ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ ವಾರ್ಡ್‌ ಮರು ವಿಂಗಡಣೆ| ಬೊಮ್ಮನಹಳ್ಳಿ, ಆರ್‌.ಆರ್‌.ನಗರಕ್ಕೆ 14 ವಾರ್ಡ್

ಏಳು ಕ್ಷೇತ್ರಗಳಲ್ಲಿ ವಾರ್ಡ್‌ಗಳ ಸಂಖ್ಯೆ ಬದಲಿಲ್ಲ l ಕೆ.ಆರ್.ಪುರ, ದಾಸರಹಳ್ಳಿ ಕ್ಷೇತ್ರಗಳಿಗೆ ತಲಾ ನಾಲ್ಕು ವಾರ್ಡ್‌ ಸೇರ್ಪಡೆ
Last Updated 23 ಜೂನ್ 2022, 20:36 IST
ಅಕ್ಷರ ಗಾತ್ರ

ಬೆಂಗಳೂರು: 198ರಿಂದ 243ಕ್ಕೆ ಏರಿಕೆಯಾದ ವಾರ್ಡ್‌ಗಳಲ್ಲಿ ಬೊಮ್ಮನ ಹಳ್ಳಿ, ರಾಜರಾಜೇಶ್ವರಿನಗರ ವಿಧಾನ ಸಭಾ ಕ್ಷೇತ್ರಗಳಿಗೇ ಅತೀ ಹೆಚ್ಚು 14 ವಾರ್ಡ್‌ಗಳನ್ನು ವಿಂಗಡಿಸಲಾಗಿದೆ.

ಮಲ್ಲೇಶ್ವರ, ಶಾಂತಿನಗರ, ಗಾಂಧಿ ನಗರ, ರಾಜಾಜಿನಗರ, ಚಿಕ್ಕಪೇಟೆ, ಹೆಬ್ಬಾಳ ಮತ್ತು ಪುಲಕೇಶಿ ನಗರ ಕ್ಷೇತ್ರಗಳಲ್ಲಿ ವಾರ್ಡ್‌ಗಳು ಬದಲಾಗಿಲ್ಲ. ಆದರೆ, ಅವುಗಳ ಗಡಿಗಳು ಬದಲಾಗಿರುವ ಸಾಧ್ಯತೆ ಇದೆ.

ಬ್ಯಾಟರಾಯನಪುರ ಮತ್ತು ಯಲಹಂಕ ಹೊರತುಪಡಿಸಿ ನಗರದ ಹೊರವಲಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ವಾರ್ಡ್‌ಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಬ್ಯಾಟರಾಯನಪುರದಲ್ಲಿ ಮೂರು ವಾರ್ಡ್‌ಗಳು ಹೆಚ್ಚಾಗಿದ್ದರೆ, ಯಲಹಂಕದಲ್ಲಿ ಒಂದು ವಾರ್ಡ್‌ ಮಾತ್ರ ಅಧಿಕವಾಗಿದೆ. ‌‌ಮಹ ದೇವಪುರ, ಬೆಂಗಳೂರು ದಕ್ಷಿಣ ಮತ್ತು ರಾಜರಾಜೇಶ್ವರಿ
ನಗರ ಕ್ಷೇತ್ರಗಳಲ್ಲಿ ತಲಾ ಐದು ವಾರ್ಡ್‌ ಗಳು, ಕೆ.ಆರ್.ಪುರ ಮತ್ತು ದಾಸರಹಳ್ಳಿ ಕ್ಷೇತ್ರಗಳಲ್ಲಿ ತಲಾ ನಾಲ್ಕು ವಾರ್ಡುಗಳು ಹೊಸದಾಗಿ ಸೇರ್ಪಡೆಯಾಗಿವೆ.

‘ಬಿಜೆಪಿ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಲ್ಲಿ ವಾರ್ಡ್‌ಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಕಾಂಗ್ರೆಸ್ ಶಾಸಕರ ಕ್ಷೇತ್ರಗಳಲ್ಲಿ ಮೂರು ಕಡೆ ಕಡಿತ ಮಾಡಿದ್ದರೆ, ವಾರ್ಡ್‌ಗಳ ಸಂಖ್ಯೆಯನ್ನು ಹಾಗೇ ಉಳಿಸಲಾಗಿದೆ’ ಎಂಬ ಆರೋಪಗಳು ಕಾಂಗ್ರೆಸ್‌ ಶಾಸಕರಿಂದ ವ್ಯಕ್ತವಾಗಿವೆ.

‘ವಾರ್ಡ್‌ಗಳ ಗಡಿಗಳನ್ನು ಗುರು ತಿಸಲು ಕರಡಿನಲ್ಲಿ ನಾಲ್ಕು ದಿಕ್ಕಿನ ಕೆಲವು ಸ್ಥಳಗಳನ್ನು ತಿಳಿಸಲಾಗಿದೆ. ಆದರೆ, ಪ್ರತಿವಾರ್ಡಿಗೆ ಸಂಬಂಧಿಸಿದ ನಕ್ಷೆ ನೀಡಿಲ್ಲ. ಇದು ಗೊಂದಲಗಳನ್ನು ಹುಟ್ಟು ಹಾಕಿದೆ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ. ಈ ಎಲ್ಲಾ ದೋಷಗಳ ಬಗ್ಗೆ ಆಕ್ಷೇಪಣೆಗಳನ್ನು ಸಲ್ಲಿಸಲಾಗುವುದು’ ಎಂದರು.

‘ಒಟ್ಟಾರೆ ಜನಸಂಖ್ಯೆಯನ್ನು 243 ಕ್ಷೇತ್ರಗಳಿಗೆ ವಿಭಾಗಿಸಿ ಸರಾಸರಿ 34 ಸಾವಿರ ಜನಸಂಖ್ಯೆ ಇರುವಂತೆ ವಾರ್ಡ್‌ಗಳನ್ನು ವಿಂಗಡಿಸಲಾಗಿದೆ. ಕೆಲವು ವಾರ್ಡ್‌ಗಳಲ್ಲಿ ಈ ಸಂಖ್ಯೆ ಶೇ 10ರಷ್ಟು ಕಡಿಮೆ ಇರಬಹುದು, ಕೆಲವು ವಾರ್ಡ್‌ಗಳಲ್ಲಿ ಶೇ 10ರಷ್ಟು ಹೆಚ್ಚಿರಬಹುದು. ಜನಸಂಖ್ಯೆಯೇ ವಾರ್ಡ್‌ ವಿಂಗಡಣೆಯ ಮಾನದಂಡ’ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದರು.

ಹೊಸ ವಾರ್ಡ್‌ಗಳಿಗೆ ಹೆಸರು

ಹೊಸದಾಗಿ ರಚನೆಯಾದ ವಾರ್ಡ್‌ಗಳಿಗೆ ಹೆಸರುಗಳನ್ನು ನೀಡಲಾಗಿದೆ.

ವೀರ ಮದಕರಿ, ಚಾಣಕ್ಯ, ರಣಧೀರ ಕಂಠೀರವ, ವೀರ ಸಿಂಧೂರ ಲಕ್ಷ್ಮಣ, ವಿಜಯನಗರ ಕೃಷ್ಣದೇವರಾಯ, ಸರ್ ಎಂ.ವಿಶ್ವೇಶ್ವರಯ್ಯ, ನಾಲ್ವಡಿ ಕೃಷ್ಣರಾಜ ಒಡೆಯರ್, ವೃಷಭಾವತಿನಗರ, ಅಶೋಕ ಸ್ತಂಭ, ದೀನ್‌ ದಯಾಳ್‌ ಅವರ ಹೆಸರುಗಳನ್ನು ವಾರ್ಡ್‌ಗಳಿಗೆ ನೀಡಲಾಗಿದೆ.

ಜಯನಗರ ಬದಲು ಅಶೋಕ ಸ್ತಂಭ

2019ರಲ್ಲಿ ವಾರ್ಡ್ ಮರು ವಿಂಗಡಣೆ ಮಾಡಿದ್ದಾಗ ಕೈಬಿಟ್ಟಿದ್ದ ಜಯನಗರ ಮತ್ತು ಪ್ರಕಾಶ್‌ನಗರ ವಾರ್ಡ್‌ಗಳನ್ನು ಈಗ ಮರು ಸೇರ್ಪಡೆ ಮಾಡಲಾಗಿದೆ.

‘ಜಯನಗರ ಎಂದಿದ್ದ ವಾರ್ಡ್‌ ಈಗ ಅಶೋಕ ಸ್ತಂಭ ಎಂದು ಹೆಸರು ಬದಲಾಗಿದೆ. ಬಿಜೆಪಿಯವರಿಗೆ ಅನುಕೂಲ ಆಗುವ ರೀತಿಯಲ್ಲಿ ಅಕ್ಕಪಕ್ಕದ ಪ್ರದೇಶಗಳನ್ನು ಸೇರ್ಪಡೆ ಮಾಡಲಾಗಿದೆ. ಆದರೆ, ಈ ವಾರ್ಡ್ ಹಿಂದಿನಂತೆ ಚಿಕ್ಕಪೇಟೆ ಕ್ಷೇತ್ರದಲ್ಲೇ ಉಳಿದುಕೊಂಡಿದೆ’ ಎಂದು ಕಳೆದ ಅವಧಿಯಲ್ಲಿ ಮೇಯರ್ ಆಗಿದ್ದ ಗಂಗಾಂಬಿಕೆ ಹೇಳಿದರು.

ಆರ್‌ಎಸ್‌ಎಸ್ ಕಚೇರಿಯಲ್ಲಿ ಸಿದ್ಧವಾದ ಕರಡು

‘ವಾರ್ಡ್‌ಗಳ ಮರು ವಿಂಗಡಣೆಗೆ ಪಾಲಿಕೆ ಮುಖ್ಯ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು. ಈ ಸಮಿತಿ ವಾರ್ಡ್‌ಗಳಲ್ಲಿ ಸಭೆ ನಡೆಸಿ, ಕಂದಾಯ ಅಧಿಕಾರಿಗಳ ಮೂಲಕ ಗಡಿ ಗುರುತಿಸಬೇಕಿತ್ತು. ಆದರೆ, ಒಂದೇ ಒಂದು ಸಭೆಯನ್ನೂ ನಡೆಸಿಲ್ಲ’ ಎಂದು ಶಾಸಕ ರಾಮಲಿಂಗಾರೆಡ್ಡಿ ಆರೋಪಿಸಿದರು.

‘ಬಿಜೆಪಿ ಶಾಸಕರು, ಸಂಸದರು ತಮ್ಮ ಕಾರ್ಯಕರ್ತರನ್ನು ಕೂರಿಸಿಕೊಂಡು ಆರ್‌ಎಸ್‌ಎಸ್ ಕಚೇರಿಯಲ್ಲಿ(ಕೇಶವಕೃಪಾ) ಈ ವರದಿ ಸಿದ್ಧಪಡಿಸಿದ್ದಾರೆ. ಅವರು ಕೊಟ್ಟಿದ್ದನ್ನು ಅಧಿಕಾರಿಗಳು ಕಣ್ಮುಚ್ಚಿಕೊಂಡು ಸರ್ಕಾರಕ್ಕೆ ಸಲ್ಲಿಸಿದ್ದಾರೆ’ ಎಂದು ದೂರಿದರು.

‘ಗಡಿ ಗುರುತಿಸುವಿಕೆ ಸಮರ್ಪಕವಾಗಿಲ್ಲ’

ಸುಪ್ರೀಂ ಕೋರ್ಟ್‌ಗೆ ಹೆದರಿ ತರಾತುರಿಯಲ್ಲಿ ಕರಡುಪ್ರಕಟಿಸಲಾಗಿದೆ. ಗಡಿ ಗುರುತಿಸುವ ಕಾರ್ಯ ಸಮರ್ಪಕವಾಗಿ ನಡೆದಿಲ್ಲ ಎಂದು ಹಿಂದಿನ ಅವಧಿಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಅಬ್ದುಲ್ ವಾಜೀದ್ ದೂರಿದರು.

2011ರ ಜನಸಂಖ್ಯೆ ಆಧರಿಸಿ ಮರು ವಿಂಗಡಣೆ ಮಾಡಲಾಗಿದೆ. ಆಗ ಬೆಂಗಳೂರಿನ ಜನಸಂಖ್ಯೆ 84 ಲಕ್ಷ ಇತ್ತು. 11 ವರ್ಷದಲ್ಲಿ ಜನಸಂಖ್ಯೆ 1.30 ಕೋಟಿಗೆ ಏರಿಕೆಯಾಗಿದೆ. ಮತದಾರರ ಸಂಖ್ಯೆಯೂ ಜಾಸ್ತಿಯಾಗಿರುತ್ತದೆ. ಯಾವುದೇ ಮಾನದಂಡವಿಲ್ಲದ ವಾರ್ಡ್‌ಗಳ ಮರುವಿಂಗಡಣೆ ಇದಾಗಿದೆ ಎಂದರು.

ತಂತ್ರಜ್ಞಾನ ಸಾಕಷ್ಟು ಬೆಳೆದಿದ್ದರೂ ಗಡಿ ಗುರುತಿಸಲು ಹಳೇ ಪದ್ಧತಿಗಳನ್ನೇ ಅನುಸರಿಸ
ಲಾಗಿದೆ. ಗಡಿ ಎಂದು ಹೆಸರಿಸಿರುವ ಜಾಗ ಹುಡುಕಾಡಿದರೂ ಸಿಗುವ ಸಾಧ್ಯತೆ ಕಡಿಮೆ. ಒಟ್ಟಾರೆ ಕರಡು ಗೊಂದಲದ ಗೂಡಾಗಿದೆ ಎಂದು
ಹೇಳಿದರು.

ಕೂಡಲೇ ಎಲ್ಲವನ್ನೂ ಸರಿಪಡಿಸಿ ವಾರ್ಡ್‌ಗಳ ಮರುವಿಂಗಡಣೆ ಅಂತಿಮಗೊಳಿಸಬೇಕು. ಸುಪ್ರೀಂ ಕೊರ್ಟ್‌ ನೀಡಿರುವ ಸಮಯದೊಳಗೆ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿದರು.


ಯಾವ ಕ್ಷೇತ್ರಕ್ಕೆ ಎಷ್ಟು ವಾರ್ಡ್‌

ವಿಧಾನಸಭಾ ಕ್ಷೇತ್ರಗಳು; ಹಾಲಿ ಇದ್ದ ವಾರ್ಡ್‌ಗಳ ಸಂಖ್ಯೆ; ವಿಂಗಡಣೆಯಾದ ವಾರ್ಡ್‌ಗಳ ಸಂಖ್ಯೆ

ಯಲಹಂಕ; 4; 5

ಕೆ.ಆರ್‌.ಪುರ; 9; 13

ಬ್ಯಾಟರಾಯನಪುರ; 7; 10

ಯಶವಂತಪುರ; 5; 8

ರಾಜರಾಜೇಶ್ವರಿ ನಗರ; 9; 14

ದಾಸರಹಳ್ಳಿ; 8; 12

ಮಹಾಲಕ್ಷ್ಮಿ ಲೇಔಟ್‌; 7; 9

ಮಲ್ಲೇಶ್ವರ; 7; 7

ಹೆಬ್ಬಾಳ; 8; 8

ಪುಲಿಕೇಶಿ ನಗರ; 7; 7

ಸರ್ವಜ್ಞನಗರ; 8; 8

ಸಿ.ವಿ. ರಾಮನ್‌ ನಗರ; 7; 9

ಶಿವಾಜಿ ನಗರ; 7; 6

ಶಾಂತಿನಗರ; 7; 7

ಗಾಂಧಿನಗರ; 7; 7

ರಾಜಾಜಿನಗರ; 7; 7

ಗೋವಿಂದರಾಜನಗರ; 9; 10

ವಿಜಯನಗರ; 8; 9

ಚಾಮರಾಜಪೇಟೆ; 7; 6

ಚಿಕ್ಕಪೇಟೆ; 7; 7

ಬಸವನಗುಡಿ; 6; 7

ಪದ್ಮನಾಭನಗರ; 8; 10

ಬಿಟಿಎಂ ಲೇಔಟ್‌; 8; 9

ಜಯನಗರ; 7; 6

ಮಹದೇವಪುರ; 8; 13

ಬೊಮ್ಮನಹಳ್ಳಿ; 8; 14

ಬೆಂಗಳೂರು ದಕ್ಷಿಣ; 7; 12

ಆನೇಕಲ್‌; 1; 1

ಒಟ್ಟು; 198; 243

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT