ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ: ವಾರ್ಡ್‌ ಮೀಸಲು ಪಟ್ಟಿಯಲ್ಲಿ ಒಬಿಸಿಗೆ ರಾಜಕೀಯ ಮೀಸಲು ಕೊರತೆ, ಆರೋಪ

ಬಿಬಿಎಂಪಿ: ಸಮಯಾವಕಾಶ ಬೇಕು ಎಂದು ಹೈಕೋರ್ಟ್‌ಗೆ ಮನವಿ ಮಾಡಿದ ರಾಜ್ಯ ಸರ್ಕಾರ
Last Updated 16 ಸೆಪ್ಟೆಂಬರ್ 2022, 19:43 IST
ಅಕ್ಷರ ಗಾತ್ರ

ಬೆಂಗಳೂರು: ‘ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಗೆ ಸಿದ್ಧಪಡಿಸಲಾಗಿರುವ 243 ವಾರ್ಡ್‌ಗಳ ಮೀಸಲು ಪಟ್ಟಿಯಲ್ಲಿ ಇತರೆ ಹಿಂದುಳಿದ ವರ್ಗಗಳಿಗೆ (ಒಬಿಸಿ) ರಾಜಕೀಯ ಮೀಸಲು ಕಲ್ಪಿಸಲಾಗಿಲ್ಲ
ಎಂದು ದೂರಲಾಗಿರುವ ರಿಟ್‌ ಅರ್ಜಿಗಳಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಸಮಯಾವಕಾಶ ಬೇಕು’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮನವಿ ಮಾಡಿದೆ.

ಈ ಕುರಿತಂತೆ ಈಜಿಪುರದ ಕೆ.ಮಹದೇವ, ಕಮ್ಮನಹಳ್ಳಿಯ ಪಳನಿ ದಯಾಳನ್‌, ದೊಡ್ಡಬಾಣಸವಾಡಿಯ ವಿ.ಶ್ರೀನಿವಾಸ್‌ ಮತ್ತು ನಾಗನಾಥಪುರದ ಕೆ.ಚಂದ್ರಶೇಖರ್ ಹಾಗೂ ಇತರರು ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಹೇಮಂತ ಚಂದನಗೌಡರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಜಯಕುಮಾರ್ ಎಸ್.ಪಾಟೀಲ್‌ ಮತ್ತು ಎ.ಎಸ್‌.ಪೊನ್ನಣ್ಣ, ‘ಹೊಸದಾಗಿ ರಚನೆಯಾಗಿರುವ 243 ಬಿಬಿಎಂಪಿ ವಾರ್ಡ್‌ಗಳಿಗೆ ಮೀಸಲು ಪಟ್ಟಿಯನ್ನು 2022ರ ಆಗಸ್ಟ್‌ 3ರಂದು ಪ್ರಕಟಿಸಲಾಗಿದೆ. ಈ ಎಲ್ಲ 243 ವಾರ್ಡ್‌ಗಳಿಗೆ ಮೀಸಲಾತಿ ನಿಗದಿಪಡಿಸುವಲ್ಲಿ ಒಬಿಸಿಗೆ ರಾಜಕೀಯ ಮೀಸಲಾತಿ ಕಲ್ಪಿಸಿಲ್ಲ. ಈ ಬಗ್ಗೆ ಕೇಳಿದರೆ ಚುನಾವಣಾ ಆಯೋಗ ಕಲ್ಪಿಸಲಾಗಿದೆ ಎಂದು ಹೇಳುತ್ತದೆ. ಆದರೆ, ಅದರ ಬಳಿ ಯಾವುದೇ ದಾಖಲೆ‌ಗಳು ಇಲ್ಲ. ಸರ್ಕಾರವೂ ಈ ಬಗ್ಗೆ ಮುಗುಮ್ಮಾಗಿದೆ. ಚುನಾವಣಾ ಆಯೋಗ ಸ್ವತಂತ್ರವಾಗಿ ತನ್ನ ಕಾರ್ಯ ನಿರ್ವಹಿಸುತ್ತಿರುವಂತೆ ಕಾಣುತ್ತಿಲ್ಲ. ಆದ್ದರಿಂದ, ಈ ಕುರಿತ ದಾಖಲೆಗಳನ್ನು ನ್ಯಾಯಾಲಯಕ್ಕೆ ಪ್ರಸ್ತುತಪಡಿಸಬೇಕು’ ಎಂದು ಕೋರಿದರು.

‘ವಾರ್ಡ್‌ವಾರು ಮೀಸಲಾತಿ ನಿಗದಿಯಲ್ಲಿ ಇತರ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸುವ ಸಂಬಂಧ ಭಕ್ತವತ್ಸಲ ಸಮಿತಿ ವರದಿ ಆಧರಿಸಲಾಗಿದೆ ಎಂದು ಸರ್ಕಾರ ಹೇಳಿದೆ. ಆದರೆ, ಭಕ್ತವತ್ಸಲ ಸಮಿತಿ ಶಿಫಾರಸು ಮಾಡಿರುವ ಮೂರು ಹಂತದ ಪರಿಶೀಲನೆಯನ್ನು (ಟ್ರಿಪಲ್ ಟೆಸ್ಟ್) ಅನ್ವಯಿಸಿಕೊಂಡಿಲ್ಲ. ಯಾವ ಜಾತಿಗಳಿಗೆ ಪ್ರಾತಿನಿಧ್ಯ ಕಲ್ಪಿಸಲಾಗಿದೆ ಎಂಬ ಪಟ್ಟಿಯನ್ನೂ ಒದಗಿಸಿಲ್ಲ. ಒಬಿಸಿಯಲ್ಲಿ ಅಲ್ಪಸಂಖ್ಯಾತರೂ ಸೇರಿದ್ದು, ಇವರಲ್ಲಿ ಮುಸ್ಲಿಂ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ಇದೆ. ಇನ್ನುಳಿದ ಅಲ್ಪಸಂಖ್ಯಾತರು ಕಡೆಗಣನೆಗೆ ಒಳಗಾಗಿದ್ದಾರೆ’ಎಂದು ಬಲವಾಗಿ ಆಕ್ಷೇಪಿಸಿದರು.

‘ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸಮಯಾವಕಾಶ ನೀಡಬೇಕು’ ಎಂಬ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಧ್ಯಾನ್‌ ಚಿನ್ನಪ್ಪ ಅವರ ಮನವಿಯನ್ನು ನ್ಯಾಯಪೀಠ ಪುರಸ್ಕರಿಸಿ ವಿಚಾರಣೆಯನ್ನು ಇದೇ 21ಕ್ಕೆ ಮುಂದೂಡಿತು.

ಅರ್ಜಿಗಳ ವಜಾ: 243 ವಾರ್ಡ್‌ಗಳ ಮರು ವಿಂಗಡಣೆ ಅಧಿಸೂಚನೆ ಪ್ರಶ್ನಿಸಲಾಗಿದ್ದ ಹತ್ತಕ್ಕೂ ಹೆಚ್ಚು ರಿಟ್‌ ಅರ್ಜಿಗಳನ್ನು ನ್ಯಾಯಮೂರ್ತಿ ಹೇಮಂತ ಚಂದನಗೌಡ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಇದೇ ವೇಳೆ ವಜಾಗೊಳಿಸಿತು.

‘ವಾರ್ಡ್‌ ಮರುವಿಂಗಡಣೆ ನಿಗದಿಗೆ ಭೌಗೋಳಿಕ ವಿಸ್ತೀರ್ಣ ಮತ್ತು 2011ರ ಜನಗಣತಿ ಆಧಾರದಲ್ಲಿ ನ್ಯಾಯೋಚಿತ ಮಾರ್ಗಗಳನ್ನು ಅನುಸರಿಸಲಾಗಿದೆ’ ಎಂಬ ರಾಜ್ಯ ಸರ್ಕಾರದ ನಿಲುವನ್ನು ನ್ಯಾಯಪೀಠ ಎತ್ತಿಹಿಡಿದಿದೆ.

ಮತದಾರರ ಅಂತಿಮ ಪಟ್ಟಿ 22ಕ್ಕೆ ಪ್ರಕಟ

ಬಿಬಿಎಂಪಿ 243 ವಾರ್ಡ್‌ವಾರು ಮತದಾರರ ಅಂತಿಮ ಪಟ್ಟಿ ಸಿದ್ಧವಾಗಿದ್ದು, ಮುದ್ರಣ ಕಾರ್ಯ ನಡೆಯುತ್ತಿದೆ. ಸೆ.22ರಂದು ಅಂತಿಮ ಪಟ್ಟಿ ಸಾರ್ವಜನಿಕವಾಗಿ ಪ್ರಕಟಿಸಲಾಗುವುದು.

ಆ.25ರಂದು ಮತದಾರರ ಕರಡು ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಆಕ್ಷೇಪಣೆ ಹಾಗೂ ತಿದ್ದುಪಡಿ ಸಲ್ಲಿಸಲು ಸೆ.2ರವರೆಗೆ ನೀಡಿದ್ದ ಅವಧಿಯನ್ನು 9ರವರೆಗೆ ವಿಸ್ತರಿಸಲಾಗಿತ್ತು. ಈ ಅವಧಿಯಯಲ್ಲಿ 1800 ಆಕ್ಷೇಪಣೆ/ ತಿದ್ದುಪಡಿಗೆ ಮನವಿಗಳು ಬಂದಿದ್ದವು. ಅವುಗಳನ್ನು ಪರಿಶೀಲಿಸಿ, ಅಗತ್ಯ ಪರಿಷ್ಕರಣೆ ಕಾರ್ಯ ನಡೆಸಲಾಗಿದೆ. ರಾಜ್ಯ ಚುನಾವಣೆ ಆಯೋಗದ ವೇಳಾಪಟ್ಟಿಯಂತೆ ಸೆ.16ರಿಂದ ಮತದಾರರ ಪಟ್ಟಿ ಮುದ್ರಣ ಕಾರ್ಯ ಆರಂಭವಾಗಿದೆ. ಇದೇ 22ರಂದು ಅಂತಿಮ ಪಟ್ಟಿ ಪ್ರಕಟಿಸಲಾಗುತ್ತದೆ ಎಂದು ಬಿಬಿಎಂಪಿಯ ಚುನಾವಣೆ ವಿಭಾಗದ ಸಹಾಯಕ ಆಯುಕ್ತ ಉಮೇಶ್‌ ಅವರು ತಿಳಿಸಿದರು.

ವಾರ್ಡ್‌ ಬದಲಾವಣೆ, ಹೆಸರು ತಿದ್ದುಪಡಿ, ವಿಳಾಸದಲ್ಲಿ ತಪ್ಪು ಸೇರಿದಂತೆ ಹಲವು ರೀತಿಯ ತಿದ್ದುಪಡಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಕೆಲವರು ಇಲ್ಲಿಲ್ಲ, ಅವರ ಹೆಸರು ತೆಗೆಯಿರಿ ಎಂಬ ಆಕ್ಷೇಪಣೆಗಳೂ ಇದ್ದವು. ಎಲ್ಲವನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

ಮತದಾರ ಪಟ್ಟಿಗೆ ಸೇರಿಸುವ ಪ್ರಕ್ರಿಯೆ ಇಲ್ಲಿಗೆ ಮುಗಿಯುವುದಿಲ್ಲ. ಚುನಾವಣೆ ಪ್ರಕಟಗೊಂಡು, ನಾಮಪತ್ರ ಸಲ್ಲಿಸಲು ಕೊನೆಯ ದಿನ ಇರುವವರೆಗೂ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಉಮೇಶ್‌ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT