ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಕರಣೆಗೊಳ್ಳದ ಮಿಶ್ರ ಕಸ ಭೂಮಿಗಿಲ್ಲ

ನವೆಂಬರ್‌ 1ರಿಂದ ಅನುಷ್ಠಾನಕ್ಕೆ ಬಿಬಿಎಂಪಿಗೆ ನ್ಯಾ. ಸುಭಾಷ್ ಅಡಿ ಸೂಚನೆ
Last Updated 17 ಆಗಸ್ಟ್ 2019, 19:56 IST
ಅಕ್ಷರ ಗಾತ್ರ

ಬೆಂಗಳೂರು: ‘ಮಿಶ್ರ ಕಸವು ಸಂಸ್ಕರಣೆಗೊಳ್ಳದೇ ಭೂಭರ್ತಿ ಘಟಕ ಸೇರುವುದು ಮುಂಬರುವ ನವೆಂಬರ್ 1ರೊಳಗೆ ಸಂಪೂರ್ಣವಾಗಿ ನಿಲ್ಲಬೇಕು’

ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ (ಎನ್‌ಜಿಟಿ) ಸೂಚನೆಯಂತೆ ರೂಪಿಸಿರುವ ರಾಜ್ಯ ಮಟ್ಟದ ಸಮಿತಿ ಅಧ್ಯಕ್ಷ ನ್ಯಾಯಮೂರ್ತಿ ಸುಭಾಷ್ ಬಿ. ಅಡಿ ಅವರು ಬಿಬಿಎಂಪಿಗೆ ನೀಡಿದ ಕಟ್ಟುನಿಟ್ಟಿನ ಸೂಚನೆ ಇದು.

ಘನತ್ಯಾಜ್ಯ ನಿರ್ವಹಣೆ ಕುರಿತಎನ್‌ಜಿಟಿ ಆದೇಶದ ಕುರಿತು ಚರ್ಚಿಸಲು ಶನಿವಾರ ನಡೆದ ಕೌನ್ಸಿಲ್ ಸಭೆಗೆ ವಿಶೇಷ ಆಹ್ವಾನಿತರಾಗಿ ಬಂದಿದ್ದ ಅವರು ಈ ಗಡುವು ವಿಧಿಸಿದರು.

ಭೂಭರ್ತಿ ಘಟಕಗಳು ಸಂಪೂರ್ಣ ಭರ್ತಿಯಾಗಿವೆ. ಬೆಳ್ಳಹಳ್ಳಿ ಘಟಕವೂ ಭರ್ತಿಯಾದರೆ ಮಿಶ್ರ ಕಸ ಸುರಿಯಲು ಬೇರೆ ಜಾಗವೇ ಇಲ್ಲ. ಹೀಗಾಗಿ ಪ್ರತಿಯೊಬ್ಬರು ಮನೆಯಲ್ಲೇ ಕಸ ವಿಂಗಡಣೆ ಮಾಡಲು ಜಾಗೃತಿ ಮೂಡಿಸಬೇಕು. ಪ್ರತಿ ರಸ್ತೆಯಲ್ಲಿ ಅಥವಾ ವಾರ್ಡ್‌ ಮಟ್ಟದಲ್ಲಿಯೇ ಹಸಿ ಕಸವನ್ನು ಕಾಂಪೋಸ್ಟ್‌ ಮಾಡಿಸಲು ಕ್ರಮ ಕೈಗೊಳ್ಳಬೇಕು. ಆ ವಾರ್ಡಿನ ಕಸ ಅಲ್ಲಿಯೇ ಕಾಂಪೋಸ್ಟ್‌ ಆದರೆ, ಭೂಭರ್ತಿ ಘಟಕಕ್ಕೆ ಮಿಶ್ರಕಸ ತಲುಪುವುದು ತಪ್ಪಲಿದೆ ಎಂದರು.

‘ನ.1ರ ವೇಳೆಗೆ ಕಸಮುಕ್ತ ನಗರವನ್ನು ರೂಪಿಸುವ ಮೂಲಕ ‌ಮೇಯರ್ ಅವರು ಕನ್ನಡ ರಾಜ್ಯೋತ್ಸವಕ್ಕೆ ವಿಶೇಷ ಕೊಡುಗೆ ನೀಡಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತ‍ಪಡಿಸಿದರು.

‘ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಮನವೊಲಿಸಬೇಕು. ಅದಕ್ಕೂ ಜಗ್ಗದಿದ್ದರೆ ದಂಡ ವಿಧಿಸಲು ಬಿಬಿಎಂಪಿ ಹಿಂಜರಿಯಬಾರದು. ದಂಡನೆ ಇಲ್ಲದಿದ್ದರೆ ರಸ್ತೆ ಬದಿಯಲ್ಲಿ ಕಸ ಸುರಿಯುವ ತಪ್ಪನ್ನು ಜನರು ಮಾಡುತ್ತಲೇ ಇರುತ್ತಾರೆ’ ಎಂದರು.

‘ನಗರದಲ್ಲಿ ನಿಷೇಧಿತ ಪ್ಲಾಸ್ಟಿಕ್ ಮಾರಾಟ ನಿಯಂತ್ರಣಕ್ಕೆ ಮೇಯರ್ ಮತ್ತು ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಪ್ಲಾಸ್ಟಿಕ್ ಚೀಲಗಳ ಮಾರಾಟ ಶೇ 80ರಷ್ಟು ಕಡಿಮೆಯಾಗಿದೆ. ಬೆಂಗಳೂರು ಸೆಪ್ಟೆಂಬರ್ ವೇಳೆಗೆ ಪ್ಲಾಸ್ಟಿಕ್ ಮುಕ್ತ ನಗರವಾಗಬೇಕು. ಇಲ್ಲದಿದ್ದರೆ ಪಾಲಿಕೆಗೆ ದಂಡ ಬೀಳಲಿದೆ’ ಎಂದೂ ಎಚ್ಚರಿಸಿದರು.

ಸಭೆಯ ಉದ್ದಕ್ಕೂ ತ್ಯಾಜ್ಯದ ಯಶಸ್ವಿ ನಿರ್ವಹಣೆಯಲ್ಲಿ ಸಫಲವಾಗಿರುವ ನಗರಗಳ ಉದಾಹರಣೆ ನೀಡಿದ ಅಡಿ, ‘ಇಂದೋರ್‌, ತಮಿಳುನಾಡಿನ ವೆಲ್ಲೂರಿನಲ್ಲಿ ನಿತ್ಯ ಎರಡು ಬಾರಿ ಕಸ ಸಂಗ್ರಹಿಸಲಾಗುತ್ತಿದೆ. ಆ ರೀತಿಯ ವ್ಯವಸ್ಥೆಗಳು ಬೆಂಗಳೂರಿನಲ್ಲೂ ಬರಬೇಕು. ಕಲಬುರ್ಗಿ, ಹುಬ್ಬಳ್ಳಿ–ಧಾರವಾಡದಂತಹ ನಗರಗಳಲ್ಲಿ ಅಧಿಕಾರಿಗಳು ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸಲು ಶ್ರಮಿಸುತ್ತಿದ್ದಾರೆ’ ಎಂದರು.

ಗೋವಾ ಹಾಗೂ ಆಂಧ್ರ ಪ್ರದೇಶದಲ್ಲಿ ಕಸ ನಿರ್ವಹಣೆಗೆ ಪ್ರತ್ಯೇಕ ನಿಗಮಗಳಿವೆ. ಬೆಂಗಳೂರಿನಲ್ಲೂ ಇಂತಹ ಪ್ರತ್ಯೇಕ ನಿಗಮ ರಚಿಸುವುದು ಸೂಕ್ತ ಎಂದು ಅಡಿ ಸಲಹೆ ನೀಡಿದರು.

ಸಜ್ಜಾಗದ ಬಿಬಿಎಂಪಿ

ಸೆಪ್ಟೆಂಬರ್ 1ರಿಂದ ಹಸಿ ಮತ್ತು ಒಣಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸುವುದಾಗಿ ಹೇಳಿದ್ದ ಬಿಬಿಎಂಪಿ, ಅದಕ್ಕೆ ಬೇಕಾದ ಸಿದ್ಧತೆ ಮಾಡಿಕೊಂಡಿಲ್ಲ.

‘ಮನೆ ಮನೆಯಿಂದ ಹಸಿ ಕಸ ಸಂಗ್ರಹಿಸಲು ಪ್ರತಿ ವಾರ್ಡ್‌ಗೂ ಪ್ರತ್ಯೇಕ ಗುತ್ತಿಗೆದಾರರನ್ನು ನೇಮಿಸಲು ಕರೆದ ಟೆಂಡರ್‌ಗೆ ಸರ್ಕಾರದ ಅನುಮೋದನೆ ಇನ್ನೂ ದೊರೆತಿಲ್ಲ. ಸದ್ಯ 34 ವಾರ್ಡ್‌ಗಳ ಟೆಂಡರ್‌ಗೆ ಮಾತ್ರ ಅನುಮೋದನೆ ದೊರೆತಿದೆ’ ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್ ತಿಳಿಸಿದರು.

‘ಸುಭಾಷ್ ಅಡಿ ಅವರು ನೀಡಿರುವ ಗಡುವಿನೊಳಗೆ ಭೂಭರ್ತಿ ಘಟಕಕ್ಕೆ ಮಿಶ್ರ ಕಸ ಸಾಗಣೆ ಆಗುವುದನ್ನು ನಿಲ್ಲಿಸಲು ಪ್ರಯತ್ನಿಸಲಾಗುವುದು’ ಎಂದು ಹೇಳಿದರು.

ಪಾಠ ಕೇಳಲು ನಿರಾಸಕ್ತಿ

ಕಸ ನಿರ್ವಹಣೆ ಬಗ್ಗೆ ಸುಭಾಷ್ ಅಡಿ ಅವರು ಮಾಡಿದ ಪಾಠ ಕೇಳಲು ಪಾಲಿಕೆ ಸದಸ್ಯರಲ್ಲಿ ನಿರಾಸಕ್ತಿ ಎದ್ದು ಕಾಣುತ್ತಿತ್ತು.

11 ಗಂಟೆಗೆ ನಿಗದಿಯಾಗಿದ್ದ ಸಭೆ ಒಂದು ಗಂಟೆ ತಡವಾಗಿ ಆರಂಭವಾಯಿತು. ಆದರೂ ಅರ್ಧದಷ್ಟು ಕುರ್ಚಿಗಳು ಖಾಲಿ ಇದ್ದವು. ಆಡಳಿತರೂಢ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರ ಸಂಖ್ಯೆಯೂ ಕಡಿಮೆ ಇತ್ತು.

ಸಭೆ ಆರಂಭವಾದ ಕೆಲ ಹೊತ್ತಿನಲ್ಲೆ ಉಪ ಮೇಯರ್ ಭದ್ರೇಗೌಡ, ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಸಭಾಂಗಣದಿಂದ ಹೊರನಡೆದರು.

‘ಕಾಲಾವಕಾಶ ಕೇಳಲಾಗುವುದು’

‘ಟೆಂಡರ್‌ಗೆ ಅನುಮೋದನೆ ಸಿಗದ ಕಾರಣ ಮಿಶ್ರ ಕಸವನ್ನು ಭೂಭರ್ತಿ ಘಟಕಕ್ಕೆ ಸುರಿಯಲು ಇನ್ನೊಂದು ತಿಂಗಳು ಕಾಲವಕಾಶವನ್ನು ಎನ್‌ಜಿಟಿಯಿಂದ ಕೇಳಲಾಗುವುದು’ ಎಂದು ಮೇಯರ್ ಗಂಗಾಂಬಿಕೆ ಹೇಳಿದರು.

‘ಸೆಪ್ಟೆಂಬರ್ ಅಂತ್ಯದೊಳಗೆ ಟೆಂಡರ್ ಪ್ರಕ್ರಿಯೆ ಮುಗಿಯಲಿದೆ. ನವೆಂಬರ್ 1ರ ಗಡುವಿನ ವೇಳೆಗೆ ಭೂಭರ್ತಿ ಘಟಕಕ್ಕೆ ಕಸ ಹೋಗುವುದು ನಿಲ್ಲಲಿದೆ’ ಎಂದು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದರು.

ನೆರೆ ಪರಿಹಾರಕ್ಕೆ ₹5 ಕೋಟಿ

ನೆರೆ ಹಾವಳಿ ಸಂ‌ತ್ರಸ್ತರ ಪರಿಹಾರಕ್ಕೆ ಪಾಲಿಕೆ ಸದಸ್ಯರ ಒಂದು ತಿಂಗಳ ವೇತನ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲು ತೀರ್ಮಾನಿಸಲಾಯಿತು.

ಇದಲ್ಲದೇ ಪಾಲಿಕೆಯಿಂದ ₹5 ಕೋಟಿ ನೀಡಲು ಇದೇ ವೇಳೆ ಸಭೆ ತೀರ್ಮಾನ ಕೈಗೊಂಡಿತು.

ನ್ಯಾಯಮೂರ್ತಿ ಜತೆಯೂ ವಾಗ್ವಾದ

‘ಒಣ ಕಸವನ್ನು ವಾರದಲ್ಲಿ ಎರಡು ಅಥವಾ ಮೂರು ದಿನ ಮಾತ್ರ ಸಂಗ್ರಹಿಸಿದರೆ ರಸ್ತೆ ಬದಿಯಲ್ಲಿ ಕಸ ಬೀಳುವುದು ಗ್ಯಾರಂಟಿ’ ಎಂದು ಸದಸ್ಯ ಬಿ.ಎಸ್. ಸತ್ಯನಾರಾಯಣ ಹೇಳಿದರು.

ಈ ಸಂದರ್ಭದಲ್ಲಿ ಉತ್ತರ ನೀಡಲು ಸುಭಾಷ್ ಅಡಿ ಮುಂದಾದರು. ಸಿಡಿಮಿಡಿಗೊಂಡ ಸತ್ಯನಾರಾಯಣ, ‘ನೀವು ಸಲಹೆಗಳನಷ್ಟೇ ನೀಡಿ ಆದೇಶ ನೀಡಬೇಡಿ, ಕೌಂಟರ್ ನೀಡುವುದು ಬೇಡ. ಕಸದ ಸಮಸ್ಯೆ ನಿವಾರಣೆಗೆ 25 ವರ್ಷದಿಂದ ಹಲವು ಕಸರತ್ತುಗಳನ್ನು ಮಾಡಿರುವ ಅನುಭವ ನಮಗಿದೆ. ಅದನ್ನೂ ಕೇಳಿಸಿಕೊಳ್ಳಿ’ ಎಂದು ಏರು ಧ್ವನಿಯಲ್ಲಿ ಅಸಮಾಧಾನವ್ಯಕ್ತಪಡಿಸಿದರು.

ನಯವಾಗಿಯೇ ಉತ್ತರಿಸಿದ ಅಡಿ ಅವರು, ‘ನೀವು ಕೌನ್ಸಿಲ್‌ಗೆ ಕೊಡುವ ಗೌರವ ಇದೆನಾ? ನಾನು ಯಾರಿಗೂ ಆದೇಶ ನೀಡಲು ಬಂದಿಲ್ಲ. ಕಸದ ಸಮಸ್ಯೆ ಪರಿಹಾರಕ್ಕೆ ನಿಮ್ಮ ಸಹಕಾರ ಕೇಳಲು ಬಂದಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT