ನಿತ್ಯ 1 ಲಕ್ಷ ಮಂದಿಗೆ ಕೋವಿಡ್ ಲಸಿಕೆ ನೀಡಲು ಬಿಬಿಎಂಪಿ ಸಿದ್ಧತೆ

ಬೆಂಗಳೂರು: ‘ಬಿಬಿಎಂಪಿ ವ್ಯಾಪ್ತಿಯಲ್ಲಿ 60 ವರ್ಷ ಮೇಲಿನವರು, ಬೇರೆ ಕಾಯಿಲೆ ಹೊಂದಿರುವ 45ವರ್ಷ ಮೇಲ್ಪಟ್ಟವರು ಸೇರಿದಂತೆ ನಿತ್ಯ 1 ಲಕ್ಷ ಮಂದಿಗೆ ಕೋವಿಡ್ ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಇದಕ್ಕಾಗಿ ಹೆಚ್ಚುವರಿ ಆಸ್ಪತ್ರೆಗಳನ್ನು ಗುರುತಿಸುತ್ತಿದ್ದೇವೆ’ ಎಂದು ಪಾಲಿಕೆ ಆಯುಕ್ತ ಎನ್. ಮಂಜುನಾಥ ಪ್ರಸಾದ್ ತಿಳಿಸಿದರು.
ಹಳೆ ವಿಮಾನನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ಬುಧವಾರ ಭೇಟಿ ನೀಡಿದ ಅವರು ಬಿಬಿಎಂಪಿ ವ್ಯಾಪ್ತಿಯಲ್ಲಿ ಮೂರನೇ ಹಂತದ ಕೋವಿಡ್ ಲಸಿಕೆ ಅಭಿಯಾನದ ಜಾರಿಗೆ ಕೈಗೊಂಡ ಕ್ರಮಗಳನ್ನು ಪರಿಶೀಲಿಸಿದರು. ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಆಯುಕ್ತರು, ‘ಮೊದಲ ಎರಡು ದಿನ ಪ್ರಾಯೋಗಿಕವಾಗಿ 26 ಆಸ್ಪತ್ರೆಗಳಲ್ಲಿ ಲಸಿಕಾ ಕೇಂದ್ರಗಳನ್ನು ತೆರೆಯಲಾಗಿತ್ತು. ಮುಂದಿನ ವಾರದಿಂದ 100ಕ್ಕಿಂತ ಹೆಚ್ಚು ಹಾಸಿಗೆ ಸಾಮರ್ಥ್ಯವುಳ್ಳ 107 ಖಾಸಗಿ ಆಸ್ಪತ್ರೆಗಳು, ಪಾಲಿಕೆಯ 141 ಪ್ರಾಥಮಿಕ ಆರೋಗ್ಯ ಕೇಂದ್ರಗಳು, ರೆಫೆರಲ್ ಆಸ್ಪತ್ರೆಗಳು ಸೇರಿದಂತೆ ಸುಮಾರು 300 ಆಸ್ಪತ್ರೆಗಳಲ್ಲಿ ಲಸಿಕೆ ನೀಡಲು ಕ್ರಮವಹಿಸಲಾಗುತ್ತಿದೆ. ಬಳಿಕ ನಿತ್ಯ 60 ಸಾವಿರ ಮಂದಿಗೆ ಲಸಿಕೆ ನೀಡಬಹುದು. ಕ್ರಮೇಣ ಈ ಸಂಖ್ಯೆಯನ್ನು 1 ಲಕ್ಷಕ್ಕೆ ಹೆಚ್ಚಿಸಲಿದ್ದೇವೆ’ ಎಂದರು.
‘ಬಿಬಿಎಂಪಿ ವ್ಯಾಪ್ತಿಯಲ್ಲಿ 3ನೇ ಹಂತದ ಅಭಿಯಾನದ ಅನುಷ್ಠಾನದ ವೇಳೆ ಕೋವಿನ್ 2.0 ತಂತ್ರಾಂಶದಲ್ಲಿ ಕೆಲ ಲೋಪದೋಷಗಳು ಕಾಣಿಸಿಕೊಂಡಿದ್ದರಿಂದ ಮೊದಲ ದಿನ 1,063 ಮಂದಿಗೆ ಮಾತ್ರ ಲಸಿಕೆ ನೀಡಲಾಯಿತು. ಈ ಲೋಪಗಳನ್ನು ಸರ್ಕಾರದ ಗಮನಕ್ಕೆ ತಂದು ಸರಿಪಡಿಸಿದ್ದರಿಂದ ಎರಡನೇ ದಿನ 3,128 ಮಂದಿಗೆ ಲಸಿಕೆ ನೀಡಲು ಸಾಧ್ಯವಾಯಿತು. ಬುಧವಾರ 26 ಆಸ್ಪತ್ರೆಗಳಲ್ಲಿ 4,600 ಮಂದಿಗೆ ಲಸಿಕೆ ನೀಡುವ ಗುರಿ ಹೊಂದಿದ್ದೇವೆ’ ಎಂದು ಆಯುಕ್ತರು ಮಾಹಿತಿ ನೀಡಿದರು.
ಕೊಳೆಗೇರಿ ನಿವಾಸಿಗಳಿಗೆ ವಿಶೇಷ ವ್ಯವಸ್ಥೆ
‘ನಗರದ ಕೊಳಗೇರಿಗಳಲ್ಲಿ 15 ಲಕ್ಷ ಮಂದಿ ವಾಸಿಸುತ್ತಿದ್ದಾರೆ. ಅವರು ಕೋವಿನ್ ಪೋರ್ಟಲ್‌ನಲ್ಲಿ ಹೆಸರು ನೋಂದಣಿ ಮಾಡಿಕೊಳ್ಳುವುದು ಕಷ್ಟ. ಆಶಾ ಕಾರ್ಯಕರ್ತರು ಹಾಗೂ ಆರೋಗ್ಯ ಸಹಾಯಕಿಯರು ಅವರನ್ನು ಲಸಿಕಾ ಕೇಂದ್ರಗಳಿಗೆ ಕರೆತರುವುದಕ್ಕೆ ನೆರವಾಗುತ್ತಾರೆ. ನೋಂದಣಿ ಮಾಡಿಸದೆಯೂ ಅವರಿಗೆ ಲಸಿಕೆ ನೀಡುವುದಕ್ಕೆ ಮುಂದಿನ ವಾರದಿಂದ ವ್ಯವಸ್ಥೆ ಮಾಡುತ್ತೇವೆ’ ಎಂದು ಆಯುಕ್ತರು ತಿಳಿಸಿದರು.
‘ಕೋವಿನ್ ಪೋರ್ಟಲ್‌ನಲ್ಲಿ ಕಾಣಿಸಿದ್ದ ಬಹುತೇಕ ಸಮಸ್ಯೆಗಳು ಬಗೆಹರಿದಿವೆ. ಸಣ್ಣ ಪುಟ್ಟ ಸಮಸ್ಯೆಗಳಿದ್ದರೆ, 26 ಆಸ್ಪತ್ರೆಗಳಿಂದಲೂ ಪ್ರತಿಕ್ರಿಯೆ ಪಡೆದು ಅವುಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳುತ್ತೇವೆ. ಪಾಲಿಕೆ ವ್ಯಾಪ್ತಿಯ ಹೆಚ್ಚಿನ ಆಸ್ಪತ್ರೆಗಳಲ್ಲಿ ಲಸಿಕೆ ನೀಡಲು ಪ್ರಾರಂಭಿಸಿದಾಗ ಹಾಗೂ ಹಿರಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಪಡೆಯುಲು ಮುಂದೆ ಬಂದಾಗ ಪೋರ್ಟಲ್‌ನಲ್ಲಿ ನೋಂದಣಿ ಸಮಸ್ಯೆ ಆಗಬಹುದು. ಯಾರೂ ಅವಕಾಶ ವಂಚಿತರಾಗಬಾರದು ಎಂಬ ಕಾರಣಕ್ಕೆ ನೋಂದಣಿ ಮಾಡಿಸದವರೂ ನೇರವಾಗಿ ಲಸಿಕೆ ಪಡೆಯುವುದಕ್ಕೂ ವ್ಯವಸ್ಥೆ ಕಲ್ಪಿಸಲಾಗುತ್ತದೆ’ ಎಂದು ತಿಳಿಸಿದರು.
ಪೋರ್ಟಲ್‌ನಲ್ಲಿ ಮಾಹಿತಿ ಮಾರ್ಪಾಡಿಗೆ ಅವಕಾಶ
‘ಒಮ್ಮೆ ಲಸಿಕೆ ಪಡೆದವರು 29 ದಿನಗಳ ಬಳಿಕ ಎರಡನೇ ಡೋಸ್ ಪಡೆಯಬೇಕು. ಈ ಬಗ್ಗೆ ಅವರ ಮೊಬೈಲ್‌ಗೆ ಸ್ವಯಂ ಸಂದೇಶ ರವಾನೆಯಾಗಲಿದೆ. ಒಂದೊಮ್ಮೆ ಇಲ್ಲಿ ಲಸಿಕೆ ಪಡೆದವರು ಬೇರೆ ನಗರಗಳಲ್ಲಿ ಎರಡನೇ ಡೋಸ್ ಪಡೆಯಲು ಬಯಸಿದರೆ, ಕೊವಿನ್ ಪೋರ್ಟಲ್‌ನಲ್ಲೇ ಲಸಿಕೆ ಪಡೆಯುವ ಸ್ಥಳ ಬದಲಾವಣೆ ಮಾಡಬಹುದು. ಗೊತ್ತುಪಡಿಸಿದ ದಿನ ಲಸಿಕೆ ಪಡೆಯಲು ನೊಂದಣಿ ಮಾಡಿದವರು ಅನಿವಾರ್ಯ ಕಾರಣಗಳಿಂದ ಅಂದು ಲಸಿಕಾ ಕೇಂದ್ರಗಳಿಗೆ ಬರಲು ಸಾಧ್ಯವಾಗದಿದ್ದರೆ, ಆ ದಿನಾಂಕವನ್ನು ಬದಲಾಯಿಸುವುದಕ್ಕೂ ಅವಕಾಶ ಇದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
3.50 ಲಕ್ಷ ಮಂದಿಯ ಸಮೀಕ್ಷೆ ಪೂರ್ಣ
‘ಪಾಲಿಕೆ ವ್ಯಾಪ್ತಿಯಲ್ಲಿರುವ 60 ವರ್ಷದ ಮೇಲ್ಪಟ್ಟವರ ಹಾಗೂ ಅನ್ಯ ಖಾಯಿಲೆಗಳಿಂದ ಬಳಲುತ್ತಿರುವ 45 ವರ್ಷ ಮೇಲ್ಪಟ್ಟ ನಾಗರಿಕರ ಸಮೀಕ್ಷೆ ಕಾರ್ಯ ನಡೆಯುತ್ತಿದೆ. ಇದುವರೆಗೆ ಇಂತಹ 3.50 ಲಕ್ಷ ಮಂದಿಯ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದೆ’ ಎಂದು ಆಯುಕ್ತರು ಹೇಳಿದರು.
‘ಕೋವಿಡ್ ಲಸಿಕೆ ನೀಡುವುದರ ಜೊತೆಗೆ ನಗರದ ನಾಗರಿಕರ ಆರೋಗ್ಯದ ಕುರಿತ ಸಮಸ್ತ ಮಾಹಿತಿ ಕಲೆಹಾಕಿ ಸಮಗ್ರ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸುವುದು ಮತ್ತು ಸಾಂಕ್ರಾಮಿಕವಲ್ಲ ಕಾಯಿಲೆಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳುವುದು ಕೂಡಾ ಇದರ ಉದ್ದೇಶ’ ಎಂದರು.
‘ನಗರದ ಒಟ್ಟು ಜನಸಂಖ್ಯೆ 1.30 ಕೋಟಿ ಇದೆ. ಅದರಲ್ಲಿ ಹಿರಿಯ ನಾಗರಿಕರು ಹಾಗೂ ಬೇರೆ ಬೇರೆ ಕಾಯಿಲೆ ಹೊಂದಿರುವ 45 ವರ್ಷ ಮೇಲ್ಪಟ್ಟವರ ಒಟ್ಟು ಸಂಖ್ಯೆ ಶೇ 10ರಷ್ಟು ಇರಬಹುದು ಎಂದು ಅಂದಾಜಿಸಲಾಗಿದೆ’ ಎಂದರು.
‘ಲಸಿಕೆ ಪಡೆದರೂ ಮುಂಜಾಗ್ರತೆ ಕಡ್ಡಾಯ’
‘ಲಸಿಕೆ ಪಡೆದವರು ಆ ಬಳಿಕವೂ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು, ಪರಸ್ಪರ 6 ಅಡಿ ಅಂತರ ಕಾಪಾಡುವುದು ಹಾಗೂ ಕೈಗಳನ್ನು ಆಗಾಗ ಸಾಬೂನಿನಿಂದ ಅಥವಾ ಸೋಂಕು ನಿವಾರಕ ದ್ರಾವಣದಿಂದ ತೊಳೆದುಕೊಳ್ಳುವುದು ಕಡ್ಡಾಯ’ ಎಂದು ಮಂಜುನಾಥ ಪ್ರಸಾದ್ ಸ್ಪಷ್ಟಪಡಿಸಿದರು.
ಖಾಸಗಿ ಆಸ್ಪತ್ರೆಗಳಿಂದ ಬೇಡಿಕೆ
‘ಕೆಲವು ಖಾಸಗಿ ಆಸ್ಪತ್ರೆಗಳು ತಮಗೂ ಲಸಿಕೆ ಅಭಿಯಾನದಲ್ಲಿ ಕೈಜೋಡಿಸಲು ತಮಗೂ ಅವಕಾಶ ನೀಡುವಂತೆ ಕೋರಿಕೆ ಸಲ್ಲಿಸುತ್ತಿವೆ. ಕೇಂದ್ರ ಮಾನದಂಡದ ಪ್ರಕಾರ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಪಿಎಂಜೆಎವೈ) ಅಥವಾ ಕೇಂದ್ರ ಸರ್ಕಾರದ ಆರೋಗ್ಯ ಕಾರ್ಯಕ್ರಮ (ಸಿಜಿಎಚ್‌ಎಸ್) ಅಥವಾ ಕೇಂದ್ರ ಅಥವಾ ರಾಜ್ಯ ಸರ್ಕಾರದ ವಿಮೆ ಯೋಜನೆಗಳಲ್ಲಿ ಜೋಡಣೆಯಾಗಿರುವ ಆಸ್ಪತ್ರೆಗಳಿಗೆ ಲಸಿಕಾ ಕೇಂದ್ರ ಹೊಂದಲು ಅವಕಾಶ ಕಲ್ಪಿಸಬಹುದು. ಖಾಸಗಿ ಆಸ್ಪತ್ರೆಗಳು ಇನ್ನು ಮುಂದಾದರೂ ಇಂತಹ ಕಾರ್ಯಕ್ರಮಗಳಲ್ಲಿ ಜೋಡಣೆ ಮಾಡಿಸಿಕೊಂಡರೆ ಲಸಿಕೆ ಕೇಂದ್ರ ತೆರೆಯಲು ಅವಕಾಶ ಕಲ್ಪಿಸಬಹುದು’ ಎಂದು ಆಯುಕ್ತರು ತಿಳಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.