾನುಭವ ಪತ್ರ ನೀಡಿದ್ದಾರೆ. ಆದರೆ, ಈ ಪತ್ರವೇ ನಕಲಿ. ಹೀಗಾಗಿ, ಈ ಟೆಂಡರ್‌ ಪ್ರಕ್ರಿಯೆಯನ್ನು ರದ್ದುಪಡಿಸಬೇಕು. ಅಜಯ್‌ ಅವರನ್ನು ಕಪ್ಪುಪಟ್ಟಿಗೆ ಸೇರಿಸಬೇಕು’ ಎಂದು ರಾಜೇಂದ್ರ ಗುಂಡಪ್ಪ ಎಂಬುವರು ಇ–ಮೇಲ್‌ ಮೂಲಕ ರಾಜ್ಯ ಸರ್ಕಾರಕ್ಕೆ ಜುಲೈ 23ರಂದು ದೂರು ನೀಡಿದ್ದರು.

ಈ ಪ್ರಸ್ತಾವನೆಗಳನ್ನು ಹಾಗೂ ಅಜಯ್‌ ನೀಡಿರುವ ನಕಲಿ ದಾಖಲೆಗಳನ್ನು ಪರಿಶೀಲಿಸಿ ವರದಿ ಸಲ್ಲಿಸಬೇಕು ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರಿಗೆ ನಗರಾಭಿವೃದ್ಧಿ ಇಲಾಖೆ ಜುಲೈ 24ರಂದು ಸೂಚನೆ ನೀಡಿತ್ತು. ಅದರೆ, ಪಾಲಿಕೆ ಆಯುಕ್ತರು ಇಲ್ಲಿಯವರೆಗೆ ನಗರಾಭಿವೃದ್ಧಿ ಇಲಾಖೆಗೆ ವರದಿ ಸಲ್ಲಿಸಿಲ್ಲ. ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿರುವ ಪ್ರಕ್ರಿಯೆಯನ್ನೂ ನಡೆಸಿಲ್ಲ.

’ಹೊಸದಾಗಿ ಟೆಂಡರ್‌ ಕರೆಯಬೇಕಿತ್ತು ಹಾಗೂ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕಿತ್ತು. ಆದರೆ, ಅಜಯ್‌ ಅವರಿಗೆ ಗುತ್ತಿಗೆ ನೀಡಬೇಕು ಎಂದು ನಗರದ ಸಚಿವರೊಬ್ಬರು ಒತ್ತಡ ಹೇರುತ್ತಿದ್ದಾರೆ. ಈ ಕಾರಣಕ್ಕೆ ಪಾಲಿಕೆ ಆಯುಕ್ತರು ಯಾವುದೇ ಕ್ರಮ ಕೈಗೊಂಡಿಲ್ಲ‘ ಎಂದು ಬಿಬಿಎಂಪಿ ಮೂಲಗಳು ಹೇಳಿವೆ.

’ಇತ್ತೀಚಿನ ದಿನಗಳಲ್ಲಿ ಬಿಬಿಎಂಪಿಯಲ್ಲಿ ಅಕ್ರಮ ಟೆಂಡರ್ ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿವೆ. ಇದರ ಬಗ್ಗೆ ಮೇಯರ್ ಅವರೇ ನಗರಾಭಿವೃದ್ಧಿ ಇಲಾಖೆಗೆ ದೂರು ನೀಡಿದ್ದಾರೆ. ಆದರೂ, ಯಾವುದೇ ಕ್ರಮ ಆಗಿಲ್ಲ. ಇದರ ಹಿಂದಿರುವ ಕಾಣದ ಕೈಗಳು ಯಾವುವು‘ ಎಂದು ಆಮ್‌ ಆದ್ಮಿ ಪಕ್ಷದ ಮುಖಂಡರು ಪ್ರಶ್ನೆ ಮಾಡಿದ್ದಾರೆ. ಈ ಟೆಂಡರ್‌ ಅಕ್ರಮದ ಬಗ್ಗೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಎಎಪಿ ಮುಖಂಡರು ದೂರು ಸಲ್ಲಿಸಿದ್ದಾರೆ.

2017ರ ಆಗಸ್ಟ್‌ನಲ್ಲಿ ಸುರಿದ ಮಳೆಯಿಂದಾಗಿ ನಗರದಲ್ಲಿ ವ್ಯಾಪಕ ಹಾನಿಯಾಗಿ ರಾಜಕಾಲುವೆಗಳು ಉಕ್ಕಿ ಹರಿದಿದ್ದವು. ಆ ಬಳಿಕ ರಾಜ್ಯ ಸರ್ಕಾರವು ರಾಜಕಾಲುವೆಗಳ ಅಭಿವೃದ್ಧಿಗೆ ₹117 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಿತ್ತು. ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಏಳು ಕಾಮಗಾರಿಗಳಿಗೆ ₹17 ಕೋಟಿಯ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಪಾಲಿಕೆಯ ರಾಜಕಾಲುವೆ ವಿಭಾಗದ (ಆರ್‌.ಆರ್.ನಗರ ವಲಯ) ಕಾರ್ಯಪಾಲಕ ಎಂಜಿನಿಯರ್‌ ಅವರು 2017ರ ಡಿಸೆಂಬರ್‌ನಲ್ಲಿ ಟೆಂಡರ್‌ ಕರೆದಿದ್ದರು. ಟೆಂಡರ್ ಪ್ರಕ್ರಿಯೆಯಲ್ಲಿ ಗುತ್ತಿಗೆದಾರರಾದ ಜೆ.ಸಿ.ಪ್ರಕಾಶ್, ಜಿ.ಎಂ.ರವೀಂದ್ರ, ಎಸ್‌.ಎನ್‌.ಸೋಮಶೇಖರ್‌ (ಆತ್ರೇಯ ಕನ್‌ಸ್ಟ್ರಕ್ಷನ್‌) ಹಾಗೂ ಸಿ.ಎಸ್‌.ದೊರೆಸ್ವಾಮಿ (ಸ್ಟಾರ್‌ ಬಿಲ್ಡರ್ಸ್‌ ಆ್ಯಂಡ್‌ ಡೆವಲಪರ್ಸ್‌) ಪಾಲ್ಗೊಂಡಿದ್ದರು. ಆತ್ರೇಯ ಕನ್‌ಸ್ಟ್ರಕ್ಷನ್‌ನ ಎಸ್‌.ಎನ್‌.ಸೋಮಶೇಖರ್ ಅವರಿಗೆ ಕಾಮಗಾರಿ ಹೊಣೆ ವಹಿಸಲಾಗಿತ್ತು.

ಆದರೆ, ಈ ಕಾಮಗಾರಿಗಳನ್ನು ಅಜಯ್‌ ಆರ್‌. ತೃಪ್ತಿಕರವಾಗಿ ನಡೆಸಿದ್ದಾರೆ ಎಂದು ಪಾಲಿಕೆಯ ಕೆಂಗೇರಿ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಲೋಕೇಶ್‌ ಅವರು 2019ರ ಅಕ್ಟೋಬರ್‌ 31ರಂದು ಕಾರ್ಯಾನುಭವ ಪ್ರಮಾಣಪತ್ರ ನೀಡಿದ್ದಾರೆ. ಈ ಕಾಮಗಾರಿಗೆ ಟೆಂಡರ್‌ ಆಹ್ವಾನಿಸಿ ಮೇಲುಸ್ತುವಾರಿ ನೋಡಿಕೊಂಡಿದ್ದು ಪಾಲಿಕೆಯ ರಾಜಕಾಲುವೆ ವಿಭಾಗ. ಆದರೆ, ಈ ಕಾಮಗಾರಿಗೆ ಸಂಬಂಧವೇ ಇಲ್ಲದ, ಬೇರೆ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಆಗಿರುವ ಲೋಕೇಶ್‌ ಪ್ರಮಾಣಪತ್ರ ನೀಡಿದ್ದರು. ಅಧಿಕಾರಿಗಳ ನೆರವಿನಿಂದ ಅಜಯ್‌ ನಕಲಿ ಪ್ರಮಾಣಪತ್ರ ಪಡೆದಿದ್ದರು.

ಈ ಪ್ರಮಾಣಪತ್ರದ ಸತ್ಯಾಸತ್ಯತೆ ಬಗ್ಗೆ ಪರಿಶೀಲನೆ ನಡೆಸದೆ ಗೋವಿಂದರಾಜನಗರ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಪ್ರಕಾಶ್‌ ಅವರು ಮೂರು ಪ್ಯಾಕೇಜ್‌ಗಳ ಕಾಮಗಾರಿಗಳನ್ನು ಅಜಯ್‌ ಅವರಿಗೆ ವಹಿಸುವಂತೆ ಬಿಬಿಎಂ‍ಪಿಯ ಟೆಂಡರ್‌ ಬಿಡ್‌ ತಾಂತ್ರಿಕ ಸಮಿತಿಗೆ ಶಿಫಾರಸು ಮಾಡಿದ್ದರು. ಈ ಬಗ್ಗೆ ಪ್ರತಿಕ್ರಿಯೆಗೆ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಲಭ್ಯರಾಗಲಿಲ್ಲ.

ಕಾಮಗಾರಿಗಳು ಯಾವುವು:

ಪ್ಯಾಕೇಜ್‌ 4: ಗೋವಿಂದರಾಜನಗರ ಕ್ಷೇತ್ರದ ಕಾವೇರಿಪುರ, ಗೋವಿಂದರಾಜನಗರ, ಅಗ್ರಹಾರ ದಾಸರಹಳ್ಳಿ ವಾರ್ಡ್‌ಗಳಲ್ಲಿ ರಾಜಕಾಲುವೆಗಳ ಸಮಗ್ರ ಅಭಿವೃದ್ಧಿ; ₹24.90 ಕೋಟಿ

ಪ್ಯಾಕೇಜ್‌ 5: ಕಾವೇರಿಪುರ, ಗೋವಿಂದರಾಜನಗರ, ಡಾ.ರಾಜ್‌ ಕುಮಾರ್‌ ವಾರ್ಡ್, ಮಾರೇನಹಳ್ಳಿ ಹಾಗೂ ನಾಗರಬಾವಿ ವಾರ್ಡ್‌ಗಳಲ್ಲಿ ರಸ್ತೆ ಪಕ್ಕದ ಚರಂಡಿಗಳ ಹಾಗೂ ಪಾದಚಾರಿ ಮಾರ್ಗಗಳ ಸಮಗ್ರ ಅಭಿವೃದ್ಧಿ; ₹25 ಕೋಟಿ

ಪ್ಯಾಕೇಜ್‌ 6: ಮಾರುತಿಮಂದಿರ, ಮೂಡಲಪಾಳ್ಯ, ನಾಗರಬಾವಿ, ನಾಯಂಡಹಳ್ಳಿ ವಾರ್ಡ್‌ಗಳಲ್ಲಿ ರಸ್ತೆ ಪಕ್ಕದ ಚರಂಡಿಗಳು ಹಾಗೂ ಪಾದಚಾರಿ ಮಾರ್ಗಗಳ ಸಮಗ್ರ ಅಭಿವೃದ್ಧಿ; ₹27 ಕೋಟಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು