ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಂತಿನಗರ ವಾರ್ಡ್‌ ಸಮಿತಿ: 4 ಸದಸ್ಯರಿಗೆ ಅರ್ಧಚಂದ್ರ

ಪ್ರಶ್ನಿಸುವ ಮನೋಭಾವಕ್ಕೆ ಬೆಲೆತೆತ್ತ ಸದಸ್ಯರು?
Last Updated 26 ಅಕ್ಟೋಬರ್ 2019, 20:22 IST
ಅಕ್ಷರ ಗಾತ್ರ

ಬೆಂಗಳೂರು: ಶಾಂತಿನಗರ ವಾರ್ಡ್‌ ಸಮಿತಿಯಿಂದ ನಾಲ್ವರು ಸದಸ್ಯರನ್ನು ಕೈಬಿಡಲಾಗಿದೆ. ಅಚ್ಚರಿ ಎಂದರೆ ತಮ್ಮನ್ನು ಸಮಿತಿಯಿಂದ ಕೈಬಿಟ್ಟ ವಿಚಾರ ಆ ಸದಸ್ಯರಿಗೆ ತಿಳಿದದ್ದು ಮೂರು ತಿಂಗಳ ಬಳಿಕ. ಅದೂ ಸಮಿತಿ ಸಭೆಗೆ ಹಾಜರಾದ ಸಂದರ್ಭದಲ್ಲಿ.

ವಾರ್ಡ್‌ ಸಮಿತಿ ರಚನೆ ಸಲುವಾಗಿ ಕಾನೂನು ಹೋರಾಟ ನಡೆಸಿದ್ದ ಕಾತ್ಯಾಯಿನಿ ಚಾಮರಾಜ್‌, ನಿರುಪಮಾ ಶರ್ಮ, ರಾಜೇಶ್‌ ನಾಗಪಾಲ್‌ ಹಾಗೂ ಎಡ್ಗರ್ ಬ್ರಿಟ್ಟೊ ಸದಸ್ಯತ್ವ ಕಳೆದುಕೊಂಡವರು. ಅವರನ್ನು 2019ರ ಜುಲೈನಲ್ಲೇ ಸಮಿತಿಯಿಂದ ಕೈಬಿಟ್ಟು ನಾಲ್ವರು ಹೊಸ ಸದಸ್ಯರನ್ನು ನೇಮಿಸಿಕೊಳ್ಳಲಾಗಿದೆ.

‘ಅ.19 ರಂದು ನಡೆದ ಸಮಿತಿ ಸಭೆಗೆ ನಾವು ಎಂದಿನಂತೆ ಹಾಜರಾಗಿದ್ದೆವು. ವಾರ್ಡ್‌ನ ಪಾದಚಾರಿ ಮಾರ್ಗಗಳ ಹಾಗೂ ರಸ್ತೆಗಳ ದುಃಸ್ಥಿತಿ ಬಗ್ಗೆ ನಾನು ಪ್ರಶ್ನೆ ಮಾಡಿದೆ. ಆಗ, ‘ಜುಲೈನಿಂದ ನೀವು ಸಮಿತಿ ಸದಸ್ಯರಾಗಿ ಉಳಿದಿಲ್ಲ’ ಎಂದು ಆದೇಶದ ಪ್ರತಿಯನ್ನು ತೋರಿಸಿದರು. ಆಗಸ್ಟ್‌ ಹಾಗೂ ಸೆಪ್ಟೆಂಬರ್‌ ತಿಂಗಳ ಸಭೆಯಲ್ಲೂ ನಾವು ಭಾಗವಹಿಸಿದ್ದೆವು. ಆಗ ಈ ಬಗ್ಗೆ ಮಾಹಿತಿ ನೀಡಿರಲಿಲ್ಲ’ ಎಂದು ಕಾತ್ಯಾಯಿನಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಿಯಮ ಪ್ರಕಾರ, ಪಾಲಿಕೆ ಸದಸ್ಯರ ಅಧಿಕಾರದ ಅವಧಿಯಷ್ಟೇ ವಾರ್ಡ್‌ ಸಮಿತಿ ಸದಸ್ಯರ ಅವಧಿಯೂ ಇರುತ್ತದೆ. ನಮ್ಮನ್ನು ಕೈಬಿಟ್ಟಿದ್ದಕ್ಕೆ ಕಾರಣ ತಿಳಿಸಿಲ್ಲ. ಸಕಾರಣವಿಲ್ಲದೇ ಸದಸ್ಯರನ್ನು ಸಮಿತಿಯಿಂದ ಕೈಬಿಡಲು ನಿಯಮದಲ್ಲಿ ಅವಕಾಶವಿಲ್ಲವಲ್ಲ ಎಂದು ಪ್ರಶ್ನಿಸಿದ್ದಕ್ಕೆ, ‘ಸದಸ್ಯರನ್ನು ಕೈಬಿಡಬಾರದು ಎಂದೂ ನಿಯಮಗಳಲ್ಲಿ ಹೇಳಿಲ್ಲ’ ಎಂದು ವ್ಯಂಗ್ಯವಾಗಿ ಉತ್ತರಿಸಿದರು’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಸಭೆಗೆ ಏಳು ದಿನ ಮುಂಚಿತವಾಗಿ ಸದಸ್ಯರಿಗೆ ಮಾಹಿತಿ ನೀಡಬೇಕು. ಸಭೆಯ ಕಾರ್ಯಸೂಚಿಗಳನ್ನು ಬಿಬಿಎಂಪಿ ವಾರ್ಡ್‌ ಕಚೇರಿ, ಬೆಸ್ಕಾಂ ಮತ್ತು ಜಲಮಂಡಳಿಗಳ ಸ್ಥಳೀಯ ಕಚೇರಿ ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳ ಸೂಚನಾ ಫಲಕದಲ್ಲಿ ಪ್ರಕಟಿಸಬೇಕು. ಇದ್ಯಾವುದನ್ನೂ ಪಾಲಿಸುತ್ತಿರಲಿಲ್ಲ. ಈ ಲೋಪಗಳ ಬಗ್ಗೆ ಸಭೆಯಲ್ಲೇ ಪ್ರಶ್ನೆ ಮಾಡುತ್ತಿದ್ದೆ. ಇದು ಬಹುಷಃ ಸಮಿತಿ ಅಧ್ಯಕ್ಷರಿಗೆ ರುಚಿಸಿರಲಿಕ್ಕಿಲ್ಲ. ಹಾಗಾಗಿ, ನಮ್ಮನ್ನು ಸಮಿತಿಯಿಂದ ಕೈಬಿಟ್ಟಿರಬಹುದು’ ಎಂದು ಕಾತ್ಯಾಯಿನಿ ತಿಳಿಸಿದರು.

‘ಸಕಾರಣವಿಲ್ಲದೇ ಕೈಬಿಡಬಾರದು’
‘ಪಾಲಿಕೆ ಸದಸ್ಯರು ತಮ್ಮ ಆಣತಿ ಪಾಲಿಸದ ಸದಸ್ಯರನ್ನು ಕೈಬಿಟ್ಟರೆ ವಾರ್ಡ್‌ ಸಮಿತಿಗಳ ಆಶಯವೇ ಮಣ್ಣುಪಾಲಾಗಲಿದೆ. ಸದಸ್ಯರನ್ನು ಕೈಬಿಡಲು ಸೂಕ್ತ ಕಾರಣ ನೀಡಬೇಕು. ಸದಸ್ಯರು ತಮ್ಮ ಹುದ್ದೆಯ ಆಶಯಕ್ಕೆ ಧಕ್ಕೆ ತರುವಂತೆ ವರ್ತಿಸಿದರೆ ಮಾತ್ರ ಅವರನ್ನು ಬದಲಾಯಿಸುವಂತಿರಬೇಕು. ಈ ಬಗ್ಗೆ ನಿಯಮಗಳಿಗೆ ತಿದ್ದುಪಡಿ ಮಾಡಬೇಕು. ಇಲ್ಲದಿದ್ದರೆ ಪಾಲಿಕೆ ಸದಸ್ಯರು ತಮ್ಮ ಮೂಗಿನ ನೇರಕ್ಕೆ ಸಮಿತಿಯನ್ನು ನಿಯಂತ್ರಿಸುವ ಅಪಾಯವಿದೆ’ ಎಂದು ‘ಸಿಟಿಜನ್ಸ್‌ ಫಾರ್ ಬೆಂಗಳೂರು’ ಸಂಘಟನೆಯ ಉಮೇಶ್‌ ಗೌಡ ಪಿಳ್ಳೇಗೌಡ ಅಭಿಪ್ರಾಯಪಟ್ಟರು.

‘ಕೌನ್ಸಿಲ್ ಸಭೆ ಒಪ್ಪಿಗೆ ಪಡೆದೇ ಕೈಬಿಟ್ಟಿದ್ದೇವೆ’
‘ವಾರ್ಡ್‌ ಸಮಿತಿ ಸದಸ್ಯರನ್ನು ನಾವು ಏಕಾಏಕಿ ಕೈಬಿಟ್ಟಿಲ್ಲ. ಬಿಬಿಎಂಪಿ ಕೌನ್ಸಿಲ್‌ ಸಭೆಯ ಒಪ್ಪಿಗೆ ಪಡೆದೇ ಈ ನಿರ್ಧಾರ ಕೈಗೊಂಡಿದ್ದೇವೆ’ ಎಂದು ಶಾಂತಿನಗರ ವಾರ್ಡ್‌ನ ಪಾಲಿಕೆ ಸದಸ್ಯೆ ಪಿ.ಸೌಮ್ಯಾ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಸಮಿತಿ ಸದಸ್ಯರ ಮೇಲೆ ಯಾವ ದ್ವೇಷವೂ ಇಲ್ಲ. ಅವರನ್ನು ಸಮಿತಿಗೆ ಸೇರಿಸಿದ್ದೂ ನಾವೇ. ವಾರ್ಡ್‌ನ ಬೇರೆ ಪ್ರದೇಶದವರಿಗೂ ಅವಕಾಶ ಕಲ್ಪಿಸುವ ಉದ್ದೇಶರಿಂದ ಈ ಕ್ರಮ ಕೈಗೊಂಡಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT