ಸೋಮವಾರ, ಏಪ್ರಿಲ್ 19, 2021
23 °C
ಜನರಿಂದಲೇ ಮೌಲ್ಯಮಾಪನಕ್ಕೆ ಬಿಬಿಎಂಪಿ ಸಿದ್ಧತೆ

ಸ್ವಚ್ಛತ ಕಾರ್ಯ: ನಿಮ್ಮ ಬೀದಿ ಎಷ್ಟು ಶುಚಿಯಾಗಿದೆ –ನೀವೇ ಹೇಳಿ

ಪ್ರವೀಣ್‌ ಕುಮಾರ್ ಪಿ.ವಿ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನೀವು ವಾಸವಿರುವ ಬೀದಿ ಸ್ವಚ್ಛವಾಗಿಲ್ಲವೇ, ಬೀದಿಯನ್ನು ಸ್ವಚ್ಛವಾಗಿಡಲು ನಿಯೋಜನೆಗೊಂಡಿರುವ ಸಿಬ್ಬಂದಿ ಅಥವಾ ರಸ್ತೆಗಳನ್ನು ಸ್ವಚ್ಛಗೊಳಿಸಬೇಕಾದ ಯಂತ್ರಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲವೇ? ನಗರದ ಉಳಿದ ಬೀದಿಗಳಿಗಿಂತ ನಿಮ್ಮ ಬೀದಿಯ ಸ್ವಚ್ಛತೆ ಉತ್ತಮವಾಗಿದೆಯೇ....

ಈ ಬಗ್ಗೆ ಇನ್ನು ಮುಂದೆ ನೀವೇ ಮೌಲ್ಯಮಾಪನ ನಡೆಸಬಹುದು. ಇದಕ್ಕೆ ಬಿಬಿಎಂಪಿ ಅವಕಾಶ ಕಲ್ಪಿಸಲಿದೆ. ನಿರ್ದಿಷ್ಟ ಬೀದಿಯ ಅಥವಾ ರಸ್ತೆಯ ಸ್ವಚ್ಛತಾ ಕಾರ್ಯದ ಗುಣಮಟ್ಟದ ಬಗ್ಗೆ ಜನರಿಂದ ಪ್ರತಿಕ್ರಿಯೆ ಪಡೆಯಲು ಆನ್‌ಲೈನ್‌ ವ್ಯವಸ್ಥೆ ಜಾರಿಗೆ ತರಲು ಬಿಬಿಎಂಪಿ ಮುಂದಾಗಿದೆ.

ಯಂತ್ರಗಳು ಕಸ ಗುಡಿಸುವ ರಸ್ತೆಗಳ ಬಗ್ಗೆ ಸಂಪೂರ್ಣ ವಿವರಗಳನ್ನು ಪಾಲಿಕೆ ವೆಬ್‌ಸೈಟ್‌ನಲ್ಲಿ ಹಂಚಿಕೊಳ್ಳಲಿದೆ. ಯಾವ ಯಂತ್ರ ಯಾವ ಅವಧಿಯಲ್ಲಿ ರಸ್ತೆಗಳ ಕಸ ಗುಡಿಸಲಿದೆ ಎಂಬ ವೇಳಾಪಟ್ಟಿ ಒದಗಿಸಲಿದೆ. ಅದರ ಪ್ರಕಾರವೇ ರಸ್ತೆಗಳನ್ನು ಸ್ವಚ್ಛಗೊಳಿಸುವ ಕಾರ್ಯ ನಡೆಯುತ್ತಿದೆಯೇ ಎಂಬುದನ್ನು ಜನರು ಪರಿಶೀಲಿಸಬಹುದು. ಒಂದುವೇಳೆ ಈ ವೇಳಾಪಟ್ಟಿ ಪ್ರಕಾರ ಸ್ವಚ್ಛತಾ ಕಾರ್ಯ ನಡೆಯದಿದ್ದರೆ ಆನ್‌ಲೈನ್‌ನಲ್ಲೇ ದೂರು ದಾಖಲಿಸಬಹುದು. ಈ ಯಂತ್ರಗಳ ಕಾರ್ಯನಿರ್ವಹಣೆ ಬಗ್ಗೆಯೂ ಜನರು ಅಭಿಪ್ರಾಯ ದಾಖಲಿಸಬಹುದು.

‘ಪ್ರತಿ ಪೌರಕಾರ್ಮಿಕರಿಗೆ ನಿರ್ದಿಷ್ಟ ರಸ್ತೆ ಅಥವಾ ಬೀದಿಯನ್ನು ಸ್ವಚ್ಛಗೊಳಿಸುವ ಹೊಣೆಯನ್ನು ಹಂಚಿಕೆ ಮಾಡಲಾಗುತ್ತದೆ. ಇವರ ಕಾರ್ಯನಿರ್ವಹಣೆಯನ್ನು ಜನರು ಮೌಲ್ಯಮಾಪನ ಮಾಡಬಹುದು. ಯಾವುದಾದರೂ ಬೀದಿಯನ್ನು ಸ್ವಚ್ಛವಾಗಿಟ್ಟುಕೊಳ್ಳದಿದ್ದರೆ, ಅದಕ್ಕೆ ಹೊಣೆಗಾರರಾದ ಪೌರಕಾರ್ಮಿಕರು ಅಥವಾ ಮೇಸ್ತ್ರಿ ವಿರುದ್ಧ ಕ್ರಮ ತೆಗೆದುಕೊಳ್ಳಲು ಈ ವ್ಯವಸ್ಥೆ ನೆರವಾಗಲಿದೆ. ಈಗಾಗಲೇ ಬೀದಿ ಸ್ವಚ್ಛಗೊಳಿಸುವ ಪೋರ್ಟಲ್‌ ಸ್ಥಾಪಿಸಿದ್ದೇವೆ. ಜನರು ಸುಲಭವಾಗಿ ತಮ್ಮ ಅಭಿಪ್ರಾಯ ನೀಡುವುದಕ್ಕೆ ಪೂರಕವಾಗಿ ಅದರಲ್ಲಿ ಕೆಲವು ಸುಧಾರಣೆ ಮಾಡಲಿದ್ದೇವೆ’ ಎಂದು ವಿಶೇಷ ಆಯುಕ್ತ (ಕಸ ನಿರ್ವಹಣೆ) ಡಿ.ರಂದೀಪ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಯಾವ ಬೀದಿಯಲ್ಲಿ ಯಾವ ಪೌರಕಾರ್ಮಿಕರು ಕಾರ್ಯನಿರ್ವಹಿಸುತ್ತಾರೆ ಎಂಬುದನ್ನು ಮ್ಯಾಪಿಂಗ್‌ ಮಾಡಿಸಿದ್ದೇವೆ. ಈ ವಿವರಗಳನ್ನು ಆ್ಯಪ್‌ನಲ್ಲಿ ಅಳವಡಿಸುತ್ತೇವೆ. ಅದರಲ್ಲಿ ನಿರ್ದಿಷ್ಟ ದಿನ ನಿರ್ದಿಷ್ಟ ಬೀದಿಯ ಪೌರಕಾರ್ಮಿಕರು ಕೆಲಸಕ್ಕೆ ಹಾಜರಾಗಿದ್ದಾರೆಯೇ ಅಥವಾ ಗೈರು ಹಾಜರಾಗಿದ್ದಾರೆಯೇ ಎಂಬ ಮಾಹಿತಿ ಸಾರ್ವಜನಿಕರಿಗೆ ಒದಗಿಸಲಾಗುತ್ತದೆ. ಒಂದು ವೇಳೆ ಅವರು ರಜೆ ಹಾಕಿದ್ದರೆ ಆ ಬಗ್ಗೆಯೂ ಮಾಹಿತಿ ನೀಡಲಾಗುತ್ತದೆ. ಸಿಬ್ಬಂದಿ ಹಾಜರಾತಿ ಹಾಕಿಯೂ ಕೆಲಸ ಮಾಡದಿದ್ದರೆ ಸದ್ಯದ ವ್ಯವಸ್ಥೆಯಲ್ಲಿ ಪತ್ತೆಹಚ್ಚುವುದು ಕಷ್ಟ. ಬೀದಿಯ ಸ್ವಚ್ಛತಾ ಕಾರ್ಯದ ಕುರಿತು ಜನರು ಪ್ರತಿಕ್ರಿಯೆ ನೀಡಲು ಅವಕಾಶ  ಕಲ್ಪಿಸಿದರೆ ಇದನ್ನು ಸುಲಭವಾಗಿ ಪತ್ತೆಹಚ್ಚಬಹುದು’ ಎಂದು ಬಿಬಿಎಂಪಿ ಜಂಟಿ ಆಯುಕ್ತ (ಕಸ ನಿರ್ವಹಣೆ) ಸರ್ಫರಾಜ್ ಖಾನ್‌ ವಿವರಿಸಿದರು.

‘ಪೌರಕಾರ್ಮಿಕರ ಕಾರ್ಯನಿರ್ವಹಣೆ ಬಗ್ಗೆ ಸಾರ್ವಜನಿಕರು ಸುಖಾಸುಮ್ಮನೆ ದೂರು ನೀಡುವ ಸಾಧ್ಯತೆ ತೀರ ಕಡಿಮೆ. ಪೌರಕಾರ್ಮಿಕರ ವಿರುದ್ಧ ದೂರು ಬಂದರೂ, ತಕ್ಷಣವೇ ಅವರ ಮೇಲೆ ಕ್ರಮಕೈಗೊಳ್ಳುವುದಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಿದ ಬಳಿಕವೇ ಶಿಸ್ತುಕ್ರಮ ಕೈಗೊಳ್ಳಲಾಗುತ್ತದೆ. ಬೀದಿಗಳ ಸ್ವಚ್ಛತೆ ಕಾಪಾಡುವ ಹೊಣೆ ಹೊತ್ತವರು ಈ ಕಾರ್ಯದಲ್ಲಿ ಪದೇ ಪದೇ ವೈಫಲ್ಯ ಕಂಡರೆ ಶಿಸ್ತುಕ್ರಮ ಅನಿವಾರ್ಯ ಆಗಲಿದೆ’ ಎಂದು ಸ್ಪಷ್ಟಪಡಿಸಿದರು.

ನಿಗಾ ಇಡಲು ನೆರವಾಗಲಿದೆ ಡ್ಯಾಶ್‌ಬೋರ್ಡ್‌
‘ಬೀದಿಗಳ ಸ್ವಚ್ಛತೆ ಕಾಪಾಡುವ ಕಾರ್ಯದ ಮೇಲೆ ನಿಗಾ ಇಡಲು ಡ್ಯಾಶ್‌ಬೋರ್ಡ್‌ ಸಿದ್ಧಪಡಿಸಲಾಗುತ್ತದೆ. ಇದರ ನೆರವಿನಿಂದ ಬಿಬಿಎಂಪಿ ಆಡಳಿತಾಧಿಕಾರಿ, ಮುಖ್ಯ ಆಯುಕ್ತರು, ವಿಶೇಷ ಆಯುಕ್ತರು ಕಚೇರಿಯಲ್ಲೇ ಕುಳಿತುಕೊಂಡೇ ಸ್ವಚ್ಛತಾ ಕಾರ್ಯದ ಹೇಗೆ ನಡೆಯುತ್ತಿದೆ ಎಂದು ಪರಿಶೀಲಿಸಬಹುದು. ಒಂದೆರಡು ತಿಂಗಳಲ್ಲೇ ಹೊಸ ವ್ಯವಸ್ಥೆ ಜಾರಿಗೆ ತರಲು ಪ್ರಯತ್ನ ಮಾಡುತ್ತಿದ್ದೇವೆ’ ಎಂದು ಸರ್ಫರಾಜ್‌ ಖಾನ್‌ ಮಾಹಿತಿ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು