ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾವತಿಯಾಗದ ಬಿಲ್: ಕಸ ವಿಲೇವಾರಿ ಸ್ಥಗಿತ

Last Updated 18 ಫೆಬ್ರುವರಿ 2022, 20:21 IST
ಅಕ್ಷರ ಗಾತ್ರ

ಬೆಂಗಳೂರು: ಎಂಟು ತಿಂಗಳಿಂದ ಕಸ ವಿಲೇವಾರಿ ಮಾಡಿರುವ ಬಿಲ್ ಬಾಕಿ ಉಳಿಸಿಕೊಂಡಿರುವ ಬಿಬಿಎಂಪಿ ವಿಶೇಷ ಆಯುಕ್ತೆ(ಹಣಕಾಸು) ತುಳಸಿ ಮದ್ದಿನೇನಿ ಅವರ ಧೋರಣೆ ಖಂಡಿಸಿ ಕಸ ವಿಲೇವಾರಿ ಸ್ಥಗಿತಗೊಳಿಸಿ ಗುತ್ತಿಗೆದಾರರು ಮತ್ತು ಕಾರ್ಮಿಕರು ಪ್ರತಿಭಟನೆ ನಡೆಸಿದರು. ಇದರಿಂದಾಗಿ ನಗರದಲ್ಲಿ ಕಸ ವಿಲೇವಾರಿಯಾಗದೆ ಎಲ್ಲೆಂದರಲ್ಲಿ ಬೀಳುವಂತಾಯಿತು.

ಬಿಬಿಎಂಪಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿರುವ ಗುತ್ತಿಗೆದಾರರು ಮತ್ತು ಕಾರ್ಮಿಕರು, ತುಳಸಿ ಮದ್ದಿನೇನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಎಸ್‌.ಎನ್. ಬಾಲಸುಬ್ರಹ್ಮಣ್ಯ, ‘ಮನೆ–ಮನೆಯಿಂದ ಕಸ ಸಂಗ್ರಹ ಮಾಡಿ ವಿಲೇವಾರಿ ಮಾಡುವ ಮೂಲಕ ಬೆಂಗಳೂರು ನಗರದ ಜನರ ಕೆಲಸಗಳಲ್ಲಿ ನಾವು ನಿತ್ಯ ಪ್ರತ್ಯಕ್ಷವಾಗಿ ಪಾಲ್ಗೊಳ್ಳುತ್ತಿದ್ದೇವೆ. ನಾವು ಮಾಡಿದ ಕೆಲಸಕ್ಕೆ ತಕ್ಕಂತೆ ನೀಡಬೇಕಾದ ಹಣವನ್ನು ಬಿಬಿಎಂಪಿ ಬಿಡುಗಡೆ ಮಾಡದಿದ್ದರೆ ಹೇಗೆ’ ಎಂದು ಪ್ರಶ್ನಿಸಿದರು.

‘ಗುತ್ತಿಗೆದಾರರು ಎಲ್ಲರಂತೆ ಮನುಷ್ಯರು ಎಂಬುದನ್ನು ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು. ಸಮಯಕ್ಕೆ ಸರಿಯಾಗಿ ಹಣ ಬಿಡುಗಡೆ ಮಾಡದಿದ್ದರೆ ಸಾವಿರಾರು ಕುಟುಂಬಗಳು ಬೀದಿಗೆ ಬೀಳುತ್ತದೆ’ ಎಂದು ಹೇಳಿದರು.

‘ವಿಶೇಷ ಆಯುಕ್ತರಾದ ತುಳಸಿ ಮದ್ದಿನೇನಿ ಅವರ ಮೊಂಡತನ, ಸರ್ವಾಧಿಕಾರಿ ಧೋರಣೆಯಿಂದ ಈ ಸಂಕಷ್ಟ ಬಂದಿದೆ. ಕಸ ವಿಲೇವಾರಿ ಜತೆಗೆ ಬಿಬಿಎಂಪಿಯ ಕಲ್ಯಾಣ ಕಾರ್ಯಕ್ರಮಗಳು, ಕಾಮಗಾರಿ ಬಿಲ್ಲುಗಳು ಕೂಡ ಪಾವತಿಯಾಗಿಲ್ಲ. ಇದರಿಂದ ಬೆಂಗಳೂರಿನ ಅಭಿವೃದ್ದಿಗೆ ಕುಂಠಿತವಾಗಲಿದೆ’ ಎಂದರು.

‘ಮುಖ್ಯ ಆಯುಕ್ತರು ಆದೇಶ ನೀಡಿದ್ದರೂ ತುಳಸಿ ಮದ್ದಿನೇನಿ ಅವರು ಯಾವುದೇ ಕ್ರಮ ಕೈಗೊಳ್ಳದೆ ಸತಾಯಿಸುತ್ತಿದ್ದಾರೆ. ಆದ್ದರಿಂದ ಕಸ ವಿಲೇವಾರಿ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಾಗುತ್ತಿದೆ’ ಎಂದು ಹೇಳಿದರು.

ಶನಿವಾರವೂ ಕಸ ವಿಲೇವಾರಿ ಇಲ್ಲ

‌ಕಸ ವಿಲೇವಾರಿ ಸ್ಥಗಿತ ಆಗಿರುವುದರಿಂದ ನಗರದಲ್ಲಿ ಅಲ್ಲಲ್ಲಿ ಕಸ ವಿಲೇವಾರಿಯಾಗದೆ ರಾಶಿ ಬಿದ್ದಿದ್ದು, ನಾಗರಿಕರಿಗೆ ಕಿರಿಕಿರಿ ಉಂಟು ಮಾಡಿದೆ.

ಕೆ.ಆರ್.ಮಾರುಕಟ್ಟೆ, ಎಸ್‌ಪಿ ರಸ್ತೆ, ಬನಶಂಕರಿ ಬಳಿ ಕನಕಪುರ ಮುಖ್ಯ ರಸ್ತೆ, ರಿಂಗ್ ರಸ್ತೆ, ಕತ್ರಿಗುಪ್ಪೆ, ರಾಜಾಜಿನಗರ, ಜಯನಗರ ಸೇರಿ ನಗರದ ಹಲವೆಡೆ ಕಸದ ರಾಶಿ ರಸ್ತೆ ಬದಿಯಲ್ಲಿ ಬಿದ್ದಿರುವುದು ಶುಕ್ರವಾರ ಕಂಡು ಬಂತು.

ಕಸದ ಟಿಪ್ಪರ್‌ಗಳು ಅಲ್ಲಲ್ಲಿ ಸಾಲುಗಟ್ಟಿ ನಿಂತಿದ್ದು, ಡೈರಿ ವೃತ್ತದಲ್ಲಿ ನಿಂತಿರುವ ಟಿಪ್ಪರ್‌ಗಳಿಗೆ ನಿವಾಸಿಗಳೇ ಕಸ ತಂದು ಸುರಿದಿರುವುದು ಕಂಡು ಬಂತು.

‘ಪಾಲಿಕೆ ಮುಖ್ಯ ಆಯುಕ್ತ ಗೌರವ್‌ ಗುಪ್ತ ಅವರು ಶನಿವಾರ ಬೆಳಿಗ್ಗೆ 10.30ಕ್ಕೆ ಸಭೆ ಕರೆದಿದ್ದಾರೆ. ಅಲ್ಲಿ ಏನು ನಿರ್ಧಾರ ಆಗಲಿದೆ ಎಂಬುದನ್ನು ನೋಡಿಕೊಂಡು ಮುಂದಿನ ಹೆಜ್ಜೆ ಇಡಲಾಗುವುದು. ಆ ತನಕ ಕಸ ವಿಲೇವಾರಿ ನಿರ್ವಹಿಸುವುದಿಲ್ಲ’ ಎಂದು ಬಾಲಸುಬ್ರಹ್ಮಣ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಸ ವಿಲೇವಾರಿ ಗುತ್ತಿಗೆದಾರರು 12 ಸಾವಿರ ಕಾರ್ಮಿಕರಿಗೆ ವೇತನ ಕೊಡಬೇಕಿದೆ. 8 ತಿಂಗಳಿಂದ ಬಾಕಿ ಬಿಡುಗಡೆ ಮಾಡದಿದ್ದರೆ ಯಾವ ಹಣದಲ್ಲಿ ವೇತನ ನೀಡಬೇಕು’ ಎಂದು ಅವರು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT