ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

214 ಅನಧಿಕೃತ ಧಾರ್ಮಿಕ ಕಟ್ಟಡ ತೆರವುಗೊಳಿಸಲಿದೆ ಬಿಬಿಎಂಪಿ

ಸುಪ್ರೀಂ ಕೋರ್ಟ್‌ ಆದೇಶ ಪಾಲನೆಗೆ ಪಾಲಿಕೆ ಕ್ರಮ * ನಗರದಲ್ಲಿ ಅನಧಿಕೃತ ಧಾರ್ಮಿಕ ಕಟ್ಟಡಗಳ ಸಮೀಕ್ಷೆ
Last Updated 27 ಜನವರಿ 2021, 19:16 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಒಟ್ಟು 1,509 ಧಾರ್ಮಿಕ ಕಟ್ಟಡಗಳನ್ನು ಅನಧಿಕೃತವಾಗಿ ನಿರ್ಮಿಸಲಾಗಿದೆ ಎಂದು ಬಿಬಿಎಂಪಿ ಗುರುತಿಸಿದೆ. ಈ ಪೈಕಿ 2009ರ ಸೆ.29ರ ನಂತರ ನಿರ್ಮಾಣವಾಗಿರುವ 214 ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಲು ಬಿಬಿಎಂಬಿ ಶೀಘ್ರವೇ ಕ್ರಮ ಕೈಗೊಳ್ಳಲಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ಧಾರ್ಮಿಕ ಕಟ್ಟಡಗಳನ್ನು ನಿರ್ಮಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಸುಪ್ರೀಂ ಕೋರ್ಟ್ 2009ರಲ್ಲಿ ವಿಚಾರಣೆ ನಡೆಸಿತ್ತು. ಇಂತಹ ಧಾರ್ಮಿಕ ಕಟ್ಟಡಗಳ ಸಮೀಕ್ಷೆ ನಡೆಸಿ ಅವುಗಳನ್ನು ತೆರವುಗೊಳಿಸುವ ಬಗ್ಗೆ ರಾಜ್ಯ ಸರ್ಕಾರ ನಿರ್ಧಾರ ಕೈಗೊಳ್ಳಬೇಕು ಎಂದು ಆದೇಶ ಮಾಡಿತ್ತು. ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ರೀತಿಯ ಧಾರ್ಮಿಕ ಕಟ್ಟಡಗಳನ್ನು ನಿರ್ಮಿಸಲು ಇನ್ನು ಅವಕಾಶ ನೀಡಬಾರದು ಎಂದು 2009ರ ಸೆ. 29ರಂದು ಸೂಚಿಸಿತ್ತು.

ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ಧಾರ್ಮಿಕ ಕಟ್ಟಡ ನಿರ್ಮಿಸಿರುವುದಕ್ಕೆ ಸಂಬಂಧಿಸಿದ ಪ್ರಕರಣವೊಂದು ಹೈಕೋರ್ಟ್‌ನಲ್ಲಿ ಇದೇ 28ರಂದು ವಿಚಾರಣೆಗೆ ಬರಲಿದೆ. ಇಂತಹ ಕಟ್ಟಡಗಳಿಗೆ ಸಂಬಂಧಿಸಿದಂತೆ ಏನು ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ಈ ಸಂದರ್ಭದಲ್ಲಿ ಬಿಬಿಎಂಪಿಯು ನ್ಯಾಯಾಲಯಕ್ಕೆ ವರದಿ ನೀಡಬೇಕಿದೆ. ಈ ಸಲುವಾಗಿ ಪಾಲಿಕೆ ವ್ಯಾಪ್ತಿಯ ರಸ್ತೆ, ಪಾದಚಾರಿ ಮಾರ್ಗ, ಉದ್ಯಾನ, ಆಟದ ಮೈದಾನ, ಸರ್ಕಾರಿ ಜಾಗ ಸೇರಿದಂತೆ ಸಾರ್ವಜನಿಕ ಸ್ಥಳಗಳನ್ನು ಅತಿಕ್ರಮಿಸಿ ಅನಧಿಕೃತವಾಗಿ ನಿರ್ಮಿಸಿರುವ ಮಂದಿರ, ಮಸೀದಿ, ಚರ್ಚ್, ಗುರುದ್ವಾರ ಮೊದಲಾದ ಧಾರ್ಮಿಕ ಕಟ್ಟಡಗಳನ್ನು ಸಮೀಕ್ಷೆ ಮಾಡಿ ಸಮಗ್ರ ವರದಿ ನೀಡಬೇಕೆಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರು ಜ. 20ರಂದು ಅಧಿಕಾರಿಗಳಿಗೆ ಸೂಚಿಸಿದ್ದರು.

‘ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ಗುರುತಿಸುವ ಸಮೀಕ್ಷೆ ಪೂರ್ಣಗೊಂಡಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 1,509 ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ 214 ಕಟ್ಟಡಗಳು 2009ರ ನಂತರ ನಿರ್ಮಾಣವಾದವುಗಳು. ಇವುಗಳನ್ನು ನೆಲಸಮ ಮಾಡಲು ಕ್ರಮಕೈಗೊಳ್ಳುತ್ತೇವೆ. ಇನ್ನುಳಿದ 1,295 ಕಟ್ಟಡಗಳು 2009ರ ಸೆ. 29ಕ್ಕೆ ಮುನ್ನ ನಿರ್ಮಾಣವಾದವು’ ಎಂದು ಮಂಜುನಾಥ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಾರ್ವಜನಿಕ ಸ್ಥಳಗಳಲ್ಲಿ 2009ಕ್ಕೆ ಮುನ್ನ ನಿರ್ಮಿಸಿರುವ ಅನಧಿಕೃತ ಧಾರ್ಮಿಕ ಕಟ್ಟಡಗಳಿಂದ ಜನರಿಗೆ ಅನನುಕೂಲ ಆಗುವುದಿಲ್ಲವೆಂದಾದರೆ ಅವುಗಳನ್ನು ಸಕ್ರಮಗೊಳಿಸಿ ಉಳಿಸಿಕೊಳ್ಳಲು ಅವಕಾಶ ಇದೆ ಅಥವಾ ಅವುಗಳನ್ನು ಸಮೀಪದ ಬೇರೆ ಜಾಗಕ್ಕೆ ಸ್ಥಳಾಂತರಗೊಳಿಸಬಹುದು. ಈ ಬಗ್ಗೆ ಸರ್ಕಾರದ ಮಟ್ಟದಲ್ಲೇ ತೀರ್ಮಾನ ಕೈಗೊಳ್ಳಬೇಕಿದೆ. ಹಾಗಾಗಿ ನಗರದಲ್ಲಿ ಇಂತಹ 1,295 ಧಾರ್ಮಿಕ ಕಟ್ಟಡಗಳಿರುವುದರ ಬಗ್ಗೆ ವಾಸ್ತವಾಂಶದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುತ್ತೇವೆ’ ಎಂದರು.

ಬೆಂಗಳೂರು ಪೂರ್ವ ತಾಲ್ಲೂಕಿನ ಬೆನ್ನಿಗಾನಹಳ್ಳಿಯಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಇದ್ದ ಸರ್ಕಾರಿ ಜಾಗದಲ್ಲಿದ್ದ ಚೌಡೇಶ್ವರಿದೇವಿ ದೇಗುಲವನ್ನು ಬಿಬಿಎಂಪಿ ಇದೇ 23ರಂದು ತೆರವುಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT