ಮಂಗಳವಾರ, ಅಕ್ಟೋಬರ್ 20, 2020
23 °C
ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವಂತೆ ಬಿಬಿಎಂಪಿ ಆಡಳಿತಾಧಿಕಾರಿ ಸೂಚನೆ

ಬಿಬಿಎಂಪಿ ವಿವಿಧ ಕಾಮಗಾರಿಗಳ ತಪಾಸಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಅನುಷ್ಠಾನಗೊಳ್ಳುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪಾಲಿಕೆಯ ಆಡಳಿತಾಧಿಕಾರಿ ಗೌರವ್‌ ಗುಪ್ತ ಹಾಗೂ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌ ಶನಿವಾರ ತಪಾಸಣೆ ನಡೆಸಿದರು.

ಆನೆಪಾಳ್ಯ ಜಂಕ್ಷನ್ ರಸ್ತೆ ವಿಸ್ತರಣೆ ತಪಾಸಣೆ: ಆನೇಪಾಳ್ಯ ಜಂಕ್ಷನ್ ಬಳಿ 800 ಮೀ. ಉದ್ದದ ರಸ್ತೆ ವಿಸ್ತರಣೆ ಬಗ್ಗೆ ಆಡಳಿತಾಧಿಕಾರಿಯವರು ಅಧಿಕಾರಿಗಳಿಂದ ಮಾಹಿತಿ ಪಡೆದರು. ಈ ಕಾಮಗಾರಿ ಸಲುವಾಗಿ 19 ಆಸ್ತಿಗಳನ್ನು ತೆರವುಗೊಳಿಸಬೇಕಾಗುತ್ತದೆ. ಈ ಆಸ್ತಿ ಮಾಲೀಕರಿಗೆ ಅಭಿವೃದ್ಧಿ ಹಕ್ಕು ವರ್ಗಾವಣೆ (ಟಿಡಿಆರ್) ಪ್ರಮಾಣಪತ್ರ ನೀಡುವ ವಿಚಾರವಾಗಿ ಕುರಿತು ವಿಶೇಷ ಆಯುಕ್ತರ (ಯೋಜನೆ) ಅಧ್ಯಕ್ಷತೆಯಲ್ಲಿ ದರಸಂಧಾನ ಸಮಿತಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ರಸ್ತೆ ಮೂಲಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್‌ ಬಿ.ಎಸ್‌.ಪ್ರಹ್ಲಾದ್‌ ಮಾಹಿತಿ ನೀಡಿದರು. 

ಈ ಪ್ರದೇಶದ ರಾಜಕಾಲುವೆಗಳ ಹೂಳೆತ್ತುವಂತೆ ಆಡಳಿತಾಧಿಕಾರಿ ಸೂಚಿಸಿದರು.

ಫುಟ್‌ಪಾತ್‌ ಒತ್ತುವರಿ ತೆರವುಗೊಳಿಸಿ

ಬೊಮ್ಮನಹಳ್ಳಿ ವಲಯ ವ್ಯಾಪ್ತಿಯ ಅಗರ ಕೆರೆಯ ಉತ್ತರ ಭಾಗದ ರಸ್ತೆಯ ಪಾದಚಾರಿ ಮಾರ್ಗದುದ್ದಕ್ಕೂ ಅನಧಿಕೃತವಾಗಿರುವ ನರ್ಸರಿಗಳನ್ನು ಕೂಡಲೆ ತೆರವುಗೊಳಿಸುಂತೆ ಆಯುಕ್ತರು ಸೂಚನೆ ನೀಡಿದರು.

ಕಾಮಗಾರಿ ಕೈಗೆತ್ತಿಕೊಂಡಿರುವ ರಸ್ತೆಗಳ ಪಾದಚಾರಿ ಮಾರ್ಗದಲ್ಲಿ ಮೂಲಸೌಕರ್ಯ ಕೊಳವೆಗಳ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಬೇಕು. ಆ ಬಳಿಕ ರಾಜಕಾಲುವೆ ದುರಸ್ತಿಗೊಳಿಸಬೇಕು. ಪಾದಚಾರಿ ಮಾರ್ಗದಲ್ಲಿ ಕಿತ್ತುಹೋಗಿರುವ ಚಪ್ಪಡಿಗಳನ್ನು ಶೀಘ್ರವೇ ಅಳವಡಿಸಬೇಕು. ಎಲ್ಲ ಪಾದಚಾರಿ ಮಾರ್ಗಗಳ ಕಸ ತೆರವುಗೊಳಿಸಿ ಸ್ವಚ್ವಾಗಿಟ್ಟುಕೊಳ್ಳಬೇಕು ಛತೆಯಿಂದ ಇರುವಂತೆ ನೋಡಿಕೊಳ್ಳಬೇಕು ಗೌರವ ಗುಪ್ತ ಸೂಚಿಸಿದರು.

ಎಚ್ಎಸ್ಆರ್ ಬಡಾವಣೆ ವಾರ್ಡ್‌ನಲ್ಲಿ ಸಿಲ್ಕ್ ಬೋರ್ಡ್ ರಸ್ತೆಯ ಸರ್ವಿಸ್ ರಸ್ತೆಯನ್ನು ಕೂಡಲೆ ದುರಸ್ತಿಪಡಿಸಿ ವಾರದೊಳಗಾಗಿ ಡಾಂಬರೀಕರಣ ಮಾಡುವಂತೆ ಆಯುಕ್ತರು ಆದೇಶಿಸಿದರು.

ಶಾಸಕ ಸತೀಶ್ ರೆಡ್ಡಿ ಸಣ್ಣ ಮಳೆಯಾದರೂ ಎಚ್ಎಸ್ಆರ್ ಬಡಾವಣೆ ವಾರ್ಡ್ ವ್ಯಾಪ್ತಿಯಲ್ಲಿ ಮನೆಗಳು, ರಸ್ತೆಗಳು ಜಲಾವೃತವಾಗುತ್ತವೆ. ಇಲ್ಲಿನ ರಾಜಕಾಲುವೆಗೆ ಬೆಳ್ಳಂದೂರು ಕೆರೆ, ಮಡಿವಾಳ ಕೆರೆಗಳಿಂದಲೂ ನೀರು ಹರಿಯುತ್ತದೆ. ಜೋರು ಮಳೆಯಾದರೆ ರಾಜಕಾಲುವೆಯಲ್ಲಿನ ನೀರು ಹಿಮ್ಮುಖವಾಗಿ ಹರಿದು ಎಚ್ಎಸ್ಆರ್ ಬಡಾವಣೆಗೆ ಹರಿದು ಜಲಾವೃತವಾಗಲಿದೆ. ಈ ಸಮಸ್ಯೆ ನಿವಾರಣೆಗೆ ಕ್ರಮಕೈಗೊಳ್ಳಲಾಗಿದೆ ಎಂದರು.

‘ರಾಜಕಾಲುವೆಯಲ್ಲಿ ನೀರು ಹಿಮ್ಮುಖವಾಗಿ ಹರಿಯದಂತೆ ಕೆಲವೆಡೆ ಅಡ್ಡ ಸಂಪರ್ಕ ಕಾಲುವೆಗಳನ್ನು ನಿರ್ಮಿಸಲಾಗಿದೆ.ಪರ್ಯಾಯ ರಾಜಕಾಲುವೆ ನಿರ್ಮಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ’ ಎಂದು ಆಯುಕ್ತರು ತಿಳಿಸಿದರು.

ವೈಟ್ ಟಾಪಿಂಗ್ ತಪಾಸಣೆ

ಹೊಸೂರು ರಸ್ತೆ, ಹೊರವರ್ತುಲ ರಸ್ತೆಗಳಲ್ಲಿ ಕೆಲವೆಡೆ ವೈಟ್ ಟಾಪಿಂಗ್ ಕಾಮಗಾರಿ ಪೂರ್ಣಗೊಂಡಿದ್ದು, ಇನ್ನು ಕೆಲವೆಡೆ ಒಂದು ಪಾರ್ಶ್ವದಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಪೂರ್ಣಗೊಂಡ ಹಾಗೂ ಪ್ರಗತಿಯಲ್ಲಿರುವ ಕಾಮಗಾರಿಗಳ ವಿವರ ಒದಗಿಸುವಂತೆ  ಗುಪ್ತ ಸೂಚಿಸಿದರು.

ಫ್ಲೆಕ್ಸ್ ತೆರವುಗೊಳಿಸಿ

ನಗರದಲ್ಲಿ ಅಳವಡಿಸಿರುವ ಫ್ಲೆಕ್ಸ್ ಗಳನ್ನು ಕೂಡಲೆ ತೆರವುಗೊಳಿಸಿ ಸಂಬಂಧಪಟ್ಟವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಿಬಿಎಂಪಿ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಎಂ.ಆರ್.ವೆಂಕಟೇಶ್, ಬೊಮ್ಮನಹಳ್ಳಿ ವಲಯದ ಜಂಟಿ ಆಯುಕ್ತ ರಾಮಕೃಷ್ಣ, ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್‌ ಎನ್.ರಮೇಶ್, ಸೂಪರಿಂಟೆಂಡಿಗ್‌ ಎಂಜಿನಿಯರ್ ಎಂ.ಲೋಕೇಶ್ ಉಪಸ್ಥಿತರಿದ್ದರು.

ಸರ್ಜಾಪುರರಸ್ತೆ ವಿಸ್ತರಣೆ: ಅಡ್ಡಿ ನಿವಾರಿಸಿ

ಸರ್ಜಾಪುರ ಮುಖ್ಯ ರಸ್ತೆ ವಿಸ್ತರಣೆ ಕಾಮಗಾರಿ ಪೂರ್ಣಗೊಳಿಸುವುದಕ್ಕೆ ಇರುವ ಸಮಸ್ಯೆಯನ್ನು ಶೀಘ್ರ ಇತ್ಯರ್ಥಗೊಳಿಸಬೇಕು. ಸರ್ಜಾಪುರ ಜಂಕ್ಷನ್ ಬಳಿಯ ರಸ್ತೆಗೆ ಡಾಂಬರೀಕರಣ ಮಾಡುವಂತೆ ಆಡಳಿತಾಧಿಕಾರಿ ಸೂಚಿಸಿದರು.

4.70 ಕಿ.ಮೀ ಉದ್ದ ರಸ್ತೆ ವಿಸ್ತರಣೆ ಕೈಗೆತ್ತಿಕೊಂಡಿಇದ್ದೇವೆ. ಶೇ 40 ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ರಸ್ತೆಯ ಮೂಲಸೌಕ್ರಯ ಕೊಳವೆ ಸ್ಥಳಾಂತರ, ರಸ್ತೆಯನ್ನು ಅಡ್ಡ ಹಾಯುವ ಕಾಲುವೆಗಳ ಕಾಮಗಾರಿ, ಸರ್ವೀಸ್ ರಸ್ತೆ ಹಾಗೂ ಪಾದಚಾರಿ ಮಾರ್ಗ ಕಾಮಗಾರಿಗಳು ಪ್ರಗತಿಯಲ್ಲಿದೆ. ಕೆಲವೆಡೆ ಕಾಮಗಾರಿಗೆ ಬಿಟ್ಟುಕೊಡುವ ಜಾಗಕ್ಕೆ ಬದಲಾಗಿ ಟಿಡಿಆರ್‌ ಪಡೆಯಲು ಸ್ಥಳೀಯರು ಮುಂದೆ ಬರುತ್ತಿಲ್ಲ ಎಂದು ತಿಳಿಸಿದರು. 

ಸಮಸ್ಯೆಯನ್ನು ಒಮ್ಮತದಿಂದ ಬಗೆಹರಿಸಿಕೊಂಡು ತ್ವರಿತವಾಗಿ ರಸ್ತೆ ಅಗಲೀಕರಣ ಕಾಮಗಾರಿ ಪೂರ್ಣಗೊಳಿಸುವಂತೆ ಸಲಹೆ ನೀಡಿದರು.

‘ವೃತ್ತಗಳ ಅಂದ ಹೆಚ್ಚಿಸಿ’

ನಗರದಲ್ಲಿರುವ ಪ್ರಮುಖ ಜಂಕ್ಷನ್‌ಗಳನ್ನು ಅಭಿವೃದ್ಧಿಪಡಿಸಿ ಸುಂದರವಾಗಿ ಕಾಣುವಂತೆ ಮಾಡುವಂತೆ ರಸ್ತೆ ಮೂಲಸೌಕರ್ಯ ವಿಭಾಗದ ಎಂಜಿನಿಯರ್‌ಗಳಿಗೆ ಗೌರವ್‌ ಗುಪ್ತ ಆದೇಶ ಮಾಡಿದರು.

ಮುಖ್ಯ ಮತ್ತು ಉಪಮುಖ್ಯ ರಸ್ತೆಗಳ ಸ್ವಚ್ಛತೆ ಕಾಪಾಡಲು ನಿಯೋಜನೆ ಮಾಡಿರುವ ಕಸ ಗುಡಿಸುವ ಯಂತ್ರಗಳನ್ನು ಸಮರ್ಪಕವಾಗಿ ಬಳಸಿಕೊಂಡು ರಸ್ತೆಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು