ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಂಡರ್ ಆನ್ ವೀಲ್ಸ್’ಗೆ ಚಾಲನೆ: ಅಂಗನವಾಡಿ ಮಕ್ಕಳ ಮನೆ ಬಾಗಿಲಿಗೆ ಕಲಿಕೆ

ನಗರದ ಪೂರ್ವ ವಲಯ ವ್ಯಾಪ್ತಿಯಲ್ಲಿ ಅಂಗನವಾಡಿಯ ಮಕ್ಕಳ ಮನೆ ಬಾಗಿಲಿಗೆ ಕಲಿಕೆ
Last Updated 12 ಸೆಪ್ಟೆಂಬರ್ 2022, 18:43 IST
ಅಕ್ಷರ ಗಾತ್ರ

ಬೆಂಗಳೂರು: ಅಂಗನವಾಡಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ‌‘ವಂಡರ್‌ ಆನ್‌ ವೀಲ್ಸ್‌’ಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಸೋಮವಾರ ಚಾಲನೆ ನೀಡಿದರು.

ಫ್ರೀಥಿಂಕಿಂಗ್ ಫೌಂಡೇಷನ್ ಸಂಸ್ಥೆಯು ಬಿಬಿಎಂಪಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಭಾಗಿತ್ವದಲ್ಲಿ ‘ವಂಡರ್ ಆನ್ ವೀಲ್ಸ್’ ಮೂಲಕ ನಗರದ ಪೂರ್ವ ವಲಯ ವ್ಯಾಪ್ತಿಯಲ್ಲಿ ಅಂಗನ
ವಾಡಿಯ ಮಕ್ಕಳಿಗೆ ಆರಂಭಿಕ ಕಲಿಕೆಯನ್ನು ಅವರ ಮನೆ ಬಾಗಿಲಿಗೆ ಕೊಂಡೊಯ್ಯಲಿದೆ.

‘ಶಾಲಾ ಶಿಕ್ಷಣವು ಕೇವಲ ನಾಲ್ಕು ಗೋಡೆಗಳ ಮಧ್ಯದಲ್ಲಿ ನಡೆಯದೆ, ಹತ್ತಿರದ ಉದ್ಯಾನದಲ್ಲಿ, ಬಸ್ಸಿನಲ್ಲಿ ಮಕ್ಕಳ ವಿದ್ಯಾಭ್ಯಾಸ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಪಾಲಿಕೆ ವತಿಯಿಂದ ಬಸ್ಸುಗಳನ್ನು ಒದಗಿಸಿದ್ದು, ಪ್ರತಿಯೊಂದು ಬಸ್ಸಿನಲ್ಲಿ ವಿದ್ಯಾರ್ಥಿಗಳು ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿರುತ್ತದೆ. ಅಂಗನವಾಡಿಯ ಮಕ್ಕಳಿಗೆ ವಿನೂತನ ಕಲಿಕಾ ಸಾಮಗ್ರಿ, ಸಂಸ್ಥೆಯಿಂದ ನುರಿತ ಶಿಕ್ಷಕರು ಹಾಗೂ ವಿಭಿನ್ನ ವಾತಾವರಣವನ್ನು ಕಲ್ಪಿಸಿ ಅಂಗನವಾಡಿ ಮಕ್ಕಳ ಆಮೂಲಾಗ್ರ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಶಿಕ್ಷಕರಿಗೆ ತರಬೇತಿಯನ್ನು ಸಹ ನೀಡಲಾಗಿರುತ್ತದೆ. ಮುಂದಿನ ದಿನಗಳಲ್ಲಿ ಈ ಕಾರ್ಯಕ್ರಮವನ್ನು ಹೆಚ್ಚು ಪ್ರದೇಶಗಳಿಗೆ ವಿಸ್ತರಿಸಲಾಗುತ್ತದೆ’ ಎಂದು ತುಷಾರ್‌ ಗಿರಿನಾಥ್‌ ಹೇಳಿದರು.

ಬಿಬಿಎಂಪಿ ವತಿಯಿಂದ 10 ಬಸ್ಸುಗಳಲ್ಲಿ ಶಾಲೆಗಳಿಂದ ಹೊರಗುಳಿದ ಮಕ್ಕಳಿಗೆ ವಿದ್ಯಾಭ್ಯಾಸ ನೀಡಲಾಗುತ್ತಿದೆ. ವಾಹನದಲ್ಲಿ ಇಬ್ಬರು ಶಿಕ್ಷಕಿಯರು, ಒಬ್ಬ ಗ್ರೂಪ್ ಡಿ ನೌಕರ, ಬಿಳಿ ಹಲಗೆ (ವೈಟ್ ಬೋರ್ಡ್), ಮಕ್ಕಳಸ್ನೇಹಿ ಚಿತ್ರಗಳ ಅಳವಡಿಕೆ, ಕುಡಿಯುವ ನೀರು ಸೇರಿ ಇನ್ನಿತರೆ ಮೂಲಸೌಲಭ್ಯಗಳು ಇರಲಿವೆ ಎಂದರು.

ಫ್ರೀಥಿಂಕಿಂಗ್ ಫೌಂಡೇಷನ್ ಸಂಸ್ಥೆ ಮತ್ತು ಬಿಬಿಎಂಪಿಯ ಸಹಭಾಗಿತ್ವದಲ್ಲಿ ‘ಮಾಂಟೆಸ್ಸರಿ ಸ್ಕೂಲ್ ಆನ್ ವೀಲ್ಸ್’ ಅನ್ನು ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಮೇ 25ರಂದು ಪ್ರಾರಂಭಿಸಲಾಯಿತು. ಮಕ್ಕಳಿಗೆ ಮಾಂಟೆಸ್ಸರಿ ವಿಧಾನದಲ್ಲಿ ಬೋಧನೆ ಮಾಡಲು ಶಿಕ್ಷಕರಿಗೆ ತರಬೇತಿಯನ್ನು ಸಹ ನೀಡಲಾಗಿರುತ್ತದೆ. ಬೆಂಗಳೂರಿನ ಕೊಳೆಗೇರಿಗಳಲ್ಲಿ ವಾಸಿಸುವ ಎರಡೂವರೆ ವರ್ಷದಿಂದ 6 ವರ್ಷದ ಅಂಚಿನಲ್ಲಿರುವ ಮಕ್ಕಳ ಆರಂಭಿಕ ಕಲಿಕೆಯನ್ನು ಅವರ ಮನೆ ಬಾಗಿಲಿಗೆ ಕೊಂಡೊಯ್ಯುವ ಕಾರ್ಯಕ್ರಮ ಇದಾಗಿದೆ ಎಂದು ತುಷಾರ್‌ ಗಿರಿನಾಥ್‌ ತಿಳಿಸಿದರು.

ಬಿಬಿಎಂಪಿ ಶಿಕ್ಷಣ ವಿಭಾಗದ ವಿಶೇಷ ಆಯುಕ್ತ ಡಾ. ರಾಮ್ ಪ್ರಸಾದ್‌ ಮನೋಹರ್, ಸಹಾಯಕ ಆಯುಕ್ತರಾದ ಉಮೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಂಟಿ ನಿರ್ದೇಶಕರಾದ ಉಷಾ, ಫ್ರೀಥಿಂಕಿಂಗ್ ಫೌಂಡೇಷನ್ ಸಂಸ್ಥೆಯ ಮುಖ್ಯಸ್ಥರಾದ ಸುನೋಜ್ ಫಿಲಿಫ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT