ಗುರುವಾರ , ಸೆಪ್ಟೆಂಬರ್ 23, 2021
23 °C
ರಾಜಕಾಲುವೆ ದುರಸ್ತಿ: ಆಯುಕ್ತರಿಂದ ಕಾಮಗಾರಿ ತಪಾಸಣೆ

ಮಳೆಯಿಂದ ನಷ್ಟ ಅನುಭವಿಸಿದವರಿಗೆ ಪರಿಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ’ಇತ್ತೀಚೆಗೆ ಸುರಿದ ಮಳೆಯ ವೇಳೆ ಬಡವರ ಮನೆಗೆ ನೀರು ನುಗ್ಗಿ ಸ್ವತ್ತುಗಳಿಗೆ ಹಾನಿಯಾಗಿದ್ದರೆ, ಪರಿಶೀಲನೆ ನಡೆಸಿ ಅವರಿಗೆ ಪಾಲಿಕೆಯಿಂದ ಪರಿಹಾರ ನೀಡಲಾಗುವುದು. ಸ್ವತ್ತು ನಷ್ಟ ಅನುಭವಿಸಿದವರು ಬಿಬಿಎಂಪಿಯ ವಲಯ ಆಯುಕ್ತರ ಕಚೇರಿಗೆ ಮಾಹಿತಿ ನೀಡಬಹುದು‘ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದರು.

ದಾಸರಹಳ್ಳಿ ವಲಯ ವ್ಯಾಪ್ತಿಯ ನೆಲಗದರನಹಳ್ಳಿಯಲ್ಲಿ ಈಚೆಗೆ ಸುರಿದ ಭಾರಿ ಮಳೆಯಿಂದ ಹಾನಿಗೊಳಗಾದ ರಸ್ತೆ ಹಾಗೂ ರಾಜಕಾಲುವೆ ದುರಸ್ತಿ ಕಾಮಗಾರಿಯನ್ನು ಆಯುಕ್ತರು ಬುಧವಾರ ಪರಿಶೀಲಿಸಿದರು. ದುರಸ್ತಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಹಾಗೂ ಸರ್ವೆ ನಡೆಸಿ ಒತ್ತುವರಿಗಳನ್ನು ತೆರವು ಮಾಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ರಸ್ತೆ ಮೂಲಕ ರಾಜಕಾಲುವೆ ಹಾದುಹೋಗುತ್ತಿದೆ. ಕಾಲುವೆಯಲ್ಲಿ ಹೂಳು ತುಂಬಿ ನೀರು ಸರಾಗವಾಗಿ ಹರಿಯುತ್ತಿಲ್ಲ. ಇದರ ಅಗಲ ಕಿರಿದಾಗಿರುವುದರಿಂದ ಮಳೆನೀರು ಮನೆಗಳಿಗೆ ನುಗ್ಗಿದೆ. ಕಾಲುವೆಯನ್ನು ಅಗಲ ಮಾಡಬೇಕು ಎಂದು ಸ್ಥಳೀಯರು ಕೋರಿದರು.

ಶಾಸಕ ಆರ್.ಮಂಜುನಾಥ್, ದಾಸರಹಳ್ಳಿ ವಲಯ ಜಂಟಿ ಆಯುಕ್ತ ನರಸಿಂಹಮೂರ್ತಿ, ನಗರ ಯೋಜನೆ ವಿಭಾಗದ ಹೆಚ್ಚುವರಿ ನಿರ್ದೇಶಕ ಪ್ರಸಾದ್, ವಲಯದ ಮುಖ್ಯ ಎಂಜಿನಿಯರ್ ದೊಡ್ಡಯ್ಯ ಜೊತೆಗಿದ್ದರು.

ದಾಸರಹಳ್ಳಿ ವಲಯದಲ್ಲಿ ರಾಷ್ಟ್ರೀಯ ಹೆದ್ದಾರಿಯಿಂದ ನೆಲಗದರನಹಳ್ಳಿ ಮುಖ್ಯರಸ್ತೆಯಲ್ಲಿ(ಅಂದರಹಳ್ಳಿ ರಸ್ತೆ) ಸುಮಾರು 2.5 ಕಿ.ಮೀ ಉದ್ದದಷ್ಟು ವಿಸ್ತರಣೆ ಕಾರ್ಯ ಪ್ರಗತಿಯಲ್ಲಿದೆ. ಇದಕ್ಕೆ ಜಾಗ ಬಿಟ್ಟುಕೊಟ್ಟ ಅನೇಕರಿಗೆ ಈಗಾಗಲೇ ಕಲವರಿಗೆ ಅಭಿವೃದ್ಧಿ ಹಕ್ಕು ವರ್ಗಾವಣೆ ಪ್ರಮಾಣಪತ್ರ (ಟಿಡಿಆರ್‌ಸಿ) ನೀಡಲಾಗಿದೆ. ಕೆಲವು ಸಮಸ್ಯೆಗಳಿಂದಾಗಿ ಇನ್ನು ಕೆಲವರಿಗೆ ಟಿಡಿಆರ್‌ಸಿ ನೀಡುವುದು ಬಾಕಿ ಇದೆ.  

‘ಸಮಸ್ಯೆ ಬಗೆಹರಿಸಿ ರಸ್ತೆ ವಿಸ್ತರಣೆ ಕಾಮಗಾರಿಯನ್ನು ತ್ವರಿತವಾಗಿ ಪ್ರಾರಂಭಿಸಬೇಕು’ ಎಂದು ಆಯುಕ್ತರು ಮೂಲಸೌಕರ್ಯ ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು