ಭಾನುವಾರ, ಸೆಪ್ಟೆಂಬರ್ 25, 2022
29 °C

ಹಸಿ ತ್ಯಾಜ್ಯದಿಂದ ಗೊಬ್ಬರ ಮಾಡಲು ಅವಕಾಶ: ‘ಕಾಂಪೋಸ್ಟ್‌ ಸರ್ವೀಸ್‌’ಗೆ ರಿಯಾಯಿತಿ

ಆರ್‌. ಮಂಜುನಾಥ್‌ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಅಧಿಕ ಪ್ರಮಾಣದಲ್ಲಿ ಹಸಿ ತ್ಯಾಜ್ಯ ಸಂಗ್ರಹವಾಗುವ ಪ್ರದೇಶದಲ್ಲೇ ಅದನ್ನು ಗೊಬ್ಬರವಾಗಿಸಲು ವ್ಯಕ್ತಿ ಅಥವಾ ಸಂಘ–ಸಂಸ್ಥೆಗಳಿಗೆ ಬಿಬಿಎಂಪಿ ಅವಕಾಶ ಕಲ್ಪಿಸುತ್ತಿದೆ. ಇದಕ್ಕಾಗಿ ಹಲವು ರಿಯಾಯಿತಿಗಳನ್ನು ನೀಡಲು ಯೋಜಿಸುತ್ತಿದೆ.

100 ಕೆ.ಜಿಗೂ ಅಧಿಕ ಹಸಿ ತ್ಯಾಜ್ಯ ಸಂಗ್ರಹವಾಗುವ ಕಟ್ಟಡ, ಮಾಲ್‌, ಅಪಾರ್ಟ್‌ಮೆಂಟ್‌ಗಳೇ ಅದನ್ನು ಸಂಸ್ಕರಿಸಬೇಕು ಎಂದು ಹಳೆಯ ನಿಯಮವನ್ನೇ ಬಿಬಿಎಂಪಿ ಇದೀಗ ಕಠಿಣವಾಗಿ ಜಾರಿಗೊಳಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಯಾರಾದರೂ ಗೊಬ್ಬರ ತಯಾರಿಸುವ ಘಟಕ ಸ್ಥಾಪಿಸಿಕೊಂಡರೆ ಅವರಿಗೆ ಲೈಸೆನ್ಸ್, ತೆರಿಗೆ ಸೇರಿ ಇತರೆ ವಿನಾಯಿತಿಗಳನ್ನು ನೀಡುವುದರ ಜೊತೆಗೆ ಗೊಬ್ಬರ ಮಾರಾಟಕ್ಕೂ ನೆರವಾಗಲಿದೆ. ಅಲ್ಲದೆ, ಮುಂದೆ ತ್ಯಾಜ್ಯ ವಿಲೇವಾರಿಗೆ ತೆರಿಗೆ ಅನುಷ್ಠಾನವಾದರೆ ಅದರಿಂದಲೂ ವಿನಾಯಿತಿ ಸಿಗಲಿದೆ.

ಹೆಚ್ಚು ಹಸಿ ಕಸ ಉತ್ಪತ್ತಿಯಾಗುವ ಸ್ಥಳ ಅಥವಾ ಕಟ್ಟಡಗಳನ್ನು ಬಿಬಿಎಂಪಿ ಗುರುತಿಸಿ, ಪಟ್ಟಿ ಮಾಡಿಕೊಂಡಿದೆ. ಆ ಕಟ್ಟಡದವರೇ ಸಂಸ್ಕರಣೆ ಮಾಡಬಹುದು ಅಥವಾ ಮೂರ್ನಾಲ್ಕು ನಿವಾಸಿಗಳ ಸಂಘಗಳು ಸೇರಿಕೊಂಡು ಗೊಬ್ಬರವಾಗಿಸಿಕೊಳ್ಳಬಹುದು. ಇದಲ್ಲದೆ, ವ್ಯಕ್ತಿ ಅಥವಾ ಸಂಘ–ಸಂಸ್ಥೆಗಳು ಅವರಿಂದ ತ್ಯಾಜ್ಯವನ್ನು ಪಡೆದು, ಅವರ ಸ್ಥಳ ಅಥವಾ ಬೇರೆಲ್ಲಾದರೂ ಸಂಸ್ಕರಿಸಬಹುದು. ಇದನ್ನು ‘ಕಾಂಪೋಸ್ಟ್‌ ಸರ್ವೀಸ್‌’ ಎಂದು ಹೆಸರಿಸಲು ಬಿಬಿಎಂಪಿ ಅಧಿಕಾರಿಗಳು ಯೋಜಿಸಿದ್ದಾರೆ.

‘ಸಂಸ್ಕರಣೆಗೆ ಯಾವುದೇ ಮಾದರಿ ಅಳವಡಿಸಿಕೊಳ್ಳಬಹುದು. ಆದರೆ ವೈಜ್ಞಾನಿಕವಾಗಿರಬೇಕು. ಇದನ್ನು ಬಿಬಿಎಂಪಿ ನಿಗಾವಹಿಸಲಿದೆ. ಹೆಚ್ಚಿನ ಸ್ಥಳ ಬೇಕಿಲ್ಲ, ವೆಚ್ಚವೂ ಕಡಿಮೆ. ಗೊಬ್ಬರ ಮಾರಾಟದಿಂದ ಲಾಭವೂ ಬರುತ್ತದೆ. ಇದರಿಂದ ಸ್ವಯಂ ಉದ್ಯೋಗದ ಅವಕಾಶಗಳೂ ತೆರೆದುಕೊಳ್ಳಲಿವೆ. ಸಣ್ಣ ಪ್ರಮಾಣದಲ್ಲಿ ಸಂಸ್ಕರಣೆ, ಆಧುನಿಕ ತಂತ್ರಜ್ಞಾನದಿಂದ ವಾಸನೆ, ಕೊಳಕು ನೀರನ್ನೂ ನಿಯಂತ್ರಿಸಬಹುದು’ ಎಂದು ಹಿರಿಯ ಅಧಿಕಾರಿ ಹೇಳಿದರು.

ಒಂದು ವಾರ್ಡ್‌ನಲ್ಲಿ ನಿತ್ಯವೂ ಸುಮಾರು 20 ಟನ್‌ ಹಸಿ ತ್ಯಾಜ್ಯ ಸಂಗ್ರಹವಾಗುತ್ತದೆ. ಇದು ಅದೇ ವಾರ್ಡ್‌ನಲ್ಲಿ ಅಲ್ಲಲ್ಲಿ ಸಂಸ್ಕರಣೆಯಾದರೆ ಕಸದ ಸಮಸ್ಯೆ ಬಹುತೇಕ ನಿವಾರಣೆಯಾಗುತ್ತದೆ. ಹೀಗಾಗಿ ಈ ‘ಕಾಂಪೋಸ್ಟ್‌ ಸರ್ವೀಸ್‌’ ಯೋಜನೆಯ ಶೀಘ್ರ ಜಾರಿಗೆ ಬಿಬಿಎಂಪಿ ಪ್ರಕ್ರಿಯೆಗಳನ್ನು ಆರಂಭಿಸಿದೆ.

ಎಲ್ಲರಿಗೂ ಅನುಕೂಲ
ನ್ಯಾಯಾಲಯ ಹಲವು ಸಂದರ್ಭಗಳಲ್ಲಿ ಉತ್ಪತ್ತಿಯಾಗುವ ಕಸವನ್ನು ಆ ಪ್ರದೇಶಗಳಲ್ಲೇ ಸಂಸ್ಕರಣೆ ಮಾಡಬೇಕು ಎಂದು ಸೂಚಿಸಿದೆ. ಅಲ್ಲದೆ, ತಜ್ಞರು ಕೂಡ ಅದೇ ರೀತಿಯ ಅಭಿಪ್ರಾಯ ನೀಡಿದ್ದಾರೆ. ಹೀಗಾಗಿ ಹಸಿ ತ್ಯಾಜ್ಯವನ್ನು ವಾರ್ಡ್‌ ಮಟ್ಟದಲ್ಲೇ ಸಂಸ್ಕರಿಸಿ, ಗೊಬ್ಬರವನ್ನಾಗಿಸುವ ಪ್ರಕ್ರಿಯೆಗೆ ಹೆಚ್ಚು ಉತ್ತೇಜನ ನೀಡಲಾಗುತ್ತಿದೆ. ಎಲ್ಲ ರೀತಿಯ ಕಸವನ್ನು ಆಯಾ ವಾರ್ಡ್‌ನಲ್ಲೇ ಸಂಸ್ಕರಣೆ ಮಾಡಲು ಯೋಜನೆ ರೂಪಿಸಲಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ಬಿಬಿಎಂಪಿಯೊಂದಿಗೆ ಕೈಜೋಡಿಸಿದರೆ ನಾಗರಿಕರು ಅಥವಾ ಸಂಘ–ಸಂಸ್ಥೆಗಳಿಗೂ ಅನುಕೂಲವಾಗುತ್ತದೆ ಎಂದು ಬಿಬಿಎಂಪಿ ಘನತ್ಯಾಜ್ಯ ವಿಭಾಗದ ವಿಶೇಷ ಆಯುಕ್ತ ಡಾ. ಹರೀಶ್‌ ಕುಮಾರ್‌ ತಿಳಿಸಿದರು.

‘ಗೊಬ್ಬರ ಘಟಕ’ಕ್ಕೆ ಟೆಂಡರ್‌
ವಾರ್ಡ್‌ನಲ್ಲಿ ಸಂಗ್ರಹವಾಗುವ ಎಲೆ, ಗಿಡ, ಬಳ್ಳಿಯಂತಹ ತ್ಯಾಜ್ಯವನ್ನು ಸಾವಯವ ಗೊಬ್ಬರವಾಗಿಸುವ ನಿಟ್ಟಿನಲ್ಲಿ 200 ಸ್ಥಳಗಳಲ್ಲಿ ‘ಗೊಬ್ಬರ ಘಟಕ’ಗಳನ್ನು ಸ್ಥಾಪಿಸಲಾಗುತ್ತಿದೆ. ಒಂದು ಟನ್‌ ತ್ಯಾಜ್ಯ ಸಂಸ್ಕರಣೆ ಘಟಕಕ್ಕೆ ಸುಮಾರು ₹6 ಲಕ್ಷ ವೆಚ್ಚವಾಗಲಿದೆ. ಈ ಘಟಕಗಳ ಸ್ಥಾಪನೆಗೆ ಸದ್ಯದಲ್ಲಿಯೇ ಟೆಂಡರ್‌ ಕರೆಯಲಾಗುತ್ತಿದೆ. ಈ ಘಟಕಗಳ ಮೇಲ್ವಿಚಾರಣೆಯನ್ನು ಸ್ಥಳೀಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳಿಗೇ ವಹಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.

ಹಲವು ಮಾದರಿ
ಗೊಬ್ಬರ ತಯಾರಿಕೆ ಸಂಘ–ಸಂಸ್ಥೆಗಳಲ್ಲಿ, ಮಾರುಕಟ್ಟೆಯಲ್ಲಿ ಸಾಕಷ್ಟು ಮಾದರಿಗಳಿವೆ. ಹಸಿ ಕಸದ ಸಾಮರ್ಥ್ಯಕ್ಕೆ ಅನುಗುಣವಾಗಿ ಇವುಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ತ್ಯಾಜ್ಯ ಸಂಸ್ಕರಣೆ ಘಟಕ ಅದು ಎಂದು ಗೊತ್ತಾಗದ ರೀತಿಯಲ್ಲಿ ಮಾದರಿಗಳಿವೆ. ಅದಕ್ಕೆ ಮೊದಲು ಎಲ್ಲಿ ಅಳವಡಿಕೆಯಾಗಿದೆ ಎನ್ನುವುದನ್ನು ನೋಡಿ, ಪರಿಶೀಲಿಸಿಕೊಳ್ಳುವುದು ಉತ್ತಮ. ಹಸಿ ಕಸದಿಂದ ಗೊಬ್ಬರ ತಯಾರಿಕೆ ನಮ್ಮ ಜವಾಬ್ದಾರಿಯಾಗಬೇಕು.
-ಡಾ. ಶಾಂತಿ ತುಮ್ಮಲ, ಸದಸ್ಯೆ, ಘನತ್ಯಾಜ್ಯ ನಿರ್ವಹಣೆ ರೌಂಡ್‌ ಟೇಬಲ್‌ (ಎಸ್‌ಡಬ್ಲ್ಯುಎಂಆರ್‌‌ಟಿ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು