ಒಂದೇ ಕುಟುಂಬಕ್ಕೆ 13 ಬದಲಿ ನಿವೇಶನ

7
ಬಿಡಿಎ ನೌಕರರ ವಿರುದ್ಧ ಬಿಎಂಟಿಎಫ್‌ನಲ್ಲಿ ಎಫ್‌ಐಆರ್‌ : ದುಡ್ಡು ಕಟ್ಟಿಸಿಕೊಳ್ಳದೇ ಪ್ರಕ್ರಿಯೆ ಮುಗಿಸಿದ ‘ಪವಾಡ’

ಒಂದೇ ಕುಟುಂಬಕ್ಕೆ 13 ಬದಲಿ ನಿವೇಶನ

Published:
Updated:

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ₹10.24 ಕೋಟಿ ನಿವೇಶನ ಮೊತ್ತ ಪಾವತಿಸಿಕೊಳ್ಳದೆಯೇ ತಾಯಿ ಮತ್ತು ಮಗನಿಗೆ 13 ಬದಲಿ ನಿವೇಶನಗಳನ್ನು ಹಂಚಿಕೆ ಮಾಡಿ ‘ಪವಾಡ’ ಸೃಷ್ಟಿಸಿದೆ.

ಈ ಸಂಬಂಧ ಬಿಡಿಎ ನೌಕರ ವೆಂಕಟರಮಣಪ್ಪ, ನಿವೃತ್ತ ನೌಕರ ಕೆ.ರಾಜೇಂದ್ರ ಕುಮಾರ್‌, ಪ್ರಾಧಿಕಾರದ ಅಧಿಕಾರಿಗಳು ಹಾಗೂ ಮಧ್ಯವರ್ತಿಗಳ ವಿರುದ್ಧ ಬಿಎಂಟಿಎಫ್‌ನಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಏನಿದು ಪ್ರಕರಣ: ಪ್ರಾಧಿಕಾರವು ಯಶವಂತಪುರದ ಸರ್ವೆ ಸಂಖ್ಯೆ 144ರಿಂದ 149ರ ವರೆಗೆ 38 ಎಕರೆ 9 ಗುಂಟೆ ಸ್ವಾಧೀನಪಡಿಸಿಕೊಂಡು 1962ರ ನವೆಂಬರ್‌ 5ರಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ (ಎಪಿಎಂಸಿ) ಹಂಚಿಕೆ ಮಾಡಿತ್ತು. ಸರ್ವೆ ಸಂಖ್ಯೆ 146ರಲ್ಲಿ ಜೋಡಿದಾರ್‌ ನಂಜಪ್ಪ ಹೆಸರಿನಲ್ಲಿದ್ದ 6 ಎಕರೆ 32 ಗುಂಟೆಯನ್ನೂ ಅದೇ ದಿನ ಎಪಿಎಂಸಿಗೆ ನೀಡಿತ್ತು.

ಈ ನಡುವೆ, ಸರ್ವೆ ಸಂಖ್ಯೆ 146ರ 32 ಗುಂಟೆಯನ್ನು ಎರಡು ಬ್ಲಾಕ್‌ಗಳನ್ನಾಗಿ ಬಿಡಿಎ ವಿಭಜಿಸಿತ್ತು. ಅದನ್ನು ರಾಮರಾವ್‌ ಎಂಬುವರಿಗೆ 1987ರಲ್ಲಿ ಹಂಚಿಕೆ ಮಾಡಿ, 1995ರ ಫೆಬ್ರುವರಿ 16ರಂದು ಸ್ವಾಧೀನಪತ್ರ ನೀಡಿತ್ತು. ಆದರೆ, ಈ ಸ್ಥಳದಲ್ಲಿ ಎಪಿಎಂಸಿಯು ರಸ್ತೆ ಹಾಗೂ ಮಳಿಗೆಗಳನ್ನು ನಿರ್ಮಿಸಿತ್ತು. ‘ಮಂಜೂರಾದ ಜಾಗ ಅತಿಕ್ರಮಣವಾಗಿದೆ’ ಎಂದು ಆರೋಪಿಸಿ ರಾಮರಾವ್‌ ಪತ್ನಿ ಕಮಲಾಬಾಯಿ ಅವರು ವಿಧಾನಪರಿಷತ್ತಿನ ಅರ್ಜಿಗಳ ಸಮಿತಿಗೆ ದೂರು ನೀಡಿದ್ದರು.

‘ಕಮಲಾಬಾಯಿ ಹಾಗೂ ಪುತ್ರ ಕೃಷ್ಣ ರಾವ್‌ ಅವರಿಗೆ ರಾಜಾಜಿನಗರದ ಬಡಾವಣೆ ಅಥವಾ ಸಮಾನಾಂತರ ಬಡಾವಣೆಯಲ್ಲಿ 32 ಗುಂಟೆಯ ಒಂದು ನಿವೇಶನ ಅಥವಾ ವಿವಿಧ ಅಳತೆಯ ನಿವೇಶನಗಳನ್ನು ಪ್ರಾಧಿಕಾರವು ಒಂದು ತಿಂಗಳಲ್ಲಿ ಹಂಚಿಕೆ ಮಾಡಿ ಸ್ವಾಧೀನಪತ್ರ ನೀಡಬೇಕು. ಈ ನಿವೇಶನದ ಮೌಲ್ಯವನ್ನು ಎಪಿಎಂಸಿಯು ಪ್ರಾಧಿಕಾರಕ್ಕೆ ಪಾವತಿಸಬೇಕು. ಕೈಗೊಂಡ ಕ್ರಮಗಳ ಬಗ್ಗೆ ತಿಂಗಳೊಳಗೆ ವರದಿ ಸಲ್ಲಿಸಬೇಕು’ ಎಂದು ಅರ್ಜಿ ಸಮಿತಿಯು 2014ರ ಮೇ 21ರಂದು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ (ಎಸಿಎಸ್‌) ಸೂಚಿಸಿತ್ತು.

ಎಪಿಎಂಸಿಯಿಂದ ₹10.24 ಕೋಟಿ ಪಾವತಿಸಿಕೊಳ್ಳದೆ ಹಾಗೂ ಯಾವುದೇ ಸರ್ಕಾರಿ ಆದೇಶ ಇಲ್ಲದೆ ಬಿಡಿಎ ಅಧಿಕಾರಿಗಳು 13 ಬದಲಿ ನಿವೇಶನಗಳನ್ನು 2017ರ ಜುಲೈ 18ರಂದು ತಾಯಿ ಮತ್ತು ಮಗನಿಗೆ ನೋಂದಣಿ ಮಾಡಿಕೊಟ್ಟಿದ್ದರು.

‘ನಿವೇಶನ ಮೊತ್ತ ಪಾವತಿಸಿದ ಬಳಿಕವೇ ಕ್ರಯಪತ್ರ ಹಾಗೂ ಸ್ವಾಧೀನಪತ್ರ ನೀಡಬೇಕು ಎಂದು ಪ್ರಾಧಿಕಾರದ (ನಿವೇಶನಗಳ ಹಂಚಿಕೆ) ನಿಯಮ 1984ರಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಆದರೆ, ಈ ಪ್ರಕರಣದಲ್ಲಿ ಎಪಿಎಂಸಿ ಅಥವಾ ಅರ್ಜಿದಾರರಿಂದ ದುಡ್ಡು ಪಡೆಯದೆಯೇ ಕ್ರಯಪತ್ರ ಮಾಡಿಕೊಡಲಾಗಿದೆ. ಈ ಬಗ್ಗೆ ವಿವರಣೆ ನೀಡಬೇಕು’ ಎಂದು ನಗರಾಭಿವೃದ್ಧಿ ಇಲಾಖೆಯ ಎಸಿಎಸ್‌ ಅವರು ಬಿಡಿಎ ಆಯುಕ್ತರಿಗೆ 2018ರ ಜನವರಿ 3ರಂದು ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ, ನಿವೇಶನ ಮೊತ್ತ ಪಾವತಿಸುವಂತೆ ಕೋರಿ ಬಿಡಿಎ ಉಪ ಕಾರ್ಯದರ್ಶಿ ಅವರು ಜನವರಿ 5ರಂದು ಎಪಿಎಂಸಿ ಕಾರ್ಯದರ್ಶಿಗೆ ಪತ್ರ ಬರೆದಿದ್ದರು.

‘ಎಂಪಿಎಂಸಿಗೆ ಹಂಚಿಕೆ ಮಾಡಿದ ಬಳಿಕ ರಾಮರಾವ್‌ಗೆ ಅದೇ ಜಾಗವನ್ನು ನೀಡಲಾಗಿದೆ. ಇದಕ್ಕೂ ಎಪಿಎಂಸಿಗೂ ಸಂಬಂಧ ಇಲ್ಲ. ಅವರಿಗೆ ಈ ಆಸ್ತಿಯ ಮೇಲೆ ಯಾವುದೇ ಹಕ್ಕಿಲ್ಲ. ಸ್ವಾಧೀನಪಡಿಸಿಕೊಂಡ ಎಲ್ಲ ಜಾಗಗಳಿಗೆ ಆರಂಭದಲ್ಲೇ ಭಾಗಶಃ ಭೂಸ್ವಾಧೀನ ಮೊತ್ತ ಪಾವತಿಸಲಾಗಿತ್ತು. ಉಳಿದ ₹2.17 ಲಕ್ಷವನ್ನು 1978ರ ಜುಲೈ 7ರಂದು ಚೆಕ್‌ ಮೂಲಕ ನೀಡಲಾಗಿತ್ತು. ಮತ್ತೆ ಹಣ ಪಾವತಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದು ಎಪಿಎಂಸಿ ಕಾರ್ಯದರ್ಶಿ ಮಾರ್ಚ್‌ 16ರಂದು ಉತ್ತರ ನೀಡಿದ್ದರು.

‘ಈ ಪ್ರಕರಣದಲ್ಲಿ ಪ್ರಾಧಿಕಾರಕ್ಕೆ ಆರ್ಥಿಕ ನಷ್ಟ ಉಂಟಾಗಿದೆ. ಕರ್ತವ್ಯ ಲೋಪ ಎಸಗಿದ ಎಲ್ಲರಿಗೂ ನೋಟಿಸ್‌ ನೀಡಬೇಕು’ ಎಂದು ಬಿಡಿಎ ಆಯುಕ್ತರು ಮೇ 17ರಂದು ನಿರ್ದೇಶನ ನಿರ್ದೇಶನ ನೀಡಿದ್ದರು. ಆ ಬಳಿಕವೂ ಯಾವುದೇ ಕ್ರಮ ಆಗಿರಲಿಲ್ಲ.

‘ಜನವರಿಯಲ್ಲಿ ಬರೆದ ಪತ್ರಕ್ಕೆ ಪ್ರಾಧಿಕಾರ ಈವರೆಗೂ ಉತ್ತರ ನೀಡಿಲ್ಲ. ಹಣ ಪಾವತಿಗೂ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಕೂಡಲೇ ಉತ್ತರ ನೀಡಬೇಕು’ ಎಂದು ಎಸಿಎಸ್‌ ಅವರು ಆಯುಕ್ತರಿಗೆ ಮೇ 29ರಂದು ನೆನಪೋಲೆ ಕಳುಹಿಸಿದ್ದರು. ಈ ಕಡತವನ್ನು ಆಯುಕ್ತರು ಪ್ರಾಧಿಕಾರದ ಕಾರ್ಯದರ್ಶಿಗೆ ಕಳುಹಿಸಿದ್ದರು.

‘ಈ ಜಾಗದ ಮಾರುಕಟ್ಟೆ ಮೌಲ್ಯ ₹30 ಕೋಟಿ. ಆದರೆ, ಕ್ರಯಪತ್ರ ಮಾಡಿಕೊಡುವಾಗ ನಯಾಪೈಸೆ ಕಟ್ಟಿಸಿಕೊಂಡಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿ ನಿವೃತ್ತ ನೌಕರ ಚಿಕ್ಕಯ್ಯ ಎಂಬುವರು ಬಿಎಂಟಿಎಫ್‌ಗೆ ದೂರು ನೀಡಿದ್ದರು. ಎಸಿಎಂಎಂ ಕೋರ್ಟ್‌ ಸೂಚನೆ ಮೇರೆಗೆ ಬಿಎಂಟಿಎಫ್‌ ಶುಕ್ರವಾರ ಎಫ್‌ಐಆರ್‌ ದಾಖಲಿಸಿದೆ.

* ಈ ಪ್ರಕರಣದ ಮಾಹಿತಿ ಬಂದಿದೆ. ಸೋಮವಾರ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ.

–ರಾಕೇಶ್‌ ಸಿಂಗ್, ಬಿಡಿಎ ಆಯುಕ್ತ 

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 3

  Frustrated
 • 1

  Angry

Comments:

0 comments

Write the first review for this !