ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡಿಎ ₹670 ಕೋಟಿ ಟೆಂಡರ್‌: ಹಿರಿಯ ಅಧಿಕಾರಿಗಳಿಂದಲೂ ಸಮ್ಮತಿ - ಬಿಡಿಎ ಟಿಪ್ಪಣಿ

Last Updated 11 ಮಾರ್ಚ್ 2023, 4:39 IST
ಅಕ್ಷರ ಗಾತ್ರ

ಬೆಂಗಳೂರು: ಬಿಡಿಎ ಶಿವರಾಮಕಾರಂತ ಬಡಾವಣೆಯ ವಿದ್ಯುದ್ದೀಕರಣ ಕಾಮಗಾರಿಗೆ ಸಂಬಂಧಿಸಿದಂತೆ ಎಲ್ಲ ಹಿರಿಯ ಅಧಿಕಾರಿಗಳ ಸಮ್ಮತಿ ನೀಡಿದ ನಂತರವೇ ₹670 ಕೋಟಿ ಮೊತ್ತದ ಟೆಂಡರ್‌ ಕರೆಯಲಾಗಿತ್ತು ಎಂಬುದು ಬಿಡಿಎ ಟಿಪ್ಪಣಿ ಮತ್ತು ಆಜ್ಞೆ ಕಡತದಿಂದ ತಿಳಿದುಬಂದಿದೆ.

ಗುಣಿ ಅಗ್ರಹಾರ ಗ್ರಾಮದಲ್ಲಿ ಒಂದು 220/66/11 ಕೆ.ವಿ ವಿದ್ಯುತ್‌ ವಿತರಣಾ ಕೇಂದ್ರ, ಸೋಮಶೆಟ್ಟಿಹಳ್ಳಿ, ಬ್ಯಾಲಕೆರೆ, ದೊಡ್ಡಬೆಟ್ಟಹಳ್ಳಿ ಮತ್ತು ಆವಲಹಳ್ಳಿ ಗ್ರಾಮಗಳಲ್ಲಿ ಇಎಚ್‌ವಿ ಭೂಗತ ಕೇಬಲ್ ಎಳೆದು ನಾಲ್ಕು 66/11 ಕೆ.ವಿ ಉಪಕೇಂದ್ರಗಳನ್ನು ನಿರ್ಮಿಸಲು ಅಲ್ಪಾವಧಿ ಟೆಂಡರ್‌ ಕರೆಯಲು 2022ರ ಡಿ.17ರಂದು ಅಧ್ಯಕ್ಷರ ನೇತೃತ್ವದಲ್ಲಿ ನಡೆದಿದ್ದ ಪ್ರಾಧಿಕಾರದ ಮಂಡಳಿ ಸಭೆಯಲ್ಲಿ ಅನುಮೋದನೆ ಪಡೆಯಲಾಗಿತ್ತು.

ಪಿಎಂಸಿ ಸಲ್ಲಿಸಿದ್ದ ಟೆಂಡರ್‌ ದಾಖಲೆ, ಬಿಒಕ್ಯೂಗಳನ್ನು ರಾಜ್ಯ ಪೂರ್ವ–ಟೆಂಡರ್‌ ಪರಿಶೀಲನಾ ಸಮಿತಿಗೆ ಸಲ್ಲಿಸಿದ್ದು, ಅನುಮೋದನೆ ನಿರೀಕ್ಷಿಸಲಾಗಿದೆ. ಅವರು ಸೂಚಿಸುವ ಬದಲಾವಣೆಗಳನ್ನು ಅಳವಡಿಸಿಕೊಳ್ಳಲಾಗುವುದು. ವಿದ್ಯುತ್‌ ಕೇಂದ್ರ, ಉಪಕೇಂದ್ರಗಳ ಕಾಮಗಾರಿ ತುರ್ತಾಗಿರುವುದರಿಂದ ಟೆಂಡರ್‌ ಆಹ್ವಾನಿಸಲು ಅತ್ಯವಶ್ಯಕವಾಗಿರುತ್ತದೆ ಎಂದು ಬಿಡಿಎದ ಟಿಪ್ಪಣಿ ಮತ್ತು ಆದೇಶ ಪುಸ್ತಕದಲ್ಲೇ ನಮೂಸಿದಿಸಲಾಗಿದೆ. ಈ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಇದರಂತೆ ಟೆಂಡರ್‌ ಕರೆಯಲು ಅನುಮೋದಿಸಿ ಮೂವರು ಸಹಾಯಕ ಎಂಜಿನಿಯರ್‌ಗಳಾದ ದೀಪಕ್‌ ಬಿ., ನರೇಂದ್ರ ಜಿ., ಬಾಲರಾಜು ಎಸ್‌., ಇಬ್ಬರು ಸಹಾಯಕ ಕಾರ್ಯಪಾಲಕರಾದ ವಸಂತ ಪಿ.ಆರ್‌., ಪ್ರವೀಣ ವಿ.ಆರ್‌. ಸೇರಿದಂತೆ ಕಾರ್ಯಪಾಲಕ ಎಂಜಿನಿಯರ್‌ ಬಿ.ಎಸ್‌. ದೀಪಕ್‌ ಸಹಿ ಹಾಕಿದ್ದಾರೆ. ನಂತರ ಇದಕ್ಕೆ ಎಂಜಿನಿಯರ್‌ ಸದಸ್ಯ ಶಾಂತರಾಜು ಅವರು ‘ಟೆಂಡರ್‌ ಆಹ್ವಾನಿಸಲು ಅನುಮೋದನೆಗೆ ಮಂಡಿಸಿದೆ’ ಎಂದು ಫೆ.21ರಂದು ಬರೆದು ಆಯುಕ್ತರ ಮುಂದೆ ಕಡತ ಮಂಡಿಸಲಾಗಿದೆ. ಆಯುಕ್ತರು ಅಂದೇ ಟೆಂಡರ್‌ ಕರೆಯಲು ಅನುಮತಿ ನೀಡಿದ್ದಾರೆ.

‘ಬಿಡಿಎ ಸಭೆ ಅನುಮೋದನೆ ಹಾಗೂ ಹಿರಿಯ ಅಧಿಕಾರಿಗಳ ಪರಿಶೀಲನೆ, ಸಮ್ಮತಿ ನಂತರವೇ ಟೆಂಡರ್‌ ಕರೆಯಲಾಗಿತ್ತು. ರಾಜ್ಯ ಪೂರ್ವ–ಟೆಂಡರ್‌ ಪರಿಶೀಲನಾ ಸಮಿತಿ ಟೆಂಡರ್‌ ದಾಖಲೆಗಳನ್ನು ಒಪ್ಪದ್ದರಿಂದ ಇ–ಪ್ರೊಕ್ಯೂರ್‌ಮೆಂಟ್‌ನಲ್ಲಿ ಅಪ್‌ಲೋಡ್‌ ಮಾಡಿರಲಿಲ್ಲ. ಫೆ.27ರಂದು ಟೆಂಡರ್‌ ಪ್ರಕ್ರಿಯೆ ಮುಂದೂಡುವ ಬಗ್ಗೆ ಪ್ರಕಟಣೆಯನ್ನು ನೀಡಲಾಯಿತು’ ಎಂದು ಕಾರ್ಯಪಾಲಕ ಎಂಜಿನಿಯರ್‌ ಬಿ.ಎಸ್‌. ದೀಪಕ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT