ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಚಾರ ದಟ್ಟಣೆ: ಬಳಲಿದ ‘ಉತ್ತರ’ದ ಜನರು

Last Updated 13 ನವೆಂಬರ್ 2019, 6:42 IST
ಅಕ್ಷರ ಗಾತ್ರ

ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಅಪಾರ್ಟ್‌ಮೆಂಟ್‌ ಸಮುಚ್ಚಯಗಳು, ಸಂಚಾರ ದಟ್ಟಣೆ, ಹಂದಿಗಳ ಕಾಟ... ಬಿಬಿಎಂಪಿ ವ್ಯಾಪ್ತಿಯಲ್ಲಿ ಉತ್ತರ ದಿಕ್ಕಿನ ತುದಿಯಲ್ಲಿರುವ ಯಲಹಂಕ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆಂಪೇಗೌಡ, ಚೌಡೇಶ್ವರಿ, ಅಟ್ಟೂರು ಮತ್ತು ಯಲಹಂಕ ಉಪನಗರ ವಾರ್ಡ್‌ಗಳಲ್ಲಿ ಕಂಡುಬರುವ ಗಂಭೀರ ಸಮಸ್ಯೆಗಳಿವು.

ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭವಾದ ಬಳಿಕ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಈ ಪ್ರದೇಶದಲ್ಲಿ ವರ್ಷದಿಂದ ವರ್ಷ ಲಘು ಬಗೆಯಿಂದ ಕಟ್ಟಡಗಳು ತಲೆ ಎತ್ತುತ್ತಿವೆ. ಅದಕ್ಕೆ ತಕ್ಕಂತೆ ಮೂಲಸೌಕರ್ಯ ಅಭಿವೃದ್ಧಿ ಆಗುತ್ತಿಲ್ಲ. ಒಂದೊಂದು ವಾರ್ಡ್‌ನಲ್ಲಿ ಒಂದೊಂದು ರೀತಿಯ ಸಮಸ್ಯೆಗಳಿವೆ. ಈ ವಾರ್ಡ್‌ಗಳ ಚಿತ್ರಣವನ್ನು ವಿಜಯ್‌ ಕುಮಾರ್‌ ಎಸ್‌.ಕೆ. ಕಟ್ಟಿಕೊಟ್ಟಿದ್ದಾರೆ.


ಬಿಬಿಎಂಪಿಯ 198 ವಾರ್ಡ್‌ಗಳಲ್ಲಿ ಒಂದನೇ ವಾರ್ಡ್‌ ಯಲಹಂಕದ ಕೆಂಪೇಗೌಡ ವಾರ್ಡ್. ಇದನ್ನು ಯಲಹಂಕ ಹಳೇನಗರ ಎಂದೂ ಕರೆಯಲಾಗುತ್ತದೆ. ಈ ವಾರ್ಡ್‌ನಲ್ಲಿ ಸಂಚಾರ ದಟ್ಟಣೆ ಸಮಸ್ಯೆಯೇ ದೊಡ್ಡದು. ಅದರ ಜತೆಗೆ ಕುಡಿಯುವ ನೀರಿನ ಸಮಸ್ಯೆಯೂ ಇದೆ.

ಯಲಹಂಕ ರೈಲು ನಿಲ್ದಾಣ ಈ ವಾರ್ಡ್‌ ವ್ಯಾಪ್ತಿಯಲ್ಲಿದೆ. ರೈಲ್ವೆ ಕೆಳಸೇತುವೆ ನಿರ್ಮಾಣ ಮಾಡಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದೆ.

ಎನ್‌ಇಎಸ್ ಬಸ್ ನಿಲ್ದಾಣ ಕಡೆಯಿಂದ (ದೊಡ್ಡಬಳ್ಳಾಪುರ ಮುಖ್ಯರಸ್ತೆ) ಯಲಹಂಕ ಹಳೇ ನಗರಕ್ಕೆ ಹೋಗಲು ರೈಲ್ವೆ ನಿಲ್ದಾಣದ ಬದಿಯಲ್ಲಿ ದಾರಿ ಇದೆ. ಆದರೆ, ಅದಕ್ಕೆ ಅಂಡರ್‌ಪಾಸ್ ಆಗಲಿ, ಪಾದಚಾರಿ ಮೇಲ್ಸೇತುವೆಯಾಗಲಿ ಇಲ್ಲ. ಇದೇ ರಸ್ತೆಯಲ್ಲಿ ಮಿನಿ ವಿಧಾನಸೌಧವಿದ್ದು, ಈ ಕಟ್ಟಡದಲ್ಲಿ 26 ಇಲಾಖೆಗಳ ಕಚೇರಿಗಳಿವೆ. ಕೆಳಸೇತುವೆ ನಿರ್ಮಾಣವಾದರೆ ವಾಹನ ಸವಾರರು ಯಲಹಂಕ ಹಳೇನಗರದಿಂದ ಮಿನಿ ವಿಧಾನಸೌಧ ಮತ್ತು ದೊಡ್ಡಬಳ್ಳಾಪುರ ಮುಖ್ಯರಸ್ತೆಯನ್ನು 5 ನಿಮಿಷಗಳಲ್ಲೇ ತಲುಪಬಹುದು. ಆದರೆ, ಈಗ ಕೊಂಡಪ್ಪ ಮತ್ತು ಕಾಮಾಕ್ಷಮ್ಮ ಬಡಾವಣೆಗಳ ಜನರು ಸಂತೆ ವೃತ್ತ, ಪೊಲೀಸ್ ಠಾಣೆ ವೃತ್ತಗಳನ್ನು ಸುತ್ತಿಕೊಂಡು 2 ಕಿ.ಮೀ. ದೂರ ಸಂಚರಿಸಬೇಕಾಗಿದೆ.

7 ವರ್ಷಗಳ ಹಿಂದೆ ಕೆಳಸೇತುವೆ ನಿರ್ಮಾಣಕ್ಕೆ ಚಾಲನೆ ದೊರೆತಿತ್ತು. ಆದರೆ, ರೈಲ್ವೆ ಇಲಾಖೆ ಮತ್ತು ಬಿಬಿಎಂಪಿ ನಡುವೆ ಸಮನ್ವಯದ ಕೊರತೆಯಿಂದ ಯೋಜನೆ ನನೆಗುದಿಗೆ ಬಿದ್ದಿತು.

ಇದಲ್ಲದೇ ಕುಡಿಯುವ ನೀರಿನ ಸಮಸ್ಯೆಯೂ ಈ ವಾರ್ಡ್‌ನ ಜನರನ್ನು ಕಾಡುತ್ತಿದೆ. ಇಡೀ ವಾರ್ಡ್‌ಗೆ ಕಾವೇರಿ ನೀರು ಪೂರೈಕೆಯಾಗುತ್ತಿಲ್ಲ. ರೈತರ ಸಂತೆ ನಡೆಯುವ ಜಾಗದಲ್ಲಿ ಇರುವ ಸಂಚಾರ ದಟ್ಟಣೆ ಕಿರಿಕಿರಿ ತಪ್ಪಲೇ ಇಲ್ಲ ಎನ್ನುತ್ತಾರೆ ಸ್ಥಳೀಯರು.

ಹಂದಿಗಳದ್ದೇ ದರ್ಬಾರ್‌

ಯಲಹಂಕ ಹಳೇ ನಗರಕ್ಕೆ ಹೊಂದಿಕೊಂಡಂತೆ ಇರುವ ಚೌಡೇಶ್ವರಿ ವಾರ್ಡ್‌ನಲ್ಲಿ ಹಂದಿಗಳದ್ದೇ ದರ್ಬಾರು.

ಮನೆಯಿಂದ ರಸ್ತೆಗೆ ಕಾಲಿಟ್ಟರೆ ಹಂದಿಗಳೇ ಎದುರಾಗುತ್ತವೆ. ಅವುಗಳನ್ನು ತಪ್ಪಿಸಿ ವಾಹನ ಚಾಲನೆ ಮಾಡುವುದೇ ಕಷ್ಟವಾಗಿದೆ ಎನ್ನುತ್ತಾರೆ ಚೌಡೇಶ್ವರಿ ವಾರ್ಡ್‌ನ ನಿವಾಸಿಗಳು.

ಹಂದಿಗಳನ್ನು ಹಿಡಿದು ಸಾಗಿಸಬೇಕೆಂದು ಬಿಬಿಎಂಪಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ. ಹತ್ತಿಪ್ಪತ್ತರಷ್ಟಿದ್ದ ಹಂದಿಗಳ ಸಂಖ್ಯೆ ಈಗ 200ಕ್ಕೂ ಹೆಚ್ಚಾಗಿದೆ.

ಹಂದಿಗಳ ಸಾಕುವವರು ಇವುಗಳನ್ನು ಬೀದಿಗೆ ಬಿಡುತ್ತಿದ್ದಾರೆ. ಸ್ಥಳಾಂತರಕ್ಕೆ ಮುಂದಾದರೆ ಸಂಘಟನೆಗಳ ಹೆಸರಿನಲ್ಲಿ ಬೆದರಿಕೆ ಹಾಕುತ್ತಾರೆ. ಹೀಗಾಗಿ ಹಂದಿ ಕಾಟದಿಂದ ಮುಕ್ತಿ ಸಿಕ್ಕಿಲ್ಲ ಎನ್ನುತ್ತಾರೆ ಸ್ಥಳೀಯರು.

ಕುಡಿಯುವ ನೀರಿಗೂ ಸಮಸ್ಯೆ: ಈ ವಾರ್ಡ್‌ನ ಕೆಲ ಬಡಾವಣೆಗಳಿಗೆ ಕಾವೇರಿ ನೀರಿನ ಸಂಪರ್ಕ ಇಲ್ಲ. 15 ಕೊಳವೆ ಬಾವಿಗಳಿದ್ದು, ಇವುಗಳ ಮೂಲಕವೇ 3ರಿಂದ 5 ದಿನಗಳಿಗೊಮ್ಮೆ ಕುಡಿಯುವ ನೀರು ಪೂರೈಸಲಾಗುತ್ತಿದೆ.
ಅಟ್ಟೂರು ವಾರ್ಡ್‌–ನೀರಿನ ಸಮಸ್ಯೆ

ಯಶವಂತಪುರ ಮತ್ತು ಜಾಲಹಳ್ಳಿ ಕ್ರಾಸ್‌ನಿಂದ ಯಲಹಂಕಕ್ಕೆ ಹೋಗುವ ಮಾರ್ಗದಲ್ಲಿ ಎಡಭಾಗಕ್ಕೆ ಅಟ್ಟೂರು ಸಿಗುತ್ತದೆ. ಇದು ಬಿಬಿಎಂಪಿಯ ಮೂರನೇ ವಾರ್ಡ್‌.

ಈ ವಾರ್ಡ್‌ನ ಬೆಟ್ಟಳ್ಳಿ ಸುತ್ತಮುತ್ತಲ ಹಲವು ಲೇಔಟ್‌ಗಳು ಇವೆ. ಸದ್ಯ ಚರಂಡಿ, ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ರಾಜಕಾಲುವೆ ನಿರ್ಮಾಣ ಕಾರ್ಯವೂ ಭರದಿಂದ ಸಾಗಿದೆ.

ಪಕ್ಕದ ಚೌಡೇಶ್ವರಿ ಬಡಾವಣೆಗೆ ಹೋಗುವ ಮುಖ್ಯ ರಸ್ತೆ ಕಿರಿದಾಗಿದೆ. ಹೀಗಾಗಿ ಬಿಎಂಟಿಸಿ ಬಸ್‌ಗಳು ಈ ಬಡಾವಣೆಗೆ ಬರುತ್ತಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ. ಕೂಡಲೇ ರಸ್ತೆ ಅಭಿವೃದ್ಧಿಯಾದರೆ ಯಲಹಂಕ ಮುಖ್ಯ ರಸ್ತೆ ತನಕ ನಡೆಯುವುದು ತಪ್ಪಲಿದೆ ಎಂದು ಬಡಾವಣೆಯ ಶ್ರೀಕಾಂತ್ ಹೇಳಿದರು.

ಇತ್ತೀಚೆಗೆ ಅಭಿವೃದ್ಧಿಗೊಂಡಿರುವ ಕಾವೇರಿ ಲೇಔಟ್‌ಗೆ ಮೂಲಸೌಕರ್ಯವಿಲ್ಲ. ಈ ಬಡಾವಣೆಯಲ್ಲಿ ಓಡಾಡಲು ರಸ್ತೆಯೇ ಇಲ್ಲವಾಗಿದ್ದು, ವಾಹನ ಸವಾರರು ಪಡಿಪಾಟಲು ಎದುರಿಸಬೇಕಾಗಿದೆ. ಮಳೆ ಬಂತೆಂದರೆ ಕಾಲಿಡಲು ಸಾಧ್ಯವಾಗದ ಸ್ಥಿತಿಗೆ ರಸ್ತೆಗಳು ತಲುಪುತ್ತವೆ. ಬಿಬಿಎಂಪಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನ ಆಗಿಲ್ಲ ಎನ್ನುತ್ತಾರೆ ನಿವಾಸಿಗಳು.

ಪಕ್ಕದ ಬಡಾವಣೆಗೆ ಬಿಬಿಎಂಪಿ ಕುಡಿಯುವ ನೀರು ಪೂರೈಸುತ್ತಿದೆ. ಕಸ ಸಂಗ್ರಹವನ್ನೂ ಮಾಡುತ್ತಿದೆ. ಆದರೆ, ಈ ಬಡಾವಣೆಯನ್ನು ಮಾತ್ರ ನಿರ್ಲಕ್ಷ್ಯ ಮಾಡಲಾಗಿದೆ ಎಂದು ನಿವಾಸಿಗಳು ದೂರುತ್ತಾರೆ.

ದಟ್ಟಣೆಯೇ ತಲೆಬಿಸಿ

ಟ್ರಾಫಿಕ್ ಕಿರಿಕಿರಿ ಬಿಟ್ಟರೆ ಮೂಲ ಸೌಕರ್ಯಗಳ ಸಮಸ್ಯೆ ಅಷ್ಟಾಗಿ ಇಲ್ಲದ ವಾರ್ಡ್ ಎಂದರೆ ಯಲಹಂಕ ಉಪನಗರ.

ದೊಡ್ಡಬಳ್ಳಾಪುರ ರಸ್ತೆ ಮತ್ತು ಮದರ್ ಡೇರಿ ನಡುವೆ ಇರುವ ಯಲಹಂಕ ಉಪನಗರದಲ್ಲಿ ಅತ್ಯಂತ ವೇಗವಾಗಿ ಬೆಳೆದ ಬಡಾವಣೆ. ಈ ವಾರ್ಡ್‌ನ ಪ್ರಮುಖ ಸಮಸ್ಯೆ ಎಂದರೆ ಸಂಚಾರ ದಟ್ಟಣೆ.

ಯಶವಂತಪುರದಿಂದ ಯಲಹಂಕಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗೆ ಯಲಹಂಕ ಉಪನಗರದ ಬಳಿ ಮೇಲ್ಸೇತುವೆ ನಿರ್ಮಾಣ ಮಾಡಲಾಗುತ್ತಿದೆ.

₹30 ಕೋಟಿ ಮೊತ್ತದ ಯೋಜನೆಯ ಕಾಮಗಾರಿ ಆರಂಭವಾಗಿ ವರ್ಷವೇ ಕಳೆದಿದೆ. ದೊಡ್ಡಬಳ್ಳಾಪುರ ರಸ್ತೆಯಿಂದ ಮತ್ತು ಮದರ್ ಡೈರಿ ಕಡೆಗೆ ಸಂಚಾರ ಸುಗಮಗೊಳಿಸುವ ಮೇಲ್ಸೇತುವೆ ನಿರ್ಮಾಣ ಮಾಡಲಾಗುತ್ತಿದೆ.

ಸದ್ಯ ಸರ್ವಿಸ್ ರಸ್ತೆಯಲ್ಲಿ ವಾಹನಗಳು ಸಂಚರಿಸುತ್ತಿದ್ದು, ಪ್ರತಿದಿನ ಸಂಜೆ ಮತ್ತು ಬೆಳಿಗ್ಗೆ ದಟ್ಟಣೆ ನಡುವೆ ಜನ ಸಿಲುಕಿಕೊಳ್ಳುತ್ತಿದ್ದಾರೆ. ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದ್ದು, ಇದು ಪೂರ್ಣಗೊಂಡರೆ ಸಂಚಾರ ದಟ್ಟಣೆ ಸಮಸ್ಯೆ ಪರಿಹಾರವಾಗಲಿದೆ ಎನ್ನುತ್ತಾರೆ ಸ್ಥಳೀಯರು.

ಈ ಮುಖ್ಯ ರಸ್ತೆಗೆ ಪರ್ಯಾಯ ರಸ್ತೆಯಂತಿರುವ ಶೇಷಾದ್ರಿಪುರಂ ಕಾಲೇಜು ಪಕ್ಕದಲ್ಲಿ ಹಾದು ಹೋಗುವ ರಸ್ತೆಯಲ್ಲಿ ಸದಾ ಸಂಚಾರ ದಟ್ಟಣೆ ಇರುತ್ತದೆ. ಈ ರಸ್ತೆಯಲ್ಲಿ ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡುವುದೇ ಈ ಸಮಸ್ಯೆಗೆ ಕಾರಣ ಎನ್ನುತ್ತಾರೆ ಸ್ಥಳೀಯರು.

ವಾರ್ಡ್‌; ಪಾಲಿಕೆ ಸದಸ್ಯರು; ಜನಸಂಖ್ಯೆ; ವಿಸ್ತೀರ್ಣ(ಚದರ ಕಿ.ಮೀ); ರಸ್ತೆ ಉದ್ದ; ಉದ್ಯಾನ (ಚದರ ಕಿ.ಮೀ); ಆಟದ ಮೈದಾನ; ಬಸ್ ನಿಲ್ದಾಣ

ಕೆಂಪೇಗೌಡ; ಚಂದ್ರಮ್ಮ ಕೆಂಪೇಗೌಡ; 34,783; 10.9; 86; 5899.74; 0; 35

ಚೌಡೇಶ್ವರಿ; ಆರ್‌.ಪದ್ಮಾವತಿ ಅಮರನಾಥ್‌; 36,602; 6.5; 72; 11181.39; 0; 19

ಅಟ್ಟೂರು; ನೇತ್ರ ಪಲ್ಲವಿ; 58,129; 8.8; 169; 98281.4; 4; 31

ಯಲಹಂಕ ಉಪನಗರ: ಎಂ.ಸತೀಶ; 41,986; 4.6; 86; 153858.29; 2; 21
ಅಗ್ರ ಮೂರು ಸಮಸ್ಯೆಗಳು

ಕೆಂಪೇಗೌಡ ವಾರ್ಡ್‌

* ಕುಡಿಯಲು ಕಾವೇರಿ ನೀರಿಲ್ಲ

* ಅಂಡರ್ ಪಾಸ್ ನಿರ್ಮಾಣ ಆಗಬೇಕಿದೆ

* ರೈತರ ಸಂತೆ ಬಳಿ ತಪ್ಪದ ಸಂಚಾರ ದಟ್ಟಣೆ

ಚೌಡೇಶ್ವರಿ ವಾರ್ಡ್‌

* ಹಂದಿಗಳದ್ದೇ ದೊಡ್ಡ ಕಾಟ

* ಕುಡಿಯುವ ನೀರಿಗೆ ಪರದಾಟ

* ಸಂಚಾರದ ದಟ್ಟಣೆಯ ಕಿರಿಕಿರಿ

ಅಟ್ಟೂರು ವಾರ್ಡ್‌

* ಅಸಮರ್ಪಕ ಕಸ ನಿರ್ವಹಣೆ

* ಕಿರಿದಾದ ಮುಖ್ಯ ರಸ್ತೆ

* ಮೂಲ ಸೌಕರ್ಯವೇ ಇಲ್ಲದ ಕಾವೇರಿ ಲೇಔಟ್‌

ಯಲಹಂಕ ಉಪನಗರ ವಾರ್ಡ್‌

* ಮೇಲ್ಸೇತುವೆ ಕಾಮಗಾರಿ ವಿಳಂಬ

* ಸಂಚಾರ ದಟ್ಟಣೆಯೇ ದೊಡ್ಡ ಸಮಸ್ಯೆ

* ತಪ್ಪಬೇಕಿದೆ ಬೇಕಾಬಿಟ್ಟಿ ವಾಹನ ನಿಲುಗಡೆ

* ರೈಲ್ವೆ ಅಂಡರ್ ಪಾಸ್ ಇಲ್ಲದ ಕಾರಣ ಹಳಿಗಳನ್ನು ದಾಟಿಕೊಂಡೇ ಬರಬೇಕಿದೆ. ರೈಲು ಬಂದಾಗ ಮಕ್ಕಳು, ವಿದ್ಯಾರ್ಥಿಗಳು ಕಾದು ನಿಲ್ಲಬೇಕು

- ನಯನಾ, ವಿದ್ಯಾರ್ಥಿನಿ

* ಶಾಲಾ–ಕಾಲೇಜು, ಸರ್ಕಾರಿ ಕಚೇರಿಗಳಿಗೆ ಹೋಗಲು ಇದು ಹತ್ತಿರದ ದಾರಿ. ರೈಲ್ವೆ ಹಳಿಗೆ ಅಂಡರ್ ಪಾಸ್ ಇಲ್ಲದ ಕಾರಣ 2 ಕಿ.ಮೀ. ಸುತ್ತಾಡಿಕೊಂಡು ಬರಬೇಕಿದೆ

–ಲಾವಣ್ಯ, ವಿದ್ಯಾರ್ಥಿನಿ

* ಅಟ್ಟೂರು ವಾರ್ಡ್‌ನಲ್ಲಿ ಚರಂಡಿ, ರಸ್ತೆ ಅಭಿವೃದ್ಧಿ ಕಾಮಗಾರಿಗಳು ಆರಂಭವಾಗಿದೆ. ಶಾಸಕರು ಅನುದಾನ ತಂದು ಹೆಚ್ಚಿನ ಕೆಲಸ ಮಾಡಿಸುತ್ತಿದ್ದಾರೆ

–ಜಗದೀಶ್, ಅಟ್ಟೂರು ವಾರ್ಡ್ ನಿವಾಸಿ

* ಬೆಟ್ಟಳ್ಳಿ ಲೇಔಟ್‌ನಲ್ಲಿ ರಾಜಕಾಲುವೆ, ರಸ್ತೆ ಕಾಮಗಾರಿಗಳು ನಡೆಯುತ್ತಿವೆ. ಜನಪ್ರತಿನಿಧಿ ಯಾವುದೇ ಪಕ್ಷದವರೇ ಆಗಿರಲಿ, ಜನರಿಗೆ ಮೂಲ ಸೌಕರ್ಯ ಕಲ್ಪಿಸಬೇಕು

–ಬಾಬು ಜಾಜ್, ಬೆಟ್ಟಳ್ಳಿ ನಿವಾಸಿ

* ಯಲಹಂಕ ಉಪನಗರದಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಬಿಟ್ಟರೆ ಹೇಳಿಕೊಳ್ಳುವಂತಹ ಬೇರೆ ಮೂಲಸೌಕರ್ಯದ ಸಮಸ್ಯೆ ಇಲ್ಲ. ಉದ್ಯಾನಗಳು ಅಭಿವೃದ್ಧಿ ಕಂಡಿವೆ

–ವೆಂಕಟರಮಣ ಶರ್ಮ

* ಕುಡಿಯುವ ನೀರಿನ ಸಮಸ್ಯೆ ಸರಿಪಡಿಸಲು ಪ್ರಯತ್ನಿಸಲಾಗುತ್ತಿದೆ. ಕೊಳವೆ ಬಾವಿಗಳಿಂದಲೇ ನೀರು ಪೂರೈಸಲಾಗುತ್ತಿದೆ

–ಆರ್. ಪದ್ಮಾವತಿ ಅಮರನಾಥ್, ಚೌಡೇಶ್ವರಿ ವಾರ್ಡ್ ಸದಸ್ಯೆ

* ಮೆಲ್ಸೇತುವೆ ನಿರ್ಮಾಣ ಕಾಮಗಾರಿ ಜನವರಿ ಅಥವಾ ಫೆಬ್ರುವರಿಯಲ್ಲಿ ಪೂರ್ಣಗೊಳ್ಳಲಿದೆ. ಬಳಿಕ ಸಂಚಾರ ದಟ್ಟಣೆ ಸಮಸ್ಯೆ ಪರಿಹಾರವಾಗಲಿದೆ

–ಎಂ. ಸತೀಶ್‌, ಯಲಹಂಕ ಉಪನಗರ ವಾರ್ಡ್ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT