ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ ವಾರ್ಡ್‌ಗಳ ಮರು ವಿಂಗಡಣೆ: ಚುನಾವಣಾ ಆಯೋಗದ ಸಮ್ಮತಿ

Last Updated 13 ಅಕ್ಟೋಬರ್ 2020, 21:27 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭೆಯ ಎರಡು ಕ್ಷೇತ್ರಗಳ ಉಪ ಚುನಾವಣೆ ಮತ್ತು ವಿಧಾನ ಪರಿಷತ್‌ನ ನಾಲ್ಕು ಕ್ಷೇತ್ರಗಳ ಚುನಾವಣೆ ನಡೆಯುತ್ತಿರುವಾಗಲೇ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವಾರ್ಡ್‌ಗಳ ಮರು ವಿಂಗಡಣೆ ಸೇರಿದಂತೆ ಕೆಲವು ಪ್ರಕ್ರಿಯೆಗಳನ್ನು ನಡೆಸಲು ಕೇಂದ್ರ ಚುನಾವಣಾ ಆಯೋಗ ರಾಜ್ಯ ಸರ್ಕಾರಕ್ಕೆ ಷರತ್ತುಬದ್ಧ ಅನುಮತಿ ನೀಡಿದೆ.

ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆಯನ್ನು 243ಕ್ಕೆ ಹೆಚ್ಚಿಸಲು ವಾರ್ಡ್‌ ಮರು ವಿಂಗಡಣಾ ಆಯೋಗ ರಚಿಸಲು ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ಕೆಎಎಸ್‌ ಅಧಿಕಾರಿಗಳ ವರ್ಗಾವಣೆ ಮಾಡಲು ಚುನಾವಣಾ ನೀತಿ ಸಂಹಿತೆಯ ನಿರ್ಬಂಧವನ್ನು ಸಡಿಲಿಸಲಾಗಿದೆ.

ಕೋವಿಡ್‌ ನಿಯಂತ್ರಣ ಕ್ರಮಗಳು ಹಾಗೂ ಪ್ರವಾಹ ಪರಿಹಾರ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸಲು ಮುಖ್ಯಮಂತ್ರಿ, ಸಚಿವರು ಮತ್ತು ಇತರ ಚುನಾಯಿತ ಪ್ರತಿನಿಧಿಗಳಿಗೆ ಷರತ್ತುಬದ್ಧ ಅನುಮತಿ ನೀಡಲಾಗಿದೆ. ಈ ಕುರಿತು ಕೇಂದ್ರ ಚುನಾವಣಾ ಆಯೋಗದ ಕಾರ್ಯದರ್ಶಿ ರಾಜ್ಯದ ಮುಖ್ಯ ಚುನಾವಣಾಧಿಕಾರಿಗೆ ಪತ್ರದ ಮೂಲಕ ಮಾಹಿತಿ ನೀಡಿದ್ದಾರೆ.

ಮೂವರು ಅಭ್ಯರ್ಥಿಗಳಿಂದ ಇಂದು ನಾಮಪತ್ರ ಸಲ್ಲಿಕೆ

ಬೆಂಗಳೂರು: ರಾಜರಾಜೇಶ್ವರಿನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ, ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ ಎಚ್‌. ಹಾಗೂ ಜೆಡಿಎಸ್‌ ಅಭ್ಯರ್ಥಿ ಕೃಷ್ಣಮೂರ್ತಿ ವಿ. ಅವರು ಬುಧವಾರ ನಾಮಪತ್ರ ಸಲ್ಲಿಸಲಿದ್ದಾರೆ.

ಮುನಿರತ್ನ ಅವರು ಬುಧವಾರ ಬೆಳಿಗ್ಗೆ 10.30ಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ. ಅದಕ್ಕೂ ಮುನ್ನ ಬೆಳಿಗ್ಗೆ 9.30ಕ್ಕೆ ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಪ್ರಮುಖ ನಾಯಕರ ಸಭೆ ನಡೆಯಲಿದೆ. ಈ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್‌ ಕಟೀಲ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಕಂದಾಯ ಸಚಿವ ಆರ್‌.ಅಶೋಕ, ಮುನಿರತ್ನ ಮುಂತಾದವರು ಭಾಗವಹಿಸುವರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಮ್ಮುಖದಲ್ಲಿ ಕುಸುಮಾ ಎಚ್. ಅವರು ಬೆಳಿಗ್ಗೆ 11.45 ಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ. ಕ್ಷೇತದ ಕಾಂಗ್ರೆಸ್‌ ಉಸ್ತುವಾರಿ ರಾಮಲಿಂಗಾ ರೆಡ್ಡಿ, ಕೃಷ್ಣಬೈರೇಗೌಡ ಮತ್ತಿತರ ಮುಖಂಡರು ಈ ಸಂದರ್ಭದಲ್ಲಿ ಹಾಜರಿರುವರು.

ನಾಮಪತ್ರ ಸಲ್ಲಿಕೆಗೆ ಮುನ್ನ ಕುಸುಮಾ ಅವರು ಬೆಳಿಗ್ಗೆ 8 ಗಂಟೆಗೆ ನಾಗರಬಾವಿ ಬಿಡಿಎ ಕಾಂಪ್ಲೆಕ್ಸ್ ಹಿಂಭಾಗದಲ್ಲಿರುವ ಆಂಜನೇಯಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ಕೃಷ್ಣಮೂರ್ತಿ ವಿ. ಅವರು ಬೆಳಿಗ್ಗೆ 10.30ಕ್ಕೆ ನಾಮಪತ್ರ ಸಲ್ಲಿಸಲಿದ್ದು, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಹಾಜರಿರುವರು.

ಆರ್‌.ಆರ್‌.ನಗರ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ರಾಜೀನಾಮೆ

ಮುನಿರತ್ನ ಅವರಿಗೆ ಟಿಕೆಟ್‌ ನೀಡಿರುವುದನ್ನು ವಿರೋಧಿಸಿ ಆರ್‌.ಆರ್‌.ನಗರ ಬಿಜೆಪಿ ಮಂಡಲ ಯುವ ಮೋರ್ಚಾ ಅಧ್ಯಕ್ಷ ಸಂದೇಶ್‌ ಬಂಡಪ್ಪ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

‘ಇಷ್ಟು ವರ್ಷ ಕಾಂಗ್ರೆಸ್‌ನಲ್ಲಿದ್ದ ಮುನಿರತ್ನ ಅವರ ಭ್ರಷ್ಟಾಚಾರ, ದಬ್ಬಾಳಿಕೆಯ ವಿರುದ್ಧ ಹೋರಾಟ ನಡೆಸಿಕೊಂಡು ಬಂದಿದ್ದ ನಮಗೆ ಈಗ ಅವರ ಪರವಾಗಿ ಕೆಲಸ ಮಾಡಲು ಸಾಧ್ಯವಿಲ್ಲ. ಸ್ವಾಭಿಮಾನಿ ಕಾರ್ಯಕರ್ತರ ಸ್ವಾಭಿಮಾನ ಮಾರಾಟಕ್ಕಿಲ್ಲ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT