ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸ ನಿರ್ವಹಣೆ: ನೋಂದಣಿಯಾಯಿತು ಕಂಪನಿ

ಬಿಬಿಎಂಪಿ ಸಿಬ್ಬಂದಿ ಅಧಿಕೃತ ಹಸ್ತಾಂತರ ಪ್ರಕ್ರಿಯೆ ಚಾಲ್ತಿಯಲ್ಲಿ l ಜುಲೈನಿಂದಲೇ ಕಾರ್ಯ ನಿರ್ವಹಣೆ?
Last Updated 22 ಮೇ 2021, 19:36 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕಸ ನಿರ್ವಹಣೆಗೆ ‍ಪ್ರತ್ಯೇಕ ಕಂಪನಿ ಸ್ಥಾಪಿಸುವ ಪ್ರಮುಖ ಪ್ರಕ್ರಿಯೆ ಪೂರ್ಣಗೊಂಡಿದೆ. ಸರ್ಕಾರ ‘ಬೆಂಗಳೂರು ಕಸ ನಿರ್ವಹಣೆ ಕಂಪನಿ’ಯನ್ನು (ಬೆಂಗಳೂರು ಸಾಲಿಡ್‌ ವೇಸ್ಟ್‌ ಮ್ಯಾನೇಜ್‌ಮೆಂಟ್‌ ಲಿಮಿಟೆಡ್‌) ಕಾರ್ಪೊರೇಟ್‌ ಕಂಪನಿಗಳ ಕಾಯ್ದೆ ಅಡಿ ನೋಂದಣಿ ಮಾಡಿದೆ.

ಕೇಂದ್ರ ಸರ್ಕಾರದ ಕಾರ್ಪೊರೇಟ್‌ ವ್ಯವಹಾರಗಳ ಸಚಿವಾಲಯವು ಈ ಕುರಿತ ಪ್ರಮಾಣಪತ್ರವನ್ನು ಶನಿವಾರ (ಮೇ 22) ನೀಡಿದೆ. ಕಸ ನಿರ್ವಹಣೆ ಕಂಪನಿಗೆ ಕಾರ್ಪೊರೇಟ್‌ ಗುರುತು ಸಂಖ್ಯೆ (U37100KA20
21SGC147734), ಪ್ಯಾನ್‌ ಸಂಖ್ಯೆ ಹಾಗೂ ಟ್ಯಾನ್‌ ಸಂಖ್ಯೆಗಳನ್ನು ಸಚಿವಾಲಯವು ನೀಡಿದೆ. ಇದರೊಂದಿಗೆ ಬಿಬಿಎಂಪಿ ವ್ಯಾಪ್ತಿಯ ಕಸ ವಿಲೇವಾರಿ ಹೊಣೆಗೆ ಕಾರ್ಪೊರೇಟ್‌ ಕಂಪನಿಯನ್ನು ರಚಿಸುವ ಮಹತ್ತರ ಘಟ್ಟ ಪೂರ್ಣಗೊಂಡಿದೆ.

ಹಸ್ತಾಂತರ ಪ್ರಕ್ರಿಯೆ: ‍ಪ್ರಸ್ತುತ ಬಿಬಿಎಂಪಿಯ ಕಸ ವಿಲೇವಾರಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಂಪನಿಯ ತೆಕ್ಕೆಗೆ ಬರಲಿದ್ದಾರೆ. ಕಸ ನಿರ್ವಹಣೆಗೆ ಬಳಕೆಯಾಗುತ್ತಿರುವ ಪರಿಕರಗಳು, ಕಸ ಸಂಸ್ಕರಣಾ ಕೇಂದ್ರಗಳು, ಆಟೊಟಿಪ್ಪರ್‌ಗಳು, ಕಸ ವರ್ಗಾವಣೆಗೆ ಬಳಸುವ ಕಾಂಪ್ಯಾಕ್ಟರ್‌ಗಳು, ಒಣ ತ್ಯಾಜ್ಯ ಸಂಗ್ರಹ ಕೇಂದ್ರಗಳನ್ನು ಕಂಪನಿಗೆ ಹಸ್ತಾಂತರಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ.

‘ಕಸ ನಿರ್ವಹಣೆಯ ಪರಿಕರಗಳ ವಿವರ ಹಾಗೂ ಸಿಬ್ಬಂದಿಯ ಪಟ್ಟಿಯನ್ನು ಸರ್ಕಾರ ಕೇಳಿದೆ. ಕಸ ನಿರ್ವಹಣೆಗಯ ಗುತ್ತಿಗೆಗಳು, ಈ ಕುರಿತ ಆಸ್ತಿಗಳು ಹಾಗೂ ಬಾಧ್ಯತೆಗಳ ವಿವರಗಳನ್ನೂ ಒದಗಿಸಬೇಕಿದೆ’ ಎಂದು ಬಿಬಿಎಂಪಿಯ ವಿಶೇಷ ಆಯುಕ್ತ (ಕಸ ನಿರ್ವಹಣೆ) ಡಿ.ರಂದೀಪ್‌ ‘ಪ್ರಜಾವಾಣಿ’ ತಿಳಿಸಿದರು.

‘ಏಳು ಕಸ ಸಂಸ್ಕರಣಾ ಕೇಂದ್ರಗಳಲ್ಲಿರುವ ಸ್ವತ್ತುಗಳು, 13 ಬಯೋಮೀಥೇನ್‌ ಘಟಕಗಳು. ವಿವಿಧ ವಾರ್ಡ್‌ಗಳಲ್ಲಿರುವ ಒಣ ಕಸ ಸಂಗ್ರಹ ಕೇಂದ್ರಗಳೂ ಸೇರಿದಂತೆ ಕಸ ನಿರ್ವಹಣೆಗೆ ಸಂಬಂಧಿಸಿದ ಸಮಗ್ರ ಆಸ್ತಿಗಳ ವಿವರ ಹಾಗೂ ಕಸ ವಿಲೇವಾರಿ ಸಿಬ್ಬಂದಿಯ ವಿವರಗಳನ್ನು ಕೇಳಿದ್ದೇವೆ. ಸಿಬ್ಬಂದಿ ಹಾಗೂ ಸ್ವತ್ತುಗಳ ಹಸ್ತಾಂತರ ಪ್ರಕ್ರಿಯೆಯನ್ನು ಶೀಘ್ರವೇ ಪೂರ್ಣಗೊಳ್ಳಲಿದೆ. ಮುಂಬರುವ ಜುಲೈ ತಿಂಗಳಿನಿಂದಲೇ ಕಂಪನಿ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಬೇಕೆಂಬ ಆಶಯದೊಂದಿಗೆ ಸಿದ್ಧತೆಗಳು ನಡೆದಿವೆ’ ಎಂದು ನಗರಾಭಿವೃದ್ಧಿ ಇಲಾಖೆಯ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಗುತ್ತಿಗೆ ಮುಂದುವರಿಕೆ: ‘ವಾರ್ಡ್‌ವಾರು ಕಸ ನಿರ್ವಹಣೆಗೆ ಬಿಬಿಎಂಪಿ ಮಾಡಿಕೊಂಡಿರುವ ಗುತ್ತಿಗೆಗಳು ಸದ್ಯಕ್ಕೆ ಮುಂದುವರಿಯಲಿವೆ. ಕಸ ನಿರ್ವಹಣೆಯ ಗುಣಮಟ್ಟವನ್ನು ಒಂದು ವರ್ಷ ನೋಡಿ ನಂತರ ಗುತ್ತಿಗೆ ಮುಂದುವರಿಸಬೇಕೋ ಬೇಡವೋ ಎಂಬುದನ್ನು ಕಂಪನಿ ನಿರ್ಧರಿಸಲಿದೆ’ ಎಂದು ಅವರು ತಿಳಿಸಿದರು.

ಕಂಪನಿಯಡಿ ಕಾರ್ಯ ನಿರ್ವಹಿಸಲು ಹಿಂದೇಟು?

ಬಿಬಿಎಂಪಿಯ ಕಸ ನಿರ್ವಹಣೆ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂಜಿನಿಯರ್‌ಗಳು ಸೇರಿದಂತೆ ಬಹುತೇಕ ಸಿಬ್ಬಂದಿ ಕಸ ನಿರ್ವಹಣೆಯ ಕಾರ್ಪೊರೇಟ್‌ ಕಂಪನಿ ಅಡಿ ಕಾರ್ಯ ನಿರ್ವಹಿಸಲು ಹಿಂದೇಟು ಹಾಕುತ್ತಿದ್ದಾರೆ.

‘ಸಿವಿಲ್‌ ಎಂಜಿನಿಯರ್‌ಗಳನ್ನೂ ಪರಿಸರ ಎಂಜಿನಿಯರ್‌ ಆಗಿ ಬಳಸಿಕೊಳ್ಳಲಾಗುತ್ತಿದೆ. ಬಿಬಿಎಂಪಿಯಲ್ಲಿ ಅವರಿಗೆ ಸೇವಾ ಹಿರಿತನ ಸಿಗುತ್ತದೆ. ಕಂಪನಿ ನೌಕರರಾದರೆ ಸರ್ಕಾರಿ ಸೌಲಭ್ಯಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂಬ ಆತಂಕ ಕೆಲವರಲ್ಲಿದೆ. ಹಾಗಾಗಿ ಕಂಪನಿ ಅಡಿ ಕಾರ್ಯ ನಿರ್ವಹಿಸಲು ಸಿಬ್ಬಂದಿ ಹಿಂಜರಿಕೆ ಹೊಂದಿದ್ದಾರೆ’ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದರು.

‘ಕಂಪನಿಯ ತೆಕ್ಕೆಗೆ ಬಂದರೂ ಬಿಬಿಎಂಪಿ ನೌಕರರಾಗಿಯೂ ಮುಂದುವರಿಯುವುದಕ್ಕೂ ಅವಕಾಶ ಇದೆ. ಎರವಲು ಸೇವೆ ಎಂದು ಪರಿಗಣಿಸಿ ಅವರನ್ನು ನಿಯುಕ್ತಿ ಮಾಡಬಹುದು’ ಎಂದು ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಬಿಬಿಎಂಪಿಯ ಈಗಿನ ಸಿಬ್ಬಂದಿಯನ್ನು ಬಳಸುವುದಲ್ಲದೇ ಕಂಪನಿಯು ಪ್ರತ್ಯೇಕ ಸಿಬ್ಬಂದಿಯನ್ನೂ ನೇಮಿಸಿಕೊಳ್ಳಲಿದೆ.

ರಾಜಕೀಯ ಹಸ್ತಕ್ಷೇಪಕ್ಕಿಲ್ಲ ಅವಕಾಶ

ಕಸ ನಿರ್ವಹಣೆಯ ಕಾರ್ಪೋರೇಟ್‌ ಕಂಪನಿಯು ಆಡಳಿತ ನಿರ್ವಹಣೆಗೆ ಪ್ರತ್ಯೇಕ ಕಾರ್ಯಕಾರಿ ತಂಡವನ್ನು ರಚಿಸಲಿದೆ. ಈ ತಂಡವು ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ), ಮುಖ್ಯ ಆರ್ಥಿಕ ಅಧಿಕಾರಿ (ಸಿಎಫ್‌ಒ), ವ್ಯವಸ್ಥಾಪಕರು ಹಾಗೂ ಇತರ ಸಿಬ್ಬಂದಿಯನ್ನು ಒಳಗೊಂಡಿರಲಿದೆ. ಕಾರ್ಯಕಾರಿ ತಂಡದ ನೇಮಕ ಇನ್ನಷ್ಟೇ ಆಗಬೇಕಿದೆ.

‘ಪ್ರಸ್ತುತ ಪ್ರತಿ ವಾರ್ಡ್‌ನಲ್ಲೂ ರಾಜಕೀಯ ಪ್ರಭಾವಿಗಳು ಹಾಗೂ ಗುತ್ತಿಗೆದಾರರ ನಡುವೆ ಅಪವಿತ್ರ ನಂಟು ಇದೆ. ಅವರೇ ಕಸ ನಿರ್ವಹಣೆಯ ಪ್ರಕ್ರಿಯೆಯನ್ನು ನಿಯಂತ್ರಿಸುತ್ತಿದ್ದಾರೆ. ಇದರಿಂದ ಕಸ ವಿಲೇವಾರಿ ಪ್ರಕ್ರಿಯೆಯಲ್ಲಿ ಅನಿರೀಕ್ಷಿತ ತೊಡಕುಗಳು ಎದುರಾಗುತ್ತಿವೆ. ಇದನ್ನು ಮಟ್ಟಹಾಕುವ ಉದ್ದೇಶದಿಂದಲೇ ಕಂಪನಿಯ ಕಾರ್ಯಕಾರಿ ತಂಡವು ರಾಜಕೀಯ ಹಸ್ತಕ್ಷೇಪ ಮುಕ್ತವಾಗಿರುವಂತೆ ನೋಡಿಕೊಳ್ಳಲಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಸಿಇಒ ಅವರನ್ನು ನಿರ್ದಿಷ್ಟ ಅವಧಿಗೆ ನೇಮಿಸಲಾಗುತ್ತದೆ. ಅವರು ಕಂಪನಿಯ ಆಡಳಿತ ಮಂಡಳಿಗೆ ಮಾತ್ರ ಉತ್ತರದಾಯಿಯಾಗಿರುತ್ತಾರೆ. ರಾಜಕೀಯ ಹಸ್ತಕ್ಷೇಪವನ್ನು ತಡೆಯುವ ಉದ್ದೇಶದಿಂದ ಕಾರ್ಯಕಾರಿ ತಂಡದ ಭಾಗವಾಗುವವರು ಕೆಲವೊಂದು ಅರ್ಹತೆ ಹೊಂದಿರುವುದನ್ನು ಕಡ್ಡಾಯಪಡಿಸಲಾಗಿದೆ. ಈ ಕಾರ್ಯಕಾರಿ ತಂಡದಲ್ಲಿ ಯಾವುದೇ ಬದಲಾವಣೆ ಮಾಡುವುದಿದ್ದರೂ ಅದಕ್ಕೆ ತಾಂತ್ರಿಕ ಸಮಿತಿಯ ಅನುಮೋದನೆ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ.

l ಅವರು ಸರ್ಕಾರಿ ಅಥವಾ ಸಾರ್ವಜನಿಕ ಕ್ಷೇತ್ರದ ನೌಕರ ಆಗಿರಬಾರದು.

l ಕಂಪನಿಯಲ್ಲಿ 15 ವರ್ಷ ಕರ್ಯನಿರ್ವಹಿಸಿದ ಅನುಭವ ಹೊಂದಿರಬೇಕು (ಕಸ ನಿರ್ವಹಣೆ ಕಂಪನಿಯಲ್ಲಿ ಕಾರ್ಯನಿರ್ವಹಿಸಿದವರಿಗೆ ಆದ್ಯತೆ)

l ಪರಿಸರ ವಿಜ್ಞಾನ ಅಥವಾ ಪರಿಸರ ಎಂಜಿನಿಯರಿಂಗ್‌ನಲ್ಲಿ ಅಥವಾ ತತ್ಸಂಬಂಧಿ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.

l ವಾಯು ಮಾಲಿನ್ಯ ತಡೆ, ಜಲ ಮಾಲಿನ್ಯ ತಡೆ, ಕಸ ನಿರ್ವಹಣೆ , ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿರಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT