ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ: ಯುಪಿಎಚ್‌ಸಿ ನಿರ್ವಹಣೆ ತಂತ್ರಾಂಶ ಬಿಡುಗಡೆ

ಚಿಕಿತ್ಸೆ ಪಡೆವ ರೋಗಿಗಳ ಮಾಹಿತಿ ಸಂಗ್ರಹಕ್ಕೆ ಡಿಜಿಟಲ್‌ ವೇದಿಕೆ * ಕೋವಿಡ್‌ ನಿಯಂತ್ರಣಕ್ಕೂ ಸಹಕಾರಿ
Last Updated 6 ಆಗಸ್ಟ್ 2020, 18:17 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ (ಯುಪಿಎಚ್‌ಸಿ) ಚಿಕಿತ್ಸೆ ಪಡೆಯುವ ರೋಗಿಗಳ ಸಮಗ್ರ ಆರೋಗ್ಯ ಮಾಹಿತಿ ಸಂಗ್ರಹಿಸಿ ಆರೋಗ್ಯ ಸುಧಾರಣೆಗೆ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಬಿಬಿಎಂಪಿ ಹೆಜ್ಜೆ ಇಟ್ಟಿದೆ. ಈ ಉದ್ದೇಶಕ್ಕಾಗಿ ರೂಪಿಸಿರುವ ತಂತ್ರಂಶವನ್ನು ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಗುರುವಾರ ಬಿಡುಗಡೆ ಮಾಡಿದರು.

‘ಬಿಬಿಎಂಪಿ ಅಧೀನದ ಯಾವುದೇ ಯುಪಿಎಚ್‌ಸಿಗೆ ಅಥವಾ ಆಸ್ಪತ್ರೆಗೆ ಯಾರೇ ಚಿಕಿತ್ಸೆಗೆ ಬಂದರೂ ಅವರ ಆರೋಗ್ಯ ಮಾಹಿತಿ ಪಡೆದು ಡಿಜಿಟಲ್‌ ರೂಪದಲ್ಲಿ ಸಂಗ್ರಹಿಸಿ ವಿಶ್ಲೇಷಿಸಲು ಯುನೈಟೆಡ್‌ ವೇ ಆಫ್‌ ಬೆಂಗಳೂರು ಸಂಸ್ಥೆ ತಂತ್ರಾಂಶ ಅಭಿವೃದ್ಧಿಪಡಿಸಿದ್ದು, ಅದನ್ನು ಈ ಪೋರ್ಟಲ್‌ನಲ್ಲಿ ಬಳಸಲಾಗುತ್ತದೆ. ಪ್ರಯೋಗಾಲಯ ಪರೀಕ್ಷೆಗಳ ಫಲಿತಾಂಶ, ರೋಗಿಗಳಿಗೆ ನೀಡಿದ ಔಷಧ ಮುಂತಾದ ಮಾಹಿತಿಗಳನ್ನೂ ಇದರಲ್ಲಿ ಸೇರಿಸಲಾಗುತ್ತಿದೆ’ ಎಂದು ಅಶ್ವತ್ಥನಾರಾಯಣ ತಿಳಿಸಿದರು.

‘ಆಶಾ ಕಾರ್ಯಕರ್ತೆಯರು ಹಾಗೂ ಕಿರಿಯ ಆರೋಗ್ಯ ಸಹಾಯಕಿಯರು ಸೇರಿ 1200 ಮಂದಿಗೆ ಟ್ಯಾಬ್‌ ನೀಡಲಿದ್ದೇವೆ. ಹೆಚ್ಚುವರಿ ಆರೋಗ್ಯ ಸಿಬ್ಬಂದಿ ನೇಮಕಾತಿಗೂ ಕ್ರಮ ವಹಿಸಲಾಗಿದೆ’ ಎಂದು ತಿಳಿಸಿದರು.

‘ನಗರ ಮತ್ತು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ 63 ಪಿಎಚ್‌ಸಿ ಹಾಗೂ ಬಿಬಿಎಂಪಿ ವ್ಯಾಪ್ತಿಯ 141 ಪಿಎಚ್‌ಸಿಗಳಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳ ಆರೋಗ್ಯ ಮಾಹಿತಿಯನ್ನು ಈ ಪೋರ್ಟಲ್‌ನಲ್ಲಿ ದಾಖಲಿಸಲಾಗುತ್ತದೆ. ಕೋವಿಡ್‌ ಪ್ರಕರಣಗಳು ಯಾವ ಪ್ರದೇಶದಲ್ಲಿ ಪತ್ತೆಯಾಗಿದೆ ಎಂಬ ಮಾಹಿತಿ ಈ ಹಿಂದೆ ಬಳಸುತ್ತಿದ್ದ ತಂತ್ರಾಂಶದಲ್ಲೂ ಲಭ್ಯವಾಗುತ್ತಿತ್ತು. ಈಗ ಎರಡೂ ತಂತ್ರಾಂಶಗಳನ್ನು ಜೋಡಿಸಿದ್ದರಿಂದ ಹೆಚ್ಚು ಪರಿಣಾಮಕಾರಿಯಾಗಿ ಆರೋಗ್ಯ ಸೇವೆ ಒದಗಿಸಲು ಹಾಗೂ ಇದಕ್ಕೆ ಸಂಬಂಧಿಸಿದ ಮೂಲಸೌಕರ್ಯ ಸುಧಾರಿಸಲು ಸಾಧ್ಯವಾಗಲಿದೆ’ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥಪ್ರಸಾದ್‌ ಮಾಹಿತಿ ನೀಡಿದರು.

ಕೋವಿಡ್ ನಿಯಂತ್ರಣಕ್ಕೂ ಸಹಕಾರಿ: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ, ಸೋಂಕಿತರ ಜೊತೆ ನೇರ ಸಂಪರ್ಕ ಹೊಂದಿದವರ ಪತ್ತೆ ಹಚ್ಚುವಿಕೆ, ಕಂಟೈನ್‌ಮೆಂಟ್ ವಲಯಗಳ ನಿರ್ವಹಣೆ, ಕೆಮ್ಮು, ಶೀತಜ್ವರ (ಐಎಲ್ಐ), ಉಸಿರಾಟದ ಸಮಸ್ಯೆ ಇರುವವರ ಹಾಗೂ ಅನ್ಯರೋಗ ಹೊಂದಿರುವವರ ಸಮೀಕ್ಷೆಯ ದತ್ತಾಂಶಗಳು, ಜ್ವರ ತಪಾಸಣಾ ಕೇಂದ್ರಗಳ ನಿರ್ವಹಣೆ, ಗಂಟಲು ದ್ರವ ಮಾದರಿ ಪರೀಕ್ಷೆ ಹಾಗೂ ಇತರೆ ಚಟುವಟಿಕೆಗಳ ನಿರ್ವಹಣೆ ವರದಿಯನ್ನು ತ್ವರಿತವಾಗಿ ಪಿಎಚ್‌ಸಿಗಳಿಂದ ಪಡೆಯುವುದಕ್ಕೂ ಈ ಪೋರ್ಟಲ್‌ ನೆರವಾಗಲಿದೆ ಎಂದು ಬಿಬಿಎಂಪಿ ತಿಳಿಸಿದೆ.

ಹಾಸಿಗೆ ಹಂಚಿಕೆ– ವಲಯ ಮಟ್ಟದಲ್ಲೇ ಕ್ರಮ

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಧೃಡಪಟ್ಟವರಿಗೆ ಸಮೀಪದ ಆಸ್ಪತ್ರೆಯಲ್ಲಿ ಹಾಸಿಗೆ ಹಂಚಿಕೆ ಕಾರ್ಯ ಇನ್ನು ವಲಯ ಮಟ್ಟದ ಕಮಾಂಡ್‌ ಕೇಂದ್ರಗಳ ಮೂಲಕವೇ ನಡೆಯಲಿದೆ. ಹಾಸಿಗೆ ನಿರ್ವಹಣಾ ವ್ಯವಸ್ಥೆಗೆ ಸಂಬಂಧಿಸಿ ಬಿಬಿಎಂಪಿ ಅಭಿವೃದ್ಧಿಪಡಿಸಿದ ಆ್ಯಪ್‌ ಅನ್ನು ಈ ಸಲುವಾಗಿ ಪರಿಷ್ಕರಿಸಲಾಗಿದೆ. ಪರಿಷ್ಕೃತ ಆ್ಯಪ್‌ ಅನ್ನು ಅಶ್ವತ್ಥನಾರಾಯಣ ಬಿಡುಗಡೆ ಮಾಡಿದರು.ಇದುವರೆಗೆ, ಐಸಿಎಂಆರ್‌ ಪೋರ್ಟಲ್‌ನಲ್ಲಿ ಪ್ರಕಟವಾದ ಮಾಹಿತಿ ಆಧಾರದಲ್ಲಿ ಬಿಬಿಎಂಪಿ ಕೇಂದ್ರ ಕಚೇರಿಯ ವಾರ‌್ ರೂಮ್‌ ಮೂಲಕ ಹಾಸಿಗೆ ಹಂಚಿಕೆಗೆ ಕ್ರಮ ಕೈಗೊಳ್ಳಲಾಗುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT