ಗುರುವಾರ , ನವೆಂಬರ್ 21, 2019
26 °C
‘ಬಿಬಿಎಂಪಿ ಸೂಪರ್‌ಸೀಡ್‌ಗೆ ಚಿಂತನೆ ನಡೆಸಿ’

ಘನತ್ಯಾಜ್ಯ ವಿಲೇವಾರಿ ನಿಯಮ ಪಾಲನೆಯಲ್ಲಿ ಬಿಬಿಎಂಪಿ ವಿಫಲ

Published:
Updated:
Prajavani

ಬೆಂಗಳೂರು: ‘ನಗರದಲ್ಲಿ ಉತ್ಪತ್ತಿಯಾಗುವ ಘನತ್ಯಾಜ್ಯವನ್ನು ಸಂಸ್ಕರಿಸಿ ವಿಲೇವಾರಿ ಮಾಡುವಲ್ಲಿ ಸಂಪೂರ್ಣ ವಿಫಲವಾಗಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು (ಬಿಬಿಎಂಪಿ) ಸೂಪರ್‌ಸೀಡ್‌ ಮಾಡುವ ಬಗ್ಗೆ ಗಂಭೀರವಾಗಿ ಆಲೋಚಿಸಬೇಕು ಮತ್ತು ಈ ಕುರಿತಂತೆ 2019ರ ಡಿಸೆಂಬರ್‌ 16ರೊಳಗೆ ನ್ಯಾಯಾಲಯಕ್ಕೆ ವಸ್ತುಸ್ಥಿತಿ ವರದಿ ಸಲ್ಲಿಸಬೇಕು’ ಎಂದು ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.

ನಗರದ ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮಂಗಳವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್. ಓಕಾ ಹಾಗೂ ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ, ನಿಯಮ ಜಾರಿಗೆ ಸಂಬಂಧಿಸಿದಂತೆ ಬಿಬಿಎಂಪಿಗೂ ನಿರ್ದೇಶನ ನೀಡಿದೆ.

‘ಘನತ್ಯಾಜ್ಯ ವಿಲೇವಾರಿ ನಿಯಮ -2016 ಅನ್ನು ಬಿಬಿಎಂಪಿ ಸಂಪೂರ್ಣವಾಗಿ ಉಲ್ಲಂಘಿಸಿದೆ. ತನ್ನ ಆದ್ಯ ಕರ್ತವ್ಯ ನಿರ್ವಹಿಸುವಲ್ಲಿ ಎಡವಿದೆ. ಹೀಗಾಗಿ ಕರ್ನಾಟಕ ಪೌರಾಡಳಿತ ಕಾಯ್ದೆ–1976ರ ಕಲಂ 99 (1)ರ ಅನುಸಾರ ಪಾಲಿಕೆಯನ್ನು ವಿಸರ್ಜಿಸುವ ಅಧಿಕಾರ ಸರ್ಕಾರಕ್ಕಿದೆ. ಆದ್ದರಿಂದ ಈ ಬಗ್ಗೆ ಅಧ್ಯಯನ ನಡೆಸಿ' ಎಂದು ನ್ಯಾಯಪೀಠ ತಾಕೀತು ಮಾಡಿದೆ.

‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವುದೂ ಸೇರಿದಂತೆ ಬಿಬಿಎಂಪಿ ವೈಫಲ್ಯದ ವಿರುದ್ಧ ಎಲ್ಲಾ ರೀತಿಯ ಕಾನೂನು ಕ್ರಮ ಕೈಗೊಳ್ಳಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಸ್ವತಂತ್ರವಾಗಿದೆ’ ಎಂದೂ ನ್ಯಾಯಪೀಠ ವಿವರಿಸಿದೆ.

‘ಹೊಸ ಕಟ್ಟಡಗಳ ನಿರ್ಮಾಣ ಕಾಮಗಾರಿಯ ಘನತ್ಯಾಜ್ಯ, ಕಟ್ಟಡಗಳ ನೆಲಸಮಗೊಳಿಸುವ ನಂತರ ಉಳಿಯುವ ಘನತ್ಯಾಜ್ಯ, ವೈದ್ಯಕೀಯ ಘನತ್ಯಾಜ್ಯ ಹಾಗೂ ಅಪಾಯಕಾರಿ ಘನತ್ಯಾಜ್ಯ ಮತ್ತು ಪ್ಲಾಸ್ಟಿಕ್‌ ತ್ಯಾಜ್ಯ ವಿಲೇವಾರಿ ಮಾಡುವಲ್ಲಿ ಬಿಬಿಎಂಪಿ ಅಸಡ್ಡೆ ತೋರಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಜೊತೆ ಸಮಾಲೋಚನೆ ನಡೆಸದೆ ಮತ್ತು ಅಗತ್ಯ ಪರವಾನಗಿ ಪಡೆಯದೆ ನಗರದ ಹೊರವಲಯದಲ್ಲಿನ ಬೆಳ್ಳಹಳ್ಳಿಯ ಕ್ವಾರಿಯಲ್ಲಿ ತ್ಯಾಜ್ಯ ಸುರಿಯುತ್ತಿದೆ’ ಎಂದು ನ್ಯಾಯಪೀಠ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

‘ನಗರದಲ್ಲಿ ದಿನವೊಂದಕ್ಕೆ 5,700 ಟನ್‌ ಘನತ್ಯಾಜ್ಯ ಉತ್ಪತ್ತಿಯಾಗುತ್ತದೆ. ಇದರಲ್ಲಿ ಬಿಬಿಎಂಪಿ ಕೇವಲ 1,250 ಟನ್‌ ಪ್ರಮಾಣವನ್ನು ಸಂಸ್ಕರಿಸಿದರೆ, ಖಾಸಗಿಯವರು 1,250 ಟನ್‌ನಷ್ಟು ಸಂಸ್ಕರಿಸುತ್ತಾರೆ. ಇದನ್ನೆಲ್ಲಾ ಕ್ವಾರಿ ಘಟಕಗಳಲ್ಲಿ ಸುರಿಯಲಾಗುತ್ತಿದೆ. ಉಳಿದ 2,500 ಟನ್‌ಗೂ ಹೆಚ್ಚು ಪ್ರಮಾಣದ ತ್ಯಾಜ್ಯವನ್ನು ಸಂಸ್ಕರಿಸದೆ ರಾಜಕಾಲುವೆ ಅಥವಾ ಚರಂಡಿಯಂತಹ ಸ್ಥಳಗಳಲ್ಲಿ ಸುರಿಯಲಾಗುತ್ತಿದೆ ಎಂಬುದು ಆತಂಕದ ವಿಚಾರ. ಕ್ವಾರಿಗಳಲ್ಲಿ ತ್ಯಾಜ್ಯ ಸುರಿಯುತ್ತಿರುವುದು ಪರಿಸರ ಕಾಯ್ದೆ ಹಾಗೂ ಸಂವಿಧಾನದ 21ನೇ ವಿಧಿಯ ಸ್ಪಷ್ಟ ಉಲ್ಲಂಘನೆ’ ಎಂದು ನ್ಯಾಯಪೀಠ ತಿಳಿಸಿದೆ.

‘ಈ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ 2016ರಲ್ಲಿ ರಚಿಸಿದ್ದ ಉನ್ನತಮಟ್ಟದ ಸಮಿತಿ ಈತನಕ ಕೇವಲ ನಾಲ್ಕು ಸಭೆಗಳನ್ನು ಮಾತ್ರ ನಡೆಸಿದೆ. ಈ ಸಭೆಯ ಫಲಶ್ರುತಿಗೆ ಅನುಗುಣವಾಗಿ ಬಿಬಿಎಂಪಿ ನಡೆದುಕೊಂಡಿಲ್ಲ. ಇದು ನಾಗರಿಕರ ಮೂಲಭೂತ ಹಕ್ಕುಗಳನ್ನು ಕಸಿದುಕೊಂಡಂತಾಗಿದೆ. ಆದ್ದರಿಂದ ಮೂಕ ಪ್ರೇಕ್ಷಕ ಆಗಿರುವ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಅನ್ಯ ಮಾರ್ಗವಿಲ್ಲದೆ ನಿರ್ದೇಶಿಸಲೇಬೇಕಾಗಿದೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಡಿಸೆಂಬರ್ 18ಕ್ಕೆ ವಿಚಾರಣೆ ಮುಂದೂಡಲಾಗಿದೆ.

ಕಟ್ಟಡ ನಿರ್ಮಾಣಕ್ಕೆ ಅನುಮತಿ ನಿರ್ಬಂಧ ಎಚ್ಚರಿಕೆ
‘ಘನತ್ಯಾಜ್ಯ ವಿಲೇವಾರಿ ನಿಯಮ–2016 ಅನ್ನು ಬಿಬಿಎಂಪಿ ಎರಡು ತಿಂಗಳಲ್ಲಿ ಜಾರಿ ಮಾಡಬೇಕು. ಇಲ್ಲವಾದರೆ ಹೊಸ ಕಟ್ಟಡಗಳ ನಿರ್ಮಾಣಕ್ಕೆ ಅನುಮತಿ ನೀಡುವುದನ್ನು ನಿರ್ಬಂಧಿಸಬೇಕಾಗುತ್ತದೆ’ ಎಂದೂ ನ್ಯಾಯಪೀಠ ಎಚ್ಚರಿಸಿದೆ.

ಬಿಬಿಎಂಪಿ ಪರ ವಾದ ಮಂಡಿಸಿದ ವಕೀಲ ಕೆ.ಎನ್‌.ಪುಟ್ಟೇಗೌಡ, ‘ಬಿಬಿಎಂಪಿ ಈಗಾಗಲೇ 140 ವಾರ್ಡುಗಳಲ್ಲಿ ಸಂಸ್ಕರಣಾ ಘಟಕಗಳನ್ನು ತೆರೆದಿದೆ. ಹಸಿ ತ್ಯಾಜ್ಯ ಘಟಕಗಳನ್ನೂ ಶೀಘ್ರವೇ ಸ್ಥಾಪಿಸಲಾಗುವುದು. ಒಂದಷ್ಟು ಕಾಲಾವಕಾಶ ಕೊಡಿ. ನೆಗಡಿ ಎಂದು ಮೂಗು ಕತ್ತರಿಸುವುದು ಬೇಡ’ ಎಂದು ಮನವಿ ಮಾಡಿದರು. ಆದರೆ, ನ್ಯಾಯಪೀಠ ಇದನ್ನು ಪರಿಗಣಿಸಲಿಲ್ಲ.

**
ಬೆಂಗಳೂರು ಒಂದು ಕಾಲದಲ್ಲಿ ಕೆರೆಗಳ ಆಗರ, ಹಸಿರಿನ ನಗರ ಎಂದು ಹೆಸರಾಗಿತ್ತು. ಆದರೆ, ಇಂದು ಸ್ವಚ್ಛ ವಾತಾವರಣವೇ ಇಲ್ಲವಾಗಿರುವುದು ದುರದೃಷ್ಟಕರ.
-ಅಭಯ್‌ ಎಸ್‌.ಓಕಾ, ಮುಖ್ಯ ನ್ಯಾಯಮೂರ್ತಿ

ಪ್ರತಿಕ್ರಿಯಿಸಿ (+)